ಯಾದಗಿರಿ ಜಿಲ್ಲಾಸ್ಪತ್ರೆಯಲ್ಲಿ ಸ್ಕ್ಯಾನಿಂಗ್ ಮಷೀನ್ ಸಮಸ್ಯೆ; ಪ್ರತಿ ದಿನ ಅಲೆದು ಚಪ್ಪಲಿ ಸವೆತು ಎಂದು ರೋಗಿಗಳ ಅಳಲು
ಯಾದಗಿರಿಯ ಜಿಲ್ಲಾಸ್ಪತ್ರೆಗೆ ಪ್ರತಿ ದಿನ ನೂರಾರು ಜನ ರೋಗಿಗಳು ಚಿಕಿತ್ಸೆಗೆ ಬರ್ತಾರೆ. ಆದರೆ ಇಲ್ಲಿ ಚಿಕಿತ್ಸೆ ಕೊಡೋಕೆ ಸೂಕ್ತ ವ್ಯವಸ್ಥೆ ಇಲ್ಲ. ಈ ಆಸ್ಪತ್ರೆಯಲ್ಲಿರುವ ಸ್ಕ್ಯಾನಿಂಗ್ ಮಷೀನ್ ಗೆ ದಿನಕ್ಕೊಂದು ಸಮಸ್ಯೆ ಎದುರಾಗುತ್ತಿದೆ. ಇದೆ ಕಾರಣಕ್ಕೆ ಆಸ್ಪತ್ರೆಗೆ ಬರುವ ರೋಗಿಗಳು ಪರದಾಡುವಂತಾಗಿದೆ.
ಯಾದಗಿರಿ, ಜುಲೈ.02: ಕಳೆದ ಒಂದು ವಾರದಿಂದ ಯಾದಗಿರಿ ಜಿಲ್ಲಾಸ್ಪತ್ರೆಯ ಸ್ಕ್ಯಾನಿಂಗ್ ಮಷೀನ್ (Scanning Mission) ಬಂದ್ ಆಗಿದ್ದು ರೋಗಿಗಳು ಪರದಾಡುವಂತಹ ಪರಿಸ್ಥಿತಿ ನಿರ್ಮಾಣವಾಗಿದೆ. ಯಾದಗಿರಿ (Yadgir) ನಗರದ ತಾಯಿ ಮಕ್ಕಳ ಆಸ್ಪತ್ರೆ ಹೆಸರಿಗೆ ಮಾತ್ರ ತಾಯಿ ಮಕ್ಕಳ ಆಸ್ಪತ್ರೆಯಾಗಿದೆ. ಆದ್ರೆ ಇಲ್ಲಿ ಇನ್ನು ಕೂಡ ಜಿಲ್ಲಾಸ್ಪತ್ರೆಯನ್ನ ನಡೆಸಲಾಗುತ್ತಿದೆ. ಜಿಲ್ಲಾಸ್ಪತ್ರೆಗೆ ಹೊಸ ಕಟ್ಟಡ ಆದರೂ ಸಹ ಹಳೆ ಆಸ್ಪತ್ರೆಯ ಹಳೆ ಕಟ್ಟಡದಲ್ಲೇ ಚಿಕಿತ್ಸೆ ನಡೆಯುತ್ತಿದೆ. ಅದರಲ್ಲೂ ಪ್ರಮುಖವಾಗಿ ಅಲ್ಟ್ರಾಸೌಂಡ್ ಹಾಗೂ ಸಿಟಿ ಸ್ಕ್ಯಾನ್ ಇಲ್ಲೇ ಮಾಡಲಾಗುತ್ತಿದೆ. ರೋಗಿಗಳಿಗೆ ವೈದ್ಯರು ಸ್ಕ್ಯಾನಿಂಗ್ ಮಾಡಿಸುವಂತೆ ಹೇಳಿದ್ರೆ ರೋಗಿಗಳು ನೇರವಾಗಿ ನಗರದಿಂದ ಸುಮಾರು ಏಳು ಎಂಟು ಕಿ.ಮೀ ದೂರದಲ್ಲಿರುವ ಹೊಸ ಆಸ್ಪತ್ರೆಗೆ ಹೋಗಿ ಚೀಟಿ ಬರಿಸಿಕೊಂಡು ಬರಬೇಕು ಬಳಿಕವೇ ಇಲ್ಲಿ ಸ್ಕ್ಯಾನಿಂಗ್ ಮಾಡಲಾಗುತ್ತಿದೆ. ಅಲ್ಲಿಂದ ಇಲ್ಲಿಗೆ ಇಲ್ಲಿಂದ ಅಲ್ಲಿಗೆ ಅಲೆಯೋದೆ ರೋಗಿಗಳಿಗೆ ದೊಡ್ಡ ತಲೆ ನೋವಾಗಿದೆ. ಇಷ್ಟೆಲ್ಲ ಆದರೂ ಪರವಾಗಿಲ್ಲ. ಆದ್ರೆ ಇಲ್ಲಿರುವ ಸ್ಕ್ಯಾನಿಂಗ್ ಮಷೀನ್ ಗೆ ದಿನಕ್ಕೊಂದು ಸಮಸ್ಯೆ ಆಗ್ತಾಯಿದೆ.
ಕಳೆದ ಒಂದು ವಾರದ ಹಿಂದೆ ಮೂರು ದಿನಗಳ ಸ್ಕ್ಯಾನಿಂಗ್ ಮಾಡುವ ಸಿಬ್ಬಂದಿ ರಜೆ ಹೋಗಿದ್ರು ಅಂತ ಹೇಳಲಾಗುತ್ತಿದೆ. ಹೀಗಾಗಿ ಸ್ಕ್ಯಾನಿಂಗ್ ಮಾಡಿಸಿಕೊಳ್ಳುವ ರೋಗಿಗಳ ಸಂಖ್ಯೆ ಹೆಚ್ಚಾಗಿದೆ. ಯಾಕೆಂದ್ರೆ ಸಮಾನ್ಯವಾಗಿ ಎಲ್ಲವೂ ಚೆನ್ನಾಗಿ ಇರುವಾಗ್ಲೇ ಇಲ್ಲಿಗೆ ಬರುವ ರೋಗಿಗಳು ಮೊದಲ ದಿನ ಚೀಟಿ ಬರೆಸಿಕೊಂಡು ಹೋಗಬೇಕು ಮಾರನೇ ದಿನ ಬಂದು ಸ್ಕ್ಯಾನ್ ಮಾಡಿಸಿಕೊಂಡು ಹೋಗಬೇಕು. ಆದ್ರೆ ಮೂರು ದಿನಗಳ ಕಾಲ ಬಂದ್ ಆಗಿದ್ದಕ್ಕೆ ಜನ ಬಂದು ಬಂದು ವಾಪಸ್ ಹೋಗಿದ್ದಾರೆ. ಇದರಿಂದ ರೋಗಿಗಳು ಪರದಾಡುವಂತಾಗಿದೆ.
ಮೂರು ದಿನಗಳ ಕಾಲ ಬಂದ್ ಆಗಿದ್ದಕ್ಕೆ ರೋಗಿಗಳು ಬಂದು ಬಂದು ವಾಪಸ್ ಹೋಗಿದ್ದಾರೆ. ಆದ್ರೆ ಸಿಬ್ಬಂದಿ ವಾಪಸ್ ಬಂದಿದ್ದಾರೆ ಅಂತ ಗೊತ್ತಾಗುತ್ತಿದ್ದ ಹಾಗೆ ಮತ್ತೆ ರೋಗಿಗಳು ಆಸ್ಪತ್ರೆಗೆ ಸ್ಕ್ಯಾನಿಂಗ್ ಮಾಡಿಸಿಕೊಳ್ಳಲು ಬಂದಿದ್ದಾರೆ. ಆದರೆ ಸಿಬ್ಬಂದಿ ಬಳಿಕ ಮಷೀನ್ ಗೆ ಹೊಸ ಸಮಸ್ಯೆ ಉಂಟಾಗಿದೆ. ಮಷೀನ್ ಸಮಸ್ಯೆ ಬಗೆಹರಿದಿದೆ ಅನ್ನೋ ಹೊತ್ತಿಗೆ ಇಲ್ಲಿನ ಸಿಬ್ಬಂದಿ ಮಷೀನ್ ನಲ್ಲಿ ಸರ್ವರ್ ಸಮಸ್ಯೆ ಆಗ್ತಾಯಿದೆ ಅಂತ ಹೇಳ್ತಾಯಿದ್ದಾರೆ ಎಂದು ಸುಮಾರು ಐವತ್ತು ಕಿ.ಮೀ ದೂರದಿಂದ ವಾಪಸ್ ಹೋಗ್ತಾಯಿರುವ ರೋಗಿಯೊಬ್ಬರು ಆರೋಪ ಮಾಡಿದ್ದಾರೆ. ಮೂರು ದಿನಗಳ ಕಾಲ ಬಂದು ಬಂದು ವಾಪಸ್ ಹೋಗ್ತಾಯಿದ್ದಾರೆ.
ಇದನ್ನೂ ಓದಿ: ವಿಜಯಪುರ: ನಕಲಿ ದಾಖಲೆ ಸೃಷ್ಟಿಸಿ ಸ್ಥಿರಾಸ್ತಿ ಮಾರಾಟ ಜಾಲ ಪತ್ತೆ: 18 ಜನ ಆರೋಪಿಗಳ ಬಂಧನ
ಮತ್ತೋರ್ವ ರೋಗಿ ಮಾತನಾಡಿದ್ದು, ತನಗೆ ಅಪಘಾತವಾಗಿದ್ದಕ್ಕೆ ಕಳೆದ ಮೂರು ದಿನಗಳ ಹಿಂದೆ ವೈದ್ಯರು ಕಾಲಿಗೆ ಸ್ಕ್ಯಾನ್ ಮಾಡಿಸಿಕೊಂಡು ಬರಲು ಹೇಳಿದ್ದಾರೆ. ಬಡ ಯುವಕ ದುಡ್ಡು ಇಲ್ಲದ ಕಾರಣಕ್ಕೆ ಜಿಲ್ಲಾಸ್ಪತ್ರೆಯಲ್ಲಿ ಸ್ಕ್ಯಾನಿಂಗ್ ಮಾಡಿಸಿಕೊಳ್ಳಲು ಬಂದಿದ್ದಾನೆ. ಆದ್ರೆ ಮೂರು ದಿನಗಳಿಂದ ಆಸ್ಪತ್ರೆಗೆ ಅಲೆದ್ರೂ ಸಹ ಸ್ಕ್ಯಾನಿಂಗ್ ಆಗಿಲ್ಲ. ಇನ್ನು ಮಹಿಳೆಯೊಬ್ಬಳು ತನ್ನ ಮಗಳು ಗರ್ಭಿಣಿಯಾಗಿದ್ದರಿಂದ ಅಲ್ಟ್ರಾಸೌಂಡ್ ಸ್ಕ್ಯಾನ್ ಮಾಡಿಸಿಕೊಳ್ಳಲು ಬಂದಿದ್ದಾರೆ. ಆದ್ರೆ ದೂರದ ಊರಿಂದ ಬಂದು ಎರಡು ದಿನಗಳಿಂದ ಅಲೆದ್ರು ಸ್ಕ್ಯಾನ್ ಆಗಿಲ್ಲ ಅಂತ ನೋವು ತೋಡಿಕೊಳ್ಳುತ್ತಿದ್ದಾರೆ. ದುಡ್ಡಿದ್ರೆ ಖಾಸಗಿ ಆಸ್ಪತ್ರೆಗೆ ಹೋಗಿ ಸ್ಕ್ಯಾನ್ ಮಾಡಿಸಿಕೊಂಡು ಹೋಗಬಹುದು. ಆದರೆ ದುಡ್ಡಿಲ್ಲದ ಕಾರಣಕ್ಕೆ ಇಲ್ಲಿಗೆ ಬಂದ್ರೆ ಇಲ್ಲಿ ಸಮಸ್ಯೆಗಳೇ ಹೆಚ್ಚಿವೆ ಎಂದು ರೋಗಿಗಳು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.
ಒಟ್ನಲ್ಲಿ ಬಡವರ ಪಾಲಿಗೆ ಸಂಜೀವಿನಿ ಆಗಬೇಕಿರುವ ಸರ್ಕಾರಿ ಆಸ್ಪತ್ರೆಯಲ್ಲಿ ರೋಗಿಗಳಿಗೆ ಸಕಾಲಕ್ಕೆ ಚಿಕಿತ್ಸೆ ಸಿಗದಂತಾಗಿದೆ. ಜಿಲ್ಲೆಯಲ್ಲಿರುವ ಒಂದು ಸ್ಕ್ಯಾನ್ ಮಷೀನ್ ಸರಿಯಾಗಿ ನಡೆಸಲು ಅಧಿಕಾರಿಗಳಿಗೆ ಸಾಧ್ಯವಾಗದೆ ಇರೋದು ದುರಂತವೇ ಸರಿ.
ರಾಜ್ಯದ ಪ್ರಮುಖ ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ
Published On - 9:00 am, Tue, 2 July 24