ಪ್ರತಿ ಜಿಲ್ಲೆಯಲ್ಲಿ ವಿಶೇಷ ಫ್ಯಾಕ್ಟ್-ಚೆಕ್ ಘಟಕ; ಸುಳ್ಳು ಸುದ್ದಿ ನಿಯಂತ್ರಣದ ಬಗ್ಗೆ ಸಿಎಂ ಸಿದ್ದರಾಮಯ್ಯ ಹೇಳಿದ್ದಿಷ್ಟು
ಸುಳ್ಳು ಸುದ್ದಿ, ತಿರುಚಿದ ಮಾಹಿತಿ ಹರಡುವುದರ ವಿರುದ್ಧ ಸಿದ್ದರಾಮಯ್ಯ ನೇತೃತ್ವದ ಕರ್ನಾಟಕ ಕಾಂಗ್ರೆಸ್ ಸರ್ಕಾರ ಈಗಾಗಲೇ ಹಲವು ಕ್ರಮಗಳನ್ನು ಕೈಗೊಂಡಿದೆ. ಅದರಲ್ಲಿ, ಪ್ರತಿ ಜಿಲ್ಲೆಯಲ್ಲಿ ಸ್ಥಾಪಿಸಲಾಗಿರುವ ವಿಶೇಷ ಫ್ಯಾಕ್ಟ್-ಚೆಕ್ ಘಟಕ ಕೂಡ ಒಂದಾಗಿದೆ. ಈ ಘಟಕಗಳ ಕಾರ್ಯವ್ಯಾಪ್ತಿ ಹಾಗೂ ಚಟುವಟಿಕೆಗಳ ಬಗ್ಗೆ ಇದೀಗ ಸಿಎಂ ಮಾಹಿತಿ ನೀಡಿದ್ದಾರೆ. ಆ ವಿವರ ಇಲ್ಲಿದೆ.
ಬೆಂಗಳೂರು, ಜುಲೈ 2: ಸುಳ್ಳು ಸುದ್ದಿಗಳು ಮತ್ತು ತಪ್ಪು ಮಾಹಿತಿಗಳನ್ನು ಎದುರಿಸಲು ಕರ್ನಾಟಕ ಸರ್ಕಾರ ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ವಿಶೇಷ ಫ್ಯಾಕ್ಟ್-ಚೆಕ್ ಘಟಕಗಳನ್ನು ಸ್ಥಾಪಿಸಿದೆ. ವಿಶೇಷವಾಗಿ ಸಾಮಾಜಿಕ ಮಾಧ್ಯಮಗಳಲ್ಲಿ ಬರುವ ಫೇಕ್ ನ್ಯೂಸ್ಗಳ ಬಗ್ಗೆ ಈ ಘಟಕಗಳು ಗಮನಹರಿಸಲಿವೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದ್ದಾರೆ. ವಾರ್ತಾ ಇಲಾಖೆ ಸಹಯೋಗದಲ್ಲಿ ಬೆಂಗಳೂರು ಪ್ರೆಸ್ ಕ್ಲಬ್ ಸಮವಾರ ಆಯೋಜಿಸಿದ್ದ ಪತ್ರಿಕಾ ದಿನಾಚರಣೆಯಲ್ಲಿ ಅವರು ಮಾತನಾಡಿದ್ದಾರೆ.
ಇಡೀ ಸಮಾಜ, ಅದರಲ್ಲಿಯೂ ವಿಶೇಷವಾಗಿ ಮಾಧ್ಯಮಗಳು ಸುಳ್ಳು ಸುದ್ದಿಗಳನ್ನು ಪರಿಶೀಲಿಸುವ ಮತ್ತು ನಿಭಾಯಿಸುವ ಬಗ್ಗೆ ಹೆಚ್ಚು ಜಾಗರೂಕರಾಗಿರಬೇಕು ಎಂದು ಅವರು ಹೇಳಿದ್ದಾರೆ. ಸಾಮಾಜಿಕ ಜಾಲತಾಣಗಳ ಮೂಲಕ ಸುಳ್ಳು ಸುದ್ದಿ ಹರಡುವುದು ಅಪಾಯಕಾರಿ ಎಂದಿರುವ ಸಿದ್ದರಾಮಯ್ಯ, ಸುಳ್ಳು ಸುದ್ದಿಗಳ ಬಗ್ಗೆ ಸಮಾಜ ಅತ್ಯಂತ ಎಚ್ಚರಿಕೆ ವಹಿಸಬೇಕು ಎಂದು ಸಲಹೆ ನೀಡಿದ್ದಾರೆ.
ಸುಳ್ಳು ಸುದ್ದಿಗಳ ಬಗ್ಗೆ ಪತ್ರಿಕೆಗಳು, ಮಾಧ್ಯಮ ಸಂಸ್ಥೆಗಳು ಗಂಭೀರವಾಗಿ ಚಿಂತಿಸಬೇಕು. ಸುಳ್ಳು ಸುದ್ದಿಗಳ ಮೇಲೆ ನಿಗಾ ಇಡಲು ಪ್ರತಿ ಜಿಲ್ಲೆಯಲ್ಲಿ ವಿಶೇಷ ಘಟಕಗಳನ್ನು ಸ್ಥಾಪಿಸಲಾಗಿದೆ ಎಂದು ಸಿದ್ದರಾಮಯ್ಯ ಹೇಳಿದರು. ಸುಳ್ಳು, ನಕಲಿ ಹಾಗೂ ತಿರುಚಿದ ಸುದ್ದಿಗಳನ್ನು ಪತ್ತೆ ಹಚ್ಚಲು, ನಿಯಂತ್ರಿಸಲು ಮತ್ತು ಕ್ರಮ ಕೈಗೊಳ್ಳುವ ನಿಟ್ಟಿನಲ್ಲಿ ಫ್ಯಾಕ್ಟ್ ಚೆಕ್ ಘಟಕಗಳು ಕಾರ್ಯನಿರ್ವಹಿಸಲಿವೆ ಎಂದು ಅವರು ಹೇಳಿದ್ದಾರೆ.
ಸುಳ್ಳು ಸುದ್ದಿಗಳ ವಿರುದ್ಧ ಹೋರಾಡಲು ಐಟಿ ಬಿಟಿ ಇಲಾಖೆಯ ಸಹಯೋಗದೊಂದಿಗೆ ಇನ್ಫಾರ್ಮೇಷನ್ ಡಿಸಾರ್ಡರ್ ಟ್ಯಾಕ್ಲಿಂಗ್ ಯುನಿಟ್ (ಐಡಿಟಿಯು) ರಚಿಸಲಾಗುವುದು ಎಂದು ಸಿದ್ದರಾಮಯ್ಯ ಈ ವರ್ಷದ ಆರಂಭದಲ್ಲಿ ಬಜೆಟ್‌ನಲ್ಲಿ ಉಲ್ಲೇಖಿಸಿದ್ದರು.
ಇದನ್ನೂ ಓದಿ: ಕರ್ನಾಟಕದ ರಸ್ತೆ ಅಭಿವೃದ್ಧಿಗಾಗಿ ಕೇಂದ್ರದಿಂದ 8 ಸಾವಿರ ಕೋಟಿ ರೂ. ಮಂಜೂರು: ಪ್ರಲ್ಹಾದ್ ಜೋಶಿ
ಈ ಐಡಿಟಿಯುವನ್ನು ಫ್ಯಾಕ್ಟ್ ಚೆಕ್ ಘಟಕ ಎಂದು ಕರೆಯಲ್ಪಡುತ್ತದೆ ಇದು ಫ್ಯಾಕ್ಟ್ ಚೆಕ್ ಟೀಮ್, ಅನಾಲಿಟಿಕಿಕ್ ಟೀಮ್ ಮತ್ತು ಕೆಪಾಸಿಟಿ ಬ್ಯುಲ್ಡಿಂಗ್ ಟೀಮ್ ಅನ್ನು ಒಳಗೊಂಡಿರುತ್ತದೆ. ಸುಳ್ಳು ಸುದ್ದಿ ಹಬ್ಬಿಸುವ ಮೂಲಕ ಸಮಾಜದಲ್ಲಿ ಅಭದ್ರತೆ ಮತ್ತು ಭಯ ಮೂಡಿಸುವವರ ವಿರುದ್ಧ ಘಟಕ ಕಠಿಣ ಕ್ರಮ ಕೈಗೊಳ್ಳಲಿದೆ ಎಂದು ಸಿದ್ದರಾಮಯ್ಯ ಹೇಳಿದ್ದಾರೆ. ಅಂಥವರ ವಿರುದ್ಧ ಅಗತ್ಯ ಕಾನೂನು ಕ್ರಮ ಕೈಗೊಳ್ಳಲು ಗೃಹ ಇಲಾಖೆಯಲ್ಲಿ ವಿಶೇಷ ಕೋಶ ರಚಿಸಲಾಗುವುದು ಎಂದು ಸಿದ್ದರಾಮಯ್ಯ ಹೇಳಿದ್ದಾರೆ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ