AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಕರ್ನಾಟಕದ ರಸ್ತೆ ಅಭಿವೃದ್ಧಿಗಾಗಿ ಕೇಂದ್ರದಿಂದ 8 ಸಾವಿರ ಕೋಟಿ ರೂ. ಮಂಜೂರು: ಪ್ರಲ್ಹಾದ್ ಜೋಶಿ

ಕರ್ನಾಟಕದ ರಸ್ತೆ ಅಭಿವೃದ್ಧಿ ಮತ್ತು ಹೊಸ ರಸ್ತೆ ನಿರ್ಮಾಣ ಯೋಜನೆಗಳಿಗೆ ಕೇಂದ್ರ ಸರ್ಕಾರ ಅನುದಾನ ಮಂಜೂರು ಮಾಡಿರುವ ಬಗ್ಗೆ ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ ಮಾಹಿತಿ ನೀಡಿದ್ದಾರೆ. ಯಾವೆಲ್ಲ ರಸ್ತೆಗಳ ಅಭಿವೃದ್ಧಿಗೆ ಅನುದಾನ ಮಂಜೂರಾಗಿದೆ? ಹೊಸ ರಸ್ತೆಗಳು ಎಲ್ಲೆಲ್ಲ ಎಂಬ ಮಾಹಿತಿ ಇಲ್ಲಿದೆ.

ಕರ್ನಾಟಕದ ರಸ್ತೆ ಅಭಿವೃದ್ಧಿಗಾಗಿ ಕೇಂದ್ರದಿಂದ 8 ಸಾವಿರ ಕೋಟಿ ರೂ. ಮಂಜೂರು: ಪ್ರಲ್ಹಾದ್ ಜೋಶಿ
ಕರ್ನಾಟಕದ ರಸ್ತೆ ಅಭಿವೃದ್ಧಿಗಾಗಿ ಕೇಂದ್ರದಿಂದ 8 ಸಾವಿರ ಕೋಟಿ ರೂ. ಮಂಜೂರು: ಪ್ರಲ್ಹಾದ್ ಜೋಶಿ
Ganapathi Sharma
|

Updated on: Jul 02, 2024 | 8:58 AM

Share

ಬೆಂಗಳೂರು, ಜುಲೈ 2: ಕರ್ನಾಟಕದಲ್ಲಿ ರಸ್ತೆ ಅಭಿವೃದ್ಧಿ ಮತ್ತು ಹೊಸ ರಸ್ತೆಗಳ ನಿರ್ಮಾಣಕ್ಕಾಗಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರ 2024-25ರ ಅವಧಿಗೆ 8,021 ಕೋಟಿ ರೂ. ಅನುದಾನ ಮಂಜೂರು ಮಾಡಿದೆ ಎಂದು ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ ತಿಳಿಸಿದ್ದಾರೆ. ಈ ಬಗ್ಗೆ ಸಾಮಾಜಿಕ ಮಾಧ್ಯಮ ಎಕ್ಸ್​​ನಲ್ಲಿ ಸಂದೇಶ ಪ್ರಕಟಿಸುವ ಮೂಲಕ ಅವರು ಮಾಹಿತಿ ನೀಡಿದ್ದಾರೆ. ಈಗ ಕೂಡಲೇ ವಿಸ್ತೃತ ಯೋಜನಾ ವರದಿ (ಡಿಪಿಆರ್) ಸಿದ್ಧಪಡಿಸಿ ಟೆಂಡರ್ ಪ್ರಕ್ರಿಯೆಯನ್ನು ಪೂರ್ಣಗೊಳಿಸಿ ಕಾಮಗಾರಿಗಳಿಗೆ ಚಾಲನೆ ನೀಡುವ ಜವಾಬ್ದಾರಿ ರಾಜ್ಯ ಸರ್ಕಾರದ ಮೇಲೆ ಇದೆ ಎಂದೂ ಅವರು ಹೇಳಿದ್ದಾರೆ.

ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರ ರಾಜ್ಯದ ಒಟ್ಟು 470 ಕಿಲೋಮೀಟರ್ ರಸ್ತೆ ಅಭಿವೃದ್ಧಿಗಾಗಿ ಕೇಂದ್ರ ರಸ್ತೆ ಮತ್ತು ಹೆದ್ದಾರಿ ಸಚಿವಾಲಯದಿಂದ 2024-25ರ ಅವಧಿಗೆ 8006 ಕೋಟಿ ರೂಪಾಯಿ ಮಂಜೂರು ಮಾಡಿದೆ. ಅದಲ್ಲದೇ ಹೊಸದಾಗಿ 459 ಕಿಲೋ ಮೀಟರ್ ಉದ್ದದ ಹೊಸ ರಸ್ತೆ ನಿರ್ಮಾಣಕ್ಕೆ ವಿಸ್ತೃತ ಯೋಜನಾ ವರದಿಯನ್ನು ಸಿದ್ದಪಡಿಸಲು 15 ಕೋಟಿ ರೂ. ಮಂಜೂರು ಮಾಡಿದೆ ಎಂದು ಅವರು ತಿಳಿಸಿದ್ದಾರೆ.

ಪ್ರಲ್ಹಾದ್ ಜೋಶಿ ಎಕ್ಸ್​ ಸಂದೇಶ

‘ಕೇಂದ್ರ ಅನುದಾನ ಮಂಜೂರು ಮಾಡಿರುವ ಯೋಜನೆಗಳ ಪೈಕಿ ನನ್ನ ಪ್ರಸ್ತಾವನೆಯ ಮೇರೆಗೆ ಧಾರವಾಡ ಲೋಕಸಭಾ ಕ್ಷೇತ್ರದ ವ್ಯಾಪ್ತಿಯ ನವಲಗುಂದ ಪಟ್ಟಣದ ಮೂಲಕ ಹಾದುಹೋಗುವ ರಾಷ್ಟ್ರೀಯ ಹೆದ್ದಾರಿ 52ಕ್ಕೆ 12 ಕಿಲೋಮೀಟರ್ ಉದ್ದದ ಬೈಪಾಸ್ ರಸ್ತೆ ನಿರ್ಮಾಣಕ್ಕಾಗಿ 350 ಕೋಟಿ ರೂಪಾಯಿಗಳನ್ನು ಮಂಜೂರು ಮಾಡಲಾಗಿದೆ’ ಎಂದು ಅವರು ತಿಳಿಸಿದ್ದಾರೆ.

ಹುಬ್ಬಳ್ಳಿಯ ಕಿತ್ತೂರು ಚೆನ್ನಮ್ಮ ವರ್ತುಳದಿಂದ ಬೆಂಗಳೂರು ಮಾರ್ಗದಲ್ಲಿ ಬಂಕಾಪುರ ಚೌಕ್ ಬಿಡ್ನಾಳ ಕ್ರಾಸ್‌ವರೆಗೆ ವಿಸ್ತರಿಸುವ ಎಲಿವೇಟೆಡ್ ಕಾರಿಡಾರ್ ಕಾಮಗಾರಿಯ ವಿಸ್ತೃತ ಯೋಜನಾ ವರದಿ ತಯಾರಿಗಾಗಿ 25 ಲಕ್ಷ ರೂ., ಕುಸುಗಲ್‌ನಿಂದ ನರೇಂದ್ರ ಕ್ರಾಸ್ ವರೆಗಿನ ವರ್ತುಳ ರಸ್ತೆಯ ಕಾಮಗಾರಿಯ ವಿಸ್ತೃತ ಯೋಜನಾ ವರದಿ ತಯಾರಿಗಾಗಿ 41 ಲಕ್ಷ ರೂಪಾಯಿಗಳನ್ನು ಕೂಡಾ ತೆಗೆದಿರಿಸಲಾಗಿದೆ ಎಂದು ಅವರು ತಿಳಿಸಿದ್ದಾರೆ.

ಇದನ್ನೂ ಓದಿ: ಕಾಂಗ್ರೆಸ್​ ಬೆನ್ನಲ್ಲೇ ಬಿಜೆಪಿಯಲ್ಲಿಯೂ ಶುರುವಾಗುತ್ತಾ ಆಂತರಿಕ ಕಲಹ? ವಿಪಕ್ಷ ನಾಯಕನ ಬದಲಾವಣೆ ಚರ್ಚೆ ಮುನ್ನೆಲೆಗೆ

ಕರ್ನಾಟಕ ರಾಜ್ಯದಲ್ಲಿ ರಸ್ತೆಗಳ ಉನ್ನತೀಕರಣ ಹಾಗೂ ಸುಗಮ ಸಂಚಾರಕ್ಕೆ ಮೋದಿ ಸರಕಾರ ಅತೀ ಮಹತ್ವ ನೀಡುತ್ತಲಿದೆ ಎಂದ ಜೋಶಿ, ಈ ಮಹತ್ವದ ನಿರ್ಧಾರ ಕೈಗೊಂಡ ಪ್ರಧಾನಮಂತ್ರಿ ನರೇಂದ್ರ ಮೋದಿ ಹಾಗೂ ಕೇಂದ್ರ ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವ ನಿತಿನ್ ಗಡ್ಕರಿ ಅವರಿಗೆ ಹೃತ್ಪೂರ್ವಕ ಧನ್ಯವಾದಗಳು ಎಂದಿದ್ದಾರೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ