
ವಿಜಯಪುರ, ನವೆಂಬರ್ 19: ಇತ್ತೀಚಿನ ದಿನಗಳಲ್ಲಿ ಹನಿಟ್ರ್ಯಾಪ್ ಪ್ರಕರಣಗಳು (Honeytrap Cases) ಹೆಚ್ಚುತ್ತಿವೆ. ಇದೀಗ ಇದೇ ಹನಿಟ್ರ್ಯಾಪ್ ವಿಚಾರದಲ್ಲಿ ನಾಗರಿಕ ಸಮಾಜ ತಲೆ ತಗ್ಗಿಸುವ ಘಟನೆ ನಡೆದಿದೆ. ಜನ್ಮ ಕೊಟ್ಟ ತಾಯಿಯನ್ನೇ ಬಳಸಿಕೊಂಡು ಸರ್ಕಾರಿ ಸ್ವಾಮ್ಯದ ಬ್ಯಾಂಕ್ವೊಂದರ ಮ್ಯಾನೇಜರ್ನನ್ನು ಹನಿಟ್ರ್ಯಾಪ್ ಖೆಡ್ಡಾಗೆ ಕೆಡವಿ ಲಕ್ಷ ಲಕ್ಷ ಸುಲಿಗೆ ಮಾಡಲು ಯತ್ನಿಸಿದ ಘಟನೆ ವಿಜಯಪುರ (Vijayapur) ಜಿಲ್ಲೆ ಇಂಡಿ ಪಟ್ಟಣದಲ್ಲಿ ನಡೆದಿದೆ.
ಪಟ್ಟಣದಲ್ಲಿ ಎಳನೀರು ಮಾರಾಟ ಮಾಡುತ್ತಿದ್ದ 44 ವರ್ಷದ ಮಹಿಳೆ ಸರ್ಕಾರಿ ಬ್ಯಾಂಕ್ನಲ್ಲಿ ಮ್ಯಾನೇಜರ್ ಆಗಿ ಕೆಲಸ ಮಾಡುತ್ತಿದ್ದ ವ್ಯಕ್ತಿಯ ಸಲುಗೆ ಬೆಳೆಸಿ ಕಳೆದ ನವೆಂಬರ್ 1 ರಂದು ತನ್ನ ಗೆಳೆತಿ ಮನೆಗೆ ಕರೆಸಿಕೊಂಡು ದೈಹಿಕ ಸಂಪರ್ಕ ನಡೆಸಿದ್ದರು. ಇದೇ ವೇಳೆ ಮನೆಯ ಕಿಟಿಕಿಯಲ್ಲಿ ಮೊಬೈಲ್ ಇಟ್ಟಿದ್ದನ್ನು ಕಂಡ ಮ್ಯಾನೇಜರ್, ಪ್ರಶ್ನೆ ಮಾಡಿದಾಗ ಫೋನ್ ಕೆಟ್ಟಿದೆ ಎಂದು ಸಬೂಬು ಹೇಳಿದ್ದರು. ಬಳಿಕ ನವೆಂಬರ್ 5 ರಂದು ಬ್ಯಾಂಕ್ ಮ್ಯಾನೇಜರ್‌ಗೆ ಕರೆ ಮಾಡಿದ ಮಹಿಳೆ , ನಾವಿಬ್ಬರು ಏಕಾಂತದಲ್ಲಿರುವುದನ್ನು ಯಾರೋ ವಿಡಿಯೋ ಮಾಡಿದ್ದಾರೆ. ಅವರ ಬಳಿ ಮಾತನಾಡಿ ಬಗೆ ಹರಿಸಿಕೊಳ್ಳಿ ಎಂದು ಹೇಳಿದ್ದರು.
ಇದೇ ವೇಳೆ ಮಹಿಳೆಯ ಅಳಿಯ ಮಹೇಶ ಬಗಲಿ, ಪತ್ರಕರ್ತ ತೌಶೀಫ್ ಖುರೇಷಿ ಎನ್ನುವವರಿಗೆ ನಿಮ್ಮಿಬ್ಬರ ವಿಡಿಯೋ ಸಿಕ್ಕಿವೆ ಎಂದು ಮ್ಯಾನೇಜರ್‌ಗೆ ಬೆದರಿಸಿದ್ದ. ಈ ಹೇಯ ಕೃತ್ಯದಲ್ಲಿ ಮಹಿಳೆಯ ಸ್ವಂತ ಮಗನೂ ಸೇರಿದ್ದನೆಂಬುದು ತಿಳಿದುಬಂದಿದೆ. ತೌಶೀಫ್ ಖುರೇಷಿ, ಮಹೇಶ ಬಗಲಿ ಹಾಗೂ ಮಹಿಳೆಯ ಪುತ್ರ ಅಮೂಲ್ ಸೇರಿಕೊಂಡು ಬ್ಯಾಂಕ್ ಮ್ಯಾನೇಜರ್ ಬಳಿ ಬಂದು ಎಲ್ಲಾ ಬಗೆಹರಿಸಿಕೊಳ್ಳಿ. ಎಲ್ಲರಿಗೂ ಸೇರಿದಂತೆ 10 ಲಕ್ಷ ಹಣ ನೀಡಬೇಕು. ಇಲ್ಲವಾದರೆ ಮಾಧ್ಯಮಗಳಲ್ಲಿ ವಿಡಿಯೋ ಲೀಕ್ ಮಾಡಲಾಗುತ್ತದೆ ಎಂದು ಹೆದರಿಸಿದ್ದಾರೆ. ಇದರಿಂದ ಭಯಗೊಂಡ ಬ್ಯಾಂಕ್ ಮ್ಯಾನೇಜರ್ ಇಂಡಿ ಪಟ್ಟಣ ಪೊಲೀಸ್ ಠಾಣೆಗೆ ತೆರಳಿ ಮಹಿಳೆ ಸೇರಿದಂತೆ ಉಳಿದ ಮೂವರ ಮೇಲೆ ದೂರು ನೀಡಿದ್ದಾರೆ.
ಇದನ್ನೂ ಓದಿ ಲಿವಿನ್ ರಿಲೇಷನ್ಶಿಪ್ನಲ್ಲಿದ್ದ ಮಹಿಳೆಯಿಂದಲೇ ಪ್ರಿಯಕರನ ಹತ್ಯೆ: ಕಾರಣವೇನು?
ಈ ಪ್ರಕರಣ ಕುರಿತು ದೂರು ದಾಖಲಿಸಿಕೊಂಡ ಇಂಡಿ ಪಟ್ಟಣ ಠಾಣೆಯ ಪೊಲೀಸರು ತನಿಖೆ ಕೈಗೊಂಡಿದ್ದಾರೆ. ಪ್ರಕರಣ ದಾಖಲಾಗುತ್ತಿದ್ದಂತೆ ತೌಶೀಫ್, ಮಹೇಶ ಹಾಗೂ ಮಹಿಳೆ ಪರಾರಿಯಾಗಿದ್ದಾರೆ. ಇದೀಗ ಮಹಿಳೆಯ ಪುತ್ರನನ್ನು ವಶಕ್ಕೆ ಪಡೆದುಕೊಳ್ಳಲಾಗಿದ್ದು, ಉಳಿದವರ ಹುಡುಕಾಟ ಮುಂದುವರೆದಿದೆ. ಮಹಿಳೆ ಸಹಿತ ಇಡೀ ಟೀಂ ಇಂಡಿ ಪಟ್ಟಣದಲ್ಲಿ ಹಲವಾರು ಜನರಿಗೆ ಇದೇ ರೀತಿ ಹನಿಟ್ರ್ಯಾಪ್ ಮಾಡಿ ವಿಡಿಯೋಗಳನ್ನು ಇಟ್ಟುಕೊಂಡು ಬ್ಲ್ಯಾಕ್ಮೇಲ್ ಮಾಡಿರುವ ಶಂಕೆ ವ್ಯಕ್ತವಾಗಿದೆ ಎಂದು ಪೊಲೀಸರು ಹೇಳಿದ್ದಾರೆ. ಈ ಹಿನ್ನೆಲೆ ಯಾರಾದರೂ ನೊಂದವರು, ಬೆದರಿಕೆಗೆ ಒಳಗಾದವರು ಇದ್ದರೆ ದೂರು ನೀಡಿ ಎಂದು ಪೊಲೀಸರು ಹೇಳಿದ್ದಾರೆ.
ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.
Published On - 9:03 am, Wed, 19 November 25