ವಿಜಯಪುರ: ಕರ್ನಾಟಕ ವಿಧಾನಸಭೆ ಚುನಾವಣೆ(Karnataka Assembly Elections 2023) ಇನ್ನೇನು ಕೆಲವೇ ತಿಂಗಳಗಳು ಬಾಕಿ ಇವೆ. ಈ ಹಿನ್ನೆಲೆಯಲ್ಲಿ ಜೆಡಿಎಸ್ ಪಂಚರತ್ನ ಯಾತ್ರೆ ಮೂಲಕ ರಾಜ್ಯದೆಲ್ಲೆಡೆ ಸಂಚರಿಸುತ್ತಿದ್ದು, ರಾಜ್ಯ ರಾಜಕಾರಣದಲ್ಲಿ ಜೆಡಿಎಸ್ ಅಲೆ ಸೃಷ್ಟಿಸುತ್ತಿದೆ. ಇದರ ಮಧ್ಯೆ ವಿಜಯಪುರ ಜಿಲ್ಲಾ ಜೆಡಿಎಸ್ನಲ್ಲಿ ಮಹತ್ವದ ಬೆಳವಣಿಗಗಳು ನಡೆದಿದ್ದು, ಪಕ್ಷದಿಂದ ಆರು ಜನ ಮುಖಂಡರನ್ನು ಉಚ್ಛಾಟನೆ ಮಾಡಿದೆ.
ಪಕ್ಷ ವಿರೋಧಿ ಚಟುವಟಿಕೆ ಆರೋಪ ಹಿನ್ನೆಲೆಯಲ್ಲಿ ಆರು ಜನ ಮುಖಂಡರನ್ನು ಪಕ್ಷದಿಂದ ಆರು ವರ್ಷಗಳ ಕಾಲ ಉಚ್ಛಾಟನೆ ಮಾಡಿ ವಿಜಯಪುರ ಜೆಡಿಎಸ್ ಜಿಲ್ಲಾಧ್ಯಕ್ಷ ಬಸನಗೌಡ ಮಾಡಗಿ ಇಂದು( ಜನವರಿ 11) ಆದೇಶ ಹೊರಡಿಸಿದ್ದಾರೆ. ಕಳೆದ ಒಂದು ವರ್ಷದಿಂದ ಪಕ್ಷ ವಿರೋಧಿ ಚಟುವಟಿಕೆಯಲ್ಲಿ ನಿರತಾಗಿದ್ದಾರೆ ಎಂದು ದೂರುಗಳು ಬಂದಿದ್ದರಿಮದ ಆರು ಮುಖಂಡರನ್ನು ಪಕ್ಷದಿಂದ ಉಚ್ಛಾಟನೆ ಮಾಡಲಾಗಿದೆ.
ಜೆಡಿಎಸ್ ಮಹಿಳಾ ಘಟಕದ ಜಿಲ್ಲಾಧ್ಯಕ್ಷ ಸ್ನೇಹಲತಾ ಶೆಟ್ಟಿ, ಅಲ್ಪ ಸಂಖ್ಯಾತ ಘಟಕ ಜಿಲ್ಲಾಧ್ಯಕ್ಷ ಯಾಕೂಬ್ ಕೂಪರ್, ಜಿಲ್ಲಾ ಅಲ್ಪ ಸಂಖ್ಯಾತ ಘಟಕ ಕಾರ್ಯಾದ್ಯಕ್ಷ ದಸ್ತಗೀರ ಸಾಲೋಟಗಿ, ಅಲ್ಪ ಸಂಖ್ಯಾತ ಘಟಕ ನಗರ ಆಧ್ಯಕ್ಷ ಸಂಶುದ್ದಿನ ಮುಲ್ಲಾ, ಯೂತ್ ಘಟಕದ ಜಿಲ್ಲಾಧ್ಯಕ್ಷ ಸಿದ್ಧನಗೌಡ ಪಾಟೀಲ್, ಸಿಂದಗಿ ಕ್ಷೇತ್ರದ ಮುಖಂಡ ಅಕ್ಬರ್ ಮುಲ್ಲಾ ಎನ್ನುವರನ್ನು ಪಕ್ಷದಿಂದ ಉಚ್ಛಾಟನೆ ಮಾಡಲಾಗಿದೆ.
ಇಂದು (ಜನವರಿ 11) ವಿಜಯಪುರ ನಗರದಲ್ಲಿರುವ ಜೆಡಿಎಸ್ ಜಿಲ್ಲಾ ಕಚೇರಿಯಲ್ಲಿ ಸುದ್ದಿಗೋಷ್ಠಿಯಲ್ಲಿ ನಡೆಸಿ ಮಾತನಾಡಿದ ಬಸನಗೌಡ ಮಾಡಗಿ, ಕಳೆದ ಒಂದು ವರ್ಷದಿಂದ ಜೆಡಿಎಸ್ ಪಕ್ಷದ ಕೆಲ ಪದಾಧಿಕಾರಿಗಳು ಹಾಗೂ ಮುಖಂಡರು ಪಕ್ಷ ವಿರೋಧಿ ಚಟುವಟಿಕೆ ಮಾಡುತ್ತಿದ್ದ ಕಾರಣ ಅವರನ್ನು ಆರು ವರ್ಷಗಳ ಕಾಲ ಪಕ್ಷದಿಂದ ಉಚ್ಛಾಟನೆ ಮಾಡಲಾಗಿದೆ ಎಂದು ಹೇಳಿದರು.
ಕಳೆದ ಒಂದು ವರ್ಷದಿಂದ ಪಕ್ಷ ವಿರೋಧಿ ಚಟುವಟಿಕೆ ಮಾಡಿಕೊಂಡು ಬಂದಿದ್ದರು. ಹಲವಾರು ಬಾರಿ ಎಚ್ಚರಿಕೆ ನೀಡಿದ್ದರೂ ಅವರು ಪಕ್ಷ ವಿರೋಧಿ ಚಟುವಟಿಕೆ ನಿಲ್ಲಿಸಿರಲಿಲ್ಲ. ಆದ್ದರಿಂದ ಪಕ್ಷದ ಹಿತದೃಷ್ಟಿಯಿಂದ ಉಚ್ಛಾಟಿಸಲಾಗಿದೆ ತಿಳಿಸಿದರು.
ಈ ಹಿಂದೆ ವಿಜಯಪುರ ಮಹಾನಗರ ಪಾಲಿಕೆ ಚುನಾವಣೆ ಸಂದರ್ಭದಲ್ಲೂ ಸಹ ಬಿಜೆಪಿ ಹಲವು ಮುಖಡರುಗಳನ್ನು ಪಕ್ಷದಿಂದ ಉಚ್ಛಾಟಿಸಿತ್ತು. ಬಿಜೆಪಿ ವಿರುದ್ಧ ಬಂಡಾಯ ಅಭ್ಯರ್ಥಿಯಾಗಿ ಕಣಕ್ಕಿಳಿದಿದ್ದ ಮುಖಂಡರನ್ನು ಬಿಜೆಪಿ ಉಚ್ಛಾಟನೆ ಮಾಡಿತ್ತು.
ಇನ್ನಷ್ಟು ವಿಜಯಪುರ ಜಿಲ್ಲಾ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ
Published On - 6:48 pm, Wed, 11 January 23