AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಕೊಪ್ಪಳ ಆಯ್ತು, ಈಗ ವಿಜಯಪುರದಲ್ಲೂ ಕೆಎಸ್​ಆರ್​ಟಿಸಿ ಬಸ್​ಗಳಿಗೆ ಡೀಸೆಲ್ ಅಭಾವ!

ಕೊಪ್ಪಳದ ಬೆನ್ನಲ್ಲೇ ಇದೀಗ ವಿಜಯಪುರದಲ್ಲೂ ಕೆಎಸ್‌ಆರ್‌ಟಿಸಿ ಬಸ್‌ಗಳಿಗೆ ಡೀಸೆಲ್ ಅಭಾವ ಎದುರಾಗಿದ್ದು, ಇಂಧನಕ್ಕಾಗಿ ಡಿಪೋಗಳಲ್ಲಿ ಬಸ್‌ಗಳು ಸಾಲುಗಟ್ಟಿ ನಿಂತಿದ್ದು, ಸಾರ್ವಜನಿಕರು ಪರದಾಡು ಸ್ಥಿತಿ ನಿರ್ಮಾಣವಾಗಿದೆ. ಸ್ಥಳಕ್ಕೆ ಭೇಟಿ ನೀಡಿದ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ಸರ್ಕಾರ ದಿವಾಳಿಯಾಗಿದೆ ಎಂದು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಕೊಪ್ಪಳ ಆಯ್ತು, ಈಗ ವಿಜಯಪುರದಲ್ಲೂ ಕೆಎಸ್​ಆರ್​ಟಿಸಿ ಬಸ್​ಗಳಿಗೆ ಡೀಸೆಲ್ ಅಭಾವ!
ಸಾಂದರ್ಭಿಕ ಚಿತ್ರImage Credit source: Deccan herald
ಅಶೋಕ ಯಡಳ್ಳಿ, ವಿಜಯಪುರ
| Edited By: |

Updated on:Oct 09, 2026 | 12:53 PM

Share

ಮುಖ್ಯಾಂಶಗಳು

  • ಕೊಪ್ಪಳ ಬೆನ್ನಲ್ಲೇ ವಿಜಯಪುರದಲ್ಲೂ ಸರ್ಕಾರಿ ಬಸ್‌ಗಳಿಗೆ ಡೀಸೆಲ್ ಅಭಾವ ಎದುರಾಗಿದೆ.
  • ಡೀಸೆಲ್ ಸಿಗದೆ ಡಿಪೋಗಳಲ್ಲಿ ಬಸ್‌ಗಳು ಸಾಲುಗಟ್ಟಿ ನಿಂತು ಪ್ರಯಾಣಿಕರು ಪರದಾಡಿದರು.
  • ರಾಜ್ಯ ಸರ್ಕಾರ ಸಂಪೂರ್ಣ ದಿವಾಳಿಯಾಗಿದೆ ಎಂದು ಬಿ.ವೈ. ವಿಜಯೇಂದ್ರ ಆರೋಪಿಸಿದ್ದಾರೆ.

ವಿಜಯಪುರ, ಅಕ್ಟೋಬರ್ 09: ರಾಜ್ಯ ಸರ್ಕಾರದ ಉಚಿತ ಅಭಯದ ಅಭಿಯಾನಗಳ ನಡುವೆಯೇ ಸಾರಿಗೆ ಸಂಸ್ಥೆಗಳು ತೀವ್ರ ಆರ್ಥಿಕ ಸಂಕಷ್ಟಕ್ಕೆ ಸಿಲುಕಿರುವುದು ಒಂದೊಂದಾಗಿ ಸಾಬೀತಾಗುತ್ತಿದೆ. ಕೊಪ್ಪಳ ಜಿಲ್ಲೆಯ ಕುಷ್ಟಗಿಯಲ್ಲಿ ಡೀಸೆಲ್ ಇಲ್ಲದೆ ಬಸ್ ಸಂಚಾರ ಸ್ಥಗಿತಗೊಂಡು ಪ್ರಯಾಣಿಕರು ಪರದಾಡಿದ ಘಟನೆಯ ಬೆನ್ನಲ್ಲೇ, ಇದೀಗ ವಿಜಯಪುರದಲ್ಲೂ ಅಂತಹುದೇ ಗಂಭೀರ ಪರಿಸ್ಥಿತಿ ನಿರ್ಮಾಣವಾಗಿದೆ.

ಸಾರ್ವಜನಿಕರ ತೀವ್ರ ಪರದಾಟ

ವಿಜಯಪುರ ನಗರ ಹಾಗೂ ಸುತ್ತಮುತ್ತಲಿನ ಗ್ರಾಮೀಣ ಭಾಗಗಳಿಗೆ ತೆರಳಬೇಕಿದ್ದ ಸರ್ಕಾರಿ ಬಸ್‌ಗಳಿಗೆ ಡೀಸೆಲ್ ಭರಿಸಲು ವಿಳಂಬವಾದ ಹಿನ್ನೆಲೆಯಲ್ಲಿ, ನಗರದ ಮೂರು ಡಿಪೋಗಳಲ್ಲಿ ಬಸ್‌ಗಳು ಸಾಲುಗಟ್ಟಿ ನಿಲ್ಲುವಂತಾಯಿತು. ಇದರಿಂದ ಬೆಳಗಿನ ಜಾವ ಶಾಲೆ, ಕಾಲೇಜು ಹಾಗೂ ಉದ್ಯೋಗಗಳಿಗೆ ತೆರಳಬೇಕಿದ್ದ ಸಾರ್ವಜನಿಕರು ತೀವ್ರ ಪರದಾಟ ನಡೆಸಿದರು.

ಸಮಸ್ಯೆ ಕುರಿತು ಡಿಪೋ ಮ್ಯಾನೇಜರ್ ಜೊತೆ ಚರ್ಚಿಸಿದ ವಿಜಯೇಂದ್ರ

ಘಟನೆಯ ವಿಷಯ ತಿಳಿಯುತ್ತಿದ್ದಂತೆ ಜಿಲ್ಲಾ ಪ್ರವಾಸದಲ್ಲಿದ್ದ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ಅವರು ಮಾಜಿ ಪರಿಷತ್ ಸದಸ್ಯ ಅರುಣ ಶಹಾಪೂರ ಹಾಗೂ ಸ್ಥಳೀಯ ಮುಖಂಡರೊಂದಿಗೆ ಗ್ಯಾಂಗ್ ಬಾವಡಿಯಲ್ಲಿರುವ ಡಿಪೋಗೆ ಭೇಟಿ ನೀಡಿ ಪರಿಶೀಲಿಸಿದರು. ಡಿಪೋ ಮ್ಯಾನೇಜರ್ ಜೊತೆ ಚರ್ಚಿಸಿದ ಬಳಿಕ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, “ರಾಜ್ಯ ಸರ್ಕಾರ ಕೇವಲ ದಿವಾಳಿಯಾಗುವ ಹಂತದಲ್ಲಷ್ಟೇ ಇಲ್ಲ, ಸಂಪೂರ್ಣ ದಿವಾಳಿಯಾಗಿದೆ. ಶಕ್ತಿ ಯೋಜನೆಯಿಂದಾಗಿ ಸಾರಿಗೆ ಇಲಾಖೆಗೆ ಸರ್ಕಾರದಿಂದ ಬರಬೇಕಾದ ಸುಮಾರು 6,500 ಕೋಟಿ ರೂಪಾಯಿ ಬಾಕಿಯಿದೆ” ಎಂದು ಕಿಡಿಕಾರಿದರು.

ಸಿಬ್ಬಂದಿಯ ವೇತನವೂ ಬಾಕಿ

ಇದೇ ವೇಳೆ ಮೊದಲ ಬಾರಿಗೆ ಪೊಲೀಸ್ ಸಿಬ್ಬಂದಿಯ ವೇತನವೂ ಬಾಕಿ ಉಳಿದಿದೆ ಎಂದು ಆರೋಪಿಸಿದ ಅವರು, ಸರ್ಕಾರದ ಶೂನ್ಯ ಹಣಕಾಸು ನಿರ್ವಹಣೆಗೆ ಈ ಘಟನೆ ಸಾಕ್ಷಿ ಎಂದರು. ನಿನ್ನೆ ಸಂಜೆ ಡೀಸೆಲ್ ಪೂರೈಕೆಯಾಗದ ಕಾರಣ ಈ ಸಮಸ್ಯೆ ಎದುರಾಗಿತ್ತು, ಇಂದು ತಡವಾಗಿ ಡೀಸೆಲ್ ತಲುಪಿದ ಬಳಿಕ ಬಸ್‌ಗಳಿಗೆ ಇಂಧನ ತುಂಬಿಸಿ ಸಂಚಾರ ಪುನರಾರಂಭಿಸಲಾಗಿದೆ.

ಇದನ್ನೂ ಓದಿ ತೀರಾ ಆರ್ಥಿಕ ಸಂಕಷ್ಟದಲ್ಲಿರುವ ಬಿಎಂಟಿಸಿ: ತೈಲ ಕಂಪನಿಗಳಿಗೆ 4-5 ತಿಂಗಳಿನ ಸುಮಾರು 600 ಕೋಟಿ ಹಣ ಬಾಕಿ ಆರೋಪ

ಬೆಂಗಳೂರಿನಲ್ಲೂ ಇದೇ ಪರಿಸ್ಥಿತಿ ಎದುರಾಗುವ ಆತಂಕ!

ಕೊಪ್ಪಳ, ವಿಜಯಪುರವಷ್ಟೇ ಅಲ್ಲದೆ ಬೆಂಗಳೂರಿನ ಬಿಎಂಟಿಸಿಗೂ ಸಹ ಸಂಕಷ್ಟ ಎದುರಾಗಿದೆ. ಪ್ರತಿದಿನ 40 ಲಕ್ಷಕ್ಕೂ ಹೆಚ್ಚು ಜನರು ಪ್ರಯಾಣಕ್ಕೆ ಅವಲಂಬಿಸಿರುವ ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆ ಡೀಸೆಲ್ ಸರಬರಾಜು ಮಾಡುವ ತೈಲ ಕಂಪನಿಗಳಿಗೆ ನಾಲ್ಕೈದು ತಿಂಗಳಿನಿಂದ ಹಣ ಪಾವತಿ ಮಾಡಿಲ್ಲ. ಆದ್ದರಿಂದ ಆದಷ್ಟು ಬೇಗ ಹಣ ನೀಡದಿದ್ದಲ್ಲಿ ಡೀಸೆಲ್ ಸಪ್ಲೈ ನಿಲ್ಲಿಸಬೇಕಾಗುತ್ತದೆ ಎಂದು ಕಂಪನಿಗಳು ತಿಳಿಸಿವೆ. ಇದೇ ರೀತಿ ಮುಂದುವರಿದರೆ ಬೆಂಗಳೂರಿನಲ್ಲೂ ಡೀಸೆಲ್ ಇಲ್ಲದೆ ಪ್ರಯಾಣಿಕರು ಪರದಾಡುವ ಸ್ಥಿತಿ ಎದುರಾಗುವುದು ದೂರವೇನಿಲ್ಲ.

ಕರ್ನಾಟಕದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 12:11 pm, Fri, 9 October 26

Follow Us
ಅಶೋಕ ಯಡಳ್ಳಿ, ವಿಜಯಪುರ
ಅಶೋಕ ಯಡಳ್ಳಿ, ವಿಜಯಪುರ

ನನ್ನ ಹೆಸರು ಅಶೋಕ ಯಡಳ್ಳಿ, ಟಿವಿ9 ಕನ್ನಡ ಸುದ್ದಿ ವಾಹಿನಿಯಲ್ಲಿ ಕಳೆದ 2012 ರಿಂದ ವಿಜಯಪುರ ಜಿಲ್ಲಾ ಪ್ರತಿನಿಧಿಯಾಗಿ ಸೇವೆ ಸಲ್ಲಿಸುತ್ತಿದ್ದೇನೆ. ಟಿವಿ9 ಸಂಸ್ಥೆಗೂ ಮುನ್ನ ಹೈದರಾಬಾದಿನ ರಾಮೋಜಿ ರಾವ್ ಪೀಲ್ಮ್ ಸಿಟಿಯಲ್ಲಿದ್ದ ಈಟಿವಿ ಕನ್ನಡ ಮನರಂಜನೆ ಹಾಗೂ ಸುದ್ದಿ ವಾಹಿನಿಯಲ್ಲಿ ಸೇವೆ ಸಲ್ಲಿಸುತ್ತಿದ್ದೆ. ಇದು ನನ್ನ ಕೆಲಸದ ಬಗ್ಗೆ ಹೇಳಿರೋ ಮಾಹಿತಿಯಾಗಿದ್ದು ವೈಯುಕ್ತಿಕ ಮಾಹಿತಿ ಬಗ್ಗೆ ಹೇಳದಾದರೆ. ನಾನು ಮೂಲತಃ ಧಾರವಾಡ ಜಿಲ್ಲೆಯವ. ಧಾರವಾಡ ತಾಲೂಕಿನ ಅಮ್ಮಿನಬಾವಿ ಗ್ರಾಮ ನಮ್ಮೂರು. ತಂದೆ ತಾಯಿ ಸಹೋದರ ಸಹೋದರಿಯರ ತುಂಬು ಕುಟುಂಬ. ಮೂಲತಃ ಕೃಷಿ ಕುಟುಂಬವಾಗಿದ್ದು, ಹಿರಿಯರಿಂದ ಬಂದ ಜಮೀನುಗಳಿವೆ. ಪ್ರಾಥಮಿಕ ಶಿಕ್ಷಣ ನಮ್ಮೂರಲ್ಲೇ ಬಳಿಕ ಹೈಸ್ಕೂಲ್ ನಿಂದ ಹಿಡಿದು ಪಿಜಿವರೆಗೂ ಧಾರವಾಡ. ಕರ್ನಾಟಕ ವಿಶ್ವವಿದ್ಯಾಲಯದಿಂದ ಪತ್ರಿಕೋಧ್ಯಮ ಮತ್ತು ಸಮೂಹ ಸಂವಹನ ವಿಭಾಗದಿಂದ ಸ್ನಾತಕೋತ್ತರ ಪದವಿ ಪಡೆದಿದ್ದೇನೆ. ಟಿವಿ9 ನಲ್ಲಿ ಹಲವಾರು ಉತ್ತಮ ವರದಿಗಳನ್ನು ನೀಡಿದ ಹೆಮ್ಮೆ ತೃಪ್ತಿ ನನಗಿದೆ. ಆಲಮೇಲದ ವಿದ್ಯಾರ್ಥಿನಿಯರ ಮೇಲಿನ ಲೈಂಗಿಕ ದೌರ್ಜನ್ಯ ಬಹಿರಂಗ ಮಾಡಿದ್ದು, ವಿಜಯಪುರ ಬಾಗಲಕೋಟೆಯಲ್ಲಿ ಕೊಳವೆ ಬಾವಿಯಲ್ಲಿ ಬಿದ್ದಿದ್ದ ಮಕ್ಕಳ ಕುರಿತ ವರದಿ. ಹಾವಿನ ಸೇಡಿಗೆ ಒಳಗಾಗಿದ್ದ ಯುವಕನ ಸಮಸ್ಯೆ ಬಗೆ ಹರಿಸಿದ್ದು. ಉಷ್ಣ ವಿದ್ಯುತ್ ಸ್ಥಾವರದ ಗಲಾಟೆ ಹೀಗೆ ಹಲವಾರು ವಿಶೇಷ ಸುದ್ದಿಗಳು, ಚುನಾವಣೆ, ರಾಜಕೀಯ, ಕ್ರೀಡೆ, ಹೀಗೂ ಉಂಟೇ, ವಾರೆಂಟ್, ಮಾರುವೇಷ, ಸಾಧನೆ, ಕೃಷಿ ಹೀಗೆ ಅನೇಕ ವಿಚಾರಗಳ ಕುರಿತ ಸುದ್ದಿಗಳಿಗೆ ನ್ಯಾಯ ಒದಗಿಸಿದ್ದೇನೆಂದು ನಂಬಿದ್ದೇನೆ. ಭವಿಷ್ಯದಲ್ಲಿ ಇನ್ನೂ ಹೆಚ್ಚಿನ ಉತ್ತಮ ವರದಿಗಳನ್ನು ಮಾಡುವ ಹಂಬಲ - ಆಸಕ್ತಿಯಿದೆ. ಕ್ರೀಡೆ, ಸಾಮಾಜಿಕ, ಕೃಷಿಯಲ್ಲಿ ಹೆಚ್ಚಿನ ಆಸಕ್ತಿಯಿದೆ. ಧನ್ಯವಾದಗಳು.......

Read More