Tv9 Impact: ಬಾಲಕಿಯ ಸಾಧನೆಗೆ ಮೆಟ್ಟಿಲಾದ ಮಾರುವೇಷ ಕಾರ್ಯಕ್ರಮ

| Updated By: Rakesh Nayak Manchi

Updated on: Nov 24, 2022 | 10:54 AM

ನಾಡಿನ ನಂ.1 ಸುದ್ದಿ ವಾಹಿನಿ ಟಿವಿ9 ರಾಜ್ಯದ ಎಲ್ಲರ ಮನೆ ಮತ್ತು ಮನಗಳನ್ನು ಗೆದ್ದಿರುವ ಸುದ್ದಿ ವಾಹಿನಿ. ಕ್ಷಣ ಕ್ಷಣದ ಸುದ್ದಿಗಳನ್ನು ಮಾತ್ರ ಬಿತ್ತರಿಸುವುದಷ್ಟೇಯಲ್ಲಾ ಟಿವಿ9 ಸದಾ ಕಾಲ ಸಮಾಜಮುಖಿಯಾಗಿರುವ ಹತ್ತು ಹಲವು ಕಾರ್ಯಕ್ರಮಗಳನ್ನು ಸಹ ನೀಡುತ್ತದೆ.

Tv9 Impact: ಬಾಲಕಿಯ ಸಾಧನೆಗೆ ಮೆಟ್ಟಿಲಾದ ಮಾರುವೇಷ ಕಾರ್ಯಕ್ರಮ
Tv9 Impact: ಟಿವಿ9 ಮಾರುವೇಷ ಕಾರ್ಯಕ್ರಮದ ಪ್ರತಿಫಲ; ಸಾಧನೆಗಳ ಮೇಲೆ ಸಾಧನೆ ಮಾಡುತ್ತಿರುವ ಬಾಲಕಿ
Follow us on

ವಿಜಯಪುರ: ಕ್ಷಣಕ್ಷಣದ ಸುದ್ದಿಗಳನ್ನು ಬಿತ್ತರಿಸುವುದರ ಜೊತೆಗೆ ಸದಾ ಕಾಲ ಸಮಾಜಮುಖಿಯಾಗಿರುವ ಕನ್ನಡದ ನಂ.1 ಸುದ್ದಿ ವಾಹಿನಿ ಟಿವಿ9 ಮಾರುವೇಷ ಕಾರ್ಯಕ್ರಮವು ಅನೇಕ ಜನರ ಬಾಳಿಗೆ ಬೆಳಕಾಗಿದೆ. ಕಷ್ಟದಲ್ಲಿರುವ ಜನರಿಗೆ ಸಹಾಯ ಮಾಡುವುದೇ ಕಾರ್ಯಕ್ರಮದ ಮುಖ್ಯ ಉದ್ದೇಶವಾಗಿದೆ. ಈ ಮಾರುವೇಷ ಕಾರ್ಯಕ್ರಮದ ಮೂಲಕ ಸಹಾಯ ಪಡೆದಿದ್ದ ಬಾಲಕಿಯೋರ್ವಳು ಇದೀಗಾ ಸಾಧನೆಗಳ ಮೇಲೆ ಸಾಧನೆಗಳನ್ನು ಮಾಡಿಕೊಂಡು ಹೊರಟಿದ್ದಾಳೆ. ಮಾರುವೇಷ ಕಾರ್ಯಕ್ರಮದ ಸಹಾಯಹಸ್ತ ಆಕೆಯ ಬದುಕನ್ನೇ ಬದಲಿಸಿದೆ. ಟಿವಿ9ನಲ್ಲಿ ಪ್ರಸಾರವಾಗುವ ಮಾರುವೇಷ ಕಾರ್ಯಕ್ರಮ ಜನಮನ್ನಣೆ ಗಳಿಸಿದ ಕಾರ್ಯಕ್ರಮವಾಗಿದೆ. ಅಷ್ಟೇ ಜವಾಬ್ದಾರಿಯೂ ಮಾರುವೇಷ ಕಾರ್ಯಕ್ರಮಕ್ಕಿದೆ. ಕಷ್ಟದಲ್ಲಿ ಸಂಕಷ್ಟಗಳಲ್ಲಿ ಇರುವವರನ್ನು ಪತ್ತೆ ಮಾಡಿ ಸಹಾಯ ಮಾಡುವುದಷ್ಟೇ ಅಲ್ಲಾ ಅವರ ಬದುಕಿಗೆ ದಾರಿಯಾಗುವುದು ಸುಲಭದ ಮಾತಲ್ಲಾ. ಅಂಥ ಸಾಧನೆಯನ್ನು ಮಾರುವೇಷ ಕಾರ್ಯಕ್ರಮದ ಮೂಲಕ ಮಾಡಿಕೊಂಡು ಬರಲಾಗುತ್ತಿದೆ. ಇದಕ್ಕೆ ನಿದರ್ಶನವೇ ವಿಜಯಪುರ ತಾಲೂಕಿನ ಭೂತನಾಳ ತಾಂಡಾದ ನಿವಾಸಿ ಪಾಯಲ್ ಖುಷಿಲಾಲ್ ಚೌವ್ಹಾಣ್.

ಕಡು ಬಡತನದಲ್ಲಿ ಬೆಳೆದ ಪಾಯಲ್ 2018ರಲ್ಲಿ ತನ್ನ ಸ್ವಸಾಮರ್ಥ್ಯದಿಂದ ವಿಜಯಪುರ ಕ್ರೀಡಾ ಶಾಲೆಗೆ ಆಯ್ಕೆಯಾಗಿದ್ದಳು. ಪಾಯಲ್​ನಲ್ಲಿ ಓರ್ವ ಸೈಕ್ಲಿಸ್ಟ್ ಅಡಗಿದ್ದಾಳೆ ಎಂಬುದನ್ನು ಕಂಡು ಹಿಡಿಯಲು ಅಲ್ಲಿನ ಕೋಚ್​ಗಳಾದ ಅಲಕಾ ಪಡತಾರೆ, ರಮೇಶ ಹಾಗೂ ಇತರರಿಗೆ ಹೆಚ್ಚು ಸಮಯ ಬೇಕಾಗಿರಲಿಲ್ಲಾ. ಬಡತನದಲ್ಲಿ ಬೆಳೆದ ಪಾಯಲ್ ಬಳಿ ಸ್ವಂತ ಸೈಕಲ್ ಇರಲಿಲ್ಲಾ. ಮತ್ತೋಬ್ಬರ ಸೈಕಲ್ ಅನ್ನು ಎರವಲು ಪಡೆದು 2018ರಲ್ಲಿ ಹುಬ್ಬಳ್ಳಿಯಲ್ಲಿ ನಡೆದ ರಾಜ್ಯ ಮಟ್ಟದ ರೋಡ್ ಸೈಕ್ಲಿಂಗ್ ಚಾಂಪಿಯನ್​ಶಿಫ್ ಸ್ಪರ್ದೆಯ ಅಂಡರ್ ಪೋರ್ಟೀನ್ ಟೈಮ್ ಟ್ರಯಲ್ ಸ್ಪರ್ಧೆಯಲ್ಲಿ ಕಂಚಿನ ಮದಕ ಪಡೆದಿದ್ದಳು. ಅದೇ ಚಾಂಪಿಯನ್​ಶಿಪ್ ಸ್ಪರ್ಧೆಯಲ್ಲಿ ಅಂಡರ್ ಸಿಕ್ಸಟೀನ್ ಟೈಮ್ ಟ್ರಯಲ್ ವಿಭಾಗದಲ್ಲಿ ಬೆಳ್ಳಿ ಪದಕ ಗೆದ್ದಿದ್ದಳು.

ಬಳಿಕ 2018 ರ ನವೆಂಬರ್​ನಲ್ಲಿ ಹರಿಯಾನಾ ರಾಜ್ಯದ ಕುರುಕ್ಷೇತ್ರದಲ್ಲಿ ನಡೆದ 23ನೇ ರಾಷ್ಟ್ರೀಯ ರೋಡ್ ಸೈಕ್ಲಿಂಗ್ ಚಾಂಪಿಯನ್​ಶಿಪ್​ನಲ್ಲಿ ಬೆಳ್ಳಿ ಪದಕ ಹಾಗೂ 10 ಕಿ.ಮೀ. ಇಂಡಿಜ್ಯುವೆಲ್ ಟೈಮ್ ಟ್ರಯಲ್ ಇವೆಂಟ್​ನಲ್ಲಿ ಬೆಳ್ಳಿ ಪದಕ ಪಡೆದು ಎರಡನೇಯ ಸ್ಥಾನ ಪಡೆದಿದ್ದಳು. 2019ರ ಜನವರಿ ತಿಂಗಳಲ್ಲಿ ನೆರೆಯ ಬಾಗಲಕೋಟೆ ಜಿಲ್ಲೆಯಲ್ಲಿ‌ ನಡೆದ 11ನೇ ರಾಜ್ಯ ಮಟ್ಟದ ಟ್ರ್ಯಾಕ್ ಸೈಕಲ್ ಚಾಂಪಿಯನ್​ಶಿಪ್​ನಲ್ಲಿ ಭಾಗವಹಿಸಿದ್ದ ಪಾಯಲ್ ಅಂಡರ್ 14 ಇಂಡೀಜ್ಯೂವಲ್ ಟೈಮ್ ಟ್ರಯಲ್ ಸ್ಪರ್ಧೆಯಲ್ಲಿ ಒಂದು ಬೆಳ್ಳಿ ಪದಕ ಹಾಗೂ ಅಂಡರ್ 14 ಇಂಡಿಜ್ಯೂವಲ್ ಪರ್ಸ್ಯೂಟ್​ನಲ್ಲಿ ಒಂದು ಬೆಳ್ಳಿ ಪದಕ ಪಡೆದಿದ್ದಳು.

ಇದನ್ನೂ ಓದಿ: IND vs NZ: ಈಡನ್ ಪಾರ್ಕ್​ನಲ್ಲಿ ಟೀಮ್ ಇಂಡಿಯಾ ಆಟಗಾರರ ಭರ್ಜರಿ ಅಭ್ಯಾಸ: ಫೋಟೋ

2019ರ ಡಿಸೆಂಬರ್​ನಲ್ಲಿ ವಿಜಯಪುರ ನಗರದಲ್ಲಿ ನಡೆದ 12ನೇ ರಾಜ್ಯ ಮಟ್ಟದ ಟ್ರ್ಯಾಕ್ ಸೈಕ್ಲಿಂಗ್ ಚಾಂಪಿಯನ್​ಶಿಪ್​ನಲ್ಲಿ ಭಾಗಿಯಾಗಿ ಅಂಡರ್ 14 ಇಂಡಿಜ್ಯುವಲ್ ಪರ್ಸ್ಯೂಟ್​ನಲ್ಲಿ ಒಂದು ಚಿನ್ನದ ಪದಕ ಹಾಗೂ ಅಂಡರ್ 16 ಟೈಮ್ ಟ್ರಯಲ್ ಇಂಡಿವಿಜುವಲ್​ನಲ್ಲಿ ಎರಡು ಕಂಚಿನ ಪದಕ ಗಳಿಸಿದ್ದಳು. ಇಷ್ಟೆಲ್ಲಾ ಸಾಧನೆಯನ್ನು ಮತ್ತೊಬ್ಬರ ಸೈಕಲ್ ಪಡೆದು ಮಾಡಿದ್ದಾಳೆ ಎಂಬುದು ನಮ್ಮ ವಿಜಯಪುರ ಜಿಲ್ಲಾ ಟಿವಿ9 ತಂಡಕ್ಕೆ ಗೊತ್ತಾಗುತ್ತಿದ್ದಂತೆ ಪಾಯಲ್ ಚೌವ್ಹಾಣ್ ಕುರಿತ ಮಾರುವೇಷ ಕಾರ್ಯಕ್ರವನನ್ನು ಮಾಡಲಾಗಿತ್ತು.

ಪಾಯಲ್ ಚೌವ್ಹಾಣ ತಂದೆ ಖುಷಿಲಾಲ್ ಅವರು ಡೀಸೈಲ್ ಪೆಟ್ರೋಲ್ ಬಂಕ್​ನಲ್ಲಿ ಲಾರಿಗಳಿಗೆ ಗ್ರೀಸಿಂಗ್ ಮಾಡುವುದು ಸೇರಿದಂತೆ ಇತರೆ ಕೆಲಸ ಮಾಡಿ ಜೀವನದ ಬಂಡಿ ಸಾಗಿಸುತ್ತಿದ್ದರೆ ಪಾಯಲ್ ತಾಯಿ ಸುಶೀಲಾಬಾಯಿ ತರಕಾರಿ ಮಾರಾಟ ಮಾಡಿ ಸಂಸಾರಕ್ಕೆ ಹೆಗಲು ನೀಡುತ್ತಿದ್ದಾರೆ. ಪಾಯಲ್​ ಸಹೋದರನೂ ಕೆಲಸಕ್ಕೆ ಹೋಗುತ್ತಾನೆ. ಇನ್ನು ಪಾಯಲ್ ಕಿರಿಯ ಸಹೋದರಿ ಕೋಕಿಲಾ ಕ್ರೀಡಾ ಶಾಲೆಗೆ ಆಯ್ಕೆಯಾಗಿ ಸೈಕ್ಲಿಂಗ್ ತರಬೇತಿ ಪಡೆಯುತ್ತಿದ್ದಾಳೆ. ಇಂಥ ಬಡತನದಲ್ಲಿರುವ ಬಾಲಕಿ ಉತ್ತಮ ಸೈಕ್ಲಿಸ್ಟ್ ಆಗುತ್ತಾಳೆ. ಆಕೆಗೆ ಸೈಕಲ್ ಅವಶ್ಯಕತೆಯಿದೆ ಎಂದು 2019 ರಲ್ಲಿ ಮಾರುವೇಷ ಕಾರ್ಯಕ್ರಮದಲ್ಲಿ ಬಿತ್ತರ ಮಾಡಲಾಗಿತ್ತು.

ಇದನ್ನೂ ಓದಿ: IND vs BAN: ಪ್ರತಿಭಟನೆಯ ಭಯ; ಭಾರತ- ಬಾಂಗ್ಲಾ ನಡುವಿನ 3ನೇ ಏಕದಿನ ಪಂದ್ಯ ಸ್ಥಳಾಂತರ..!

ಪಾಯಲ್​ಗೆ ನೆರವಾದ ದಾನಿಗಳು ಮತ್ತು ಮಾಜಿ ಶಾಸಕರಿಂದ ಸೈಕಲ್ ಗಿಫ್ಟ್

ಮಾರುವೇಷ ಕಾರ್ಯಕ್ರಮ ವೀಕ್ಷಿಸಿದ ನಾಡಿನ ಜನರು ಪಾಯಲ್ ಚೌವ್ಹಾಣ ಬ್ಯಾಂಕ್ ಅಕೌಂಟಿಗೆ 2 ಲಕ್ಷಕ್ಕೂ ಆಧಿಕ ಹಣವನ್ನು ಹಾಕಿದ್ದರು. ಮಾರುವೇಷ ಕಾರ್ಯಕ್ರಮ ವೀಕ್ಷಣೆ ಮಾಡಿದ ಬಳ್ಳಾರಿಯ ಮಾಜಿ ಶಾಸಕ ಸೂರ್ಯನಾರಾಯಣ ರೆಡ್ಡಿ ಅವರು 7.25 ಲಕ್ಷ ರೂಪಾಯಿ ಮೌಲ್ಯದ ಸೈಕಲ್ ಕಾಣಿಕೆಯಾಗಿ ನೀಡಿದರು. ಬಳ್ಳಾರಿಯಲ್ಲಿನ ತಮ್ಮ ಮನೆಗೆ ಪಾಯಲ್ ಚೌವ್ಹಾಣ ಹಾಗೂ ಅವರ ಕುಟುಂಬದವರನ್ನು ಕರೆಯಿಸಿ ಬಾಲಕಿಗೆ ಸೈಕಲ್ ನೀಡಿ ಮಾನವೀಯತೆಯನ್ನು ಮೆರೆದರು. ಸೂರ್ಯನಾರಾಯಣ ರೆಡ್ಡಿಯವರು ಸೈಕಲ್ ಕೊಡಿಸಿದ ಕಾರಣ ಪಾಯಲ್ ಉತ್ತಮ ಸೈಕ್ಲಿಸ್ಟ್ ಆಗಿ ಬೆಳೆಯಲು ಕಾರಣವಾಗಿತ್ತು.

ಸೈಕಲ್ ಸಿಕ್ಕ ಬಳಿಕ ಹೆಚ್ಚು ಹೆಚ್ಚು ಖುಷಿಯಲ್ಲೇ ಪಾಯಲ್ ಹೆಚ್ಚಿನ ಸೈಕ್ಲಿಂಗ್ ಅಭ್ಯಾಸ ಮಾಡಲು ಆರಂಭಿಸಿದ್ದಳು. 2021ರ ಮಾರ್ಚ್ ತಿಂಗಳ 27 ರಿಂದ 31ರವರೆಗೆ ಹೈದರಾಬಾದ್​ನಲ್ಲಿ ನಡೆದ ರಾಷ್ಟ್ರಮಟ್ಟದ 49ನೇ ಸಬ್ ಜ್ಯೂನಿಯರ್ ಸೈಕ್ಲಿಂಗ್ ಟ್ರ್ಯಾಕ್ ಚಾಂಪಯನ್​ಶಿಪ್​ನಲ್ಲಿ ಪ್ರಥಮ ಸ್ಥಾನ ಪಡೆದು ಚಿನ್ನದ ಪದಕ ಬೇಟೆಯಾಡಿ ಸೈ ಎನಿಸಿಕೊಂಡಿದ್ದಳು. ಈ ಮೂಲಕ ಸೈಕಲ್ ಕೊಡಿಸಿದ ಸೂರ್ಯನಾರಾಯಣ ರೆಡ್ಡಿ ಹಾಗೂ ಮಾರುವೇಷ ಕಾರ್ಯಕ್ರಮಕ್ಕೆ ಹೆಮ್ಮೆ ತಂದಿದ್ದಳು. ನಂತರ ಪಾಯಲ್ ಚೌವ್ಹಾಣ್ ತಿರುಗಿ ನೋಡಿಲ್ಲಾ. ಪಾಯಲ್ ಹೆಚ್ಚಿನ ತರಬೇತಿ ಪಡೆಯಲು ಆಯ್ಕೆಯಾಗಲು ಕಾರಣವಾಯಿತು.

ರಾಷ್ಟ್ರಮಟ್ಟದಲ್ಲಿ ಪದಕ ಸಾಧನೆಗೆ ಪಟಿಯಾಲದಲ್ಲಿ ತರಬೇತಿ

ಸದ್ಯ ಪಾಯಲ್ ಪಂಜಾಬಿನ ಪಟಿಯಾಲಾದಲ್ಲಿರುವ ಕೇಂದ್ರ ಸರ್ಕಾರ ಸ್ವಾಮ್ಯದ ಎನ್​ಸಿಓ (National Centres of Excellence) ನ್ಯಾಷನಲ್ ಸೆಂಟರ್ಸ್ ಆಫ್ ಎಕ್ಸಲೆನ್ಸ್​ನಲ್ಲಿ ಸೈಕ್ಲಿಂಗ್ ತರಬೇತಿ ಪಡೆಯುತ್ತಿದ್ದು, ರಾಷ್ಟ್ರಮಟ್ಟಕ್ಕೆ ಆಯ್ಕೆಯಾಗುವ ಸಾಧ್ಯತೆಯಿದೆ. ಇದೆಲ್ಲದಕ್ಕೆ ಟಿವಿ9ನ ಮಾರುವೇಷ ಕಾರ್ಯಕ್ರಮವೇ ಕಾರಣ ಎಂದು ಕೋಚ್ ರಮೇಶ ಖುಷಿಯಿಂದಲೇ ಹೇಳುತ್ತಾರೆ.

“ಆರಂಭದಲ್ಲಿ ಪಾಯಲ್ ಜೊತೆ ಸೈಕಲ್ ಇರಲಿಲ್ಲ, ನಂತರ ಟಿವಿ9 ಸುದ್ದಿ ಸಂಸ್ಥೆ ಮಾರುವೇಷ ಕಾರ್ಯಕ್ರಮದ ಮೂಲಕ ಸುದ್ದಿ ಬಿತ್ತರಿಸಿದರು. ನಂತರ ಮಾಜಿ ಶಾಸಕ ಸೂರ್ಯನಾರಾಯಣ ರೆಡ್ಡಿ ಅವರು ಸೈಕಲ್ ಕೊಡಿಸಿದರು. ಆ ಮೂಲಕ ಪಾಯಲ್ ನಿರಂತರ ಅಭ್ಯಾಸದಲ್ಲಿ ತೊಡಗಿ ರಾಷ್ಟ್ರಮಟ್ಟದಲ್ಲಿ ಪದಕಗಳನ್ನು ಗೆದ್ದುಕೊಂಡಳು.” -ರಮೇಶ, ಸೈಕ್ಲಿಂಗ್ ತರಬೇತುಗಾರ

ಪಂಜಾಬಿನ ಪಟಿಯಾಲಾದ ಎನ್​ಸಿಓದಲ್ಲಿ ಕಳೆದ ಒಂದು ವರ್ಷದಿಂದ ಪಾಯಲ್ ಚೌವ್ಹಾಣ್ ತರಬೇತಿ ಪಡೆಯುತ್ತಿದ್ದಾಳೆ. ಇಲ್ಲಿ ತರಬೇತಿ ಪಡೆಯು ಆಯ್ಕೆಯಾಗುವುದು ಸುಲಭದ ಮಾತಲ್ಲಾ. ಇಲ್ಲಿ ತರಬೇತಿಯನ್ನು ಪಡೆದು ರಾಷ್ಟ್ರ ತಂಡದ ಪರ ಆಟವಾಡುವ ಅವಕಾಶ ಇರುತ್ತದೆ. ಅಂತಾರಾಷ್ಟ್ರೀಯ ಚಾಂಪಿಯನ್​ಶಿಪ್​ಗಳಲ್ಲಿ ಭಾಗಿವಹಿಸಲು ಸಾಧ್ಯ. ಇಷ್ಟೆಲ್ಲಾ ಅವಕಾಶ ಸಿಕ್ಕಿದ್ದು ಮಾತ್ರ ಟಿವಿ9 ಮಾರುವೇಷದ ಕಾರ್ಯಕ್ರಮದ ಮೂಲಕ ಎಂದು ಯುವ ಸೈಕ್ಲಿಸ್ಟ್ ಪಾಯಲ್ ಚೌವ್ಹಾಣ್ ಹೇಳುತ್ತಾಳೆ.

ಬಾಲಕಿಗೆ ದಾರಿ ತೋರಿದ ಮಾರುವೇಷ ಕಾರ್ಯಕ್ರಮ

ಕಡು ಬಡತನದಲ್ಲಿದ್ದ ನನಗೆ ದಾರಿ ತೋರಿಸಿದ್ದು ಮಾರುವೇಷ ಕಾರ್ಯಕ್ರಮ ಎಂದು ಹೆಮ್ಮೆಯಿಂದ ಹೇಳಿಕೊಳ್ಳುತ್ತಿದ್ದಾಳೆ. ಸೈಕಲ್ ಸಿಕ್ಕ ಬಳಿಕ ಭಾಗಿಯಾದ ಎಲ್ಲಾ ಚಾಂಪಿಯನ್​ಶಿಪ್​ಗಳಲ್ಲಿಯೂ ಪದಕ ಗೆದ್ದು ತೋರಿಸಿದ್ದಾಳೆ. ಪಟಿಯಾಲಾದ ಎನ್​ಸಿಓನಲ್ಲಿ ತರಬೇತಿ ಪಡೆಯುತ್ತಲೇ ಕಳೆದ ದಸರಾ ಪ್ರಯುಕ್ತ ಮೈಸೂರಿನಲ್ಲಿ ನಡೆದ ಸಿಎಂ ಕಪ್ ಸೈಕ್ಲಿಂಗ್ ಚಾಂಪಿಯನ್​ಶಿಪ್​ನಲ್ಲಿ ಚಿನ್ನದ ಪದಕ ಗೆದ್ದು ಬೀಗಿದ್ದಾಳೆ. ಬಳಿಕ ಅದೇ ಮೈಸೂರಿನಲ್ಲಿ ಅಕ್ಟೋಬರ್ 22 ಹಾಗೂ 23 ರಂದು ಎರಡು ದಿನಗಳ ಕಾಲ ನಡೆದ 13ನೇ ರಾಜ್ಯ ಮಟ್ಟದ ಸೈಕ್ಲಿಂಗ್ ಚಾಂಪಿಯನ್​ಶಿಪ್​ನಲ್ಲಿ 10 ಕಿ.ಮೀ. ಟೈಂ ಟ್ರಯಲ್​ನಲ್ಲಿ ಬೆಳ್ಳಿ ಪದಕ ಗೆದ್ದಿದ್ದಾಳೆ.

ನವೆಂಬರ್ 13 ರಂದು ಬೆಳಗಾವಿ ಜಿಲ್ಲೆ ಚಂದರಗಿಯ ಕ್ರೀಡಾ ಶಾಲೆ ಆಯೋಜಿಸಿದ್ದ 17ನೇ ರಾಜ್ಯ ಮಟ್ಟದ ಟ್ರ್ಯಾಕ್ ಸೈಕ್ಲಿಂಗ್ ಚಾಂಪಿಯನ್​ಶಿಪ್​ನಲ್ಲಿ ಪ್ರಥಮ ಸ್ಥಾನ ಪಡೆದು ಚಿನ್ನದ ಪದಕ ಗೆದ್ದಿದ್ದಾಳೆ. ಡಿಸೆಂಬರ್ 11 ರಿಂದ 15 ರವರೆಗೆ ಅಸ್ಸಾಂನ ಗುವಾಹಾಟಿಯಲ್ಲಿ ನಡೆಯಲಿರುವ ರಾಷ್ಟ್ರ ಮಟ್ಟದ ಟ್ರ್ಯಾಕ್ ಸೈಕ್ಲಿಂಗ್ ಚಾಂಪಿಯನ್​ಶಿಪ್​ ರಾಜ್ಯದ ಪರವಾಗಿ ಸ್ಪರ್ಧಿಸಲು ಆಯ್ಕೆಯಾಗಿದ್ದಾಳೆ.

ಸದ್ಯ 17 ವರ್ಷದ ಬಾಲಕಿ ಪಾಯಲ್ ಇನ್ನೊಂದು ವರ್ಷದ ಬಳಿಕ ರಾಷ್ಟ್ರಮಟ್ಟಕ್ಕೆ ಆಯ್ಕೆಯಾಗುವ ಸಾಧ್ಯತೆಯೂ ಇದೆ. ಪಾಯಲ್ ಪಡಬಾರದ ಕಷ್ಟ ಪಟ್ಟು ಆಕೆಗೆ ಮಾರುವೇಷದ ಕಾರ್ಯಕ್ರಮದ ಮೂಲಕ ಸೈಕಲ್ ಸಿಕ್ಕಿರಿವುದರಿಂದ ಇಂದಿನ ತನ್ನೆಲ್ಲಾ ಕ್ರೀಡಾ ಜೀವನದ ಬೆಳೆವಣಿಗೆಗಳಿಗೆ ಮಾರುವೇಷ ಕಾರ್ಯಕ್ರಮ ಕಾರಣವೆಂದು ನೀರು ತುಂಬಿದ ಕಣ್ಣುಗಳಿಂದಲೇ ಹೇಳುತ್ತಾಳೆ.

“ಟಿವಿ9 ಮಾರುವೇಷ ಕಾರ್ಯಕ್ರಮದಲ್ಲಿ ನನ್ನ ಬಗ್ಗೆ ವರದಿ ಮಾಡಿತು. ನಂತರ ಮಾಜಿ ಶಾಸಕ ಸೂರ್ಯನಾರಾಯಣ ಅವರು ಸೈಕಲ್ ಡೊನೆಟ್ ಮಾಡಿದರು. ಬಳಿಕ ಹೈದರಾಬಾದ್, ರಾಜಸ್ಥಾನದಲ್ಲಿ ನಡೆದ ಸೈಕ್ಲಿಂಗ್ ಸ್ಪರ್ಧೆಯಲ್ಲಿ ಪದಕಗಳನ್ನು ಗೆದ್ದುಕೊಂಡೆ. ನನಗೆ ನೆರವು ನೀಡಿದ ಸೂರ್ಯನಾರಾಯಣ ರೆಡ್ಡಿ ಹಾಗೂ ಟಿವಿ9ಗೆ ಧನ್ಯವಾದಗಳು ಹೇಳುತ್ತೇನೆ.” -ಪಾಯಲ್ ಚೌವ್ಹಾಣ್, ಯುವ ಸೈಕ್ಲಿಸ್ಟ್ ಪ್ರತಿಭೆ

ಇದನ್ನೂ ಓದಿ: Abu Dhabi T10: ಶೂನ್ಯ ಸುತ್ತಿದ್ದ ಸುರೇಶ್ ರೈನಾ, 33 ಎಸೆತಗಳಲ್ಲಿ 77 ರನ್ ಚಚ್ಚಿದ ಪೂರನ್..!

ಚಿಂತೆಯಲ್ಲಿದ್ದ ಪಾಯಲ್ ಪೋಷಕರ ಮುಖದಲ್ಲಿ ಸಂತಸ

ಮಗಳಿಗೆ ಒಂದು ಸೈಕಲ್ ಕೊಡಿಸಲಾಗುತ್ತಿಲ್ಲವಲ್ಲಾ ಎಂದು ಪಾಯಲ್ ಚೌವ್ಹಾನ್ ತಂದೆ ತಾಯಿ ಚಿಂತೆ ಮಾಡುತ್ತಿದ್ದರು. ಕಷ್ಟಪಟ್ಟು ದುಡಿದು ಸೈಕಲ್ ಕೊಡಿಸುವಾ ಅಂತ ಕನಸು ಕಾಣುತ್ತಿದ್ದರು. ಆದರೆ ಲಕ್ಷ ಲಕ್ಷ ಹಣ ಹೊಂದಿಸಲಾಗದೇ ಪರಿತಪಿಸುತ್ತಿದ್ದರು. ಇದೇ ವೇಳೆ ಮಾರುವೇಷ ಕಾರ್ಯಕ್ರಮದ ಮೂಲಕ ಪಾಯಲ್​ಗೆ ಸೈಕಲ್ ಸಿಕ್ಕಾಗ ಪಾಯಲ್ ಅಷ್ಟೇಯಲ್ಲಾ ನಮ್ಮ ಮನೆ ಮಂದಿಯೆಲ್ಲಾ ಹಬ್ಬದ ಆಚರಣೆ ಮಾಡಿದೇವು. ಸೈಕಲ್ ಸಿಕ್ಕ ಬಳಿಕ ಒಂದೊಂದೆ ಸ್ಪರ್ದೆಗಳಲ್ಲಿ ಪದಕಗಳನ್ನು ಗೆಲ್ಲುತ್ತಾ ನಮ್ಮ ಮಗಳು ಸಾಧನೆ ಮಾಡಿದಳು ಎಂದು ಪಾಯಲ್ ಚೌವ್ಹಾಣ್ ತಂದೆ ತಾಯಿ ಸಹೋದರ ಹಾಗೂ ಸಹೋದರಿ ಸಂತಸ ಪಡುತ್ತಿದ್ದಾರೆ.

ನಮ್ಮ ಕಷ್ಟಗಳು ದೂರವಾದವಲ್ಲಾ ಎಂದು ನೆಮ್ಮದಿಯ ಉಸಿರು ಬಿಡುತ್ತಾರೆ. ಮಗಳಿಗೆ ಸೈಕಲ್ ಕೊಡಿಸಬೇಕೆಂಬ ಕನಸು ಮಾರುವೇಷ ಕಾರ್ಯಕ್ರಮದ ಮೂಲಕ ಸಾಕಾರಗೊಂಡಿದ್ದಕ್ಕೆ ಧನ್ಯತೆ ಮೆರೆದಿದ್ದಾರೆ. ಈಗಾ ಪಟಿಯಾಲಾದಲ್ಲಿ ತರಬೇತಿ ಪಡೆಯುತ್ತಿದ್ದಾಳೆ. ಮಗಳ ಸಾಧನೆ ನಮಗೆ ಸಂತಸ ನೀಡಿದೆ. ಟಿವಿ9 ಮಾರುವೇಷ ಕಾರ್ಯಕ್ರಮಕ್ಕೆ ನಮ್ಮ ನಮಸ್ಕಾರ ಎಂದು ಖುಷಿಲಾಲ್ ಚೌವ್ಹಾಣ್ ಹೇಳಿದರು.

ಮುಂಬರುವ ಡಿಸೆಂಬರ್ 11 ರಿಂದ 15 ರವರೆಗೆ ಅಸ್ಸಾಂನ ಗುವಾಹಾಟಿಯಲ್ಲಿ ನಡೆಯಲಿರುವ ರಾಷ್ಟ್ರ ಮಟ್ಟದ ಟ್ರ್ಯಾಕ್ ಸೈಕ್ಲಿಂಗ್ ಚಾಂಪಿಯನ್​ಶಿಪ್​ಗೆ ರಾಜ್ಯದ ಪರವಾಗಿ ಸ್ಪರ್ಧಿಸಲು ಆಯ್ಕೆಯಾಗಿದ್ದಾಳೆ. ಪಾಯಲ್ ಅಲ್ಲಿಯೂ ಸಾಧನೆ ಮಾಡಲು ತಯಾರಿ ನಡೆಸಿದ್ದಾಳೆ. ರಾಷ್ಟ್ರ ಮಟ್ಟದಲ್ಲಿಯೂ ಪಾಯಲ್ ಚೌವ್ಹಾಣ್ ಉತ್ತಮ ಸಾಧನೆ ಮಾಡಿ ಟ್ರ್ಯಾಕ್ ಸೈಕ್ಲಿಂಗ್ ಚಾಂಪಿಯನ್​ಶಿಪ್​ನಲ್ಲಿ ಪದಕ ಗೆದ್ದು ಬರಲಿ ಎಂದು ಹಾರೈಸುತ್ತೇವೆ. ಅಲ್ಲದೆ ಅಂತಾರಾಷ್ಟ್ರೀಯ ಮಟ್ಟದ ತಂಡಕ್ಕೂ ಪಾಯಲ್ ಚೌವ್ಹಾಣ್ ಆಯ್ಕೆಯಾಗಿ ಭಾರತ ತಂಡದ ಸದಸ್ಯೆಯಾಗಿ ಅಂತಾರಾಷ್ಟ್ರೀಯ ಕ್ರೀಡಾಕೂಟಗಳಲ್ಲಿಯೂ ಗೆದ್ದು ಭಾರತದ ಗೌರವವನ್ನು ಹೆಚ್ಚಿಸುವಂತಯಾಗಲಿ.

ವರದಿ: ಅಶೋಕ ಯಡಳ್ಳಿ, ಟಿವಿ9 ವಿಜಯಪುರ

ಮತ್ತಷ್ಟು ರಾಜ್ಯದ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 10:54 am, Thu, 24 November 22