Abu Dhabi T10: ಶೂನ್ಯ ಸುತ್ತಿದ್ದ ಸುರೇಶ್ ರೈನಾ, 33 ಎಸೆತಗಳಲ್ಲಿ 77 ರನ್ ಚಚ್ಚಿದ ಪೂರನ್..!
Abu Dhabi T10: ಈ ಪಂದ್ಯದ ಮೂಲಕ ಟಿ10 ಲೀಗ್‌ಗೆ ಪಾದಾರ್ಪಣೆ ಮಾಡಿದ ಭಾರತದ ಸುರೇಶ್ ರೈನಾ ತಮ್ಮ ಮೊದಲ ಪಂದ್ಯದಲ್ಲಿಯೇ ಕೇವಲ 2 ಎಸೆತಗಳಲ್ಲಿ ಎದುರಿಸಿ ಖಾತೆ ತೆರೆಯದೆ ಪೆವಿಲಿಯನ್ ಸೇರಿದರು.
ಅಬುಧಾಬಿಯಲ್ಲಿ ನಿನ್ನೆಯಿಂದ ಆರಂಭವಾದ ಟಿ10 ಲೀಗ್‌ನ (Abu Dhabi T10) ಎರಡನೇ ಪಂದ್ಯದಲ್ಲಿ ಕೆರಿಬಿಯನ್ ತಂಡದ ಮಾಜಿ ನಾಯಕ ನಿಕೋಲಸ್ ಪೂರನ್ (Nicholas Pooran) ಸ್ಫೋಟಕ ಇನ್ನಿಂಗ್ಸ್ ಆಡಿದ್ದಾರೆ. ಪೂರನ್ ಅಬ್ಬರದ ಫಲವಾಗಿ ಟೂರ್ನಿಯ ಮೊದಲ ಪಂದ್ಯದಲ್ಲೇ ಡೆಕ್ಕನ್ ಗ್ಲಾಡಿಯೇಟರ್ಸ್ ತಂಡ ಬಂಪರ್ ಗೆಲುವು ಸಾಧಿಸಿದೆ. ಈ ಇನ್ನಿಂಗ್ಸ್ ಮೂಲಕ ನಿಕೋಲಸ್ ಪೂರನ್ ಒಂದೇ ಕಲ್ಲಿನಲ್ಲಿ ಎರಡು ಹಕ್ಕಿಗಳನ್ನು ಹೊಡೆದಿದ್ದಾರೆ. ಇದರಲ್ಲಿ ಮೊದಲನೆಯದ್ದು, ಅವರ ಸ್ಫೋಟಕ ಬ್ಯಾಟಿಂಗ್ ಮೂಲಕ ತಂಡಕ್ಕೆ ಗೆಲುವು ತಂದುಕೊಟ್ಟರೆ, ಎರಡನೇಯದ್ದು ಐಪಿಎಲ್ ತಂಡದಿಂದ ಬಿಡುಗಡೆ ಮಾಡಿದ ಐಪಿಎಲ್ ಫ್ರಾಂಚೈಸಿ ಸನ್‌ರೈಸರ್ಸ್ ಹೈದರಾಬಾದ್‌ಗೆ ಸರಿಯಾದ ಉತ್ತರವನ್ನು ನೀಡಿದ್ದಾರೆ. ಆದರೆ ಟೂರ್ನಿಯನ್ನು ಉತ್ತಮ ರೀತಿಯಲ್ಲಿ ನಿಕೋಲಸ್ ಪೂರನ್ ಆರಂಭಿಸಿದರೆ ಟೀಂ ಇಂಡಿಯಾದ ಮಾಜಿ ಆಟಗಾರ ಸುರೇಶ್ ರೈನಾ (Suresh Raina) ತಮ್ಮ ಕಳಪೆ ಫಾರ್ಮ್ ಮುಂದುವರೆಸಿದರು.
ಡೆಕ್ಕನ್ ಗ್ಲಾಡಿಯೇಟರ್ಸ್ ಮತ್ತು ಅಬುಧಾಬಿ ತಂಡಗಳ ನಡುವೆ ನಡೆದ ಈ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ಡೆಕ್ಕನ್ ಗ್ಲಾಡಿಯೇಟರ್ಸ್ 10 ಓವರ್‌ಗಳಲ್ಲಿ 6 ವಿಕೆಟ್‌ಗೆ 134 ರನ್ ಗಳಿಸಿತು. ತಂಡದ ಪರ ಸ್ಫೋಟಕ ಬ್ಯಾಟಿಂಗ್ ಮಾಡಿದ ಕೆರಿಬಿಯನ್ ಬ್ಯಾಟ್ಸ್‌ಮನ್ ನಿಕೋಲಸ್ ಪೂರನ್, ತಂಡ ಈ ಬೃಹತ್ ಟಾರ್ಗೆಟ್ ಸೆಟ್ ಮಾಡುವಲ್ಲಿ ದೊಡ್ಡ ಪಾತ್ರ ವಹಿಸಿದರು.
ಇದನ್ನೂ ಓದಿ: IND vs NZ: ಈಡನ್ ಪಾರ್ಕ್ನಲ್ಲಿ ಟೀಮ್ ಇಂಡಿಯಾ ಆಟಗಾರರ ಭರ್ಜರಿ ಅಭ್ಯಾಸ: ಫೋಟೋ
ಖಾತೆ ತೆರೆಯದ ರೈನಾ
ಈ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಮಾಡಿದ ಡೆಕ್ಕನ್ ಗ್ಲಾಡಿಯೇಟರ್ಸ್ ತಂಡದ ಆರಂಭ ಉತ್ತಮವಾಗಿರಲಿಲ್ಲ. ಆರಂಭಿಕರಾಗಿ ಕಣಕ್ಕಿಳಿದಿದ್ದ ವಿಲ್ ಸ್ಮೀದ್ ಶೂನ್ಯಕ್ಕೆ ವಿಕೆಟ್ ಒಪ್ಪಿಸಿದರು. ಆದರೆ ಎರಡನೇ ಕ್ರಮಾಂಕದಲ್ಲಿ ಬ್ಯಾಡಿಂಗ್ಗೆ ಇಳಿದ ನಿಕೋಲಸ್ ಪೂರನ್ ಸ್ಫೋಟಕ ಇನ್ನಿಂಗ್ಸ್ ಆಡಿ ಕೊನೆಯವರೆಗೂ ಅಜೇಯರಾಗಿ ಉಳಿದರು.
ಈ ಪಂದ್ಯದ ಮೂಲಕ ಟಿ10 ಲೀಗ್‌ಗೆ ಪಾದಾರ್ಪಣೆ ಮಾಡಿದ ಭಾರತದ ಸುರೇಶ್ ರೈನಾ ತಮ್ಮ ಮೊದಲ ಪಂದ್ಯದಲ್ಲಿಯೇ ಕೇವಲ 2 ಎಸೆತಗಳನ್ನು ಎದುರಿಸಿ ಖಾತೆ ತೆರೆಯದೆ ಪೆವಿಲಿಯನ್ ಸೇರಿದರು. ಆದರೆ ಒಂದು ತುದಿಯಲ್ಲಿ ಭದ್ರವಾಗಿ ಬೇರೂರಿ ರನ್ ಗುಡ್ಡೆ ಹಾಕುತ್ತಿದ್ದ ನಿಕೋಲಸ್ ಪೂರನ್ ಅಬ್ಬರಕ್ಕೆ ಎದುರಾಳಿ ತಂಡದ ಬೌಲರ್ಗಳು ಬ್ರೇಕ್ ಹಾಕುವಲ್ಲಿ ವಿಫಲರಾದರು.
ನಿಕೋಲಸ್ ಪೂರನ್ ಸ್ಫೋಟಕ ಇನ್ನಿಂಗ್ಸ್
ಈ ಪಂದ್ಯದಲ್ಲಿ ಕೇವಲ 33 ಎಸೆತಗಳನ್ನು ಎದುರಿಸಿದ ನಿಕೋಲಸ್ ಪೂರನ್ ಅಜೇಯ 77 ರನ್ ಚಚ್ಚಿದರು. 233ಕ್ಕಿಂತ ಹೆಚ್ಚು ಸ್ಟ್ರೈಕ್ ರೇಟ್‌ನೊಂದಿಗೆ ಬ್ಯಾಟ್ ಬೀಸಿದ ಪೂರನ್ ಅವರ ಈ ಇನ್ನಿಂಗ್ಸ್‌ನಲ್ಲಿ ಬೌಂಡರಿಗಳಿಗಿಂತ ಹೆಚ್ಚು ಸಿಕ್ಸರ್‌ಗಳೇ ಕಂಡುಬಂದವು. ಅಂದರೆ ಪೂರನ್ ಈ ಪಂದ್ಯದಲ್ಲಿ 5 ಬೌಂಡರಿ ಬಾರಿಸಿದರೆ, ಬರೋಬ್ಬರಿ 8 ಸಿಕ್ಸರ್ ಬಾರಿಸಿದರು. ಅವರ ಇನ್ನಿಂಗ್ಸ್‌ನ ಪರಿಣಾಮ ಗ್ಲಾಡಿಯೇಟರ್ಸ್ ದೊಡ್ಡ ಸ್ಕೋರ್ ಮಾಡುವಲ್ಲಿ ಯಶಸ್ವಿಯಾಯಿತು.
35 ರನ್‌ಗಳಿಂದ ಸೋತ ಅಬುಧಾಬಿ
135 ರನ್‌ಗಳ ಬೃಹತ್ ಗುರಿ ಬೆನ್ನಟ್ಟಿದ ಅಬುಧಾಬಿ ತಂಡ 100 ರನ್ ಕೂಡ ಬಾರಿಸಲಾಗದೆ 99 ರನ್ಗಳಿಗೆ ಸುಸ್ತಾಯಿತು. ಪೂರ್ಣ 10 ಓವರ್ಗಳ ಆಟ ಆಡಿದ ಟೀಮ್ ಅಬುಧಾಬಿ 6 ವಿಕೆಟ್‌ಗಳನ್ನು ಕಳೆದುಕೊಂಡು 99 ರನ್ ಗಳಿಸಲಷ್ಟೇ ಶಕ್ತವಾಯಿತು. ಹೀಗಾಗಿ ಆಡಿದ ಮೊದಲ ಪಂದ್ಯದಲ್ಲಿಯೇ 35 ರನ್‌ಗಳ ಸೋಲನುಭವಿಸಿತು.
ಇನ್ನಷ್ಟು ಕ್ರೀಡಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 10:33 am, Thu, 24 November 22