ಮಲಗಿದ್ದಾಗ ಗಂಡನನ್ನು ಕೊಲ್ಲಲು ಪತ್ನಿ ಯತ್ನ: ಪತಿ ಸಾವಿನಿಂದ ಬಚಾವ್ ಆಗಿದ್ದೇ ರೋಚಕ

ಪ್ರೀತಿ ಎನ್ನುವುದೇ ಒಂದು ರೀತಿ ಮಾಯೆ ಅಂತಾರೆ. ಆದರೆ ಇಲ್ಲೋರ್ವ ಮಹಿಳೆ ವಿವಾಹಿತ ಮಹಿಳೆ ಪರ ಪುರುಷನ ಪ್ರೇಮದ ಬಲೆಯಲ್ಲಿ ಬಿದ್ದ ಕಟ್ಟಿಕೊಂಡ ಗಂಡನನ್ನೇ ಹತ್ಯೆ ಮಾಡಲು ಯತ್ನಿಸಿದ್ದಾಳೆ. ಪ್ರಿಯಕರನ ಜೊತೆ ಸೇರಿಕೊಂಡು ಮಲಗಿದ್ದ ಗಂಡನನ್ನು ಕೊಲ್ಲಲು ಪ್ರಯತ್ನಿಸಿದ್ದಾಳೆ. ಅದೃಷ್ಟವಶಾತ್ ಗಂಡ, ಪವಾಡ ಸದೃಶ ರೀತಿಯಲ್ಲಿ ಬದುಕಿದ್ದು, ಪತಿ ಸಾವಿನಿಂದ ಬಚಾವ್ ಆಗಿದ್ದೇ ರೋಚಕ.

ಮಲಗಿದ್ದಾಗ ಗಂಡನನ್ನು ಕೊಲ್ಲಲು ಪತ್ನಿ ಯತ್ನ: ಪತಿ ಸಾವಿನಿಂದ ಬಚಾವ್ ಆಗಿದ್ದೇ ರೋಚಕ
ಸುನಂದಾ, ಭೀರಪ್ಪ
Updated By: ರಮೇಶ್ ಬಿ. ಜವಳಗೇರಾ

Updated on: Sep 08, 2025 | 7:26 PM

ವಿಜಯಪುರ, (ಸೆಪ್ಟೆಂಬರ್ 08): ಲವ್ವರ್​ (Boyfriend) ಜೊತೆ ಸೇರಿ ಗಂಡನನ್ನೇ (Husband) ಕೊಲೆ (Murder) ಮಾಡಲು ಯತ್ನಿಸಿದ ಪತ್ನಿ ಸಿಕ್ಕಿಬಿದ್ದಿದ್ದಾಳೆ. ಹೌದು…ಸುನಂದಾ ತನ್ನ ಅನೈತಿಕ ಸಂಬಂಧಕ್ಕೆ ಅಡ್ಡಿಯಾಗಿದ್ದಾನೆಂದು ತನ್ನ ಪ್ರಿಯಕರನ ಜೊತೆ ಸೇರಿ ತಾಳಿ ಕಟ್ಟಿದ ಗಂಡ ಭೀರಪ್ಪ ಪೂಜಾರಿಯನ್ನು ಕೊಲೆಗೆ ಯತ್ನಿಸಿದ್ದಾಳೆ. ಈ ಘಟನೆ ವಿಜಯಪುರ (Vijayapura) ಜಿಲ್ಲೆಯ ಇಂಡಿ ಪಟ್ಟಣದ ಅಕ್ಕಮಹಾದೇವಿ ನಗರದಲ್ಲಿ ನಡೆದಿದೆ. ರಾತ್ರಿ ಮಲಗಿದಾಗ ಪತಿಯ ಕತ್ತು ಹಿಸುಕಿ ಕೊಲೆಗೆ ಯತ್ನಿಸಿದ್ದು, ಅದೃಷ್ಟವಶಾತ್ ಭೀರಪ್ಪ ಪೂಜಾರಿ ಕೂದಲೆಳೆ ಅಂತರದಲ್ಲಿ ಪಾರಾಗಿದ್ದಾನೆ. ಸೆಪ್ಟೆಂಬರ್ 1, 2025ರಂದು ರಾತ್ರಿ ನಡೆದ ಈ ಘಟನೆ ತಡವಾಗಿ ಬೆಳಕಿಗೆ ಬಂದಿದ್ದು, ಸುನಂದಾ ತನ್ನ ಪ್ರಿಯಕರ ಸಿದ್ದಪ್ಪ ಕ್ಯಾತಕೇರಿಯೊಂದಿಗೆ ಸೇರಿ ಬೀರಪ್ಪ ಎದೆಯ ಮೇಲೆ ಕುಳಿತು ಕತ್ತು ಮತ್ತು ಮರ್ಮಾಂಗವನ್ನು ಹಿಸುಕಿ ಕೊಲೆ ಮಾಡಲು ಯತ್ನಿಸಿದ್ದಾಳೆ.

ಬೀರಪ್ಪ ಮಾಯಪ್ಪ ಪೂಜಾರಿ, ತಮ್ಮ ಪತ್ನಿ ಸುನಂದಾ ಮತ್ತು ಇಬ್ಬರು ಮಕ್ಕಳೊಂದಿಗೆ ಇಂಡಿ ಪಟ್ಟಣದ ಅಕ್ಕಮಹಾದೇವಿ ನಗರದಲ್ಲಿ ಬಾಡಿಗೆ ಮನೆಯಲ್ಲಿ ವಾಸವಾಗಿದ್ದರು. ಸುನಂದಾ, ಸಿದ್ದಪ್ಪ ಕ್ಯಾತಕೇರಿಯೊಂದಿಗೆ ಅನೈತಿಕ ಸಂಬಂಧ ಹೊಂದಿದ್ದಳು ಎಂದು ಆರೋಪಿಸಲಾಗಿದೆ. ಈ ಸಂಬಂಧವನ್ನು ಮುಂದುವರಿಸಲು ಬೀರಪ್ಪನನ್ನು ಮುಗಿಸಲು ಸುನಂದಾ ಯೋಜನೆ ರೂಪಿಸಿದ್ದಳು. ಅದರಂತೆ ಸೆಪ್ಟೆಂಬರ್ 1ರಂದು ರಾತ್ರಿ ಮನೆಯಲ್ಲಿ ಭೀರಪ್ಪ ಮಲಗಿದ್ದ ವೇಳೆ ಸುನಂದಾ ತನ್ನ ಪ್ರಿಯಕರನ ಜೊತೆಗೆ ಮತ್ತೊಬ್ಬ ವ್ಯಕ್ತಿಯನ್ನು ಕರೆದು ಕೊಲ್ಲಲು ಪ್ರಯತ್ನಿಸಿದ್ದಾಳೆ.

ಇದನ್ನೂ ಓದಿ: ಆ ಗಂಡನನ್ನು ಬಿಟ್ಟು ಬೇರೊಬ್ಬನ ಜೊತೆ ಬಂದ್ಳು: ಈಗ ಮತ್ತೊಬ್ಬನ ಹಿಂದೆ ಓಡಿ ಹೋದ್ಳು, ಬಾಳು ಕೊಟ್ಟ ಪತಿ, 3 ಮಕ್ಕಳು ಅನಾಥ

ಭೀರಪ್ಪ ಬಚಾವ್ ಆಗಿದ್ದೇಗೆ?

ಸುನಂದಾಳ ಪ್ರಿಯಕರ ಮತ್ತು ಆತನ ಸ್ನೇಹಿತ ಮನೆಗೆ ಬಂದು ಮಲಗಿದ್ದ ಬೀರಪ್ಪ ಎದೆಯ ಮೇಲೆ ಕುಳಿತು ಕತ್ತು ಮತ್ತು ಮರ್ಮಾಂಗವನ್ನು ಹಿಸುಕಿ ಕೊಲೆ ಮಾಡಲು ಯತ್ನಿಸಿದ್ದಾರೆ, ಈ ವೇಳೆ ಸುನಂದಾ, “ಸಿದ್ದು, ಬಿಡಬೇಡ, ಖಲಾಸ್ ಮಾಡು” ಎಂದು ಪ್ರಿಯಕರನಿಗೆ ಪ್ರೋತ್ಸಾಹಿಸಿದ್ದಾಳೆ. ಆಗ ಬೀರಪ್ಪ ಎಚ್ಚರಗೊಂಡು ಕಾಲಿನಿಂದ ಕೂಲರ್ ಒದ್ದು ಶಬ್ದವಾದಾಗ, ಮನೆಯ ಮಾಲೀಕರು ಎಚ್ಚರಗೊಂಡಿದ್ದಾರೆ. ಈ ಶಬ್ದಕ್ಕೆ ತಕ್ಷಣವೇ ಬಾಗಿಲು ಬಡಿದಾಗ ಬೀರಪ್ಪನ 8 ವರ್ಷದ ಮಗ ಎದ್ದು ಬಾಗಿಲು ತೆರೆದಿದ್ದಾನೆ. ಬಳಿಕ ಸಿದ್ದಪ್ಪ ಮತ್ತು ಇನ್ನೊಬ್ಬ ಸಹಾಯಕ ಮನೆಯಿಂದ ಪರಾರಿಯಾಗಿದ್ದಾರೆ ಎಂದು ತಿಳಿದುಬಂದಿದೆ. ಸದ್ಯ ಬೀರಪ್ಪ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಮತ್ತೊಂದೆಡೆ ಭೀರಪ್ಪ ನೀಡಿದ್ದ ದೂರಿನ ಅನ್ವಯ ಸುನಂದಾಳನ್ನ ಇಂಡಿ ಪಟ್ಟಣ ಪೊಲೀಸರು ಬಂಧಿಸಿದ್ದಾರೆ.ಆದರೆ, ಪ್ರೀಯಕರ ಪರಾರಿಯಾಗಿದ್ದಾನೆ.

ಅಜ್ಞಾತ ಸ್ಥಳದಿಂದ ಸಿದ್ದಪ್ಪ ವಿಡಿಯೋ

ಇನ್ನು ಪರಾರಿಯಾಗಿರುವ ಸುನಂದಾ ಪ್ರಿಯಕರ ಸಿದ್ಧಪ್ಪ ಅಜ್ಞಾತ ಸ್ಥಳದಿಂದ ವಿಡಿಯೋವೊಂದನ್ನು ಹರಿಬಿಟ್ಟಿದ್ದು, ಗಂಡನ ಹತ್ಯಗೆ ಸುನಂದಾ ಮಾಡಿದ್ದ ಪ್ಲ್ಯಾನ್ ಅನ್ನು ಎಳೆ ಎಳೆಯಾಗಿ ಬಿಚ್ಚಿಟ್ಟಿದ್ದಾನೆ. ಭೀರಪ್ಪನ ಹತ್ಯೆಗೆ ಸ್ಕೆಚ್‌ ಹಾಕಿದ್ದೆ ಸ್ವತಃ ಪತ್ನಿ ಸುನಂದಾ. ಆಕೆಯೆ ಹತ್ಯೆಗೆ ದಿನ ಹಾಗೂ ಟೈಂ ಪಿಕ್ಸ್‌ ಮಾಡಿದ್ದಳಂತೆ. ಆದರೀಗ ಪ್ರಕರಣದಲ್ಲಿ ತನ್ನನ್ನ ಮಾತ್ರ ಸಿಕ್ಕಿ ಹಾಕಿಸೋದಕ್ಕೆ ಪ್ಲಾನ್‌ ಸಹ ಮಾಡಿದ್ದಳು ಎಂದು ಪ್ರೀಯಕರ ವಿಡಿಯೋನಲ್ಲಿ ಹೇಳಿದ್ದಾನೆ. ಇಬ್ಬರು ಸೇರಿಯೇ ಕೊಲೆಗೆ ಯತ್ನಿಸಿದ್ದೇವೆ. ಆದರೆ ಸುನಂದಾ ಹಾಗೂ ಆಕೆ ಅಣ್ಣ, ಸ್ಥಳೀಯ ಗ್ರಾಮ ಪಂಚಾಯತಿ ಸದಸ್ಯ ಸೇರಿ ನನ್ನೊಬ್ಬನ್ನೆ ಕೊಲೆ ಕೇಸ್‌ನಲ್ಲಿ ಫಿಟ್‌ ಮಾಡೋಕೆ ಪ್ಲಾನ್‌ ಮಾಡಿದ್ದಾರೆ. ಪೊಲೀಸರು ಇಬ್ಬರನ್ನು ಆರೋಪಿಗಳನ್ನಾಗಿ ಮಾಡಲಿ ಎಂದು ಆಗ್ರಹಿಸಿದ್ದಾನೆ.

ಈ ಸಂಬಂಧ ಇಂಡಿ ಶಹರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಪ್ರೀಯಕರನಿಗಾಗಿ ಪತಿಯ ಕೊಲೆಗೆ ಸ್ಕೆಚ್‌ ಹಾಕಿ ಸಿಕ್ಕಿಬಿದ್ದವಳು ಜೈಲು ಸೇರಿದರೆ, ಪ್ರಿಯಕರ ಅಜ್ಞಾತ ಸ್ಥಳ ಸೇರಿ ವಿಡಿಯೋ ಮೂಲಕ ಪ್ರೀಯತಮೆ ವಿರುದ್ಧವೇ ಆರೋಪ ಮಾಡಿದ್ದಾನೆ. ಈ ಹಿನ್ನೆಲೆಯಲ್ಲಿ ಪೊಲೀಸರ ಪೂರ್ಣ ತನಿಖೆಯ ಬಳಿಕವಷ್ಟೇ ಮತ್ತಷ್ಟು ಸತ್ಯಗಳು ಬಯಲಿಗೆ ಬರಲಿವೆ.

ಕರ್ನಾಟಕದ ಮತ್ತಷ್ಟು  ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ.

Published On - 7:19 pm, Mon, 8 September 25