ವಿಜಯಪುರ: ರೇಂಜರ್ ಸ್ವಿಂಗ್‌ನಿಂದ ಬಿದ್ದು ಯುವತಿ ಸಾವು

| Updated By: ರಮೇಶ್ ಬಿ. ಜವಳಗೇರಾ

Updated on: Oct 22, 2024 | 7:45 PM

ಫನ್ ಪೇರ್, ವಂಡರ್ ಲಾ, ವಾಟರ್ ಪಾರ್ಕ್, ಅಮ್ಯೂಸ್ಮೆಂಟ್ ಪಾರ್ಕ್ ಹೀಗೆ ವಿವಿಧ ಮನರಂಜನಾ ತಾಣಗಳಿಗೆ ಹೋಗಿ ಎಂಜಾಯ್ ಮಾಡೋದು ಇಂದು ಎಲ್ಲರಿಗೂ ಕಾಮನ್. ಇಂತಹ ಒಂದು ತಾಣವಾದ ಫಿಶ್ ಟನಲ್ ಎಕ್ಪೋ ವಿಜಯಪುರ ನಗರದಲ್ಲಿ ಬೀಡು ಬಿಟ್ಟಿದೆ. ಫಿಶ್ ಟನಲ್ ಪ್ರದರ್ಶನದ ಜೊತೆಗೆ ವಿವಿಧ ರೋಮಾಂಚನಕಾರಿ ಆಟಗಳನ್ನು ಮಾಡಬಹುದು. ಬೃಹದಾರಾಕರ ತಿರೋ ರಾಟೆಗಳು, ಡ್ಯಾಶಿಂಗ್ ಕಾರ್, ಜಿಗ್ ಝಾಗ್ ಆಟ ಹಾಗೂ ತಲೆ ಕೆಲಗಾಗಿ ತಿರುಗಿಸೋ ಸುನಾಮಿ ಇವೆಂಟ್ ನಲ್ಲಿ ಕುಳಿತು ಭಯದಲ್ಲೇ ಕೇಕೆ ಹಾಕಬಹುದು. ಆದರೆ ಇಲ್ಲಿ ಆಯೋಜಕರ ನಿರ್ಲಕ್ಷ್ಯತನ ಓರ್ವ ಯುವತಿಯ ಜೀವವನ್ನೇ ಬಲಿ ಪಡೆದಿದೆ.

ವಿಜಯಪುರ: ರೇಂಜರ್ ಸ್ವಿಂಗ್‌ನಿಂದ ಬಿದ್ದು ಯುವತಿ ಸಾವು
ನಿಖಿತಾ
Follow us on

ವಿಜಯಪುರ, (ಅಕ್ಟೋಬರ್ 22): ನಗರದ ನವಭಾಗ್ ರಸ್ತೆಯಲ್ಲಿರೋ ಫಿಶ್ ಟನಲ್ ಎಕ್ಪೋದಲ್ಲಿ ಅವಘಡವೊಂದು ಸಂಭವಿಸಿದೆ. ಫಿಶ್ ಟನಲ್ ಎಕ್ಸ್ಪೋದಲ್ಲಿ ರೇಂಜರ್ ಸ್ವಿಂಗ್‌ನಿಂದ ಬಿದ್ದು ಯುವತಿ ಸಾವನ್ನಪ್ಪಿರುವ ಘಟನೆ ನಡೆದಿದ್ದು, ತಡವಾಗಿ ಬೆಳಕಿಗೆ ಬಂದಿದೆ. ಮೃತ ಯುವತಿಯನ್ನು ನಿಖಿತಾ ಬಿರಾದಾರ್ ಎನ್ನುವ ಯುವತಿ ಎಂದು ಗುರುತಿಸಲಾಗಿದೆ. ರೇಂಜರ್ ಸ್ವಿಂಗ್​ನಲ್ಲಿ ಕುಳಿತಾಗಲೇ ನಿಖಿತಾಗೆ ಹಾಕಿದ್ದ ಬೆಲ್ಟ್ ಸರಿಯಾಗಿದೆಯಾ ಎಂದು ಆಕೆಯ ತಾಯಿ ಆಪರೇಟರ್​ಗೆ ಪ್ರಶ್ನಿಸಿದ್ದಳು. ಅದಕ್ಕೆ ಆತ ಎಲ್ಲಾ ಓಕೆ ಎಂದಿದ್ದ. ಅಲ್ಲದೇ ಸ್ವಲ್ಪ ಸಮಯದ ಬಳಿಕ ಸಾಕು ನಿಲ್ಲಿಸಿ ನಿಲ್ಲಿಸಿ ಎಂದು ಆಪರೇಟರ್​ ಬಳಿ ನಿಖಿತಾ ತಾಯಿ ಪರಿ ಪರಿಯಾಗಿ ಬೇಡಿಕೊಂಡಿದ್ದಾರೆ. ಆದ್ರೆ, ಆಪರೇಟರ್ ಅದ್ಯಾವುದನ್ನೂ ಕೇಳಿಸಿಕೊಳ್ಳದೇ ಸುಮ್ಮನಾಗಿದ್ದಾನೆ. ಆಗ ನಿಖಿತಾಗೆ ಹಾಕಿದ್ದ ಬೆಲ್ಟ್ ಕಟ್​ ಆಗಿ ಆಕೆ ಮೇಲಿಂದ ಕೆಳಗೆ ಬಿದ್ದಿದ್ದಾಳೆ.

ಜಿಲ್ಲೆಯ ನವಭಾಗ್ ರಸ್ತೆಯ ಫಿಶ್ ಟನಲ್ ಎಕ್ಸ್ಪೋದಲ್ಲಿ ತಲೆ ಕೆಲಗಾಗಿ ತಿರುಗಿಸೋ ಸುನಾಮಿಯಲ್ಲಿ ಕುಳಿತಿದ್ದ ಯುವತಿ ಕಳಪೆ ಬೆಲ್ಟ್ ಹಾಕಿದ್ದ ಪರಿಣಾಮ ಕೆಳಗೆ ಬಿದ್ದು ಸಾವಿನ ಮನೆ ಸೇರಿದ್ದಾಳೆ. ಇಲ್ಲಿ ಫೀಶ್ ಟನಲ್ ಎಕ್ಪೋ ಜೊತೆಗೆ ಇತರೆ ರೋಮಾಂಚನಕಾರಿ ಆಟಗಳನ್ನು ಆಡುವ ಇವೆಂಟ್ ಗಳನ್ನು ಸಹ ಆಯೋಜಿಸಲಾಗಿದೆ. ಈ ಪೈಕಿ ದೊಡ್ಡ ರಾಟೆ ಆಂದರೆ ಚಕ್ರ, ಡ್ಯಾಶಿಂಗ್ ಕಾರ್, ಜಿಗ ಜಾಗ್, ಸುನಾಮಿ ಹೆಸರಿನ ರೇಂಜರ್ ಸ್ವಿಂಗ್ ಸೇರಿದಂತೆ ಇತರೆ ಮನರಂಜನೆ ಹಾಗೂ ಸಾಹಸಿ ಆಟಗಳನ್ನು ಇಲ್ಲಿ ಆಯೋಜಿಸಲಾಗಿದೆ. ಇದಕ್ಕಾಗಿ ಪ್ರತ್ಯೇಕ ಶುಲ್ಕವನ್ನು ನೀಡಬೇಕು. ಇಂತಹ ಫೀಶ್ ಟನಲ್ ಎಕ್ಪೋಕ್ಕೆ ಬಸವನಬಾಗೇವಾಡಿ ತಾಲೂಕಿನ ಇಂಗಳೇಶ್ವರ ಗ್ರಾಮದ ಶಿಕ್ಷಕ ಅರವಿಂದ ಬಿರಾದಾರ ಪತ್ನಿ ಗೀತಾ ಪುತ್ರಿ ಜಿಖಿತಾ ಹಾಗೂ ನೆರಯ ಮನೆ ಮಂದಿ ಜೊತೆಗೆ ಕಳೆದ ಅಕ್ಟೋಬರ್ 20 ರಂದು ಆಗಮಿಸಿದ್ದರು.

ಪರಿ ಪರಿಯಾಗಿ ಬೇಡಿಕೊಂಡರು ನಿಲ್ಲಿಸಲೇ ಇಲ್ಲ

ಈ ವೇಳೆ ನಿಖಿತಾ ಹಾಗೂ ಆಕೆಯ ಇಬ್ಬರು ಗೆಳೆತಿಯರು ರೇಂಜರ್ ಸ್ವಿಂಗ್ ನಲ್ಲಿ ಕುಳಿತಿದ್ದರು. ತಲೆ ಕೆಳಗಾಗಿ ತಿರುಗಿಸೋ ರೇಂಜರ್ ಸ್ವಿಂಗ್ ನಲ್ಲಿ ಕುಳಿತುಕೊಳ್ಳುವಾಗಲೇ ನಿಖಿತಾ ತಾಯಿ ಗೀತಾ ಬಿರಾದಾರ್ ಆಪರೇಟರ್ ಗೆ ಬೆಲ್ಟ್ ಹಾಗೂ ಇತರೆ ಸುರಕ್ಷತಾ ಸಾಧನಗಳು ಸರಿಯಾಗಿವೆಯಾ ಎಂದು ಪ್ರಶ್ನೆ ಮಾಡಿದ್ದರು. ಆಗ ಆರಪೇಟರ್ ರಮೇಶ ರಾಯ್ ಎಲ್ಲ ಸರಿಯಾಗಿದೆ ಎಂದು ಹೇಳಿದ್ದ. ರೇಂಜರ್ ಸ್ವಿಂಗ್ ಆರಂಭವಾಗುತ್ತಿದ್ದಂತೆ ನಿಖಿತಾ ಕುಟುಂಬದವರು ಹಾಗು ಆಕೆ ಗೆಳತಿ ರೇಂಜರ್ ಸ್ವಿಂಗ್ ನಲ್ಲಿ ಕುಳಿತಿದ್ದವರ ವಿಡಿಯೋ ಮಾಡುತ್ತಿದ್ದರು. ರೇಂಜರ್ ಸ್ವಿಂಗ್ ಆನ್ ಆಗಿ ತೆಲೆ ಕೆಳಗಾಗಿ ಮಾಡುತ್ತಿದ್ದಂತೆ ಅದರಲ್ಲಿದ್ದವರು ಭಯದಿಂದ ಕಿರುಚಾಡಿದರು. ಆಗ ನಿಖಿತಾ ತಾಯಿ ಎಲ್ಲರೂ ಭಯಗೊಂಡಿದ್ದಾರೆ. ರೇಂಜರ್ ಸ್ವಿಂಗ್ ಬಂದ್ ಮಾಡಿ ಎಂದು ಆಪರೇಟರ್ ಗೆ ಪರಿ ಪರಿಯಾಗಿ ಹಲವಾರು ಬಾರಿ ಮನವಿ ಮಾಡಿಕೊಂಡಿದ್ದಾರೆ. ಆದರೆ ಆವರ ಮಾತನ್ನು ಆಪರೇಟರ್ ರಮೇಶ್ ರಾಯ್ ಕೇಳಿಲ್ಲ. ಇದೇ ವೇಳೆ ನಿಖಿತಾಗೆ ಹಾಕಿದ್ದ ಸೇಪ್ಟಿ ಬೆಲ್ಟ್ ಸಡಿಲಾಗಿ ಆಕೆ ಮೇಲಿಂದ ಕೆಳಗೆ ಬಿದ್ದಿದ್ದಾಳೆ. ಈ ಹಿನ್ನೆಲೆಯಲ್ಲಿ ತಲೆ ಹಾಗೂ ಕಾಲುಗಳಿಗೆ ಗಂಭೀರ ಗಾಯವಾಗಿದ್ದು, ಕೂಡಲೇ ಅವರನ್ನು ಆಸ್ಪತ್ರೆಗೆ ಸಾಗಿಸಲಾಗಿದೆ. ಆದ್ರೆ, ಚಿಕಿತ್ಸೆ ಫಲಕಾರಿಯಾಗದೇ ನಿಖಿತಾ ಸಾವನ್ನಪ್ಪಿದ್ದಾಳೆ. ಇದಕ್ಕೆ ಫೀಶ್ ಟನಲ್ ಎಕ್ಪೋ ಮ್ಯಾನೇಜ್ಮೆಂಟ್ ನಿರ್ಲಕ್ಷ್ಯ ಎಂದು ಆರೋಪಿಸಲಾಗಿದೆ.

ಫೀಶ್ ಟನಲ್ ಎಕ್ಪೋಗೆ ಪರವಾನಿಗೆ ಪಡೆದಿಲ್ಲ

ಘಟನೆ ಕುರಿತು ನಗರದ ಗಾಂಧಿಚೌಕ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ನಿಖಿತಾ ಬಿರಾದಾರ ಫೀಶ್ ಟನಲ್ ಎಕ್ಪೋ ಬಂದ್ ಮಾಡಲಾಗಿದೆ. ಕೇರಳ ಮೂಲದ ರಮೇಶ ಬಾಬು ಫೀಶ್ ಟನಲ್ ಎಕ್ಪೋಕ್ಕೆ ಸಂಬಂಧಿಸಿದ ಕಚೇರಿಯನ್ನು ಬೆಂಗಳೂರಿನಲ್ಲಿ ಹೊಂದಿದ್ದಾರೆ. ವಿಜಯಪುರದಲ್ಲಿ ಕಳೆದ ಮೂರು ತಿಂಗಳುಗಳಿಂದ ಬೀಡು ಬಿಟ್ಟಿದ್ದಾರೆ. ಮಹಾನಗರ ಪಾಲಿಕೆ, ಕಂದಾಯ ಇಲಾಖೆ ಸೇರಿದಂತೆ ಎಲ್ಲಿಯೂ ಫೀಶ್ ಟನಲ್ ಎಕ್ಪೋಗೆ ಸಂಬಂಧಿಸಿದ ಪರವಾನಿಗೆ ಪಡೆದಿಲ್ಲ. ಕೆಲ ರೌಡಿ ಶೀಟರ್ ಗಳನ್ನು ಮುಂದಿಟ್ಟುಕೊಂಡು ವ್ಯವಸಹಾರ ನಡೆಸಿಕೊಂಡು ಬಂದಿದ್ದಾರೆ ಎಂದು ಆರೋಪಿಸಲಾಗಿದೆ. ಫೀಶ್ ಟನಲ್ ಎಕ್ಪೋ ವೀಕ್ಷಣೆಗೆ ಪ್ರತಿಯೊಬ್ಬರಿಗೆ 80 ರೂಪಾಯಿ ಶುಲ್ಕವಿದೆ. ಒಳಗೆ ಯಾವುದೇ ಗೇಮ್ ಹಾಗೂ ಇವೆಂಟ್ ನಲ್ಲಿ ಹೋಗಲು ಪ್ರತಿಯೊಂದಕ್ಕೂ ತಲಾ 100 ಶುಲ್ಕ ನೀಡಬೇಕು. ಇಲ್ಲಿ ಪ್ರತಿಯೊಂದಕ್ಕೂ ಪ್ರತ್ಯೇಕ ಶುಲ್ಕ ನಿಗದಿ ಮಾಡಲಾಗಿದೆ.

ಯಾವುದೇ ಸುರಕ್ಷತಾ ಕ್ರಮವಿಲ್ಲ

ಇಲ್ಲಿ ಯಾವುದೇ ಸುರಕ್ಷತಾ ಕ್ರಮಗಳಿಲ್ಲ. ಫೀಶ್ ಟನಲ್ ಎಕ್ಪೋ ದ ರೇಂಜರ್ ಸ್ವಿಂಗ್ ಯಂತ್ರದ ಸೇಪ್ಟಿ ಬೆಲ್ಟ್ ಗಳು ಹಾಳಾಗಿವೆ. ಅಂತಹುಗಳನ್ನೇ ಉಪಯೋಗಿಸಲಾಗುತ್ತಿದೆ. ಇವೆಲ್ಲರ ಬೇಜವಾಬ್ದಾರಿಯೇ ಘಟನೆಗೆ ಕಾರಣ. ಇವೆರೆಲ್ಲರ ಮೇಲೆ ಸೂಕ್ತ ಕಾನೂನು ಪ್ರಕಾರ ಕ್ರಮ ತೆಗೆದುಕೊಳ್ಳಬೇಕೆಂದು ಮೃತ ನಿಖಿತಾಳ ತಂದೆ ಹಾಗೂ ಸಂಬಂಧಿಕರು ಒತ್ತಾಯ ಮಾಡಿದ್ದಾರೆ. ನಿತ್ಯ ಇಲ್ಲಿ 2 ರಿಂದ 3 ಸಾವಿರ ಜನರು ಆಗಮಿಸುತ್ತಿದ್ದರು. ಇಷ್ಟೆಲ್ಲ ಜನರು ಆಗಮಿಸಿ ಜಮಾಯಿಸೋ ಜಾಗದಲ್ಲಿ ಯಾವುದೇ ಸೇಪ್ಟಿ ಮ್ಯಾನೇಜ್ಮೆಂಟ್ ಇಲ್ಲದೇ ಇರೋದು ಈಗಿನ ಘಟನೆ ನಡೆಯಲು ಕಾರಣವಾಗಿದೆ .

ಇನ್ನು ಕಳೆದ ಮೂರು ತಿಂಗಳಿನಿಂದ ಫೀಶ್ ಟನಲ್ ಎಕ್ಪೋ ಇದ್ದರೂ ಯಾವುದೇ ಅಧಿಕಾರಿಗಳೂ ಸಹ ಇತ್ತ ಗಮನಹರಿಸಿಲ್ಲ. ಫೀಶ್ ಟನಲ್ ಎಕ್ಪೋ ಅಕ್ರಮವಾಗಿಯೇ ಬಿಸಿನೆಸ್ ಮಾಡುತ್ತಿದೆ. ಸದ್ಯ ಫೀಶ್ ಟನಲ್ ಎಕ್ಪೋ ಆಪರೇಟರ್ ನಿಲ್ಷಕ್ಷ್ಯ, ಹಾಳಾಗಿರೋ ಯಂತ್ರಗಳು, ಸೇಪ್ಟಿ ಬೆಲ್ಟ್ ಗಳ ಕಾರಣದಿಂದ ನಿಖಿತಾ ಬಿರಾದಾರ್ ರೇಂಜರ್ ಮೃತಪಟ್ಟ ಬಳಿಕ ಎಚ್ಚೆತ್ತದ್ಧಾರೆ. ಘಟನೆ ಕುರಿತು ರೇಂಜರ್ ಸ್ವಿಂಗ್ ಆಪರೇಟರ್ ರಮೇಶ ರಾಯ್ ನನ್ನು ಪೊಲೀಸರು ಬಂಧಿಸಿದ್ದಾರೆ. ಮ್ಯಾನೇಜರ್ ರಮೇಶ ಬಾಬು ಎಂಬುವವರನ್ನು ವಶಕ್ಕೆ ಪಡೆದು ವಿಚಾರಣೆ ಮಾಡಲಾಗುತ್ತಿದೆ ಎಂದು ಎಸ್ಪಿ ಮಾಹಿತಿ ನೀಡಿದ್ದಾರೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ