ಮಂಗಳೂರು: ಶುದ್ಧ ನೀರಿಗಾಗಿ ಬಹುಗ್ರಾಮ ಕುಡಿಯುವ ನೀರಿನ ಯೋಜನೆ ಮಾಡಲಾಗಿದೆ. ಆದ್ರೆ ಜನರಿಗೆ ಪೂರೈಕೆ ಆಗುತ್ತಿರೋದು ಕಲುಷಿತಗೊಂಡಿರುವ ನೀರು. ಕುಡಿಯುವ ನೀರಿನ ಯೋಜನೆಗಾಗಿ ನಿರ್ಮಾಣವಾಗಿರುವ ಮಂಗಳೂರಿನ ಮರವೂರು ಡ್ಯಾಂನಿಂದ 9 ಗ್ರಾಮಗಳಿಗೆ ಕಲುಷಿತ ನೀರು ಪೂರೈಕೆ ಆಗುತ್ತಿದೆ.
ನೀರು ಕುಡಿದ 9 ಗ್ರಾಮದ ಜನರಿಗೆ ಆರೋಗ್ಯ ಸಮಸ್ಯೆ ಕಾಡುತ್ತಿದೆ. ಜಲತ್ಯಾಜ್ಯ ಘಟಕದವರ ನಿರ್ಲಕ್ಷ್ಯದಿಂದ ನದಿಗೆ ವಿಷಕಾರಿ ನೀರು ಸೇರುತ್ತಿದೆ. ಹೀಗಾಗಿ ಆರೋಗ್ಯ ಸಮಸ್ಯೆ ಉಂಟಾಗಿದೆ ಎನ್ನಲಾಗುತ್ತಿದೆ. ಮಂಗಳೂರಿನ ಡ್ರೈನೇಜ್ 2ನೇ ಹಂತದ ಸಂಸ್ಕರಣಾ ನೀರು ನದಿಗೆ ಸೇರುತ್ತಿದೆ.
ಹಿಂದೆ ಪಿಲಿಕುಳ ನಿಸರ್ಗದಾಮಕ್ಕೆ ಪೂರೈಕೆ ಮಾಡಲಾಗುತ್ತಿದ್ದ ನೀರು ಅಲ್ಲಿನ ಗಿಡಗಳಿಗೆ ಮತ್ತು ಪ್ರಾಣಿಗಳಿಗೆ ಬಳಕೆ ಆಗುತ್ತಿತ್ತು. ನಿಸರ್ಗದಾಮದಲ್ಲಿ ಗಿಡ ಮತ್ತು ಪ್ರಾಣಿಗಳಿಗೆ ನೀರು ಸೂಕ್ತವಾಗಿರಲಿಲ್ಲ. ಗಿಡಗಳು ಒಣಗಿ ಹೋಗಿ, ಪ್ರಾಣಿಗಳಿಗೆ ಚರ್ಮರೋಗ ಕಾಣಿಸಿಕೊಂಡಿತ್ತು.
ಈ ಕಾರಣಕ್ಕೆ ಅಧಿಕಾರಿಗಳು ತ್ಯಾಜ್ಯ ನೀರನ್ನ ಪಲ್ಗುಣಿ ನದಿಗೆ ಹರಿಸಿದ್ದಾರೆ. ಬಜಪೆ, ಮೂಡಶೆಡ್ಡೆ, ಕಾವೂರು, ಮರಕಡ, ಮರವೂರು, ಎಕ್ಕಾರು, ಜೋಕಟ್ಟೆ, ಬಾಳಾ, ಸೂರಿಂಜೆ ಸೇರಿದಂತೆ 9 ಗ್ರಾಮದ ಜನರು ಈ ಕಲುಷಿತ ನೀರನ್ನು ಕುಡಿದು ಆರೋಗ್ಯ ಸಮಸ್ಯೆಯಿಂದ ಬಳಲುತ್ತಿದ್ದಾರೆ. ಅಧಿಕಾರಿಗಳ ಬೇಜವಾಬ್ದಾರಿತನದ ವಿರುದ್ಧ ಗ್ರಾಮದ ಜನರು ಆಕ್ರೋಶ ಹೊರ ಹಾಕಿದ್ದಾರೆ.