ಕೊಡಗು: ಹುಲಿ ದಾಳಿಯಿಂದ ಪಾರು ಮಾಡಲು ಅರಣ್ಯ ಇಲಾಖೆಗೆ ಗಡುವು ನೀಡಿದ ಗ್ರಾಮಸ್ಥರು

| Updated By: guruganesh bhat

Updated on: Mar 09, 2021 | 7:28 PM

ಹುಲಿ ದಾಳಿಯ ಭಯದಿಂದಾಗಿ ಕಾಫಿ ತೋಟದ ಕಾರ್ಮಿಕರು ಗುಳೇ ಹೋಗಲಾರಂಭಿಸಿದ್ದಾರೆ. ಜೀವ ಇದ್ದರೆ ಎಲ್ಲಾದರು ಬದುಕಿ ತಿನ್ನಬಹುದೆಂದು ಗಂಟು ಮೂಟೆ ಕಟ್ಟಿ ತಮ್ಮೂರಿಗೆ ತೆರಳುತ್ತಿದ್ದಾರೆ. ಬಹುತೇಕ ಹೆಚ್ಡಿ ಕೋಟೆ ಕಡೆಯ ಕಾರ್ಮಿಕರು ಕೂಲಿ ಅರಸಿ ಇಲ್ಲಿಗೆ ಬಂದಿದ್ದರು.

ಕೊಡಗು: ಹುಲಿ ದಾಳಿಯಿಂದ ಪಾರು ಮಾಡಲು ಅರಣ್ಯ ಇಲಾಖೆಗೆ ಗಡುವು ನೀಡಿದ ಗ್ರಾಮಸ್ಥರು
ಹುಲಿಯನ್ನು ಕೊಲ್ಲಲು ಸ್ಥಳಿಯರ ಆಗ್ರಹ
Follow us on

ಕೊಡಗು: ಒಂದೆಡೆ ಹುಲಿ ದಾಳಿಗೆ ಸಾಲು ಸಾಲಾಗಿ ಜೀವ ಬಲಿಯಾಗುತ್ತಿದೆ. ಮತ್ತೊಂದೆಡೆ ವ್ಯಾಘ್ರ ಭಯದಿಂದ ಕಾರ್ಮಿಕರು ಗುಳೇ ಹೋಗುತ್ತಾ ಇದ್ದಾರೆ. ಇನ್ನೊಂದೆಡೆ ರೈತರು ಪ್ರತಿಭಟನೆ ಮಾಡುತ್ತಿದ್ದಾರೆ. ಇವೆಲ್ಲದರ ಮಧ್ಯೆ ಅರಣ್ಯ ಇಲಾಖೆ ಹುಲಿಯನ್ನು ಹಿಡಿಯಲಾಗದೆ ಪರಿತಪಿಸುತ್ತಿದೆ. ಈ ರೀತಿ ಹತ್ತು ಹಲವು ಸಮಸ್ಯೆಗೆ ಕಾರಣವಾಗಿರುವ ಚಂಡ ವ್ಯಾಘ್ರ ಮಾತ್ರ ಪೊನ್ನಂಪೇಟೆ ತಾಲೂಕಿನ ಕೆಲ ಗ್ರಾಮಗಳಲ್ಲಿ ಬಿಂದಾಸ್ ಆಗಿ ಓಡಾಡುತ್ತಿದೆ. ಹೀಗಾಗಿ, ಹುಲಿಯನ್ನು ತಕ್ಷಣವೇ ಕೊಲ್ಲಲು ಗ್ರಾಮಸ್ಥರು ಅರಣ್ಯ ಇಲಾಖೆಯನ್ನು ಆಗ್ರಹಿಸಿದ್ದಾರೆ.

ಮೂರುವಾರವಾದ್ರೂ ಬಲೆಗೆ ಬಿದ್ದಿಲ್ಲ
ಜಿಲ್ಲೆಯ ಪೊನ್ನಂಪೇಟೆ ತಾಲೂಕಿನ ಬೆಳ್ಳೂರು, ಹುದಿಕೇರಿ, ಟಿಶೆಟ್ಟಿಗೇರಿ, ಹರಿಹರ, ಶ್ರೀಮಂಗಲ ಸೇರಿದಂತೆ ಹತ್ತು ಹಲವು ಗ್ರಾಮಗಳಲ್ಲಿ ಭಯ ಹುಟ್ಟಿದೆ. ಚಂಡ ವ್ಯಾಘ್ರ ಯಾವಾಗ.. ಎಲ್ಲಿ.. ಯಾರ ಮೇಲೆ ದಾಳಿ ಮಾಡುತ್ತದೆ ಎನ್ನುವ ಆತಂಕ ಜನರಿಗೆ ಎದುರಾಗಿದೆ. ನಿನ್ನೆಯಷ್ಟೇ (ಮಾರ್ಚ್ 8) ಓರ್ವ ಬಾಲಕನನ್ನು ಕೊಂದು ವೃದ್ಧನೊಬ್ಬನನ್ನು ಗಂಭೀರ ಗಾಯಗೊಳಿಸಿರುವ ಹುಲಿ ಇಂದು ಮತ್ತೆ ಒಂದು ಕರುವನ್ನು ಕೊಂದು ಹಾಕಿದೆ. ಹಾಗಾಗಿ ಈ ಹುಲಿಯನ್ನು ತಕ್ಷಣವೇ ಕೊಲ್ಲಿ‌ ಅಂತ ಸ್ಥಳೀಯರು ಡೆಡ್​ಲೈನ್ ನೀಡಿದ್ದಾರೆ. ಅರಣ್ಯ ಇಲಾಖೆ ವೈಫಲ್ಯದ ವಿರುದ್ಧ ಅಹೋರಾತ್ರಿ ಪ್ರತಿಭಟನೆ ನಡೆಸುತ್ತಾ ಇದ್ದಾರೆ. ನಾಳೆಯೊಳಗೆ ಹುಲಿ ಹಿಡಿಯದೇ ಇದ್ದರೆ ಅರಣ್ಯ ಇಲಾಖೆಗೆ ಮುತ್ತಿಗೆ ಹಾಕಿ ಹೆದ್ದಾರಿ ತಡೆದು ಪ್ರತಿಭಟನೆ ನಡೆಸುವುದಾಗಿ ಎಚ್ಚರಿಕೆ ನೀಡಿದ್ದಾರೆ.

ಈ ನಡುವೆ ಹುಲಿ ದಾಳಿಯ ಭಯದಿಂದಾಗಿ ಕಾಫಿ ತೋಟದ ಕಾರ್ಮಿಕರು ಗುಳೇ ಹೋಗಲಾರಂಭಿಸಿದ್ದಾರೆ. ಜೀವ ಇದ್ದರೆ ಎಲ್ಲಾದರು ಬದುಕಿ ತಿನ್ನಬಹುದೆಂದು ಗಂಟು ಮೂಟೆ ಕಟ್ಟಿ ತಮ್ಮೂರಿಗೆ ತೆರಳುತ್ತಿದ್ದಾರೆ. ಬಹುತೇಕ ಹೆಚ್​ಡಿ ಕೋಟೆ ಕಡೆಯ ಕಾರ್ಮಿಕರು ಕೂಲಿ ಅರಸಿ ಪೊನ್ನಂಪೇಟೆ ತಾಲೂಕಿಗೆ ಬಂದಿದ್ದರು. ಆದರೆ ಇದೀಗ ಹುಲಿ ದಾಳಿಯ ಭಯ ಇವರನ್ನ ಊರು ಬಿಟ್ಟು ತೆರಳುವಂತೆ ಮಾಡಿದೆ.

ನಾಳೆಯೊಳಗೆ ಹುಲಿ ಹಿಡಿಯದೇ ಇದ್ದರೆ ಅರಣ್ಯ ಇಲಾಖೆಗೆ ಮುತ್ತಿಗೆ ಮತ್ತು ಹೆದ್ದಾರಿ ತಡೆದು ಪ್ರತಿಭಟನೆ ನಡೆಸುವುದಾಗಿ ಎಚ್ಚರಿಕೆ ನೀಡಿದ ಸ್ಥಳೀಯರು

ಕಾರ್ಮಿಕರು ಗುಳೆ ಹೋಗುತ್ತಾ ಇರುವುದರಿಂದ ಕಾಫಿ ತೋಟದ ಕೆಲಸಗಳು ಸ್ಥಗಿತವಾಗಿದೆ. ಇದರಿಂದಾಗಿ ತೋಟದ ಮಾಲೀಕರು ಹೈರಾಣಾಗಿ ಹೋಗಿದ್ದಾರೆ. ಇದು ಕಾಫಿ ಮತ್ತು ಕಾಳು ಮೆಣಸು ಸೀಸನ್ ಆಗಿರುವುದರಿಂದ ಕಾರ್ಮಿಕರಿಲ್ಲದೆ ಪರದಾಡುತ್ತಾ ಇದ್ದಾರೆ. ಸದ್ಯ  ಹುಲಿ ಮತ್ತು ರೈತರ ಸಂಘರ್ಷದ ಮಧ್ಯೆ ಸಿಲುಕಿದ ಅರಣ್ಯ ಇಲಾಖೆಗೆ ತಲೆಬಿಸಿಯಾಗಿದೆ.

ಇದನ್ನೂ ಓದಿ

ಕರ್ನಾಟಕ ವಿಶ್ವವಿದ್ಯಾಲಯದ ಅಧೀನ ಕಾಲೇಜುಗಳಲ್ಲಿ ಖಾಯಂ ಪ್ರಾಚಾರ್ಯರೇ ಇಲ್ಲ; ಶತಮಾನಗಳಿಂದಲೂ ನೇಮಕವಾಗಿಲ್ಲ

ಸಿಎಂ BSYಗೆ ಪಾಪ ಒಂದು ಕಿವಿ ಕೇಳ್ತಿಲ್ಲ; ಅವರಿಗೆ ತೊಂದರೆ ಕೊಡೋಕೆ ಇಷ್ಟವಿಲ್ಲ -ಜಯಮೃತ್ಯುಂಜಯ ಸ್ವಾಮೀಜಿ