ಕರ್ನಾಟಕ ವಿಶ್ವವಿದ್ಯಾಲಯದ ಅಧೀನ ಕಾಲೇಜುಗಳಲ್ಲಿ ಖಾಯಂ ಪ್ರಾಚಾರ್ಯರೇ ಇಲ್ಲ; ಶತಮಾನಗಳಿಂದಲೂ ನೇಮಕವಾಗಿಲ್ಲ
ಕರ್ನಾಟಕ ವಿಶ್ವವಿದ್ಯಾಲಯದ ಅಧೀನ ಕಾಲೇಜುಗಳಲ್ಲಿ ಹಲವು ಖ್ಯಾತನಾಮರು ಪ್ರಭಾರಿಗಳು ಪ್ರಾಚಾರ್ಯರಾಗಿ ನಿಯೋಜನೆಗೊಂಡು ನಿವೃತ್ತಿ ಆಗಿದ್ದಾರೆ. ಇಷ್ಟಾದರೂ ನೇಮಕಾತಿಗೆ ಅಧಿಸೂಚನೆ ಹೊರಡಿಸಿ, ಅರ್ಜಿ ಸ್ವೀಕರಿಸಿ ಖಾಯಂ ಪ್ರಾಚಾರ್ಯರನ್ನು ನೇಮಕ ಮಾಡಿಕೊಳ್ಳುವ ಗೊಡವೆಗೆ ವಿಶ್ವವಿದ್ಯಾಲಯ ಹೋಗಿಲ್ಲ.
ಧಾರವಾಡ: ಕರ್ನಾಟಕ ವಿಶ್ವವಿದ್ಯಾಲಯದ ಅಧೀನ ಕಾಲೇಜುಗಳಲ್ಲಿ ಖಾಯಂ ಪ್ರಾಚಾರ್ಯರೇ ಇಲ್ಲದಂತಾಗಿದೆ. ಇದಕ್ಕೆ ಕಾರಣ ಪ್ರಾಚಾರ್ಯರ ನೇಮಕಕ್ಕೆ ತಿಲಾಂಜಲಿ ಇಟ್ಟಿದ್ದು. ರಾಜ್ಯದ ಪ್ರತಿಷ್ಠಿತ ವಿಶ್ವವಿದ್ಯಾಲಯಗಳ ಪೈಕಿ ಒಂದಾಗಿರುವ ಈ ವಿವಿಯ ಐದು ಅಧೀನ ಮಹಾವಿದ್ಯಾಲಯಗಳಿಗೆ ಕಳೆದ ನೂರು ವರ್ಷಗಳಿಂದ ಖಾಯಂ ಪ್ರಾಚಾರ್ಯರೇ ನೇಮಕಗೊಂಡಿಲ್ಲ. ಇನ್ನು ಇಲ್ಲಿ ಕಾರ್ಯನಿರ್ವಹಿಸುತ್ತಿರುವ ಸಹ ಪ್ರಾಧ್ಯಾಪಕರಿಗೆ ಯುಜಿಸಿ-ಸಿಎಎಸ್ ಯೋಜನೆಯಡಿ 2010 ರಿಂದ ಪದೋನ್ನತಿ ಕೂಡ ನೀಡಿಲ್ಲ. ಶತಮಾನ ಪೂರೈಸಿದ ಕರ್ನಾಟಕ ಕಲಾ ಕಾಲೇಜು, ವಿಜ್ಞಾನ ಕಾಲೇಜು, ಆರು ದಶಕಗಳ ಹಿಂದೆ ಆರಂಭಗೊಂಡ ಕರ್ನಾಟಕ ವಿಶ್ವವಿದ್ಯಾಲಯ ಶಿಕ್ಷಣ ಕಾಲೇಜು, ಸರ್ ಸಿದ್ದಪ್ಪ ಕಂಬಳಿ ಕಾನೂನು ಕಾಲೇಜು ಮತ್ತು 80ರ ದಶಕದಲ್ಲಿ ಶುರುವಾದ ಸಂಗೀತ ಕಾಲೇಜು ಈವರೆಗೂ ಖಾಯಂ ಪ್ರಾಚಾರ್ಯರನ್ನೇ ಕಂಡಿಲ್ಲ. ಇಲ್ಲಿ ಈವರೆಗೆ ಅರ್ಹತೆ ಆಧಾರದ ಮೇಲೆ ಪ್ರಾಚಾರ್ಯರನ್ನು ತಾತ್ಕಾಲಿಕವಾಗಿ ನೇಮಿಸಲಾಗುತ್ತಿದ್ದು, ಇದು ಕರ್ನಾಟಕ ವಿಶ್ವವಿದ್ಯಾಲಯ ಅನುಶಾಸನ ಮಾರ್ಗಸೂಚಿಗಳ ಸ್ಪಷ್ಟ ಉಲ್ಲಂಘನೆಯಾಗಿದೆ.
ಕರ್ನಾಟಕ ವಿಶ್ವವಿದ್ಯಾಲಯದ ಅಧೀನ ಕಾಲೇಜುಗಳಲ್ಲಿ ಹಲವು ಖ್ಯಾತನಾಮರು ಪ್ರಭಾರಿ ಪ್ರಾಚಾರ್ಯರಾಗಿ ನಿಯೋಜನೆಗೊಂಡು ನಿವೃತ್ತಿ ಆಗಿದ್ದಾರೆ. ಇಷ್ಟಾದರೂ ನೇಮಕಾತಿಗೆ ಅಧಿಸೂಚನೆ ಹೊರಡಿಸಿ, ಅರ್ಜಿ ಸ್ವೀಕರಿಸಿ ಖಾಯಂ ಪ್ರಾಚಾರ್ಯರನ್ನು ನೇಮಕ ಮಾಡಿಕೊಳ್ಳುವ ಗೊಡವೆಗೆ ವಿಶ್ವವಿದ್ಯಾಲಯ ಹೋಗಿಲ್ಲ. ಇದೇ ಕಾರಣದಿಂದಾಗಿ ಈ ಮಹಾವಿದ್ಯಾಲಯಗಳು ನ್ಯಾಕ್ ಕಮಿಟಿ ನೀಡುವ ಎ ಗ್ರೇಡ್ನಿಂದ ವಂಚಿತಗೊಂಡು ವಿವಿ ಘನತೆಗೆ ಧಕ್ಕೆ ಆಗುತ್ತಿದೆ.
ಕವಿವಿ ಅಧೀನ ಮಹಾವಿದ್ಯಾಲಯಗಳಲ್ಲಿ ಸಹ ಪ್ರಾಧ್ಯಾಪಕರ ಪದೋನ್ನತಿ ವಿಚಾರವೂ ಅಷ್ಟೇ ಗೊಂದಲ ಸೃಷ್ಟಿಸಿದೆ. ಇಲ್ಲಿ ವಿಶ್ವವಿದ್ಯಾಲಯ ತೋರಿದ ನಿಷ್ಕಾಳಜಿ ಹಲವರ ಶೈಕ್ಷಣಿಕ ವೃತ್ತಿ ಉನ್ನತಿಯನ್ನೇ ಕಸಿದುಕೊಂಡಿದೆ. 2010ರಲ್ಲಿ ಯುಜಿಸಿಯು ಸಿಎಎಸ್ ಎಂಬ ಹೊಸ ಮಾರ್ಗಸೂಚಿಗಳನ್ನು ಹೊರಡಿಸಿ ಒಟ್ಟು ಸಹ ಪ್ರಾಧ್ಯಾಪಕರ ಪೈಕಿ ಶೇ. 10ರಷ್ಟು ಜನರಿಗೆ ಪ್ರಾಧ್ಯಾಪಕರೆಂದು ಪದೋನ್ನತಿ ನೀಡಲು ಅವಕಾಶ ಕಲ್ಪಿಸಲಾಗಿದೆ. ಈ ಕುರಿತಂತೆ ರಾಜ್ಯದ ನಾನಾ ವಿವಿಗಳು ಕ್ರಮ ಕೈಗೊಂಡಿವೆ. ಆದರೆ ಈ ವಿಶ್ವವಿದ್ಯಾಲಯ ಮಾತ್ರ 2011, 2013, 2015, 2017 ರಲ್ಲಿ ಅಧಿಸೂಚನೆ ಹೊರಡಿಸಿದರೂ ಪದೋನ್ನತಿ ಪ್ರಕ್ರಿಯೆ ಪೂರ್ಣಗೊಳಿಸದೇ ಅರ್ಹರಿಗೆ ಅನ್ಯಾಯ ಮಾಡಿದೆ ಎನ್ನುವ ಆರೋಪವೂ ಕೇಳಿ ಬಂದಿದೆ.
ಮಾತು ತಪ್ಪಿದ ಕರ್ನಾಟಕ ವಿಶ್ವವಿದ್ಯಾಲಯ ಈ ಬಗ್ಗೆ ವಿವಿ ಕುಲಪತಿ ಪ್ರೊ. ಕೆ.ಬಿ.ಗುಡಸಿ ಅವರನ್ನು ಕೇಳಿದರೆ ಈ ಹಿಂದಿನಿಂದಲೂ ಕವಿವಿ ಅಧೀನ ಕಾಲೇಜುಗಳಿಗೆ ಜ್ಯೇಷ್ಠತೆ ಆಧಾರದ ಮೇಲೆ ಪ್ರಾಚಾರ್ಯರ ನೇಮಕ ಆಗುತ್ತಿದೆ. ಕಾರಣಾಂತರಗಳಿಂದ ಸಹ ಪ್ರಾಧ್ಯಾಪಕರ ಪದೋನ್ನತಿ ಪ್ರಕ್ರಿಯೆ ಪೂರ್ಣಗೊಂಡಿಲ್ಲ. ಹೀಗಾಗಿ ಖಾಯಂ ಪ್ರಾಚಾರ್ಯರ ನೇಮಕ, ಪದೋನ್ನತಿ ಪ್ರಕ್ರಿಯೆ ಪ್ರಗತಿಯಲ್ಲಿದೆ ಎನ್ನುತ್ತಾರೆ. ಈ ಕುರಿತಂತೆ ಕಳೆದ ಆಗಸ್ಟ್ನಲ್ಲಿ ನಡೆದ ಕರ್ನಾಟಕ ವಿಶ್ವವಿದ್ಯಾಲಯದ ಸಿಂಡಿಕೇಟ್ ಸಭೆಯಲ್ಲಿ ಚರ್ಚೆ ಆಗಿದೆ. ಆದರೆ 2021ರ ಜನವರಿ ಕೊನೆಯ ವಾರದಲ್ಲಿ ಪದೋನ್ನತಿ ಪ್ರಕ್ರಿಯೆ ಪೂರ್ಣಗೊಳಿಸುವುದಾಗಿ ಹೇಳಿದ್ದ ಕವಿವಿ ಆಡಳಿತ ಮಂಡಳಿ ಮತ್ತೆ ಮಾತು ತಪ್ಪಿದೆ. ಪದೋನ್ನತಿಗೆ ಸಂಬಂಧಿಸಿದಂತೆ ಯುಜಿಸಿಯ 2018ರ ಅನುಶಾಸನವನ್ನು ರಾಜ್ಯದ ಬೇರೆ ಬೇರೆ ವಿವಿಗಳು ಜಾರಿಗೆ ತಂದಿದ್ದರೂ ಇಲ್ಲಿ ಮಾತ್ರ 2010ರ ಅನುಶಾಸನವೇ ಇನ್ನೂ ಜಾರಿಗೆ ಬಂದಿಲ್ಲ. ಹೀಗಾಗಿ ಈ ಐದೂ ಕಾಲೇಜುಗಳಲ್ಲಿ ಒಬ್ಬರೂ ಪ್ರಾಧ್ಯಾಪಕರಿಲ್ಲದಂತಾಗಿದೆ. ಇದರ ಪರಿಣಾಮವೇ ಪ್ರಭಾರಿ ಪ್ರಾಚಾರ್ಯರು ನೇಮಕವಾಗುತ್ತಿರುವುದು ವಿಪರ್ಯಾಸದ ಸಂಗತಿಯೇ ಸರಿ.
ಇದನ್ನೂ ಓದಿ
ಕರಿಚಿರತೆ ಅಷ್ಟೊಂದು ವೇಗವಾಗಿ ಮರವೇರಿದ್ದೇಕೆ..? ಸಾಮಾಜಿಕ ಜಾಲತಾಣದಲ್ಲಿ ವಿಡಿಯೋ ವೈರಲ್
ದುಡ್ಡು ಮಾಡೋಕೆ ಇಲ್ಲಿಗೆ ಬಂದಿಲ್ಲ, ತಂದೆ ತಾಯಿಗೆ ಸಮಸ್ಯೆ ಆದಾಗ ಇಮೇಜ್ ಮುಖ ನೋಡಿ ಸುಮ್ಮನೆ ಕೂರೋಕಾಗಲ್ಲ: ಯಶ್
Published On - 6:46 pm, Tue, 9 March 21