ಬೆಂಗಳೂರು: ಬಿಜೆಪಿಯಲ್ಲಿ ಸಿಎಂ ನಾಯಕತ್ವ ಬದಲಾವಣೆ ಫೈಟ್ ಬಳಿಕ ಈಗ ಒಕ್ಕಲಿಗ ನಾಯಕತ್ವದ ಫೈಟ್ ಶುರುವಾಗಿದೆ. ಕೆಂಪೇಗೌಡ ಜಯಂತಿ ಕಮಲ ಪಕ್ಷದಲ್ಲಿನ ಒಕ್ಕಲಿಗ ಫೈಟ್ ಬಿಚ್ಚಿಟ್ಟಿದೆ.
ಭಾನುವಾರ ವಿಧಾನಸೌಧದಲ್ಲಿ ಕೆಂಪೇಗೌಡ ಜಯಂತಿ ನಡೆಯಿತು. ಈ ವೇಳೆ ಕಾರ್ಯಕ್ರಮಕ್ಕೆ ನಾಲ್ವರು ಒಕ್ಕಲಿಗ ಸಚಿವರು ಗೈರಾಗಿದ್ದರು. ಸಿಎಂ ಯಡಿಯೂರಪ್ಪ ಮತ್ತು ಒಕ್ಕಲಿಗ ಸಮುದಾಯದ ಸ್ವಾಮೀಜಿಗಳು ಪಾಲ್ಗೊಂಡಿದ್ದ ಅಧಿಕೃತ ಸರ್ಕಾರಿ ಕಾರ್ಯಕ್ರಮದಿಂದ ಬಿಜೆಪಿ ಒಕ್ಕಲಿಗ ಶಾಸಕರು, ಸಚಿವರು ಅಂತರ ಕಾಯ್ದುಕೊಂಡಿದ್ದಾರೆ. ಈ ಒಕ್ಕಲಿಗ ಸಚಿವರ ಅನುಪಸ್ಥಿತಿ ಆಡಳಿತ ಪಕ್ಷದಲ್ಲಿ ಚರ್ಚೆಗೆ ಕಾರಣವಾಗಿದೆ.
ಸಚಿವರಾದ ಆರ್. ಅಶೋಕ್, ಸಿ.ಪಿ. ಯೋಗೇಶ್ವರ್, ಎಸ್.ಟಿ. ಸೋಮಶೇಖರ್ ಮತ್ತು ಡಾ. ಸುಧಾಕರ್ ಕೆಂಪೇಗೌಡ ಜಯಂತಿ ಕಾರ್ಯಕ್ರಮದಿಂದ ದೂರ ಉಳಿದಿದ್ದರು. ಬೆಂಗಳೂರಿನಲ್ಲೇ ಇದ್ದರೂ ವಿಧಾನಸೌಧದಲ್ಲಿ ನಡೆದ ಕಾರ್ಯಕ್ರಮದಿಂದ ದೂರ ಇದ್ದದ್ದು ಚರ್ಚೆಗೆ ಕಾರಣವಾಗಿದೆ. ಕೆ.ಆರ್. ಪುರಂನಲ್ಲಿ ನಡೆದ ಪ್ರತ್ಯೇಕ ಕೆಂಪೇಗೌಡ ಜಯಂತಿಯಲ್ಲಿ ಸಚಿವರಾದ ಅಶೋಕ್ ಮತ್ತು ಎಸ್.ಟಿ. ಸೋಮಶೇಖರ್ ಪಾಲ್ಗೊಂಡಿದ್ದರು. ಹಾಗೂ ಕೇಂದ್ರ ಸಚಿವ ಡಿ.ವಿ. ಸದಾನಂದ ಗೌಡ ಕೂಡಾ ಕೆ.ಆರ್. ಪುರಂನಲ್ಲಿ ನಡೆದ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದರು. ಆದರೆ ವಿಧಾನಸೌಧದಲ್ಲಿ ನಡೆದ ಕೆಂಪೇಗೌಡ ಜಯಂತಿಯಲ್ಲಿ ಭಾಗಿಯಾಗಿಲ್ಲ.
ಇನ್ನು ಕೆಂಪೇಗೌಡ ಅಭಿವೃದ್ಧಿ ಪ್ರಾಧಿಕಾರದ ಉಪಾಧ್ಯಕ್ಷರಾಗಿರುವ ಡಿಸಿಎಂ ಡಾ. ಅಶ್ವಥ್ ನಾರಾಯಣ ವಿಧಾನಸೌಧದಲ್ಲಿ ನಡೆದ ಕೆಂಪೇಗೌಡ ಜಯಂತಿ ನೇತೃತ್ವ ವಹಿಸಿಕೊಂಡಿದ್ದರು. ಒಕ್ಕಲಿಗ ನಾಯಕತ್ವದ ಮುಸುಕಿನ ಗುದ್ದಾಟದಿಂದಾಗಿ ಒಕ್ಕಲಿಗ ಸಚಿವರು ಗೈರು ಎಂದು ಬಿಜೆಪಿಯಲ್ಲಿ ಚರ್ಚೆ ನಡೆಯುತ್ತಿದೆ. ಡಿಸಿಎಂ ಅಶ್ವಥ್ ನಾರಾಯಣ ಮತ್ತು ಸಚಿವ ಅಶೋಕ್ ನಡುವಿನ ಒಕ್ಕಲಿಗ ನಾಯಕತ್ವದ ಫೈಟ್ ಕೆಂಪೇಗೌಡ ಜಯಂತಿ ಮೂಲಕ ಬಹಿರಂಗವಾಗಿದೆ.
ಇದನ್ನೂ ಓದಿ: ಒಂದೂವರೆ ವರ್ಷದಲ್ಲಿ 150ಕ್ಕೂ ಹೆಚ್ಚು ಕೃಷಿ ಹೊಂಡಗಳ ನಿರ್ಮಾಣ; ಧಾರವಾಡ ಜಿಲ್ಲೆಯ ರೈತರ ಮೊಗದಲ್ಲಿ ಮಂದಹಾಸ