ಜಾತಿ ಗಣತಿ ವರದಿ: ಡಿಸಿಎಂ ಡಿಕೆ ಶಿವಕುಮಾರ್​ಗೆ ಮಹತ್ವದ ಬೇಡಿಕೆ ಇಟ್ಟ ಒಕ್ಕಲಿಗ ಶಾಸಕರು

ಜಾತಿ ಜನಗಣತಿಯ ಜ್ವಾಲಾಮುಖಿ ನಿಧಾನವಾಗಿ ಸ್ಪೋಟಗೊಳ್ಳತೊಡಗಿದೆ. ಜನಗಣತಿಯ ಬಗ್ಗೆ ಭಾರೀ ಅನುಮಾನ ಇಟ್ಟುಕೊಂಡ ಒಕ್ಕಲಿಗ ಸಮುದಾಯ ಸಿಡಿದು ನಿಂತಿದೆ. ಸಚಿವ ಸಂಪುಟ ಸಭೆ ಹಿನ್ನೆಲೆಯಲ್ಲಿ ಶಾಸಕರ ಅಭಿಪ್ರಾಯ ಆಲಿಸಲು ಡಿಸಿಎಂ ಡಿಕೆ ಶಿವಕುಮಾರ್ ಒಕ್ಕಲಿಗ ಶಾಸಕರ ಸಭೆ ಕರೆದಿದ್ದರು. ಈ ಸಭೆಯಲ್ಲಿ ಶಾಸಕರು ಜಾತಿ ಗಣತಿ ವರದಿಯ ಅಂಕಿಅಂಶಗಳ ಬಗ್ಗೆ ಅನುಮಾನ ವ್ಯಕ್ತಪಡಿಸಿದ್ದಾರೆ. ಅಲ್ಲದೆ, ಡಿಕೆ ಶಿವಕುಮಾರ್ ಮುಂದೆ ಹಲವು ಅಹವಾಲುಗಳನ್ನು ತೋಡಿಕೊಂಡಿದ್ದಾರೆ.

ಜಾತಿ ಗಣತಿ ವರದಿ: ಡಿಸಿಎಂ ಡಿಕೆ ಶಿವಕುಮಾರ್​ಗೆ ಮಹತ್ವದ ಬೇಡಿಕೆ ಇಟ್ಟ ಒಕ್ಕಲಿಗ ಶಾಸಕರು
ಡಿಕೆ ಶಿವಕುಮಾರ್
Edited By:

Updated on: Apr 16, 2025 | 7:27 AM

ಬೆಂಗಳೂರು, ಏಪ್ರಿಲ್ 16: ಜಾತಿಗಣತಿ ವಿಚಾರ (Caste Census Report) ಕರ್ನಾಟಕ ರಾಜಕೀಯದಲ್ಲಿ (Karnataka Politics) ಭಾರಿ ಕಂಪನ ಎಬ್ಬಿಸಿದೆ. ವರದಿಯ ಅಂಶಗಳು ಸಚಿವರ ಕೈಸೇರಿದ್ದೇ ತಡ ಒಕ್ಕಲಿಗ, ಲಿಂಗಾಯತ ಸಮುದಾಯಗಳು ಸಿಡಿದೆದ್ದಿವೆ. ಇದೇ ಕಾರಣಕ್ಕೆ ಮಂಗಳವಾರ ಒಕ್ಕಲಿಗ ಶಾಸಕರ ಸಭೆ ಕರೆದಿದ್ದ ಡಿಸಿಎಂ ಡಿಕೆ ಶಿವಕುಮಾರ್ (DK Shivakumar), ಎಲ್ಲರ ಅಭಿಪ್ರಾಯಗಳನ್ನ ಆಲಿಸಿದ್ದಾರೆ. ಈ ವೇಳೆ ಶಾಸಕರು ತಮ್ಮ ಅಸಮಾಧಾನ ತೋಡಿಕೊಂಡಿದ್ದಾರೆ. ಸಮುದಾಯದ ಅಂಕಿ ಅಂಶಗಳ ಮೇಲೆ ಅನುಮಾನ ವ್ಯಕ್ತಪಡಿಸಿದ್ದಾರೆ.

ಡಿಕೆ ಶಿವಕುಮಾರ್ ಮುಂದೆ ಒಕ್ಕಲಿಗ ಶಾಸಕರ ವಾದವೇನು?

  • ಜಾತಿಗಣತಿಯಲ್ಲಿ ಒಕ್ಕಲಿಗ ಸಮುದಾಯದ ಅಂಕಿಸಂಖ್ಯೆ ತಪ್ಪಾಗಿದೆ.
  • ವರದಿಯಲ್ಲಿನ ಅಂಕಿ ಸಂಖ್ಯೆ ಬಗ್ಗೆ ಸಮುದಾಯದಲ್ಲಿ ಆಕ್ರೋಶವಿದೆ.
  • ಸಮಾಜಕ್ಕೆ ಆದ ಅನ್ಯಾಯದ ಬಗ್ಗೆ ಸಿಎಂಗೆ ಮನವರಿಕೆ ಮಾಡಬೇಕು.
  • ಸಮುದಾಯದ ಜನಸಂಖ್ಯೆ ನಿಖರವಾಗಿ ದಾಖಲಿಸಲು ವ್ಯವಸ್ಥೆ ಮಾಡಿ.
  • ಇದಕ್ಕಾಗಿ ಸಿಎಂ ಸಿದ್ದರಾಮಯ್ಯಗೆ ಒತ್ತಾಯಿಸಲು ಹಲವರಿಂದ ಸಲಹೆ.
  • ಒಂದು ಸಮಿತಿ ಮಾಡಿ ಮೂರು ತಿಂಗಳುಗಳ ಕಾಲಾವಕಾಶ ನೀಡಿ.
  • ಬಿಜೆಪಿ-ಜೆಡಿಎಸ್ ಸಮುದಾಯದ ಧ್ವನಿ ಎಂಬಂತೆ ಬಿಂಬಿಸುತ್ತಿದ್ದಾರೆ.
  • ಇದಕ್ಕೆ ಸರ್ಕಾರ ಅವಕಾಶ ಮಾಡಿಕೊಡಬಾರದು.
  • ಕ್ಯಾಬಿನೆಟ್ ಸಬ್ ಕಮಿಟಿ ಮಾಡಿ ಅಂಕಿ ಅಂಶ ಕಲೆಹಾಕಲು ಒತ್ತಡ

ಸುಮ್ಮನೆ ವರದಿ ಮಾಡಿಲ್ಲ, ಲಕ್ಷಾಂತರ ಜನ ಕೆಲಸ ಮಾಡಿದ್ದಾರೆ: ಡಿಕೆ ಶಿವಕುಮಾರ್

ಡಿಕೆ ಶಿವಕುಮಾರ್ ಸರ್ಕಾರಿ ನಿವಾಸದಲ್ಲಿ ನಡೆದ ಶಾಸಕರ ಅಭಿಪ್ರಾಯ ಆಲಿಸುವ ಸಭೆಯಲ್ಲಿ ಜಾತಿಗಣತಿ ನೇರವಾಗಿ ವಿರೋಧ ಮಾಡಲು ಸಾಧ್ಯವಿಲ್ಲ ಅನ್ನೋ ಅಭಿಪ್ರಾಯ ವ್ಯಕ್ತವಾಗಿದೆ. ಹೈಕಮಾಂಡ್ ಕೂಡಾ ಜಾತಿಗಣತಿ ಬೆಂಬಲಿಸಿ ಕಾರ್ಯಕ್ರಮ ರೂಪಿಸಿದೆ. ಹೀಗಾಗಿ, ಅಳೆದು ತೂಗಿ ಎಚ್ಚರಿಕೆ ಹೆಜ್ಜೆ ಇಡಬೇಕು ಎಂದು ಚರ್ಚಿಸಲಾಗಿದೆ. ಇನ್ನು, ಸಭೆ ಬಳಿಕ ಮಾತನಾಡಿರುವ ಡಿಸಿಎಂ ಡಿ.ಕೆ.ಶಿವಕುಮಾರ್, ಸುಮ್ಮನೆ ವರದಿ ಮಾಡಿಲ್ಲ, ಲಕ್ಷಾಂತರ ಜನ ಕೆಲಸ ಮಾಡಿದ್ದಾರೆ ಎಂದಿದ್ದಾರೆ.

ಇದನ್ನೂ ಓದಿ: ಜಾತಿ ಗಣತಿ ವಿರುದ್ಧ ಸಿಡಿದೆದ್ದ ಒಕ್ಕಲಿಗರು, ಲಿಂಗಾಯತರು: ವರದಿ ಜಾರಿಯಾದರೆ ಸರ್ಕಾರ ಬೀಳಿಸುವ ಎಚ್ಚರಿಕೆ

ಅಷ್ಟೇ ಅಲ್ಲದೆ, ಕೇವಲ ಒಂದು ಸಮಾಜದ ಯೋಚನೆ ಮಾಡುತ್ತಿಲ್ಲ. ವರದಿ ಸುಮ್ಮನೇ ಮಾಡಿದ್ದಾರಾ? ಎಲ್ಲರಿಗೂ ನ್ಯಾಯ ಕೊಡುತ್ತೇವೆ ಎಂದು ಡಿಕೆ ಶಿವಕುಮಾರ್ ಹೇಳಿದ್ದಾರೆ. ಸದ್ಯ ಒಕ್ಕಲಿಗ ನಾಯಕರು ಸಹನೆಯಿಂದಲೇ ಸಮುದಾಯದ ಆಕ್ರೋಶವನ್ನು ನಿಭಾಯಿಸುವ ಪ್ರಯತ್ನ ಮಾಡುತ್ತಿದ್ದಾರೆ. ಆದರೆ, ಮುಂದೆ ಇದು ಯಾವ ದಿಕ್ಕಿಗೆ ಹೊರಳಲಿದೆ, ಒಕ್ಕಲಿಗ ಡಿಸಿಎಂ ಹೇಗೆ ನಿಭಾಯಿಸುತ್ತಾರೆ ಎಂಬುದೇ ಸದ್ಯದ ಪ್ರಶ್ನೆಯಾಗಿದೆ.

ಕರ್ನಾಟಕದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 7:26 am, Wed, 16 April 25

ಪ್ರಸನ್ನ ಗಾಂವ್ಕರ್​

ಹುಟ್ಟೂರು ಯಲ್ಲಾಪುರ, ಬೆಳೆದೂರು ದಾಂಡೇಲಿಯ ದಟ್ಟ ಕಾಡುಗಳ ನಡುವೆ. ರವಿ ಬೆಳಗೆರೆ ಎಂಬ ಅಕ್ಷರ ರಾಕ್ಷಸನ ಕಟ್ಟಾಭಿಮಾನದಿಂದ ಹಾಳಾಗಿ, ಸೈನ್ಸ್ ನಲ್ಲಿ ಡಿಗ್ರಿ ಪಡೆದು ಜರ್ನಲಿಸಂಗೆ ಹಿಂಬದಿ ಕಿಟಕಿಯಿಂದ ನುಸುಳಿದ್ದು 2010 ರ ಅಕ್ಟೋಬರ್ ನಲ್ಲಿ. ಉಡುಪಿಯಲ್ಲಿ ಮೊದಲ ಪತ್ರಿಕೋದ್ಯಮ ಕರ್ತವ್ಯ ಪ್ರಾರಂಭಿಸಿದ್ದು 2010 ರಲ್ಲಿಯೇ. ಜನಶ್ರೀ ನ್ಯೂಸ್ ಮೊದಲು ಅನ್ನ ನೀಡಿದ ಸಂಸ್ಥೆ. ಉಡುಪಿ ಜಿಲ್ಲಾ ವರದಿಗಾರನಾಗಿ ಮೂರು ವರ್ಷ ಕೆಲಸ ಮಾಡಿ 2013 ರ ಅಂತ್ಯಕ್ಕೆ ಸಮಯ ನ್ಯೂಸ್ ಮೂಲಕ ಬೆಂಗಳೂರಿಗೆ ಎಂಟ್ರಿ. ಬಿಗ್ ೩, ಬೆಂಗಳೂರ್ ಲೈವ್, ಸಮಯ ಸಕಾಲ ಕಾರ್ಯಕ್ರಮದಲ್ಲಿ ವರದಿಗಾರಿಕೆ ಮಾಡಿದ ಖುಷಿ. 2014 ರ ಡಿಸೆಂಬರ್ ನಿಂದ ಟಿವಿ9 ನಲ್ಲಿ ಕೆಲಸ ಪ್ರಾರಂಭ. ಟಿವಿ9 ನಲ್ಲಿ ಮೊದಲು ಮೆಟ್ರೋ ರಿಪೋರ್ಟಿಂಗ್ ಮೂಲಕ ಬೆಂಗಳೂರು ಸುತ್ತುವ ಅರಿಯುವ ರಾಜಧಾನಿಯ ನಾಡಿಮಿಡಿತ ಹುಡುಕುವ ಅವಕಾಶ. ಮೆಟ್ರೋ ಬ್ಯೂರೋ ದಲ್ಲಿ ಶೈಕ್ಷಣಿಕ ಹಾಗೂ ಬಿಬಿಎಂಪಿ ವರದಿಗಾರಿಕೆ. ಚಪ್ಪಲಿಯಿಂದ ಹಿಡಿದು ಚಾದರ್ ತನಕ ಸ್ಟೋರಿ ಮಾಡಿದ ಅನುಭವ. ಮೆಟ್ರೋ ಟೀಂ ನಿಂದ ರಾಜಕೀಯ ವರದಿಗಾರಿಕೆಗೆ ಶಿಫ್ಟ್ ಆದ ತಕ್ಷಣ- ಮುಂದುವರಿದಿದೆ ನಿರಂತರ ಪಯಣ. ಕಥೆ, ಕಾದಂಬರಿ, ಕವನ, ಸಿನಿಮಾ, ಸುತ್ತಾಟ, ಆಗಾಗ ಕಿತ್ತಾಟ, ಸ್ನೇಹಿತರೊಂದಿಗೆ ಒಡನಾಟ ಇವೆಲ್ಲ ಮಾಮೂಲಿ ದಿನಚರಿ. ಇವತ್ತಿಗೂ ಬರವಣಿಗೆಯೊಂದೇ ಖುಷಿ ಕೊಡುವ ಖರ್ಜೂರ. ಸ್ಟಾಕ್ ಮಾರ್ಕೆಟ್ ನಲ್ಲಿ 2019 ರಿಂದ ಆ್ಯಕ್ಟಿವ್.

Read More
Loading...
Unable to load recommendations.
Follow Us