ಬೆಂಗಳೂರು, ಆಗಸ್ಟ್ 2: ಕೇರಳದ ವಯನಾಡು ಜಿಲ್ಲೆಯಲ್ಲಿ ಗುಡ್ಡ ಕುಸಿದು ದುರಂತದಲ್ಲಿ (Kerala Wayanad Landslide) ನಾಪತ್ತೆಯಾಗಿದ್ದ ಕರ್ನಾಟಕದ (Karnataka) 9 ಜನರ ಪೈಕಿ 8 ಜನರ ಶವ ಪತ್ತೆ ಆಗಿದೆ. ಮೈಸೂರು ಮೂಲದ ಗುರುಮಲ್ಲನ್(60), ಸಾವಿತ್ರಿ(54), ಶಿವಣ್ಣ(50), ಅಪ್ಪಣ್ಣ(39), ಅಶ್ವಿನಿ(13), ಜೀತು(11), ದಿವ್ಯಾ(35), ಶ್ರೇಯಾ(19) ಎಂಬುವರ ಮೃತದೇಹ ಪತ್ತೆ ಆಗಿದೆ. ಮೃತರ ಸಾವಿನ ಬಗ್ಗೆ ಗುಂಡ್ಲುಪೇಟೆ ತಹಸೀಲ್ದಾರ್ ರಮೇಶ್ ಬಾಬು ಖಚಿತ ಪಡಿಸಿದ್ದಾರೆ.
ಸುಮಾರು 60 ವರ್ಷಗಳ ಹಿಂದೆ ಕೇರಳಕ್ಕೆ ಆಗಮಿಸಿದ್ದ ಮಾದೇವಿ ಎಂಬುವವರ ಮಕ್ಕಳು, ಸೊಸೆಯಂದಿರು ಹಾಗೂ ಮೊಮ್ಮಕ್ಕಳು ಮೃತಪಟ್ಟಿದ್ದಾರೆ. ಸವಿತಾ ಎಂಬುವವರ ಶವಕ್ಕಾಗಿ ರಕ್ಷಣಾ ಸಿಬ್ಬಂದಿ ಶೋಧ ನಡೆದಿಸಿದ್ದಾರೆ.
ಇದನ್ನೂ ಓದಿ: ಕೇರಳ ಗುಡ್ಡ ಕುಸಿತ ದುರಂತದಲ್ಲಿ ಮೃತಪಟ್ಟ ಕನ್ನಡಿಗರ ಕುಟುಂಬಕ್ಕೆ ಪರಿಹಾರ ಘೋಷಿಸಿದ ಸಿದ್ದರಾಮಯ್ಯ
ಕೇರಳದ ವಯನಾಡಿನಲ್ಲಿ ಸಂಭವಿಸಿದ ಭೂಕುಸಿತದಿಂದ ಸಂಕಷ್ಟದಲ್ಲಿರುವ ಜನರ ನೆರವಿಗಾಗಿ ರಾಜ್ಯ ಸರ್ಕಾರ ಸಹಾಯ ಹಸ್ತ ಚಾಲಿದೆ. ಇಬ್ಬರು ಹಿರಿಯ ಐಎಎಸ್ ಅಧಿಕಾರಿಗಳನ್ನು ನಿಯೋಜಿಸಲಾಗಿದೆ. ಹಾಗೆಯೇ ಗಡಿಜಿಲ್ಲೆ ಚಾಮರಾಜ ನಗರದ ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ಸಹಾಯವಾಣಿ ಕೂಡ ತೆರೆಯಲಾಗಿದೆ.
ಇನ್ನು ಸಿಎಂ ಸಿದ್ದರಾಮಯ್ಯ ಅವರ ಸೂಚನೆ ಮೇರೆಗೆ ಕಾರ್ಮಿಕ ಸಚಿವ ಸಂತೋಷ್ ಲಾಡ್ ಕೂಡ ದುರಂತ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ಮಾಡಿದ್ದರು. ಮೃತಪಟ್ಟ ಕನ್ನಡಿಗರು ಮತ್ತು ಇನ್ನೂ ಹಲವರು ಸಿಲುಕಿರುವ, ನಾಪತ್ತೆಯಾಗಿರುವ ಮಾಹಿತಿ ಕಲೆ ಹಾಕಿದ್ದರು. ಅವರೆಲ್ಲರ ರಕ್ಷಣೆಗೆ ಅಗತ್ಯ ಕ್ರಮಕೈಗೊಳ್ಳಲಾಗಿದೆ ಎಂದು ಹೇಳಿದ್ದರು.
ಇದನ್ನೂ ಓದಿ: ವಯನಾಡ್ ಗುಡ್ಡ ದುರಂತದಲ್ಲಿ ಸಾವನ್ನಪ್ಪಿದ ಕನ್ನಡಿಗರೆಷ್ಟು? ನಾಪತ್ತೆಯಾದವರು ಎಷ್ಟು? ಮಾಹಿತಿ ಹಂಚಿಕೊಂಡ ಸಂತೋಷ್ ಲಾಡ್
ಕೇರಳದ ವಯನಾಡು ದುರಂತದಲ್ಲಿ ಸಾವನ್ನಪ್ಪುತ್ತಿರುವವರ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ. ಚೂರಲ್‌ಮಲಾ, ಮುಂಡಕೈನಲ್ಲಿ ಶೋಧ ಕಾರ್ಯ ಮುಂದುವರಿದಿದ್ದು, 49 ಮಕ್ಕಳು ಸೇರಿದಂತೆ ಇನ್ನೂ 296 ಜನ ನಾಪತ್ತೆ ಆಗಿದ್ದಾರೆ. ಇದರ ನಡುವೆ ಚೂರಲ್‌ಮಲಾದ ಅವಶೇಷಗಳಡಿ ಸಿಲುಕಿದ್ದ ನಾಲ್ವರನ್ನ ಸೇನೆ ರಕ್ಷಿಸಿದೆ. ನಾಲ್ಕು ದಿನ ಅನ್ನ, ನೀರು ಇಲ್ಲದೆ ಜೀವ ಉಳಿಸಿಕೊಂಡವರನ್ನ ಆಸ್ಪತ್ರೆಗೆ ರವಾನಿಸಲಾಗಿದೆ. ಅಷ್ಟಕ್ಕೂ ಈ ದುರಂತದಲ್ಲಿ ನೂರಾರು ಸಾವು ಆಗೋಕೆ ಕಾರಣವೇ 100 ಕಿಲೋ ಮೀಟರ್ ವೇಗದಲ್ಲಿ ಕೊಚ್ಚಿ ಬಂದ ಇಂಥಾ ಬೃಹತ್ ಬಂಡೆಗಳು.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.
Published On - 8:40 pm, Fri, 2 August 24