ಯುವತಿ ಪತ್ತೆಗೆ 22 ಅಧಿಕಾರಿಗಳ ತಂಡ ರಚನೆ: ಗೃಹ ಸಚಿವ ಬಸವರಾಜ್ ಬೊಮ್ಮಾಯಿ

| Updated By: ganapathi bhat

Updated on: Mar 22, 2021 | 11:20 PM

ಯುವತಿ ಇದ್ದಾಳೆ ಎಂದು ಹೇಳಲಾಗುತ್ತಿರುವ ಮುಂಬೈ, ಗೋವಾ, ಬೆಳಗಾವಿಯಲ್ಲಿ ಹುಡುಕುತ್ತಿದ್ದೇವೆ. ಕೇವಲ ವಿಡಿಯೋ ಕಳಿಸಿ ಪ್ರಕರಣ ದಾಖಲಿಸುವಂತೆ ಕೋರಿದ್ದಾರೆ. ಲಿಖಿತ ರೂಪದ ಸಹಿ ಹಾಕಿರುವ ದೂರಿನ ಪ್ರತಿ ಸಲ್ಲಿಸಿಲ್ಲ. ಆದರೆ ಯಾರೇ ತಪ್ಪು ಮಾಡಿದರೂ ಶಿಕ್ಷೆ ಆಗೇ ಆಗುತ್ತದೆ.

ಯುವತಿ ಪತ್ತೆಗೆ 22 ಅಧಿಕಾರಿಗಳ ತಂಡ ರಚನೆ: ಗೃಹ ಸಚಿವ ಬಸವರಾಜ್ ಬೊಮ್ಮಾಯಿ
ಬಸವರಾಜ ಬೊಮ್ಮಾಯಿ
Follow us on

ಬೆಂಗಳೂರು: ರಮೇಶ್ ಜಾರಕಿಹೊಳಿ ಸಿಡಿ ಪ್ರಕರಣದ ಯುವತಿಯನ್ನು ಪತ್ತೆಹಚ್ಚಿ ವಿಚಾರಣೆ ನಡೆಸುತ್ತೇವೆ. ಯುವತಿಯ ಪತ್ತೆಗೆ ಒಟ್ಟು 22 ಅಧಿಕಾರಿಗಳ ತಂಡ ರಚಿಸಿದ್ದೇವೆ. ಯುವತಿ ಒಂದೇ ಊರಿನಲ್ಲಿ ಇಲ್ಲ. ಒಂದು ಊರಿನಿಂದ ಇನ್ನೊಂದು ಊರಿಗೆ ವಸತಿ ಬದಲಿಸುತ್ತಿದ್ದಾಳೆ. ಯುವತಿ ಇದ್ದಾಳೆ ಎಂದು ಹೇಳಲಾಗುತ್ತಿರುವ ಎಲ್ಲಾ ಊರಿಗೂ ತೆರಳಿ ತನಿಖೆ ಕೈಗೊಳ್ಳಲಾಗುತ್ತಿದೆ. ರಮೇಶ್ ಜಾರಕಿಹೊಳಿ ಅವರನ್ನೂ ಸಹ ತನಿಖಾ ತಂಡ ಪ್ರಶ್ನಿಸುತ್ತಿದೆ. ಯಾರೇ ತಪ್ಪು ಮಾಡಿದರೂ ಶಿಕ್ಷೆ ಆಗೇ ಆಗುತ್ತದೆ ಎಂದು ರಾಜ್ಯ ಸರ್ಕಾರದ ‌ಪರವಾಗಿ ಗೃಹ ಮತ್ತು ಸಂಸದೀಯ ವ್ಯವಹಾರಗಳ ಸಚಿವ ಬಸವರಾಜ ಬೊಮ್ಮಾಯಿ ವಿಧಾನಸಭೆಗೆ ತಿಳಿಸಿದರು. ಅವರು ಶಾಸಕ ರಮೇಶ್ ಸಿಡಿ ಪ್ರಕರಣದ ಕುರಿತು ವಿಧಾನಸಭೆಯಲ್ಲಿ ಉತ್ತರ ನೀಡಿದರು.

ರಮೇಶ್ ಜಾರಕಿಹೊಳಿ ಸಿಡಿ ಪ್ರಕರಣವನ್ನು ನಿಷ್ಪಕ್ಷಪಾತವಾಗಿ ತನಿಖೆ ನಡೆಸುವಂತೆ ಪೊಲೀಸರಿಗೆ ಸೂಚನೆ ನೀಡಿದ್ದೇನೆ. ಯುವತಿಗೆ ಪ್ರಾಣಭಯ ಇದ್ದರೆ ಸರ್ಕಾರದಿಂದ ರಕ್ಷಣೆ ನೀಡುತ್ತೇವೆ. ಅಲ್ಲದೇ ಯುವತಿಯ ಎಲ್ಲಾ ಸಾಮಾಜಿಕ ಜಾಲತಾಣಗಳ ಖಾತೆಯ ಮೂಲಕವೂ ನೊಟೀಸ್ ತಲುಪಿಸುವ ಕೆಲಸ ಕೈಗೊಂಡಿದ್ದೇವೆ. ಯುವತಿ ಇದ್ದಾಳೆ ಎಂದು ಹೇಳಲಾಗುತ್ತಿರುವ ಮುಂಬೈ, ಗೋವಾ, ಬೆಳಗಾವಿಯಲ್ಲಿ ಹುಡುಕುತ್ತಿದ್ದೇವೆ. ಕೇವಲ ವಿಡಿಯೋ ಕಳಿಸಿ ಪ್ರಕರಣ ದಾಖಲಿಸುವಂತೆ ಕೋರಿದ್ದಾರೆ. ಲಿಖಿತ ರೂಪದ ಸಹಿ ಹಾಕಿರುವ ದೂರಿನ ಪ್ರತಿ ಸಲ್ಲಿಸಿಲ್ಲ. ವಿಡಿಯೋ ಸತ್ಯಾಸತ್ಯತೆ ಬಗ್ಗೆ ವರದಿ ಬರಬೇಕು ಎಂದು ಗೃಹ ಸಚಿವ ಸಚಿವ ಬಸವರಾಜ್ ಬೊಮ್ಮಾಯಿ ಹೇಳಿದರು.

ಮಧ್ಯಪ್ರವೇಶಿಸಿ ಮಾತನಾಡಿದ ವಿಪಕ್ಷ ನಾಯಕ ಸಿದ್ದರಾಮಯ್ಯ, ‘ಯುವತಿಯು ನನ್ನನ್ನು ಬಳಸಿಕೊಂಡಿದ್ದಾರೆ’ ಎಂದು ವಿಡಿಯೊ ಹೇಳಿಕೆಯಲ್ಲಿ ಹೇಳಿದ್ದಾಳೆ. ಹೀಗಂದರೆ ಏನು? ಮೊದಲು ಪ್ರಕರಣ ದಾಖಲು ಮಾಡಿಕೊಳ್ಳಿ ಎಂದು ಆಗ್ರಹಿಸಿದರು. ನಂತರ ‘ರಾಜ್ಯ ಸರ್ಕಾರದ ಉತ್ತರ ವಿರೋಧಿಸಿ ಕಾಂಗ್ರೆಸ್ ಸದಸ್ಯರು ಸದನದ ಬಾವಿಗೆ ಇಳಿದು ಸರ್ಕಾರದ ವಿರುದ್ದ ಧಿಕ್ಕಾರ ಕೂಗುತ್ತಾ ಧರಣಿ ನಡೆಸಿದರು. ವಿಧಾನಸಭಾ ಕಲಾಪವನ್ನು ನಾಳೆ ಬೆಳಗ್ಗೆ 11 ಗಂಟೆಗೆ ಸ್ಪೀಕರ್ ವಿಶ್ವೇಶ್ವರ ಹೆಗಡೆ ಕಾಗೇರಿ ಮುಂದೂಡಿದರು.

ಸದನದಲ್ಲಿ ಇಂದು ಏನೆಲ್ಲಾ ಆಯಿತು?
ತಮ್ಮ ವಿರುದ್ಧದ ಸುದ್ದಿ ಪ್ರಸಾರ ಮಾಡದಂತೆ ನ್ಯಾಯಾಲಯಕ್ಕೆ ಹೋಗುವಂತೆ 6 ಸಚಿವರಿಗೆ ಸಲಹೆ ಕೊಟ್ಟಿದ್ದು ಯಾರು ಎಂಬುದನ್ನು ಸಚಿವರು ಬಹಿರಂಗಪಡಿಸಬೇಕು. ಆ ಸಲಹೆ ಕೊಟ್ಟವರು ಶುದ್ಧ ಮೂರ್ಖನಾಗಿರಬೇಕು. ಇಲ್ಲವೇ ಅವಿವೇಕಿ, ಅಜ್ಞಾನಿಯಾಗಿರಬೇಕು. ರಾಜ್ಯದ ಜನರು ಹೇಗೆ ಅರ್ಥಮಾಡಿಕೊಳ್ಳುತ್ತಾರೆ ಎಂಬುದನ್ನು ಯೋಚಿಸದೇ ತಡೆಯಾಜ್ಞೆ ತಂದು ತರುವಂತೆ 6 ಸಚಿವರುಗಳ ಹಿತೈಷಿಗಳೇ ಸಚಿವರ ರಾಜಕೀಯ ಜೀವನ ಮುಗಿಸಿದ್ದಾರೆ ಎಂದು ಶಾಸಕ ರಮೇಶ್ ಕುಮಾರ್ ವ್ಯಂಗ್ಯ ಮಾಡಿದರು.

ಕೋರ್ಟ್​ಗೆ ಹೋಗಿ ತಮ್ಮ ವಿರುದ್ಧ ಸುದ್ದಿ ಪ್ರಸಾರ ಮಾಡದಂತೆ ತಡೆ ತಂದಿದ್ದರಿಂದ 6 ಸಚಿವರನ್ನು ರಾಜ್ಯದ ಜನ ಅಪಹಾಸ್ಯ ಮಾಡುವಂತಾಯಿತು. ಯಾವುದನ್ನೂ ಯೋಚಿಸದೆ ಕೋರ್ಟ್​ಗೆ ಹೋಗಿ ತಡೆಯಾಜ್ಞೆ ತಂದಿರದಿದ್ದರಿಂದ ಸಮಾಜಕ್ಕೆ ಎಂತಹ ಸಂದೇಶ ಹೋಗಿದೆ ಎಂದು ಸರ್ಕಾರ ಯೋಚಿಸಬೇಕಿದೆ ಎಂದು ಕಾಂಗ್ರೆಸ್ ಶಾಸಕ ರಮೇಶ್​ ಕುಮಾರ್ ವ್ಯಾಖ್ಯಾನಿಸಿದರು.

ಇಡೀ ಅಧಿವೇಶನದಲ್ಲಿ ಪ್ರತಿಧ್ವನಿಸಿದ ಸಿಡಿ ಪ್ರಕರಣ
ವಿಧಾನಸಭಾ ಅಧಿವೇಶನದ ಮಧ್ಯಾಹ್ನದ ಅವಧಿಯಲ್ಲಿ ಸದನದಲ್ಲಿ ರಮೇಶ್ ಜಾರಕಿಹೊಳಿ ಸಿಡಿ ಪ್ರಕರಣ ಪ್ರತಿಧ್ವನಿಸಿತು. ಮಾಜಿ ಸಚಿವ ರಮೇಶ್ ಜಾರಕಿಹೊಳಿ ಪ್ರಕರಣ ನಿರ್ವಹಣೆಯಲ್ಲಿ ಪೊಲೀಸ್ ಇಲಾಖೆ ವಿಫಲವಾಗಿದೆ.  ಹೀಗಾಗಿ ಹೈಕೋರ್ಟ್​ನ ಮುಖ್ಯ ನ್ಯಾಯಮೂರ್ತಿ ನೇತೃತ್ವದಲ್ಲಿ ಪ್ರಕರಣದ ತನಿಖೆ ನಡೆಸಬೇಕು ಎಂದು ವಿಪಕ್ಷ ನಾಯಕ ಸಿದ್ದರಾಮಯ್ಯ ವಿಧಾನಸಭಾ ಅಧಿವೇಶನದಲ್ಲಿ ಒತ್ತಾಯಿಸಿದರು.  ಮಾಜಿ ಸಚಿವ ರಮೇಶ್ ಜಾರಕಿಹೊಳಿಗೆ ಒಂದು ನ್ಯಾಯ, ಯುವತಿಗೆ ಒಂದು ನ್ಯಾಯವೇ ಎಂದು ಪ್ರಶ್ನಿಸಿದ  ಸಿದ್ದರಾಮಯ್ಯ, ವಿಧಾನಸಭಾ ಅಧಿವೇಶನದಲ್ಲಿ ರಾಜ್ಯ ಸರ್ಕಾರದ ಮೇಲೆ ತೀವ್ರ ವಾಗ್ದಾಳಿ ನಡೆಸಿದರು. ರಮೇಶ್ ಜಾರಕಿಹೊಳಿ ಸಿಡಿ ಪ್ರಕರಣದ ಕುರಿತು ಸದನದಲ್ಲಿ ಚರ್ಚೆ ಮುಂದುವರೆಸಿದ ಅವರು, ಇದುವರೆಗೂ ಆ ಯುವತಿಯನ್ನು ಪತ್ತೆ ಹಚ್ಚಲು ಆಗಿಲ್ಲವೆ? ಆ ಯುವತಿಯ ಸಮ್ಮತಿ ಇಲ್ಲ ಎಂದರೆ ಅದು ಅತ್ಯಾಚಾರವೇ ಆಗುತ್ತದೆ. ಇಷ್ಟು ಗಂಭೀರ ಪ್ರಕರಣದಲ್ಲಿ ಕೇಸ್‌ ರಿಜಿಸ್ಟರ್ ಮಾಡದೇ ವಿಳಂಬ ಮಾಡಿದ್ದೇಕೆ? ಸರ್ಕಾರ ರಮೇಶ್ ಜಾರಕಿಹೊಳಿ ಪರ ತನಿಖೆ ನಡೆಸುತ್ತಿದೆಯೇ ಹೊರತು, ಯುವತಿ ಆಯಾಮದಲ್ಲಿ ನಡೆಸುತ್ತಿಲ್ಲ. ಕೂಡಲೇ ಐಪಿಸಿ ಸೆಕ್ಷನ್ 376 ಪ್ರಕಾರ ರಮೇಶ್ ಜಾರಕಿಹೊಳಿ ವಿರುದ್ಧ ಕೇಸ್ ದಾಖಲಿಸಿ ಯುವತಿಗೆ ನ್ಯಾಯ ಒದಗಿಸಬೇಕು ಎಂದು ವಿಧಾನಸಭೆಯಲ್ಲಿ ವಿಪಕ್ಷ ನಾಯಕ ಸಿದ್ದರಾಮಯ್ಯ ಹರಿಹಾಯ್ದರು.

ಇದನ್ನೂ ಓದಿ: ಬಾಂಬೆಗೆ ಹೋದವರು ಮಾತ್ರ ಯಾಕೆ ತಮ್ಮ ವಿರುದ್ಧ ಸುದ್ದಿ ಪ್ರಸಾರ ಮಾಡದಂತೆ ಕೋರ್ಟ್​ಗೆ ಹೋದ್ರು? ಸದನದಲ್ಲಿ ಸಿದ್ದರಾಮಯ್ಯ ವ್ಯಂಗ್ಯ

ಇದನ್ನೂ ಓದಿ: ‘ಹೈಕೋರ್ಟ್ ಮುಖ್ಯ ನ್ಯಾಯಮೂರ್ತಿ ನೇತೃತ್ವದಲ್ಲಿ ರಮೇಶ್ ಜಾರಕಿಹೊಳಿ ಪ್ರಕರಣದ ತನಿಖೆಯಾಗಲಿ‘; ವಿಪಕ್ಷ ನಾಯಕ ಸಿದ್ದರಾಮಯ್ಯ ಒತ್ತಾಯ

Published On - 7:48 pm, Mon, 22 March 21