ಪ್ರಾಧಿಕಾರ, ನ್ಯಾಯಾಲಯದಲ್ಲಿ ನಾವು ಸಮರ್ಥವಾಗಿ ವಾದ ಮಾಡಿದ್ದೇವೆ: ಸಿದ್ದರಾಮಯ್ಯ

| Updated By: Rakesh Nayak Manchi

Updated on: Sep 26, 2023 | 2:48 PM

ಕಾವೇರಿ ನೀರು ನಿರ್ವಹಣಾ ಪ್ರಾಧಿಕಾರವು ತಮಿಳುನಾಡಿಗೆ ನೀರು ಹರಿಸುವಂತೆ ಇದೀಗ ಮೂರನೇ ಬಾರಿ ಆದೇಶ ಹೊರಡಿಸಿದೆ. ಕರ್ನಾಟಕ ಸರ್ಕಾರವು ಸಮರ್ಥವಾಗಿ ವಾದ ಮಂಡಿಸದೇ ಇರುವುದು ತಮಿಳುನಾಡು ಪರ ಆದೇಶ ಹೊರಬರಲು ಕಾರಣ ಎಂದು ವಿಪಕ್ಷಗಳು ಆರೋಪಿಸುತ್ತಿವೆ. ಈ ಬಗ್ಗೆ ಮೈಸೂರಿನಲ್ಲಿ ಪ್ರತಿಕ್ರಿಯೆ ನೀಡಿದ ಸಿಎಂ ಸಿದ್ದರಾಮಯ್ಯ ನಾವು ಸಮರ್ಥವಾಗಿ ವಾದ ಮಾಡಿದ್ದೇವೆ ಎಂದಿದ್ದಾರೆ.

ಪ್ರಾಧಿಕಾರ, ನ್ಯಾಯಾಲಯದಲ್ಲಿ ನಾವು ಸಮರ್ಥವಾಗಿ ವಾದ ಮಾಡಿದ್ದೇವೆ: ಸಿದ್ದರಾಮಯ್ಯ
ಮುಖ್ಯಮಂತ್ರಿ ಸಿದ್ದರಾಮಯ್ಯ
Follow us on

ಮೈಸೂರು, ಸೆ.26: ಕಾವೇರಿ ನೀರು ನಿರ್ವಹಣಾ ಪ್ರಾಧಿಕಾರವು (CWMA) ತಮಿಳುನಾಡಿಗೆ ನೀರು ಹರಿಸುವಂತೆ ಇದೀಗ ಮೂರನೇ ಬಾರಿ ಆದೇಶ ಹೊರಡಿಸಿದೆ. ಕರ್ನಾಟಕ ಸರ್ಕಾರವು ಸಮರ್ಥವಾಗಿ ವಾದ ಮಂಡಿಸದೇ ಇರುವುದು ತಮಿಳುನಾಡು ಪರ ಆದೇಶ ಹೊರಬರಲು ಕಾರಣ ಎಂದು ವಿಪಕ್ಷಗಳು ಆರೋಪಿಸುತ್ತಿವೆ. ಈ ಬಗ್ಗೆ ಮೈಸೂರಿನಲ್ಲಿ ಪ್ರತಿಕ್ರಿಯೆ ನೀಡಿದ ಸಿಎಂ ಸಿದ್ದರಾಮಯ್ಯ (Siddaramaiah) ನಾವು ಸಮರ್ಥವಾಗಿ ವಾದ ಮಾಡಿದ್ದೇವೆ ಎಂದಿದ್ದಾರೆ.

ಈಗ ರಾಜ್ಯದಲ್ಲಿ ಬರ ಇದೆ. 123 ವರ್ಷಗಳಲ್ಲೇ ಆಗಸ್ಟ್ ತಿಂಗಳಲ್ಲಿ ಬಿದ್ದ ಮಳೆ ಪ್ರಮಾಣ ಕಡಮೆ ಇದೆ. ನಾವು 177 ಟಿಎಂಸಿ ನೀರು ವಾರ್ಷಿಕವಾಗಿ ತಮಿಳುನಾಡಿಗೆ ಕೊಡಬೇಕು. ಆದರೆ ನಮ್ಮ ಬಳಿಯೆ ನೀರಿಲ್ಲ ಈಗ ನಾಲ್ಕು ಡ್ಯಾಂ ನಿಂದ ಬರೀ 50 ಟಿಎಂಸಿ ನೀರಿದೆ ಎಂದರು.

ನಮಗೆ ಕುಡಿಯುವುದಕ್ಕೆ 30 ಟಿಎಂಸಿ ನೀರು, ಬೆಳೆಗೆ 70 ಟಿಎಂಸಿ ಬೇಕು ಕೈಗಾರಿಕೆಗೆ 20 ಟಿಎಂಸಿ ನೀರು ಬೇಕು. ನಮಗೆ 100 ಟಿಎಂಸಿ ಗೂ ಹೆಚ್ಚು ನೀರು ಬೇಕಿದೆ. ಇಂತಹ ಪರಿಸ್ಥಿತಿಯಲ್ಲಿ ನೀರು ಬಿಡಲಿಲ್ಲ ಅಂತಾರೆ ತಮಿಳುನಾಡಿನವರು, ನಮಗೆ ನೀರೆ ಇಲ್ಲ ನಾವು ಏನೂ ಕೊಡುವುದು? ತಮಿಳುನಾಡಿನವರು ಬೆಳೆ ರಕ್ಷಣೆಗೆ ನೀರು ಕೇಳುತ್ತಿದ್ದಾರೆ. ನಮಗೆ ಕುಡಿಯಲು ನೀರು ಇಲ್ಲ. ನಾವು ನಮ್ಮ ರೈತರ ರಕ್ಷಣೆಗ ಸದಾ ಬದ್ಧ ಎಂದರು.

ಕಾವೇರಿ ನೀರು ನಿರ್ವಹಣಾ ಪ್ರಾಧಿಕಾರ ಹಾಗೂ ಸುಪ್ರೀಂಕೋರ್ಟ್​ನಲ್ಲಿ ಕರ್ನಾಟಕ ಸರ್ಕಾರ ಸಮರ್ಥವಾಗಿ ವಾದ ಮಾಡಿಲ್ಲ ಎಂದು ವಿಪಕ್ಷಗಳಾದ ಬಿಜೆಪಿ, ಜೆಡಿಎಸ್ ಆರೋಪಿಸುತ್ತಿವೆ. ಈ ಬಗ್ಗೆ ಪ್ರತಿಕ್ರಿಯೆ ನೀಡಿದ ಸಿದ್ದರಾಮಯ್ಯ, ನಾವು ಸಮರ್ಥವಾಗಿ ವಾದ ಮಂಡನೆ ಮಾಡಿದ್ದೇವೆ. ನಮಗೆ ಕುಡಿಯಲಿಕ್ಕೆ ನೀರಿಲ್ಲ ಎಂದು ಹೇಳಿದ್ದೇವೆ. ಇಷ್ಟಾದರೂ ತಮಿಳುನಾಡು ನಮ್ಮ ನಡುವೆ ಸಂಘರ್ಷ ನಡೆಯುತ್ತಿದೆ. ಅದೇನೆ ಇರಲಿ ನಮ್ಮ ಸರ್ಕಾರ ರೈತರನ್ನ ರಕ್ಷಣೆ ಮಾಡೇ ಮಾಡುತ್ತೇವೆ ಎಂದರು.

ಇದನ್ನೂ ಓದಿ: ಕಾವೇರಿ ಕಿಚ್ಚು; ತಮಿಳುನಾಡಿನಲ್ಲಿ ಸಿದ್ದರಾಮಯ್ಯಗೆ ಶ್ರದ್ದಾಂಜಲಿ, ರಾಮನಗರದಲ್ಲಿ ಸ್ಟಾಲಿನ್​ಗೆ ತಿಥಿ

ಕಾವೇರಿ ವಿಚಾರದಲ್ಲಿ ವಿರೋಧ ಪಕ್ಷಗಳು ರಾಜಕಾರಣ ಮಾಡುತ್ತಿವೆ ಎಂದು ಆರೋಪಿಸಿದ ಸಿದ್ದರಾಮಯ್ಯ, ರೈತರು ಪ್ರತಿಭಟನೆ ಮಾಡಿದರೆ ಓಕೆ. ರಾಜಕೀಯ ಕಾರಣಕ್ಕೆ ಬಿಜೆಪಿ ಜೆಡಿಎಸ್ ಹೋರಾಟ ಮಾಡುತ್ತಿವೆ. ರಾಜ್ಯ ಸರ್ಕಾರದ ವಿಫಲದಿಂದ ನೀರು ಹೋಗಿದೆ ಅಂತಾರೆ. ಈಗ ವಾದ ಮಂಡಿಸುತ್ತಿರುವ ವಕೀಲರ ತಂಡ ಯಡಿಯೂರಪ್ಪ ಹಾಗೂ ದೇವೇಗೌಡರ ಕಾಲದಲ್ಲೂ ವಾದಿಸಿತ್ತು ಎಂದರು.

ಪ್ರಾಧಿಕಾರದ ಮುಂದೆ ನ್ಯಾಯಾಲಯದ ನಾವು ಸಮರ್ಥವಾಗಿ ವಾದ ಮಾಡಿದ್ದೇವೆ. ಜನ ಖುಷಿಯಾಗಿದ್ದಾರೆ ಆದರೆ ಬಿಜೆಪಿ ಜೆಡಿಎಸ್ ಖುಷಿಯಾಗಿಲ್ಲ. ನೀವು ಬಿಜೆಪಿ ಜೆಡಿಎಸ್ ಮಾತು ಕೇಳಬೇಡಿ ಕೇಳಬಾರದು ಎಂದರು.

ಕರ್ನಾಟಕ ಈಗ ಹಾಲು ಉತ್ಪಾದನೆಯಲ್ಲಿ ದೇಶದಲ್ಲೇ ಎರಡನೇ ಸ್ಥಾನದಲ್ಲಿದೆ. ಒಂದು ಕೋಟಿ ಲೀಟರ್ ಹಾಲು ಉತ್ಪಾದನೆ ಮಾಡುವ ಸಾಮರ್ಥ್ಯ ಕರ್ನಾಟಕಕ್ಕೆ ಇದೆ ಎಂದು ಹೇಳಿದ ಸಿದ್ದರಾಮಯ್ಯ, ಕಾಲುಬಾಯಿ ಜ್ವರ, ಚರ್ಮಗಂಟು ರೋಗ ಬರದಂತೆ ನೋಡಿಕೊಳ್ಳುವ ಜವಾಬ್ದಾರಿ ಪಶು ಸಂಗೋಪನೆ ಇಲಾಖೆಯದ್ದು. ನೀಲಿ ನಾಲಿಗೆ ಎಂಬ ರೋಗವು ಸಹ ಇದೆ. ಈ ರೋಗದಿಂದಲೂ ಹಸುಗಳು ಸಾವನ್ನಪ್ಪುತ್ತವೆ ಎಂದರು.

ಮಳೆಗಾಲದಲ್ಲಿ ಅನೇಕ ಕುರಿಗಳು ಸಾಯುತ್ತವೆ, ತೇವಾಂಶ ಇರುವ ಕಡೆ ಕುರಿಗಳನ್ನ ಸಾಕಲಿಕ್ಕೆ ಆಗಲ್ಲ. ಕುರಿ, ಮೇಕೆ ಮತ್ತು ಹಸು ಸತ್ತರೆ 5 ಸಾವಿರ ಕೊಡಬೇಕೆಂಬ ಅನುಗ್ರಹ ಯೋಜನೆ ಜಾರಿಗೆ ತಂದೆ ಎಂದರು.

ಮಹದೇವಪ್ಪರನ್ನು ಕಿಚಾಯಿಸಿದ ಸಿದ್ದರಾಮಯ್ಯ

ಭಾಷಣದಲ್ಲಿ ಪಶು ಸಖಿ ಹೆಸರಿಗೆ ಮೆಚ್ಚುಗೆ ವ್ಯಕ್ತಪಡಿಸುತ್ತಾ ಸಚಿವ ಹೆಚ್.ಸಿ ಮಹದೇವಪ್ಪ ಅವರನ್ನು ಕಿಚಾಯಿಸಿದ ಸಿಎಂ ಸಿದ್ದರಾಮಯ್ಯ, ಮಹದೇವಪ್ಪ ಯಾವತ್ತಾದ್ರು ನಾಟಕದಲ್ಲಿ ಸಖಿ ಪಾರ್ಟ್ ಮಾಡಿದ್ದೀಯಾ ಎಂದು ಕೇಳಿದರು. ಪಶು ಸಖಿಯರು ಎಂಬ ಹೆಸರು ಚೆನ್ನಾಗಿದೆ, ಗಗನ ಸಖಿ ಥರ ಪಶು ಸಖಿ ಎಂದರು.

ಅಲ್ಲದೆ, ನಾಟಕದಲ್ಲಿ ರಾಣಿ ಜೊತೆ ಸಖಿ ಪಾತ್ರ ಇರುತ್ತೆ ಗೊತ್ತಲ್ವಾ? ಹಾಗೇ ಇದು. ಆಗ ಸಚಿವ ಮಹದೇವಪ್ಪನನ್ನು ನಾಟಕದಲ್ಲಿ ಸಖಿ ಪಾರ್ಟ್ ಮಾಡಿದ್ದಿಯಾ ಯಾವತ್ತಾದ್ರಾ ಎಂದು ಪ್ರಶ್ನಿಸಿದರು. ಈ ವೇಳೆ ಸಚಿವರು, ನಾನು ರಾಜನ ಪಾರ್ಟ್ ಮಾಡುತ್ತಿದ್ದೇ ಎಂದರು.

ರಾಜಕೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ