AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಕರ್ನಾಟಕ ರಾಜ್ಯದಲ್ಲಿ ಪೊಲೀಸ್ ಸರ್ಕಾರ ಇದೆ: ಬಸವರಾಜ ಬೊಮ್ಮಾಯಿ

ತಮಿಳುನಾಡಿಗೆ ನೀರು ಹರಿಸುತ್ತಿರುವ ಕರ್ನಾಟಕ ಕಾಂಗ್ರೆಸ್ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದ ಮಾಜಿ ಸಿಎಂ ಬಸವರಾಜ ಬೊಮ್ಮಾಯಿ, ಹಿಂದೆಂದೂ ಮಾಡದ ರೀತಿ ಪೊಲೀಸ್ ಕಾರ್ಯಾಚರಣೆ ಮಾಡಿಸಿದ್ದಾರೆ. ಬೆಂಗಳೂರು ಬಂದ್ ಯಶಸ್ವಿ ಆಗಬಾರದು ಎಂಬುದು ಸರ್ಕಾರದ ಉದ್ದೇಶವಾಗಿತ್ತು ಎಂದು ಆರೋಪಿಸಿದರು.

ಕರ್ನಾಟಕ ರಾಜ್ಯದಲ್ಲಿ ಪೊಲೀಸ್ ಸರ್ಕಾರ ಇದೆ: ಬಸವರಾಜ ಬೊಮ್ಮಾಯಿ
ಬಸವರಾಜ ಬೊಮ್ಮಾಯಿ ಮತ್ತು ಸಿದ್ದರಾಮಯ್ಯImage Credit source: PTI
ಕಿರಣ್​ ಹನಿಯಡ್ಕ
| Edited By: |

Updated on: Sep 26, 2023 | 3:39 PM

Share

ಬೆಂಗಳೂರು, ಸೆ.26: ಕಾವೇರಿ ನೀರು (Cauvery Water) ವಿಚಾರವಾಗಿ ಹೋರಾಟ ನಡೆಸುತ್ತಿದ್ದ ರೈತರನ್ನು ಪೊಲೀಸರು ಬಂಧಿಸಿದ್ದು, ಈ ಬಗ್ಗೆ ಕಾಂಗ್ರೆಸ್ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದ ಮಾಜಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ (Basavaraj Bommai), ಹೋರಾಟಗಾರರು ಏನಾದರೂ ನಿಮ್ಮಿಂದ ರಾಜೀನಾಮೆ ಕೇಳಿದ್ರಾ ಅಥವಾ ಅಧಿಕಾರ ಕೇಳಿದ್ದಾರಾ? ನೀರು ರಕ್ಷಣೆ ಮಾಡುವಲ್ಲಿ ಸರ್ಕಾರ ವಿಫಲವಾಗಿದೆ ಎಂದು ಹೇಳಿದ್ದಕ್ಕೆ ಬಂಧಿಸಿದ್ದೀರಿ. ಇವತ್ತು ರಾಜ್ಯದಲ್ಲಿ ಪೊಲೀಸ್ ಸರ್ಕಾರ ಇದೆ ಎಂದು ವಾಗ್ದಾಳಿ ನಡೆಸಿದರು.

ಬೆಂಗಳೂರು ನಗರದಲ್ಲಿ ಮಾತನಾಡಿದ ಅವರು, ನಾವು ಅಧಿಕಾರದಲ್ಲಿದ್ದಾಗ ಪ್ರತಿಭಟನೆ ಹತ್ತಿಕ್ಕುವ ಕೆಲಸ ಮಾಡಿಲ್ಲ. ಆದರೆ ಈಗ ಕಾಂಗ್ರೆಸ್ ಸರ್ಕಾರ ಹಿಂದೆಂದೂ ಮಾಡದ ರೀತಿ ಪೊಲೀಸ್ ಕಾರ್ಯಾಚರಣೆ ಮಾಡಿಸಿದೆ. ಬಂದ್ ಯಶಸ್ವಿ ಆಗಬಾರದು ಎಂಬುದು ಸರ್ಕಾರದ ಉದ್ದೇಶವಾಗಿತ್ತು. ಆದರೆ ಸಾರ್ವಜನಿಕರು ಸ್ವಯಂಪ್ರೇರಿತವಾಗಿ ಬಂದ್​ಗೆ ಸಹಕಾರ ಕೊಟ್ಟಿದ್ದಾರೆ. ಬಂದ್ ಯಶಸ್ವಿಯಾಗಿದೆ ಎಂದರು.

ಜನ ಆಕ್ರೋಶ ಹೊರ ಹಾಕಿದ್ದಾರೆ, ಸರ್ಕಾರ ಇನ್ನೂ ಎಚ್ಚೆತ್ತುಕೊಂಡಿಲ್ಲ ಎಂದು ಆರೋಪಿಸಿದ ಅವರು, ಈ ಹಿಂದೆ ಮೊಂಡು ವಾದ ಮಾಡಿ ಮೇಕೆದಾಟು ಪಾದಯಾತ್ರೆ ಮಾಡಿದರು. ಬೆಂಗಳೂರಲ್ಲಿ ಸಭೆಗೆ ಅವಕಾಶವಿಲ್ಲ ಅಂದರೂ ಪ್ರತಿಭಟನಾ ಸಭೆ ಮಾಡಿದರು. ಆದರೆ ಇಂದು ರೈತ ನಾಯಕ ಕುರುಬೂರು ಶಾಂತಕುಮಾರ್ ಅವರಿ​ಗೆ​ ರ್ಯಾಲಿ ನಡೆಸಲು ಅವಕಾಶ ನೀಡಿಲ್ಲ ಎಂದು ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದರು.

ಕಾವೇರಿ ಕಣಿವೆ ವ್ಯಾಪ್ತಿಯ ಜನರಿಗೆ ಸರ್ಕಾರ ವಿಶ್ವಾಸ ದ್ರೋಹಮಾಡಿದೆ. ತಮಿಳುನಾಡು ಸಿಎಂ ಸ್ಟಾಲಿನ್ ಸಮಾಧಾನಗೊಳಿಸಲು ನೀರು ಹರಿಸಲಾಗಿದೆ. ತಮಿಳುನಾಡಿಗೆ ನೀರು ಹರಿಸುವುದನ್ನು ಸರ್ಕಾರ ಕೂಡಲೇ ನಿಲ್ಲಿಸಬೇಕು. ಮೊದಲು ನೀರು ಬಿಟ್ಟು ಈಗ ಪ್ರಧಾನಿ ಮಧ್ಯಪ್ರವೇಶಿಸಲಿ ಎಂದರೆ ಹೇಗೆ? ರಾಜಕೀಯವಾಗಿ ಪರಿಹಾರ ಆಗಬೇಕು ಅಂದರೆ ಡಿಎಂಕೆಗೆ ಮನವರಿಕೆ ಮಾಡಲು ಸೋನಿಯಾ ಗಾಂಧಿ, ಮಲ್ಲಿಕಾರ್ಜುನ ಖರ್ಗೆ ಅವರಿಗೆ ಹೇಳಲಿ ಎಂದರು.

ಇದನ್ನೂ ಓದಿ: ಕಾವೇರಿ ಕಿಚ್ಚು; ತಮಿಳುನಾಡಿನಲ್ಲಿ ಸಿದ್ದರಾಮಯ್ಯಗೆ ಶ್ರದ್ದಾಂಜಲಿ, ರಾಮನಗರದಲ್ಲಿ ಸ್ಟಾಲಿನ್​ಗೆ ತಿಥಿ

ಕಾವೇರಿ ಕಣಿವೆ ವ್ಯಾಪ್ತಿಗೆ ಅಧ್ಯಯನ ತಂಡ ಕಳಿಸುವಂತೆ ಹೆಚ್​ಡಿ ದೇವೇಗೌಡ ಅವರು ಹೇಳಿದ್ದಾರೆ. ವಸ್ತು ಸ್ಥಿತಿ ತಿಳಿಯಲು ಕೇಂದ್ರ ತಂಡ ಕಳಿಸುವಂತೆ ದೇವೇಗೌಡರು ಹೇಳಿದ್ದಾರೆ. ಟ್ರಿಬ್ಯುನಲ್​ ಆದೇಶಕ್ಕಿಂತ ಮೊದಲು ಕೇಂದ್ರ ಮಧ್ಯಪ್ರವೇಶಕ್ಕೆ ಅವಕಾಶ ಇತ್ತು. ಈಗ ಕಾನೂನಾತ್ಮಕ ವಿಚಾರದಲ್ಲಿ ಕೇಂದ್ರ ಸರ್ಕಾರ ಮಧ್ಯಪ್ರವೇಶಕ್ಕೆ ಅವಕಾಶವಿಲ್ಲ. ಒಂದು ವೇಳೆ ಕೇಂದ್ರ ಮಧ್ಯಪ್ರವೇಶಿಸಿದರೆ ಒಳ್ಳೆಯದೇ. ಆದರೆ ಕಾಂಗ್ರೆಸ್​​ನವರು ತಮಿಳುನಾಡಿನ ಡಿಎಂಕೆ ಜತೆ ಮಾತಾಡಿ ಒಪ್ಪಿಸಲಿ ಎಂದರು.

ತಮಿಳುನಾಡು ಅಕ್ರಮವಾಗಿ ನೀರು ಬಳಕೆ ಮಾಡಿದೆ, ಕುರುವೈ ಬೆಳೆ ಹಾಕಿದೆ. ಅವರು ಅಕ್ರಮವಾಗಿ ಬೆಳೆದದ್ದನ್ನು ಸ್ಯಾಟಲೈಟ್ ಮೂಲಕ ಸರ್ವೆ ಸಾಧ್ಯ. ಸರ್ಕಾರ ಡಿಎಂಕೆಯನ್ನೇ ಸಂತೃಪ್ತಿಪಡಿಸುವುದರಲ್ಲೇ ನಿರತವಾಗಿದೆ. ಕೇಂದ್ರದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬರುವ ಕನಸು ಕಾಣುತ್ತಿದೆ. ಅದಕ್ಕಾಗಿ ಡಿಎಂಕೆಯನ್ನು ಓಲೈಕೆ ಮಾಡಲು ಇಲ್ಲಿನ ಕಾಂಗ್ರೆಸ್ ನಾಯಕರು ಅವರ ಬಗ್ಗೆ ಏನೂ ಮಾತಾಡುತ್ತಿಲ್ಲ ಎಂದರು.

ಮದ್ಯ ಕುಡಿಸಲು ಹೊರಟ ಸರ್ಕಾರ

ಮದ್ಯ ಮಾರಾಟಕ್ಕೆ ಲೈಸೆನ್ಸ್ ಕೊಡುವ ಸರ್ಕಾರದ ನಿರ್ಧಾರ ವಿಚಾರವಾಗಿ ಮಾತನಾಡಿದ ಅವರು, ಈಗಾಗಲೇ ಮದ್ಯದ ಬೆಲೆ ಹೆಚ್ಚಳದಿಂದ ಆದಾಯ ಕಡಿಮೆ ಆಗಿದೆ. ಈಗ ನೀರಂತೂ ಕೊಡಲು ಈ ಸರ್ಕಾರದಿಂದ ಆಗಿಲ್ಲ. ಈಗ ಸರ್ಕಾರ ಮದ್ಯ ಕುಡಿಸಲು ಹೊರಟಿದೆ. ಗ್ಯಾರಂಟಿಗಳಿಗೆ ಹಣ ಕ್ರೋಢೀಕರಿಸಲು ಮದ್ಯ ಮಾರಾಟಕ್ಕೆ ಲೈಸೆನ್ಸ್ ಹಂಚಲು ಹೊರಟಿದೆ, ಆ ಮೂಲಕ ಸಾಮಾಜಿಕ ಸ್ವಾಸ್ಥ್ಯ ಹಾಳು ಮಾಡಲು ಸರ್ಕಾರ ಹೊರಟಿದೆ ಎಂದರು.

ನಾಳೆ ಜೆಡಿಎಸ್ ಜೊತೆ ಹೋರಾಟ ವಿಚಾರವಾಗಿ ಮಾತನಾಡಿದ ಅವರು, ಈ ಹೋರಾಟ ಯಾವುದೇ ರಾಜಕೀಯ ಪಕ್ಷದ ಹೋರಾಟ ಅಲ್ಲ. ರಾಜ್ಯದ ಹಿತಾಸಕ್ತಿಯ ಹೋರಾಟವಾಗಿದೆ. ಈಗಾಗಲೇ ಹೇಳಿದಂತೆ ಜೆಡಿಎಸ್‌ ಜೊತೆ ಹೋರಾಟ ಮಾಡುತ್ತೇವೆ. ಎಲ್ಲಾ ವಲಯದಲ್ಲೂ ಹೋರಾಟ ಮಾಡುತ್ತೇವೆ ಎಂದರು.

ರಾಜಕೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ