ತಮಿಳುನಾಡಿಗೆ ಕಾವೇರಿ ನೀರು; ಕರ್ನಾಟಕ ಜಲ ಸಂರಕ್ಷಣಾ ಸಮಿತಿ ವತಿಯಿಂದ ಸಿಎಂಗೆ ಹಕ್ಕೊತ್ತಾಯ ಪತ್ರ ಸಲ್ಲಿಕೆ

ಸುಪ್ರೀಂ ಕೋರ್ಟ್​ ಆದೇಶದನ್ವಯ ಕಾವೇರಿ ನೀರು ತಮಿಳುನಾಡಿಗೆ ಹರಿಸಿ ರಾಜ್ಯದ ರೈತರ ಕುಡಿಯುವ ನೀರಿಗೆ ಸಂಕಷ್ಟ ತಂದಿರುವ ರಾಜ್ಯ ಸರ್ಕಾರದ ನೀತಿಯನ್ನು ಖಂಡಿಸಿ, ಇಂದು(ಸೆ,26) ಬೆಂಗಳೂರು ಬಂದ್‌ ಆಚರಿಸಿ, ಬೃಹತ್ ಮೆರವಣಿಗೆ ನಡೆಸಿ, ಅನೇಕ ಸಂಘಟನೆಗಳು ಸೇರಿ ಕರ್ನಾಟಕ ಜಲ ಸಂರಕ್ಷಣಾ ಸಮಿತಿ ವತಿಯಿಂದ ಮುಖ್ಯಮಂತ್ರಿ ಸಿದ್ದರಾಮಯ್ಯನವರಿಗೆ ಹಕ್ಕೊತ್ತಾಯ ಪತ್ರ ಸಲ್ಲಿಸಿದ್ದಾರೆ.

ತಮಿಳುನಾಡಿಗೆ ಕಾವೇರಿ ನೀರು; ಕರ್ನಾಟಕ ಜಲ ಸಂರಕ್ಷಣಾ ಸಮಿತಿ ವತಿಯಿಂದ ಸಿಎಂಗೆ ಹಕ್ಕೊತ್ತಾಯ ಪತ್ರ ಸಲ್ಲಿಕೆ
ಸಿಎಂ ಸಿದ್ದರಾಮಯ್ಯ
Follow us
TV9 Web
| Updated By: ಕಿರಣ್ ಹನುಮಂತ್​ ಮಾದಾರ್

Updated on: Sep 26, 2023 | 3:14 PM

ಬೆಂಗಳೂರು, ಸೆ.26: ಈಗಾಗಲೇ ಸುಪ್ರೀಂಕೋರ್ಟ್​ ಆದೇಶದ ಮೇಲೆ ರಾಜ್ಯ ಸರ್ಕಾರ ತಮಿಳುನಾಡಿಗೆ ಕಾವೇರಿ(Cauvery) ನೀರನ್ನು ಹರಿಸುತ್ತಿದೆ. ಈ ಹಿನ್ನಲೆ ರಾಜ್ಯದ ವಿವಿಧ ಜಿಲ್ಲೆಗಳಲ್ಲಿ ಹೋರಾಟದ ಕೂಗು ಕೇಳಿಬರುತ್ತಾ ಬಂದಿದ್ದು, ಅದರಲ್ಲೂ ಮುಖ್ಯವಾಗಿ ಮೈಸೂರು, ಮಂಡ್ಯ, ಬೆಂಗಳೂರು ಸೇರಿದಂತೆ ಅನೇಕ ಜಿಲ್ಲೆಗಳಲ್ಲಿ ರೈತರ ಜೊತೆ ವಿವಿಧ ಕನ್ನಡಪರ ಸಂಘಟನೆಗಳು ಸೇರಿ ಪ್ರತಿಭಟನೆಯ ಮೊರೆ ಹೋಗಿದ್ದರು. ಅದರಂತೆ ಇಂದು(ಸೆ.26) ಬೆಂಗಳೂರು ಬಂದ್​ ನಡೆಸಿ ಸಿಎಂ ಸಿದ್ದರಾಮಯ್ಯನವರಿಗೆ ಹಕ್ಕೊತ್ತಾಯ ಪತ್ರ ಸಲ್ಲಿಸಿದ್ದಾರೆ.

ಹಕ್ಕೊತ್ತಾಯ ಪತ್ರದಲ್ಲೇನಿದೆ?

‘ನಮ್ಮ ರಾಜ್ಯದಲ್ಲಿ ಮಳೆ ಕಡಿಮೆಯಾಗಿದೆ. ಬರಗಾಲಕ್ಕೆ 195 ತಾಲೂಕುಗಳು ತುತ್ತಾಗಿ ರೈತರ ಆತ್ಮಹತ್ಯೆ ಹೆಚ್ಚುತ್ತಿದ್ದರೂ, ಇಂತಹ ಸಂದಿಗ್ಧ ಸಮಯದಲ್ಲಿ ಕಾವೇರಿ ನೀರು ನಿರ್ವಹಣಾ ಮಂಡಳಿ ಪ್ರತಿನಿತ್ಯ 5000 ಕ್ಯೂಸೆಕ್ಸ್ ನೀರು ತಮಿಳುನಾಡಿಗೆ ಹರಿಸಬೇಕೆಂಬ ಅವೈಜ್ಞಾನಿಕ ಆದೇಶ ನೀಡಿರುವುದನ್ನು ಒಪ್ಪಿ, ರಾಜ್ಯ ಸರ್ಕಾರ ನೀರು ಹರಿಸುತ್ತಿರುವುದನ್ನು ತಕ್ಷಣ ನಿಲ್ಲಿಸಿ, ಕುಡಿಯುವ ನೀರು ಉಳಿಸುವಂತೆ ಒತ್ತಾಯಿಸಿ ಇಂದು(ಸೆ.26) ಬೆಂಗಳೂರು ಬಂದ್‌ ನಡೆಸಿ ಕನ್ನಡಪರ ಸಂಘಟನೆಗಳು, ರೈತಪರ ಸಂಘಟನೆಗಳು, ಕರ್ನಾಟಕದ ಜಲ, ನೆಲ, ಭಾಷೆ ವಿಚಾರದಲ್ಲಿ ಹೋರಾಡಲು ಆರಂಭವಾಗಿರುವ ಕರ್ನಾಟಕ ಜಲ ಸಂರಕ್ಷಣಾ ಸಮಿತಿ ಪರವಾಗಿ ಹಕ್ಕೊತ್ತಾಯಗಳ ಪತ್ರ ಸಲ್ಲಿಸುತ್ತಿದ್ದಾರೆ.

ಇದನ್ನೂ ಓದಿ:ಕಾವೇರಿ ಸಮಸ್ಯೆ ಪರಿಹರಿಸಲು ಎಲ್ಲ ಪಕ್ಷದ ನಾಯಕರಿಗೆ ನಟ ಕಿಚ್ಚ ಸುದೀಪ್​ ಬಹಿರಂಗ ಪತ್ರ

ಹಕ್ಕೋತ್ತಾಯಗಳು ಇಲ್ಲಿವೆ

1. ರಾಜ್ಯ ಸರ್ಕಾರ ತಮಿಳುನಾಡಿಗೆ ಅವೈಜ್ಞಾನಿಕವಾಗಿ ಹರಿಸುತ್ತಿರುವ ನೀರನ್ನು ಈ ಕೂಡಲೇ ನಿಲ್ಲಿಸಬೇಕು.

2. ರಾಜ್ಯ ಸರ್ಕಾರ ಕೂಡಲೇ ವಿಧಾನಸಭೆ ವಿಶೇಷ ಅಧಿವೇಶನ ಕರೆದು ಸಮಗ್ರ ಕಾವೇರಿ ನೀರಿನ ಸಂಕಷ್ಟದ ಚರ್ಚೆ ನಡೆಸಿ, ಪ್ರಕೃತಿಯ ಮುನಿಸು, ನೈಸರ್ಗಿಕ ಸಮಸ್ಯೆ ಕಾರಣ ಕುಡಿಯುವ ನೀರಿನ ಸಲುವಾಗಿ ಸಂಕಷ್ಟ ಸೂತ್ರ ಜಾರಿ ಮಾಡುವ ತನಕ ನೀರು ಹರಿಸುವುದಿಲ್ಲ ಎಂಬ ಸಂದೇಶವನ್ನು ಕೇಂದ್ರ ಸರ್ಕಾರ ಮತ್ತು ಕಾವೇರಿ ನೀರು ನಿರ್ವಹಣಾ ಮಂಡಳಿಗೆ ತಿಳಿಸಬೇಕು.

3.ವಿವಿಧ ರಾಜಕೀಯ ಪಕ್ಷಗಳ ಸರ್ಕಾರಗಳ ಒತ್ತಡದಲ್ಲಿ ಕಾವೇರಿ ಪ್ರಾಧಿಕಾರ, ನೀರು ನಿರ್ವಹಣಾ ಮಂಡಳಿ ಕಾರ್ಯನಿರ್ವಹಿಸುತ್ತಿರುವ ಕಾರಣ ಕೂಡಲೇ ಅವುಗಳನ್ನು ರದ್ದುಪಡಿಸಬೇಕು. ಯಾರ ಒತ್ತಡಕ್ಕೂ ತಲೆಬಾಗದೆ, ಪರಿಸ್ಥಿತಿಯ ಗಂಭೀರತೆ ಅರಿತು, ಸ್ವತಂತ್ರವಾಗಿ ಕಾರ್ಯನಿರ್ವಹಿಸುವ ಕಾವೇರಿ ನೀರು ನಿರ್ವಹಣಾ ಮಂಡಳಿ ರಚಿಸಬೇಕು. ಈ ಮಂಡಳಿಯಲ್ಲಿ ಕಾವೇರಿ ವ್ಯಾಪ್ತಿಗೆ ಸೇರಿದ ನಾಲ್ಕು ರಾಜ್ಯಗಳ ಪರಿಣಿತರು, ನೀರಾವರಿ ತಜ್ಞರು, ರೈತ ಪ್ರತಿನಿಧಿಗಳು, ಹವಮಾನ ತಜ್ಞರು, ನೀರಾವರಿ ಇಲಾಖೆಯ ಅಧಿಕಾರಿಗಳು- ಎಲ್ಲರನ್ನು ಒಳಗೊಂಡಂತೆ ಶಾತನ ಬದ್ದ ಮಂಡಳಿ ರಚನೆ ಮಾಡಿ, ಸ್ವತಂತ್ರವಾಗಿ ಕಾರ್ಯ ನಿರ್ವಹಿಸುವ, ಭಾರತೀಯ ಚುನಾವಣಾ ಆಯೋಗ ಕಾರ್ಯನಿರ್ವಹಿಸುವಂತೆ ನಿರ್ವಹಣೆ ಮಾಡಲು ಮಾನ್ಯ ಸರ್ವೋಚ್ಚ ನ್ಯಾಯಾಲಯ ಸಾರ್ವಜನಿಕ ಹಿತಾಸಕ್ತಿ ಅಡಿಯಲ್ಲಿ ನಿರ್ದೇಶನ ನೀಡಬೇಕು ಎಂದು ಒತ್ತಾಯಿಸುತ್ತೇವೆ. ಈ ಬಗ್ಗೆ ರಾಜ್ಯ ಸರ್ಕಾರ ನಿರ್ಣಯ ಕೈಗೊಂಡು ಕೇಂದ್ರ ಸರ್ಕಾರವನ್ನು ಒತ್ತಾಯಿಸಬೇಕು.

4.ಕುಡಿಯುವ ನೀರಿಗಾಗಿ ಹೆಚ್ಚು ಮಳೆ ನೀರು ಬಂದಾಗ ಸಂಗ್ರಹಿಸಿಟ್ಟುಕೊಳ್ಳಲು ಮೇಕೆದಾಟು ಯೋಜನೆ ನಿರ್ಮಾಣ ಕಾರ್ಯ ಆರಂಭಿಸಲು ಕೂಡಲೇ ಕಾರ್ಯಾ ದೇಶ ಹೊರಡಿಸಿ, ಅಗತ್ಯ ಹಣ ಬಿಡುಗಡೆ ಮಾಡಬೇಕು.

5.ಕರ್ನಾಟಕದ ನೆಲ, ಜಲ, ಭಾಷೆ ಹಾಗೂ ರೈತರಿಗಾಗಿ ಹೋರಾಟ ಮಾಡಿದ ಸಂಘಟನೆಗಳ ಮುಖಂಡರುಗಳ, ರೈತ ಸಂಘಟನೆಗಳು, ಕನ್ನಡಪರ ಸಂಘಟನೆಗಳು, ಮುಖಂಡರ ಮೇಲೆ ಇರುವ ಹೋರಾಟದ ಮೊಕದ್ದಮೆಗಳನ್ನು ಕೂಡಲೇ ವಾಪಸ್‌ ಪಡೆಯಬೇಕು. ಮೇಲಿನ ಒತ್ತಾಯಗಳ ಬಗ್ಗೆ 26ರಂದು ಶಾಂತಿಯುತವಾಗಿ ಬೆಂಗಳೂರ ಬಂದ್‌ ಆಚರಣೆ ಮಾಡಿ ಬೃಹತ್‌ ಮೆರವಣಿಗೆ ನಡೆಸಿ ಈ ಹಕ್ಕೋತ್ತಯಗಳ ಪತ್ರ ಸಲ್ಲಿಸುತ್ತಿದ್ದೇವೆ, ತಾವು ಕೂಡಲೇ ಬೆಂಗಳೂರು ಹಾಗೂ ಕಾವೇರಿ ಜಲಾನಯನ ಪ್ರದೇಶದ ರೈತರ ಹಿತ ದೃಷ್ಟಿಯಿಂದ ಗಂಭೀರ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸುತ್ತೇವೆ ಎಂದು ಬರೆದಿದ್ದಾರೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ