ಎನ್‌ಪಿಎಸ್ ರದ್ದತಿ ಬಗ್ಗೆ ಕ್ಯಾಬಿನೆಟ್ನಲ್ಲಿ ಚರ್ಚಿಸಿ ತೀರ್ಮಾನಿಸುತ್ತೇವೆ: ಸಿಎಂ ಸಿದ್ದರಾಮಯ್ಯ
NPS ನೌಕರರ ಸಂಘದ ಪದಾಧಿಕಾರಿಗಳ ಸಭೆಯಲ್ಲಿ ಮಾತನಾಡಿದ ಸಿಎಂ ಸಿದ್ದರಾಮಯ್ಯ, ರಾಷ್ಟ್ರೀಯ ಪಿಂಚಣಿ ಯೋಜನೆ ರದ್ದತಿ ಬಗ್ಗೆ ಕ್ಯಾಬಿನೆಟ್ನಲ್ಲಿ ಚರ್ಚಿಸಿ ತೀರ್ಮಾನಿಸುತ್ತೇವೆ ಎಂದು ಹೇಳಿದ್ದಾರೆ. ಎನ್‌ಪಿಎಸ್ ರದ್ದುಪಡಿಸಿದ ಇತರೆ ರಾಜ್ಯಗಳಲ್ಲಿ ಅನುಸರಿಸಲಾದ ಕ್ರಮಗಳ ಕುರಿತು ಸಹ ಪರಿಶೀಲಿಸಲಾಗುವುದು ಎಂದು ಹೇಳಿದ್ದಾರೆ.
ಬೆಂಗಳೂರು, ಜನವರಿ 06: ರಾಷ್ಟ್ರೀಯ ಪಿಂಚಣಿ ಯೋಜನೆ (NPS) ರದ್ದತಿ ಬಗ್ಗೆ ಕ್ಯಾಬಿನೆಟ್ನಲ್ಲಿ ಚರ್ಚಿಸಿ ತೀರ್ಮಾನಿಸುತ್ತೇವೆ ಎಂದು ಸಿಎಂ ಸಿದ್ದರಾಮಯ್ಯ ಹೇಳಿದ್ದಾರೆ. NPS ನೌಕರರ ಸಂಘದ ಪದಾಧಿಕಾರಿಗಳ ಸಭೆಯಲ್ಲಿ ಮಾತನಾಡಿದ ಅವರು, ಎನ್‌ಪಿಎಸ್ ರದ್ದುಪಡಿಸಿದ ಇತರೆ ರಾಜ್ಯಗಳಲ್ಲಿ ಅನುಸರಿಸಲಾದ ಕ್ರಮಗಳ ಕುರಿತು ಸಹ ಪರಿಶೀಲಿಸಲಾಗುವುದು. ಆರ್ಥಿಕ ಇಲಾಖೆ ಕೂಡ ಈ ಬಗ್ಗೆ ಕೂಲಂಕಷವಾಗಿ ಪರಿಶೀಲಿಸಲಿದೆ ಎಂದು ಹೇಳಿದ್ದಾರೆ.
ರಾಜಸ್ಥಾನ, ಛತ್ತೀಸ್ಗಡ, ಜಾರ್ಖಂಡ್ ಸೇರಿದಂತೆ ಕೆಲವು ರಾಜ್ಯಗಳು ಹಳೆಯ ಪಿಂಚಣಿ ಯೋಜನೆಯನ್ನು ಮರಳಿ ಜಾರಿಗೊಳಿಸುವುದಾಗಿ ಹೇಳಿದ್ದವು. ಪಂಜಾಬ್ ಸರ್ಕಾರ ಕೂಡ ಹಳೆಯ ಪಿಂಚಣಿ ಯೋಜನೆ ಜಾರಿಗೊಳಿಸುವ ಬಗ್ಗೆ ಚಿಂತನೆ ನಡೆಸುತ್ತಿರುವುದಾಗಿ ಇತ್ತೀಚೆಗೆ ಹೇಳಿತ್ತು. ಕರ್ನಾಟಕದಲ್ಲಿಯೂ ಹಳೆಯ ಪಿಂಚಣಿ ಯೋಜನೆಯನ್ನು ಮರಳಿ ಜಾರಿಗೊಳಿಸಬೇಕು ಎಂಬ ಆಗ್ರಹ ಸರ್ಕಾರಿ ನೌಕರ ವೃಂದದಿಂದ ಕೇಳಿಬಂದಿತ್ತು.
ಎನ್‌ಪಿಎಸ್ ಎಂದರೇನು?
ಎನ್‌ಪಿಎಸ್ ಎಂಬುದು ರಾಷ್ಟ್ರೀಯ ಅಥವಾ ಹೊಸ ಪಿಂಚಣಿ ಯೋಜನೆಯಾಗಿದ್ದು, ಪಿಂಚಣಿ ಮತ್ತು ಹೂಡಿಕೆಗಳ ಸಂಯೋಜನೆಯಾಗಿದೆ. ಈ ಯೋಜನೆಯಲ್ಲಿ ಸರ್ಕಾರಿ ಉದ್ಯೋಗಿ ಕೂಡ ಮೂಲ ವೇತನದ ಶೇಕಡಾ 10ರಷ್ಟನ್ನು ನಿವೃತ್ತಿ ನಿಧಿಗೆ ಕೊಡುಗೆಯಾಗಿ ನೀಡಬೇಕು. ಉದ್ಯೋಗದಾತರು ಮೂಲ ವೇತನದ ಶೇಕಡಾ 14ರಷ್ಟನ್ನು ಕೊಡುಗೆಯಾಗಿ ನೀಡಬೇಕಾಗುತ್ತದೆ.
ಇದನ್ನೂ ಓದಿ: ಹಿಂದುಳಿದ ದಲಿತ ಮಠಾಧೀಶರ ನಿಯೋಗದಿಂದ ಸಿಎಂ ಸಿದ್ದರಾಮಯ್ಯ ಭೇಟಿ: ಜಾತಿ ಗಣತಿ ವರದಿ ಜಾರಿಗೆ ಒತ್ತಾಯ
ಈ ಯೋಜನೆಯ ದೊಡ್ಡ ಪ್ರಯೋಜನವೆಂದರೆ, ಖಾಸಗಿ ಕ್ಷೇತ್ರದ ಉದ್ಯೋಗಿಗೂ ಸೇರಿಕೊಳ್ಳಲು ಅವಕಾಶವಿದೆ. ನಿವೃತ್ತಿಯ ನಂತರ ನಾಗರಿಕರಿಗೆ ಹಣಕಾಸು ಭದ್ರತೆಯನ್ನು ಒದಗಿಸುವುದಕ್ಕಾಗಿ ಸರ್ಕಾರ ಈ ಯೋಜನೆಯನ್ನು ಜಾರಿಗೆ ತಂದಿದೆ. ಈ ಯೋಜನೆಯನ್ನು ಪಿಂಚಣಿ ನಿಧಿ ನಿಯಂತ್ರಣ ಮತ್ತು ಅಭಿವೃದ್ಧಿ ಪ್ರಾಧಿಕಾರ (PFRDA) ನಿರ್ವಹಿಸುತ್ತಿದೆ. ಪಿಎಫ್ಆರ್ಡಿಎ ಸ್ಥಾಪಿಸಿರುವ ರಾಷ್ಟ್ರೀಯ ಪಿಂಚಣಿ ವ್ಯವಸ್ಥೆ ಟ್ರಸ್ಟ್ (NPST) ಎನ್ಪಿಎಸ್ನ ಅಧಿಕೃತ ಮಾಲೀಕತ್ವ ಹೊಂದಿದೆ.
ಇದನ್ನೂ ಓದಿ: ಆಸ್ತಿ ತೆರಿಗೆ ಪಾವತಿಗೆ ಹೆಚ್ಚಿನ ಕಾಲಾವಕಾಶ, ಸರಳ ವಿಧಾನಕ್ಕೆ ಕಾನೂನು ತಿದ್ದುಪಡಿ: ಡಿಸಿಎಂ ಡಿಕೆ ಶಿವಕುಮಾರ್
ಆರ್ಥಿಕ ಇಲಾಖೆ ಅಪರ ಮುಖ್ಯ ಕಾರ್ಯದರ್ಶಿ ಎಲ್.ಕೆ.ಅತೀಕ್, ಮುಖ್ಯಮಂತ್ರಿಗಳ ಕಾರ್ಯದರ್ಶಿ ಡಾ. ತ್ರಿಲೋಕ್ ಚಂದ್ರ , ಎನ್‌ಪಿಎಸ್ ನೌಕರರ ಸಂಘದ ಅಧ್ಯಕ್ಷ ಶಾಂತಾರಾಂ ತೇಜ, ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ ಕೆ.ನಾಗೇಶ್, ಪ್ರಧಾನ ಕಾರ್ಯದರ್ಶಿ ಚಂದ್ರಶೇಖರ ನುಗ್ಲಿ ಹಾಗೂ ವಿವಿಧ ಸರ್ಕಾರಿ ಸಂಘಗಳ ಪದಾಧಿಕಾರಿಗಳು ಉಪಸ್ಥಿತರಿದ್ದರು.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.
Published On - 10:11 pm, Sat, 6 January 24