ಭಗವದ್ಗೀತೆಯಿಂದ ಹೊಟ್ಟೆ ತುಂಬಲ್ಲವೆಂದು ಅಂದು ಹೇಳಿದ್ದೇಕೆ? ಹೆಚ್ಡಿ ಕುಮಾರಸ್ವಾಮಿ ಸ್ಪಷ್ಟನೆ
ಸಚಿವ ಹೆಚ್.ಸಿ. ಮಹದೇವಪ್ಪ ಅವರು ಭಗವದ್ಗೀತೆ ಕುರಿತು ಮಾಡಿದ್ದ ಟೀಕೆಗೆ ಕೇಂದ್ರ ಸಚಿವ ಹೆಚ್.ಡಿ. ಕುಮಾರಸ್ವಾಮಿ ಅವರು ತಿರುಗೇಟು ನೀಡಿದ್ದಾರೆ. ಭಗವದ್ಗೀತೆ ಸತ್ಯದ ಜ್ಞಾನ ಸಂಪಾದನೆಗೆ ಸರ್ವೋತ್ಕೃಷ್ಟ ಗ್ರಂಥ ಎಂದು ನಾನು ಇಂದು ಭಾವಿಸುತ್ತೇನೆ ಎಂದು ಕುಮಾರಸ್ವಾಮಿ ಹೇಳಿದ್ದಾರೆ. ಮಹದೇವಪ್ಪಗೆ ಕುಮಾರಸ್ವಾಮಿ ನೀಡಿರುವ ತಿರುಗೇಟು ಇಲ್ಲಿದೆ.
ನವದೆಹಲಿ, ಡಿಸೆಂಬರ್ 8: ಭಗವದ್ಗೀತೆ ಓದಿದ ತಕ್ಷಣ ಹೊಟ್ಟೆ ತುಂಬಲ್ಲ ಎಂದು ಅಂದು ಹೇಳಿದ್ದು ನಿಜ ಎಂದು ಒಪ್ಪಿಕೊಂಡಿರುವ ಕೇಂದ್ರ ಸಚಿವ ಹೆಚ್ಡಿ ಕುಮಾರಸ್ವಾಮಿ, ಆ ಬಗ್ಗೆ ಸ್ಪಷ್ಟನೆ ನೀಡಿದ್ದಾರೆ. ದೆಹಲಿಯಲ್ಲಿ ಪತ್ರಿಕಾಗೋಷ್ಠಿ ನಡೆಸಿ ಮಾತನಾಡಿದ ಅವರು, ಅಂದಿನ ಸರ್ಕಾರ ತನ್ನ ವೈಫಲ್ಯವನ್ನು ಮುಚ್ಚಿಹಾಕಲು ಭಗವದ್ಗೀತೆಯನ್ನು ಮುಂದಿಟ್ಟುಕೊಳ್ಳುವುದು ಬೇಡ ಎಂಬರ್ಥದಲ್ಲಿ ಆ ಮಾತನ್ನು ಹೇಳಿದ್ದೆನೇ ವಿನಃ ಭಗವದ್ಗೀತೆಯ ಸಾರ್ವಕಾಲಿಕ ಮೌಲ್ಯವನ್ನು ಪ್ರಶ್ನಿಸಿಲ್ಲ ಎಂದು ಅವರು ಹೇಳಿದ್ದಾರೆ. ಜತೆಗೆ, ತಮ್ಮ ಹಿಂದಿನ ಹೇಳಿಕೆಯನ್ನು ಮುಂದಿಟ್ಟುಕೊಂಡು ಈಗ ವ್ಯಂಗ್ಯವಾಡುವ ಕಾಂಗ್ರೆಸ್ ನಾಯಕರಿಗೆ ತಿರುಗೇಟು ನೀಡಿದ್ದಾರೆ.
ತಮ್ಮ ನಿರಾಶೆಯ ಸಂದರ್ಭಗಳಲ್ಲಿ ಭಗವದ್ಗೀತೆ ಅಮೂಲ್ಯವಾದ ಸಹಾಯ ಮಾಡಿದೆ ಎಂದು ಮಹಾತ್ಮ ಗಾಂಧಿಜಿಯವರೇ ಹೇಳಿದ್ದಾರೆ ಎಂದ ಕುಮಾರಸ್ವಾಮಿ ಮಹಾತ್ಮ ಗಾಂಧೀಜಿಯವರ ಆತ್ಮಕಥನವನ್ನು ಉಲ್ಲೇಖಿಸಿದರು. ನಮ್ಮ ಸಂಸ್ಕೃತಿ, ಪ್ರತಿಯೊಬ್ಬ ಮನುಷ್ಯನಲ್ಲಿ ಇರಬೇಕಾದ ಶಾಂತಿ, ಸೌಮ್ಯತೆ, ಸಂಯಮ, ಬಾಂಧವ್ಯ, ಶಿಸ್ತುಬದ್ಧ ಬದುಕಿಗೆ ಭಗವದ್ಗೀತೆ ಪ್ರೇರಣೆ ನೀಡುತ್ತದೆ ಕುಮಾರಸ್ವಾಮಿ ಹೇಳಿದ್ದಾರೆ.
ಸಂವಿಧಾನದ ರಕ್ಷಣೆ ಬೇರೆ ವಿಚಾರ. ಸಂವಿಧಾನದಿಂದಲೇ ನಾನು ಮಂತ್ರಿ ಆದೆ. ಆದರೆ ಸಮಾಜದಲ್ಲಿ ಮನುಷ್ಯನ ಬದುಕು ಹೇಗಿರಬೇಕು ಎಂಬ ಸಂದೇಶ ಭಗವದ್ಗೀತೆಯಲ್ಲಿದೆ ಎಂದು ಕುಮಾರಸ್ವಾಮಿ ಪ್ರತಿಪಾದಿಸಿದ್ದಾರೆ.
