ಆರ್‌ಸಿಬಿ ಅಭಿಮಾನಿಗಳಿಗೆ ಡಿಕೆ ಶಿವಕುಮಾರ್ ಗುಡ್ ನ್ಯೂಸ್ ನೀಡಿದ ಬೆನ್ನಲ್ಲೇ ಬೆಂಗಳೂರಲ್ಲಿ ಐಪಿಎಲ್ಗೆ ಎದುರಾಯ್ತು ಹೊಸ ವಿಘ್ನ!
IPL 2026: ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಮತ್ತೆ ಐಪಿಎಲ್ ಪಂದ್ಯಗಳನ್ನು ಆಯೋಜಿಸುವ ಪ್ರಯತ್ನಗಳಿಗೆ ಹಿರಿಯ ವಕೀಲ ಅಮೃತೇಶ್ ವಿರೋಧ ವ್ಯಕ್ತಪಡಿಸಿದ್ದಾರೆ. ಪಂದ್ಯಗಳನ್ನು ಆಯೋಜಿಸದಂತೆ ಸರ್ಕಾರ ಹಾಗೂ ಹೈಕೋರ್ಟ್‌ಗೆ ಅವರು ಮನವಿ ಮಾಡಿದ್ದಾರೆ. ಐಪಿಎಲ್ ಸೇರಿ ಅಂತಾರಾಷ್ಟ್ರೀಯ ಮಟ್ಟದ ಪಂದ್ಯ ಆಯೋಜನೆಗೆ ಪ್ರಯತ್ನಿಸುವುದಾಗಿ ಡಿಸಿಎಂ ಡಿಕೆ ಶಿವಕುಮಾರ್ ಹೇಳಿದ ಬೆನ್ನಲ್ಲೇ ಈ ಮನವಿ ಸಲ್ಲಿಕೆಯಾಗಿರುವುದು ಮಹತ್ವ ಪಡೆದಿದೆ.

ಬೆಂಗಳೂರು, ಡಿಸೆಂಬರ್ 8: ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣದ (M Chinnaswamy Stadium) ಬಳಿ ಜೂನ್ ತಿಂಗಳಲ್ಲಿ ನಡೆದ ಆರ್‌ಸಿಬಿ (RCB) ವಿಜಯೋತ್ಸವದ ಸಂದರ್ಭದ ಕಾಲ್ತುಳಿತ ದುರಂತದ ನೆನಪು ಇನ್ನೂ ಮಾಸಿಲ್ಲ. ಘಟನೆಯಲ್ಲಿ 11 ಮಂದಿ ಸಾವನ್ನಪ್ಪಿ, ಅನೇಕರು ಗಂಭೀರವಾಗಿ ಗಾಯಗೊಂಡಿದ್ದರು. ಇದೀಗ ಐಪಿಎಲ್ (IPL) ಮ್ಯಾಚ್‌ಗಳನ್ನು ಮತ್ತೆ ಇದೇ ಕ್ರೀಡಾಂಗಣದಲ್ಲಿ ಆಯೋಜನೆ ಮಾಡುವುದಕ್ಕೆ ವಿರೋಧ ವ್ಯಕ್ತವಾಗಿದೆ. ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಐಪಿಎಲ್ ಪಂದ್ಯಗಳನ್ನು ಆಯೋಜನೆ ಮಾಡಬಾರದು ಎಂದು ಹಿರಿಯ ವಕೀಲ ಅಮೃತೇಶ್ ಎಂಬವರು ಸಂಬಂಧಪಟ್ಟ ಎಲ್ಲ ಇಲಾಖೆ, ಅಧಿಕಾರಿಗಳಿಗೆ ಮನವಿ ಮಾಡಿದ್ದಾರೆ. ಹೈಕೋರ್ಟ್‌ಗೂ ಅಪೀಲು ಸಲ್ಲಿಸಿದ್ದಾರೆ.
ಡಿಸಿಎಂ ಡಿಕೆ ಶಿವಕುಮಾರ್ ಹೇಳಿಕೆ ಬಳಿಕ ಹೊಸ ತಿರುವು
ಕರ್ನಾಟಕ ರಾಜ್ಯ ಕ್ರಿಕೆಟ್ ಅಸೋಸಿಯೇಷನ್ (ಕೆಎಸ್‌ಸಿಎ) ಚುನಾವಣೆಯಲ್ಲಿ ಮತದಾನದ ಬಳಿಕ ಭಾನುವಾರ ಮಾಧ್ಯಮಗಳಿಗೆ ಪ್ರತಿಯಿಸಿದ್ದ ಡಿಸಿಎಂ ಡಿಕೆ ಶಿವಕುಮಾರ್, ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಮತ್ತೆ ಅಂತಾರಾಷ್ಟ್ರೀಯ ಮಟ್ಟದ ಮ್ಯಾಚ್ ನಡೆಯುವಂತೆ ಮಾಡಲು ಪ್ರಯತ್ನಿಸುವುದಾಗಿ ಹೇಳಿದ್ದರು. ಐಪಿಎಲ್ ಪಂದ್ಯಗಳ ಆಯೋಜನೆಗೆ ಅನುಮತಿ ದೊರಕಿಸಿಕೊಡಲು ಯತ್ನಿಸುವುದಾಗಿ ಹೇಳಿದ್ದರು. ಈ ಹೇಳಿಕೆಯ ಬೆನ್ನಲ್ಲೇ ಅಮೃತೇಶ್ ಪಂದ್ಯಗಳ ಆಯೋಜನೆಗೆ ಅನುಮತಿ ನೀಡಬಾರದು ಎಂದು ಅಪೀಲ್ ಸಲ್ಲಿಸಿದ್ದಾರೆ.
ವಕೀಲ ಅಮೃತೇಶ್ ಅವರು ರಾಜ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿ, ಗೃಹ ಇಲಾಖೆ, ಪೊಲೀಸ್ ಇಲಾಖೆ, ಅಗ್ನಿಶಾಮಕ ಹಾಗೂ ತುರ್ತು ಸೇವೆಗಳು, ಪಿಡಬ್ಲ್ಯೂಡಿ, ಕೆಎಸ್‌ಸಿಎ ಹಾಗೂ ಹೈಕೋರ್ಟ್‌ಗೆ ವಿವರವಾದ ಪತ್ರ ಸಲ್ಲಿಸಿದ್ದು ಹಲವು ಅಂಶಗಳನ್ನು ಉಲ್ಲೇಖಿಸಿದ್ದಾರೆ.
ವಕೀಲ ಅಮೃತೇಶ್ ಮನವಿಯಲ್ಲಿರುವ ಅಂಶಗಳು
- ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ಕಾಲ್ತುಳಿತ ಘಟನೆಯ ನಂತರದಲ್ಲಿ ಹೈಕೋರ್ಟ್ನಲ್ಲಿ ಸ್ವಯಂಪ್ರೇರಿತ ವಿಚಾರಣೆಗಳು ಬಾಕಿ ಇವೆ.
- ಸಾರ್ವಜನಿಕ ಸಭೆಗಳಿಗೆ ಅಸುರಕ್ಷಿತವೆಂದು ತಜ್ಞರ ವರದಿಗಳು ತಿಳಿಸಿವೆ.
- ಶಾಸನಬದ್ಧ ಸುರಕ್ಷತಾ ಅನುಮತಿಗಳ ಕೊರತೆ ಇದೆ.
- ದೇಶಾದ್ಯಂತ ಕಾಲ್ತುಳಿತ ಘಟನೆಗಳ ಪುನರಾವರ್ತನೆಯಾಗಿದೆ.
- ಕ್ರೀಡಾಂಗಣದ ಸ್ಥಳ ಸಾರ್ವಜನಿಕ ಸುರಕ್ಷತೆಗೆ ಅಪಾಯಕಾರಿಯಾಗಿದೆ.
- ಕಾರ್ಯಕ್ರಮಗಳಾಗುವ ಸಮಯದಲ್ಲಿ ಜನಸಂದಣಿಗೆ ಸೂಕ್ತ ನಿರ್ವಹಣೆ ಸಾಧ್ಯವಿಲ್ಲ.
- ಬೆಂಗಳೂರಿನ ಹೊರವಲಯ ಅಥವಾ ಇತರೆ ನಗರಗಳಲ್ಲಿ ಸುರಕ್ಷಿತ ಪರ್ಯಾಯ ಕ್ರೀಡಾಂಗಣಗಳು ಲಭ್ಯವಿದ್ದು, ಅಲ್ಲಿ ಆಯೋಜಿಸುವುದೇ ಉತ್ತಮ.
- ಆಧುನಿಕ ಕ್ರಿಕೆಟ್ ಪ್ರಸಾರ ಆಧಾರಿತವಾಗಿದ್ದು, ಜನಸಂದಣಿ ಇಲ್ಲದೆ ನೇರ ಪ್ರಸಾರ ಮಾಡಬಹುದು.
ಇದನ್ನೂ ಓದಿ: ನಿರಾಸೆಯಲ್ಲಿದ್ದ ಆರ್‌ಸಿಬಿ ಅಭಿಮಾನಿಗಳಿಗೆ ಗುಡ್ ನ್ಯೂಸ್
ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಐಪಿಎಲ್ ಮತ್ತು ಇತರ ವಾಣಿಜ್ಯ ಪಂದ್ಯಗಳಿಗೆ ಅನುಮತಿ ನಿರಾಕರಿಸುವಂತೆ ರಾಜ್ಯ ಸರ್ಕಾರ ಮತ್ತು ಸಂಬಂಧಪಟ್ಟ ಎಲ್ಲಾ ಅಧಿಕಾರಿಗಳನ್ನು ವಕೀಲ ಅಮೃತೇಶ್ ಒತ್ತಾಯಿಸಿದ್ದಾರೆ.
ವರದಿ: ವಿಕಾಸ್, ಟಿವಿ9 ಬೆಂಗಳೂರು
ಕರ್ನಾಟಕದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 9:31 am, Mon, 8 December 25
