AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

IPL 2026: ನಿರಾಸೆಯಲ್ಲಿದ್ದ ಆರ್​​​ಸಿಬಿ ಅಭಿಮಾನಿಗಳಿಗೆ ಗುಡ್​​ ನ್ಯೂಸ್

19ನೇ ಆವೃತ್ತಿಯ ಐಪಿಎಲ್‌ನಲ್ಲಿ ರಾಯಲ್‌ ಚಾಲೆಂಜರ್ಸ್‌ ಬೆಂಗಳೂರು (RCB) ತಂಡದ ಎಲ್ಲಾ ಪಂದ್ಯಗಳು ಬೆಂಗಳೂರಿನಿಂದಲೇ ಎತ್ತಂಗಡಿ ಆಗುವ ಆತಂಕದಲ್ಲಿದ್ದ ಅಭಿಮಾನಿಗಳಿಗೆ ಗುಡ್‌ನ್ಯೂಸ್‌ ಸಿಕ್ಕಿದೆ. ಆರ್​​ಸಿಬಿ ವಿಜಯೋತ್ಸವ ಆಚರಣೆ ವೇಳೆ ಸಂಭವಿಸಿದ್ದ ಕಾಲ್ತುಳಿತದಿಂದಾಗಿ ಚಿನ್ನಸ್ವಾಮಿ ಸ್ಟೇಡಿಯಂ ಅಪಖ್ಯಾತಿಗೆ ಒಳಗಾಗಿದೆ. ಇದೀಗ ಡಿಕೆಶಿ, ಕ್ರೀಡಾಂಗಣಕ್ಕೆ ಅಂತಾರಾಷ್ಟ್ರೀಯ ಕ್ರಿಕೆಟ್ ಪಂದ್ಯಗಳನ್ನು ಮರಳಿ ತರುವ ಭರವಸೆ ನೀಡಿದ್ದಾರೆ.

IPL 2026: ನಿರಾಸೆಯಲ್ಲಿದ್ದ ಆರ್​​​ಸಿಬಿ ಅಭಿಮಾನಿಗಳಿಗೆ ಗುಡ್​​ ನ್ಯೂಸ್
Rcb
ರಮೇಶ್ ಬಿ. ಜವಳಗೇರಾ
|

Updated on: Dec 07, 2025 | 2:37 PM

Share

ಬೆಂಗಳೂರು, (ಡಿಸೆಂಬರ್ 07): 2026ರ ಐಪಿಎಲ್‌ಗೆ  (IPL)ಆರ್‌ಸಿಬಿ (Royal Challengers Bengaluru) ಎಲ್ಲಾ ಪಂದ್ಯಗಳು ಬೆಂಗಳೂರಿನಲ್ಲೇ ನಡೆಯಲಿದೆ ಎಂದು ಖುದ್ದು ಡಿಸಿಎಂ ಡಿಕೆ ಶಿವಕುಮಾರ್‌ (DK Shivakumar) ಘೋಷಣೆ ಮಾಡಿದ್ದಾರೆ. ಕರ್ನಾಟಕ ರಾಜ್ಯ ಕ್ರಿಕೆಟ್ ಅಸೋಸಿಯೇಷನ್ (KSCA) ಚುನಾವಣೆಯಲ್ಲಿ ಮತದಾನದ ಬಳಿಕ ಮಾಧ್ಯಮಗಳಿಗೆ ಪ್ರತಿಯಿಸಿದ ಡಿಕೆ ಶಿವಕುಮಾರ್, ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣಕ್ಕೆ ಅಂತಾರಾಷ್ಟ್ರೀಯ ಕ್ರಿಕೆಟ್ ಪಂದ್ಯಗಳನ್ನು ಮರಳಿ ತರುವ ಭರವಸೆ ನೀಡಿದ್ದಾರೆ. ಅದರಲ್ಲೂ ಮುಖ್ಯವಾಗಿ 2026ರ ಐಪಿಎಲ್ ಪಂದ್ಯಗಳನ್ನೂ ಇಲ್ಲಿಯೇ ನಡೆಸಲಾಗುವುದು ಎಂದು ಸ್ಪಷ್ಟಪಡಿಸಿದ್ದಾರೆ. ಈ ಮೂಲಕ ನಿರಾಸೆಯಲ್ಲಿದ್ದ ಆರ್​​ಸಿಬಿ ಅಭಿಮಾನಿಗಳಿಗೆ ಸಿಹಿ ಸುದ್ದಿ ನೀಡಿದ್ದಾರೆ.

ಇತ್ತೀಚೆಗೆ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಕಾಲ್ತುಳಿತ ಸಂಭವಿಸಿ 11 ಜನರು ದಾರುಣವಾಗಿ ಸಾವನ್ನಪ್ಪಿದ್ದರು. ಈ ಹಿನ್ನೆಲೆಯಲ್ಲಿ ಬೆಂಗಳೂರಿನಲ್ಲಿ ನಡೆಯಬೇಕಿದ್ದ ಪಂದ್ಯಗಳನ್ನು ಬೇರೆ ಮೈದಾನಗಳಿಗೆ ಸ್ಥಳಾಂತರ ಮಾಡಲಾಗಿತ್ತು. ಹೀಗಾಗಿ ಸಹಜವಾಗಿಯೇ ಆರ್​​ಸಿಬಿ ಅಭಿಮಾನಿಗಳಿಗೆ ನಿರಾಸೆಯಾಗಿತ್ತು. ಈ ಬಗ್ಗೆ ಡಿಕೆಶಿ ಮಾತನಾಡಿ, ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಕಳೆದು ಹೋಗುತ್ತಿರುವ ಅಂತರಾಷ್ಟ್ರೀಯ ಪಂದ್ಯಗಳನ್ನು ನಾವು ವಾಪಸ್ ತರುತ್ತೇವೆ. ಬೆಂಗಳೂರು ಯಾವಾಗಲೂ ಪ್ರಮುಖ ಕ್ರಿಕೆಟ್ ಹಬ್ ಆಗಿ ಉಳಿಯಬೇಕು. 2026ರ ಐಪಿಎಲ್ ಪಂದ್ಯಗಳು ಸಹ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿಯೇ ನಡೆಯುತ್ತವೆ. ಐಪಿಎಲ್‌ನಂತಹ ಬೃಹತ್ ಟೂರ್ನಿಗಳನ್ನು ಬೆಂಗಳೂರು ಕಳೆದುಕೊಳ್ಳದಂತೆ ನೋಡಿಕೊಳ್ಳುತ್ತೇವೆ. ನಾನು ಕ್ರಿಕೆಟ್‌ ಲವರ್‌. RCB ನಮ್ಮ ಹೆಮ್ಮೆ. ನಾನು ಎಲ್ಲಾ ಸರಿ ಮಾಡುತ್ತೇನೆ ಎಂದು ಭರವಸೆ ನೀಡಿದರು.

ಇದನ್ನೂ ಓದಿ: IPL 2026: ಚಿನ್ನಸ್ವಾಮಿ ಸ್ಟೇಡಿಯಂ ನಿಷೇಧ: RCB ಕಣಕ್ಕಿಳಿಯುವುದು ಎಲ್ಲಿ?

ಬೆಂಗಳೂರಿನಲ್ಲಿ ಏನು ಅನಾಹುತ ಆಗಿದೆ, ಅದೆಲ್ಲವನ್ನ ತಪ್ಪಿಸಿ ಬೆಂಗಳೂರು ಗೌರವ ಉಳಿಸುವ ಕೆಲಸ ಮಾಡ್ತೀವಿ. ಕಾನೂನು ಚೌಕಟ್ಟಿನಲ್ಲಿ ಕ್ರೌಡ್‌ ಮ್ಯಾನೇಜ್ಮೆಂಟ್‌ ಗಮನದಲ್ಲಿಟ್ಟುಕೊಂಡು ಸ್ಟೇಡಿಯಂ ಬಳಸುತ್ತೇವೆ. ಇದಕ್ಕೆ ಪರ್ಯಾಯವಾಗಿ ಬೇರೆ ದೊಡ್ಡ ಸ್ಟೇಡಿಯಂ ಮಾಡುತ್ತೇವೆ ಎಂದು ಹೇಳಿದರು.

ಕೆಎಸ್‌ಸಿಎ ಚುನಾವಣಾ ಕಣದಲ್ಲಿರುವ ಎಲ್ಲಾ ಅಭ್ಯರ್ಥಿಗಳೂ ತಮ್ಮ ಆಪ್ತರು. ಈ ಚುನಾವಣೆಯಲ್ಲಿ ನಿಂತಿರುವ ಬ್ರಿಜೇಶ್ ಪಟೇಲ್, ಅನಿಲ್ ಕುಂಬ್ಳೆ, ವೆಂಕಟೇಶ್ ಪ್ರಸಾದ್ ಹೀಗೆ ಎಲ್ಲರೂ ನನಗೆ ಬೇಕಾದವರೇ. ನಾನು ಚಿಕ್ಕವನಿರುವಾಗಲೇ ಕೆಎಸ್‌ಸಿಎಯಲ್ಲಿ ನನಗೆ ಸದಸ್ಯತ್ವ ನೀಡಲಾಗಿತ್ತು. ಯಾರೇ ಚುನಾವಣೆಯಲ್ಲಿ ಗೆದ್ದು ಅಧಿಕಾರಕ್ಕೆ ಬಂದರೂ, ಕರ್ನಾಟಕ ರಾಜ್ಯ ಕ್ರಿಕೆಟ್ ಸಂಸ್ಥೆಯನ್ನು ಇನ್ನಷ್ಟು ಎತ್ತರಕ್ಕೆ ಬೆಳೆಸಬೇಕು. ಯುವ ಪ್ರತಿಭೆಗಳನ್ನು ಪ್ರೋತ್ಸಾಹಿಸಬೇಕು ಎಂಬ ಆಶಯ ತಮಗಿದೆ ಎಂದು ತಿಳಿಸಿದರು.

ಜೂನ್‌ 4ರಂದು ಬೆಂಗಳೂರು ಚಿನ್ನಸ್ವಾಮಿ ಕ್ರೀಡಾಂಗಣದ ಬಳಿಕ ಸಂಭವಿಸಿದ ಕಾಲ್ತುಳಿತ ದುರಂತವೇ ಟೂರ್ನಿ ಸ್ಥಳಾಂತರಕ್ಕೆ ಪ್ರಮುಖ ಕಾರಣ ಎಂದು ಹೇಳಲಾಗುತ್ತಿದೆ. ಜೂನ್‌ 3ರ ರಾತ್ರಿ ಐಪಿಎಲ್‌ ಟ್ರೋಫಿ ಗೆದ್ದು 17 ವರ್ಷಗಳ ವನವಾಸಕ್ಕೆ ಅಂತ್ಯ ಹಾಡಿತ್ತು. ಮರುದಿನ ಚಿನ್ನಸ್ವಾಮಿ ಕ್ರೀಡಾಂಗಣದ ಬಳಿ ಕಾಲ್ತುಳಿತದ ದುರಂತ ನಡೆದು 11 ಜನ ಅಭಿಮಾನಿಗಳು ಪ್ರಾಣ ಕಳೆದುಕೊಂಡಿದ್ದರು. ಈ ಘಟನೆಯಿಂದ ಸುರಕ್ಷತೆ ಬಗ್ಗೆ ಕಳವಳ ಹೆಚ್ಚಾಗಿದೆ. ಚಿನ್ನಸ್ವಾಮಿ ಕ್ರೀಡಾಂಗಣವನ್ನು ದೊಡ್ಡ ಪ್ರಮಾಣದ ಕಾರ್ಯಕ್ರಮಗಳಿಗೆ ಸೂಕ್ತವಲ್ಲ ಮತ್ತು ಅಸುರಕ್ಷಿತ ಎಂದು ಕರ್ನಾಟಕ ಸರ್ಕಾರ ನೇಮಿಸಿದ ನ್ಯಾಯಮೂರ್ತಿ ಜಾನ್ ಮೈಕೆಲ್ ಕುನ್ಹಾ ಸಮಿತಿ ಹೇಳಿತ್ತು. ಹೀಗಾಗಿ ಮುಂಬರುವ ಆವೃತ್ತಿಯಲ್ಲಿ ಆರ್‌ಸಿಬಿ ತವರು ಮೈದಾನದ ಎಲ್ಲಾ ಪಂದ್ಯಗಳನ್ನು ಪುಣೆಗೆ ಶಿಫ್ಟ್‌ ಮಾಡಲು ಬಿಸಿಸಿಐ ಹಾಗೂ ಐಪಿಎಲ್‌ ಆಡಳಿತ ಮಂಡಳಿ ಚರ್ಚಿಸುತ್ತಿದೆ ಎಂದು ವರದಿಗಳು ತಿಳಿಸಿವೆ. ಆದ್ರೆ ಈ ಬಗ್ಗೆ ಐಪಿಎಲ್‌ ಮಂಡಳಿಯಾಗಲಿ, ಬಿಸಿಸಿಐ ಆಗಲಿ ಅಧಿಕೃತ ಹೇಳಿಕೆ ನೀಡಿಲ್ಲ.