ಸಹಜ ಸ್ಥಿತಿಯತ್ತ ಬೆಂಗಳೂರು ಏರ್ಪೋರ್ಟ್: ದೆಹಲಿ, ಮುಂಬೈ ಸೇರಿ ಹಲವೆಡೆಗೆ ಇಂಡಿಗೋ ವಿಮಾನ ಸಂಚಾರ ಶುರು
ಇಂಡಿಗೋ ವಿಮಾನಗಳ ಸಂಚಾರ ಬೆಂಗಳೂರು ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಈಗ ಕ್ರಮೇಣ ಸಹಜ ಸ್ಥಿತಿಗೆ ಮರಳುತ್ತಿದೆ. ವಿಮಾನ ಹಾರಾಟ ಭಾಗಶಃ ಸುಧಾರಿಸಿದ್ದು, ಪ್ರಯಾಣಿಕರಿಗೆ ತುಸು ನೆಮ್ಮದಿ ತಂದಿದೆ. ಏರ್ಪೋರ್ಟ್ ಮೂಲಗಳ ಪ್ರಕಾರ, ಮುಂದಿನ ಎರಡು ದಿನಗಳಲ್ಲಿ ಸಂಪೂರ್ಣ ಕಾರ್ಯಾಚರಣೆ ಶುರುವಾಗುವ ನಿರೀಕ್ಷೆ ಇದೆ.

ಬೆಂಗಳೂರು, ಡಿಸೆಂಬರ್ 8: ಬೆಂಗಳೂರು ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ (KIA) ಇಂಡಿಗೋ (IndiGo) ಏರ್‌ಲೈನ್ಸ್ ವಿಮಾನಗಳ ಸಂಚಾರ ಕ್ರಮೇಣ ಸಹಜ ಸ್ಥಿತಿಗೆ ಮರಳುತ್ತಿದೆ. ಕಳೆದ ಕೆಲವು ದಿನಗಳಿಂದ ತೀವ್ರ ವ್ಯತ್ಯಯ ಕಂಡಿದ್ದ ವಿಮಾನ ಸಂಚಾರ ಇಂದು ಬೆಳಗ್ಗೆಯಿಂದಲೇ ಭಾಗಶಃ ಸರಾಗವಾಗಿರುವುದು ಪ್ರಯಾಣಿಕರಿಗೆ ಸ್ವಲ್ಪ ನೆಮ್ಮದಿ ನೀಡಿದೆ. ಸೋಮವಾರ ಬೆಳಗ್ಗೆಯಿಂದಲೇ ದೆಹಲಿ, ಮುಂಬೈ ಸೇರಿದಂತೆ ದೇಶದ ವಿವಿಧ ನಗರಗಳಿಗೆ ಇಂಡಿಗೋ ವಿಮಾನಗಳ ಹಾರಾಟ ಪುನರಾರಂಭಗೊಂಡಿದೆ. ಹಾರಾಟ ಚೇತರಿಕೆಯಾಗುತ್ತಿದ್ದಂತೆಯೇ ಇಂಡಿಗೋ ಕೌಂಟರ್ ಮುಂದೆ ಪ್ರಯಾಣಿಕರ ದೀರ್ಘ ಸರದಿ ಸಾಲು ಕಂಡುಬಂದಿದೆ.
ವೀಕೆಂಡ್ ಮುಗಿದ ಪರಿಣಾಮ ಹೆಚ್ಚಿನ ಪ್ರಯಾಣಿಕರು ಏರ್ಪೋರ್ಟ್‌ಗೆ ಆಗಮಿಸಿದ್ದಾರೆ. ಡಿಪಾರ್ಚರ್ ಗೇಟ್‌ಗಳ ಮುಂದೆ ಟಿಕೆಟ್ ಹಿಡಿದು ಸರದಿ ಸಾಲಿನಲ್ಲಿ ನಿಂತಿರುವ ಪ್ರಯಾಣಿಕರ ಸಂಖ್ಯೆ ಹೆಚ್ಚಾಗಿದೆ. ಭಾನುವಾರ ಸಂಜೆಯಿಂದಲೇ ಏರ್ಪೋರ್ಟ್‌ಗೆ ಆಗಮಿಸುವವರ ಸಂಖ್ಯೆ ಏರಿಕೆಯಾಗಿದೆ ಎಂದು ಏರ್ಪೋರ್ಟ್ ಮೂಲಗಳು ತಿಳಿಸಿವೆ.
60ಕ್ಕೂ ಹೆಚ್ಚು ಇಂಡಿಗೋ ವಿಮಾನಗಳು ರದ್ದು
ಆದಾಗ್ಯೂ, ದೆಹಲಿ, ಲಖನೌ, ಮುಂಬೈ, ಹೈದರಾಬಾದ್, ಭುವನೇಶ್ವರ, ರಾಯಪುರ ಸೇರಿದಂತೆ ವಿವಿಧೆಡೆಗೆ ತೆರಳಬೇಕಿದ್ದ 60ಕ್ಕೂ ಅಧಿಕ ವಿಮಾನಗಳ ಹಾರಾಟ ರದ್ದಾಗಿದೆ. ವಿಮಾನ ರದ್ದು ಬಗ್ಗೆ 5 ಗಂಟೆ ಮುಂಚಿತವಾಗಿ ಪ್ರಯಾಣಿಕರಿಗೆ ಸಂದೇಶ ಕಳುಹಿಸಲಾಗಿದೆ. ಹೀಗಾಗಿ ಪ್ರಯಾಣಿಕರು ಏರ್ಪೋರ್ಟ್‌ಗೆ ಬಂದಿಲ್ಲ.
ದಟ್ಟ ಮಂಜು ಕವಿದ ಹಿನ್ನೆಲೆ ವಿಮಾನಗಳ ಹಾರಾಟದಲ್ಲಿ ವಿಳಂಬ
ಕೆಂಪೇಗೌಡ ವಿಮಾನ ನಿಲ್ದಾಣದಲ್ಲಿ ಬೆಳ್ಳಂ ಬೆಳಗ್ಗೆ ದಟ್ಟವಾದ ಮಂಜು ಮುಸುಕಿದ ವಾತಾವರಣ ಇದ್ದು, 20 ಕ್ಕೂ ಅಧಿಕ ವಿಮಾನಗಳ ಹಾರಾಟದಲ್ಲಿ ವಿಳಂಬವಾಗಿದೆ. ದಟ್ಟ ಮಂಜು ಕವಿದ ಹಿನ್ನೆಲೆ ಸ್ವಷ್ಟವಾಗಿ ರನ್ ವೇ ಕಾಣಿಸದಿರುವುದೇ ಇದಕ್ಕೆ ಕಾರಣವಾಗಿದೆ.
ಸದ್ಯ ದೇಶದಾದ್ಯಂತ ಶೇ 75ರಷ್ಟು ಇಂಡಿಗೋ ವಿಮಾನಗಳು ಕಾರ್ಯಾಚರಣೆ ನಡೆಸುತ್ತಿವೆ. ಇನ್ನೆರಡು ದಿನದಲ್ಲಿ ಪೂರ್ಣ ಪ್ರಮಾಣದಲ್ಲಿ ಎಲ್ಲಾ ವಿಮಾನಗಳು ಎಂದಿನಂತೆ ಪ್ರಯಾಣಿಕರ ಸೇವೆಗೆ ಲಭ್ಯವಾಗಲಿವೆ ಎಂದು ಇಂಡಿಗೋ ಸಿಇಒ ಪೀಟರ್ ಎಲ್ಬರ್ಸ್ ಭಾನುವಾರ ಮಾಹಿತಿ ಹಂಚಿಕೊಂಡಿದ್ದರು. ಆದಾಗ್ಯೂ, ಇಂದು ಕೂಡ ಕೆಲ ವಿಮಾನಗಳು ರದ್ದಾಗುವ ಸಾಧ್ಯತೆಯಿದೆ. ಡಿಸೆಂಬರ್ 15 ರವರೆಗೆ ಬುಕಿಂಗ್ ಆಗಿರುವ ಟಿಕೆಟ್ಗಳ ಕ್ಯಾನ್ಸಲೇಷನ್ ಮತ್ತು ಪ್ರವಾಸ ಮುಂದೂಡಲು ಸಂಪೂರ್ಣ ವಿನಾಯಿತಿ ನೀಡುವುದಾಗಿ ಇಂಡಿಗೋ ತಿಳಿಸಿದೆ.
610 ಕೋಟಿ ರೂ. ರೀಫಂಡ್: 3,000 ಲಗೇಜ್ ವಾಪಸ್
ಕೇಂದ್ರ ಸರ್ಕಾರದ ಖಡಕ್ ಸೂಚನೆ ಬೆನ್ನಲ್ಲೇ ಇಂಡಿಗೋ ಸಂಸ್ಥೆ ಪ್ರಯಾಣಿಕರಲ್ಲಿ ಕ್ಷಮೆಯಾಚಿಸಿದ್ದು, ಒಟ್ಟು 610 ಕೋಟಿ ರೂಪಾಯಿ ಟಿಕೆಟ್ ಹಣವನ್ನು ಮರುಪಾವತಿ ಮಾಡಿದೆ. ದೇಶಾದ್ಯಂತ ಪ್ರಯಾಣಿಕರಿಗೆ 3,000 ಬ್ಯಾಗೇಜ್ಗಳನ್ನು ವಾಪಸ್ ತಲುಪಿಸಿದೆ.
ಏತನ್ಮಧ್ಯೆ, ಇಂಡಿಗೋ ಸಿಇಒಗೆ ನಾಗರಿಕ ವಿಮಾನಯಾನ ನಿರ್ದೇಶನಾಲಯ (ಡಿಜಿಸಿಎ) ಶೋಕಾಸ್ ನೋಟಿಸ್ ಜಾರಿ ಮಾಡಿದ್ದು, 24 ಗಂಟೆಯಲ್ಲಿ ಉತ್ತರ ಕೊಡುವಂತೆ ಸೂಚನೆ ನೀಡಿತ್ತು. ಆ ಗಡುವನ್ನು ಇಂದು ಸಂಜೆ 6 ಗಂಟೆ ವಿಸ್ತರಣೆ ಮಾಡಲಾಗಿದೆ.
ಇದನ್ನೂ ಓದಿ: ಇಂಡಿಗೋ ಮಾಲೀಕ ಯಾರು? ಅವರ ಬಳಿ ಎಷ್ಟಿದೆ ಆಸ್ತಿ? ದಿಢೀರ್ ಬಿಕ್ಕಟ್ಟಿಗೆ ಕಾರಣ ಏನು ಗೊತ್ತೇ? ಇಲ್ಲಿದೆ ಸಮಗ್ರ ಮಾಹಿತಿ
ಕಳೆದೊಂದು ವಾರದಿಂದ ದೇಶದ ಅತಿ ದೊಡ್ಡ ವಿಮಾನಯಾನ ಸಂಸ್ಥೆ ಇಂಡಿಗೋ ವಿಮಾನಗಳ ಹಾರಾಟದಲ್ಲಿ ವಿಳಂಬ, ಪ್ರಯಾಣ ರದ್ದತಿ ಇತ್ಯಾದಿ ಎಡವಟ್ಟುಗಳಾಗಿ ಇಡೀ ದೇಶದಲ್ಲೇ ಕೋಲಾಹಲ ಉಂಟಾಗಿತ್ತು. ಲಕ್ಷಾಂತರ ಪ್ರಯಾಣಿಕರು ನರಕಯಾತನೆ ಅನುಭವಿಸುವಂತಾಗಿತ್ತು. ಇದೀಗ ಎಲ್ಲವೂ ಸಹಜ ಸ್ಥಿತಿಗೆ ಮರಳುತ್ತಿದೆ.
ಕರ್ನಾಟಕದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 8:09 am, Mon, 8 December 25



