ಕೊರೊನಾ ತಡೆಗೆ ಮಹಾರಾಷ್ಟ್ರ, ಕೇರಳದಲ್ಲಿ ಟಫ್​ ರೂಲ್ಸ್​.. ಕರ್ನಾಟಕಕ್ಕೂ ಅನಿವಾರ್ಯವಾಯ್ತಾ ಕಠಿಣ ನಿಯಮಾವಳಿಗಳು

|

Updated on: Apr 14, 2021 | 7:19 AM

ಮಹಾರಾಷ್ಟ್ರದಲ್ಲಿ ನಿತ್ಯ 60 ಸಾವಿರಕ್ಕೂ ಹೆಚ್ಚು ಪ್ರಕರಣಗಳು ಪತ್ತೆಯಾಗುತ್ತಿವೆ. ಕೇರಳದಲ್ಲಿ ಈಗಾಗಲೇ ಒಟ್ಟು ಸೋಂಕಿತರ ಸಂಖ್ಯೆ 12 ಲಕ್ಷದ ಗಡಿಗೆ ಬಂದು ನಿಂತಿದೆ. ಹೀಗಾಗಿ ಕೊರೊನಾ ನಿಯಂತ್ರಿಸಲು ಕಠಿಣ ನಿಯಮಗಳೇ ಅನಿವಾರ್ಯ ಎನ್ನುವಂತಹ ಸ್ಥಿತಿ ನಿರ್ಮಾಣವಾಗಿದೆ.

ಕೊರೊನಾ ತಡೆಗೆ ಮಹಾರಾಷ್ಟ್ರ, ಕೇರಳದಲ್ಲಿ ಟಫ್​ ರೂಲ್ಸ್​.. ಕರ್ನಾಟಕಕ್ಕೂ ಅನಿವಾರ್ಯವಾಯ್ತಾ ಕಠಿಣ ನಿಯಮಾವಳಿಗಳು
ಪ್ರಾತಿನಿಧಿಕ ಚಿತ್ರ
Follow us on

ದೆಹಲಿ: ಕೊರೊನಾ 2ನೇ ಅಲೆ ದಿನದಿಂದ ದಿನಕ್ಕೆ ಇಡೀ ದೇಶವನ್ನೇ ಆವರಿಸುತ್ತಿದೆ. ಈ ನಡುವೆ ಅನೇಕ ರಾಜ್ಯಗಳಲ್ಲಿ ಹಲವು ನಿರ್ಬಂಧಗಳನ್ನ ಜಾರಿಗೊಳಿಸಲಾಗಿದ್ದು, ಸೋಂಕು ತೀವ್ರವಾಗಿ ಹರಡುತ್ತಿರುವ ಮಹಾರಾಷ್ಟ್ರ ಹಾಗೂ ಕೇರಳ ರಾಜ್ಯಗಳಲ್ಲಿ ಕಠಿಣ ನಿಯಮಗಳನ್ನು ಜಾರಿಗೆ ತರಲಾಗಿದೆ. ಕೊರೊನಾ ಸುಳಿಯಲ್ಲಿ ಮಹಾರಾಷ್ಟ್ರ ನಲುಗಿ ಹೋಗಿದ್ದು ಕೇರಳದಲ್ಲೂ ಕೊರೊನಾ ಕಾರುಬಾರು ಜೋರಾಗಿದೆ. ಹೀಗಾಗಿ ಈ ಎರಡೂ ರಾಜ್ಯಗಳಲ್ಲಿ ಕೊರೊನಾ ನಿಯಂತ್ರಣಕ್ಕೆ ಕಠಿಣ ನಿಯಮಾವಳಿಗಳನ್ನು ಹೇರುವ ಅನಿವಾರ್ಯತೆ ಎದುರಾಗಿದೆ.

ಮಹಾರಾಷ್ಟ್ರದಲ್ಲಿ ನಿತ್ಯ 60 ಸಾವಿರಕ್ಕೂ ಹೆಚ್ಚು ಪ್ರಕರಣಗಳು ಪತ್ತೆಯಾಗುತ್ತಿವೆ. ಹೀಗಾಗಿ ಮಹಾರಾಷ್ಟ್ರ ಸರ್ಕಾರ ಮತ್ತೆ ಲಾಕ್​ಡೌನ್ ವಿಧಿಸಬಹುದೆಂಬ ಚರ್ಚೆಗಳು ನಡೆಯುತ್ತಿದ್ದವು. ಆದ್ರೆ ಉದ್ದವ್ ಠಾಕ್ರೆ ಸರ್ಕಾರ ಲಾಕ್‌ಡೌನ್ ಬದಲು 15 ದಿನ ಮಹಾರಾಷ್ಟ್ರದಾದ್ಯಂತ ಕರ್ಫ್ಯೂ ಜಾರಿಗೊಳಿಸಿ ಆದೇಶ ಹೊರಡಿಸಿದ್ದಾರೆ. ನಿನ್ನೆ ಸಂಜೆ ಉದ್ದವ್ ಠಾಕ್ರೆ ನಿಯಮಗಳನ್ನ ಪ್ರಕಟಿಸಿದ್ದಾರೆ. ಇಂದಿನಿಂದಲೇ ಹೊಸ ನಿರ್ಬಂಧಗಳು ಜಾರಿಯಾಗುತ್ತಿವೆ. ಏಪ್ರಿಲ್ 14ರ ಬುಧವಾರ ರಾತ್ರಿ 8ರಿಂದ ಮಹಾರಾಷ್ಟ್ರದಲ್ಲಿ ಸಿಆರ್‌ಪಿಸಿ ಸೆಕ್ಷನ್ 144ರ ಅಡಿ ನಿಷೇಧಾಜ್ಞೆ ಜಾರಿಗೊಳಿಸಲಾಗಿದೆ. ಮುಂದಿನ 15 ದಿನಗಳವರೆಗೂ ಸೆಕ್ಷನ್ 144 ಜಾರಿ ಮಾಡಲಾಗಿದೆ.

ಲಾಕ್‌ಡೌನ್ ಅಲ್ಲದಿದ್ದರೂ ಲಾಕ್‌ಡೌನ್ ರೀತಿ ನಿರ್ಬಂಧ ಜಾರಿಯಲ್ಲಿರಲಿವೆ. ಹೊಸ ನಿರ್ಬಂಧಗಳನ್ನ ಜನತಾ ಕರ್ಫ್ಯೂ ಎಂದು ಸಿಎಂ ಉದ್ದವ್ ಠಾಕ್ರೆ ಹೇಳಿದ್ದಾರೆ. ಕಾರಣವಿಲ್ಲದೇ ಯಾರೊಬ್ಬರೂ ಮನೆಯಿಂದ ಹೊರಗೆ ಭೇಟಿ ನೀಡಬಾರದು. ಜನ ಮನೆಯಲ್ಲೇ ಇರಬೇಕೆಂದು ಈ ಮೂಲಕ ಆದೇಶಿಸಲಾಗಿದೆ. ಕಳೆದ ವರ್ಷ ಕೊರೊನಾ ಆರಂಭಿಕ ಹಂತದಲ್ಲಿ ಘೋಷಿಸಲಾಗಿದ್ದ ಬಹುತೇಕ ನಿಯಮಾವಳಿಗನ್ನು ಈಗ ಮತ್ತೆ ಪಾಲಿಸಬೇಕಾಗಿದೆ.

ಕೇರಳದಲ್ಲೂ ಕೊರೊನಾ ತಡೆಗೆ ಕಠಿಣ ನಿಯಮಗಳು ಜಾರಿಗೆ
ಕೇರಳದಲ್ಲೂ ಕೊರೊನಾ ಸೋಂಕು ಹಬ್ಬುವಿಕೆ ಹೆಚ್ಚಾಗಿರುವುದರಿಂದ ಪಿಣರಾಯಿ ಸರ್ಕಾರ ಕಠಿಣ ನಿಯಮಗಳನ್ನ ಜಾರಿಗೆ ತಂದಿದೆ. ಸಾರ್ವಜನಿಕ ಸಭೆಗಳಲ್ಲಿ ಜನರು ಸೇರುವುದಕ್ಕೆ, ಸಭೆ ನಡೆಸುವುದಕ್ಕೆ ಹಲವು ನಿರ್ಬಂಧಗಳನ್ನ ಹೇರಲಾಗಿದೆ. ರೆಸ್ಟೋರೆಂಟ್​ಗಳಿಗೂ ಹಲವಾರು ನಿಯಮಗಳನ್ನ ಪಾಲಿಸುವಂತೆ ಸೂಚನೆ ನೀಡಲಾಗಿದೆ. ಸದ್ಯ ಕೇರಳದಲ್ಲಿ ನಿತ್ಯ 7 ಸಾವಿರಕ್ಕೂ ಹೆಚ್ಚು ಪ್ರಕರಣಗಳು ದೃಢವಾಗುತ್ತಿದ್ದು, ಈಗಾಗಲೇ ಒಟ್ಟು ಸೋಂಕಿತರ ಸಂಖ್ಯೆ 12 ಲಕ್ಷದ ಗಡಿಗೆ ಬಂದು ನಿಂತಿದೆ. ಹೀಗಾಗಿ ಕಠಿಣ ನಿಯಮಗಳನ್ನ ಹೇರಿ, ಮಹಾಮಾರಿ ನಿಯಂತ್ರಣಕ್ಕೆ ಪಿಣರಾಯಿ ಸರ್ಕಾರ ಪರದಾಡುತ್ತಿದೆ.

ಇದೆಲ್ಲದರ ನಡುವೆ ದೇಶದ ಕೆಲ ರಾಜ್ಯಗಳು ಕೊರೊನಾ 2ನೇ ಅಲೆ ಹಿನ್ನೆಲೆಯಲ್ಲಿ ಸಿಬಿಎಸ್‌ಇ ಪರೀಕ್ಷೆಗಳನ್ನ ಮುಂದೂಡಬೇಕು ಅಥವಾ ರದ್ದುಪಡಿಸಬೇಕು ಎಂದು ಕೇಂದ್ರವನ್ನ ಒತ್ತಾಯಿಸಿವೆ. ಆದ್ರೆ ಕೇಂದ್ರ ಸರ್ಕಾರ ನಿಗದಿಯಂತೆ ಬೋರ್ಡ್ ಪರೀಕ್ಷೆಗಳು ನಡೆಯಲಿವೆ ಎಂದು ಹೇಳುತ್ತಿದೆ. ಸದ್ಯದ ಪರಿಸ್ಥಿತಿಯನ್ನು ನೋಡಿದರೆ ಕೊರೊನಾ ನಿಯಂತ್ರಿಸಲು ಕಠಿಣ ನಿಯಮಗಳೇ ಅನಿವಾರ್ಯ ಎನ್ನುವಂತಹ ಸ್ಥಿತಿ ನಿರ್ಮಾಣವಾಗಿದ್ದು ರಾಜ್ಯದಲ್ಲೂ ಉಪಚುನಾವಣೆ ಬಳಿಕ ಕಟ್ಟುನಿಟ್ಟಾದ ಕ್ರಮಗಳು ಜಾರಿಯಾಗುವ ಸಂಭವವಿದೆ ಎನ್ನಲಾಗುತ್ತಿದೆಯಾದರೂ ಮುಖ್ಯಮಂತ್ರಿ ಬಿ.ಎಸ್​.ಯಡಿಯೂರಪ್ಪ ಮಾತ್ರ ಅದನ್ನು ಅಲ್ಲಗಳೆಯುತ್ತಿದ್ದಾರೆ.

(Will Karnataka also need to implement Corona tough rules like Maharashta and Kerala?)

ಇದನ್ನೂ ಓದಿ:
ಮಹಾರಾಷ್ಟ್ರದಲ್ಲಿ ಕೊರೊನಾ ಸೋಂಕು ತೀವ್ರ; ಕಠಿಣ ನಿರ್ಬಂಧ ಘೋಷಿಸಿದ ಸಿಎಂ ಉದ್ಧವ್ ಠಾಕ್ರೆ 

ಲಾಕ್​ಡೌನ್​ ಇಲ್ಲದಿದ್ದರೂ ಕಠಿಣ ಕ್ರಮ ಜಾರಿಗೊಳಿಸಿ, ಜನ ಹಳ್ಳಿಗೆ ಹೋಗುವುದನ್ನು ತಡೆಯಿರಿ: ತಾಂತ್ರಿಕ ಸಲಹಾ ಸಮಿತಿ ಸೂಚನೆ

Published On - 7:19 am, Wed, 14 April 21