ಮಹಾರಾಷ್ಟ್ರದಲ್ಲಿ ಕೊರೊನಾ ಸೋಂಕು ತೀವ್ರ; ಕಠಿಣ ನಿರ್ಬಂಧ ಘೋಷಿಸಿದ ಸಿಎಂ ಉದ್ಧವ್ ಠಾಕ್ರೆ
ಅನಗತ್ಯವಾಗಿ ಯಾರೂ ಸಹ ಮನೆಯಿಂದ ಹೊರಬರುವಂತಿಲ್ಲ. ಅಗತ್ಯ ಸೇವೆಗಳನ್ನು ಹೊರತುಪಡಿಸಿ ಇತರೆಲ್ಲ ಸೇವೆಗಳು ಬಂದ್ ಆಗಲಿವೆ. ಮಹಾರಾಷ್ಟ್ರದಲ್ಲಿ ನಾಳೆ ಸಂಜೆಯಿಂದ ನಿಷೇಧಾಜ್ಞೆ ಜಾರಿಯಾಗಲಿದೆ ಎಂದು ಮುಖ್ಯಮಂತ್ರಿ ಉದ್ಧವ್ ಠಾಕ್ರೆ ಘೋಷಿಸಿದ್ದಾರೆ.
ಮುಂಬೈ: ಮಹಾರಾಷ್ಟ್ರದಲ್ಲಿ ಕೊರೊನಾ ಸೋಂಕು ತೀವ್ರಗತಿಯಲ್ಲಿ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ರಾಜ್ಯದಲ್ಲಿ ಹಲವು ಕಠಿಣ ನಿರ್ಬಂಧಗಳನ್ನು ಬುಧವಾರದಿಂದ (ಏಪ್ರಿಲ್ 14) ಜಾರಿಗೆ ತರಲು ರಾಜ್ಯ ಸರ್ಕಾರ ನಿರ್ಧರಿಸಿದೆ. ಮಾಧ್ಯಮಗೋಷ್ಠಿಯಲ್ಲಿ ಈ ಕುರಿತು ಮಾಹಿತಿ ನೀಡಿದ ಮುಖ್ಯಮಂತ್ರಿ ಉದ್ಧವ್ ಠಾಕ್ರೆ, ‘ರಾಜ್ಯದಲ್ಲಿ ನಾಳೆ ರಾತ್ರಿ 8 ಗಂಟೆಯಿಂದ ಬ್ರೇಕ್ ದ ಚೈನ್ ಅಭಿಯಾನ’ ಅರಂಭವಾಗಲಿದೆ ಎಂದು ಘೋಷಿಸಿದರು.
‘ನಾಳೆಯಿಂದ 15 ದಿನಗಳವರೆಗೆ ಸಿಆರ್ಪಿಸಿ 144ರ ಕಲಂ ಅನ್ವಯ ಜನರ ಸಂಚಾರಕ್ಕೆ ನಿರ್ಬಂಧ ವಿಧಿಸಲಾಗುವುದು. ಅನಗತ್ಯವಾಗಿ ಯಾರೂ ಸಹ ಮನೆಯಿಂದ ಹೊರಬರುವಂತಿಲ್ಲ. ಅಗತ್ಯ ಸೇವೆಗಳನ್ನು ಹೊರತುಪಡಿಸಿ ಇತರೆಲ್ಲ ಸೇವೆಗಳು ಬಂದ್ ಆಗಲಿವೆ. ಮಹಾರಾಷ್ಟ್ರದಲ್ಲಿ ನಾಳೆ ಸಂಜೆಯಿಂದ ನಿಷೇಧಾಜ್ಞೆ ಜಾರಿಯಾಗಲಿದೆ. ಸಾರಿಗೆ ಸೇವೆಗಳು ಎಂದಿನಂತೆ ಇರಲಿವೆ. ಇ ಕಾಮರ್ಸ್ ಸೇವೆ, ಪೆಟ್ರೋಲ್ ಬಂಕ್‌ಗಳು ತೆರೆದಿರುತ್ತವೆ’ ಎಂದು ಉದ್ಧವ್ ಠಾಕ್ರೆ ತಿಳಿಸಿದರು.
‘ಹೋಟೆಲ್, ರೆಸ್ಟೋರೆಂಟ್ಗಳನ್ನು ಮುಚ್ಚುವಂತೆ ಆದೇಶ ಹೊರಡಿಸಲಾಗಿದೆ. ಹೋಟೆಲ್, ರೆಸ್ಟೋರೆಂಟ್ಗಳಲ್ಲಿ ಪಾರ್ಸೆಲ್ಗೆ ಮಾತ್ರ ಅವಕಾಶ ಇರಲಿದೆ. ಮಹಾರಾಷ್ಟ್ರದಲ್ಲಿ ಪಡಿತರ ಚೀಟಿ ಇರುವವರಿಗೆ ಉಚಿತ ರೇಷನ್ ನೀಡಲು ಸರ್ಕಾರ ನಿರ್ಧರಿಸಲಿದೆ. ಮುಂದಿನ 3 ತಿಂಗಳವರೆಗೆ ಉಚಿತ ರೇಷನ್ ನೀಡುತ್ತೇವೆ. ಆದಿವಾಸಿಗಳಿಗೆ ₹ 2 ಸಾವಿರ, ಕಾರ್ಮಿಕರಿಗೆ ₹ 1500 ಧನಸಹಾಯ ನೀಡಲಾಗುವುದು’ ಎಂದು ಹೇಳಿದರು.
‘ಮಹಾರಾಷ್ಟ್ರದಲ್ಲಿ ಕೊರೊನಾ ನಿಯಂತ್ರಣಕ್ಕೆ ಸಿಗುತ್ತಿಲ್ಲ. ಪರಿಸ್ಥಿತಿ ಬಹಳ ಗಂಭೀರವಾಗಿದ್ದು ಪರೀಕ್ಷೆ ಮುಂದೂಡಲಾಗಿದೆ. ರಾಜ್ಯ ಸರ್ಕಾರ ಮಾಡಿಕೊಂಡಿರುವ ಸಿದ್ಧತೆ, ರೂಪಿಸಿರುವ ವ್ಯವಸ್ಥೆಗಳು ಸಾಲುತ್ತಿಲ್ಲ. ಕೊರೊನಾ ಸೋಂಕಿತರ ಚಿಕಿತ್ಸೆಗೆ ಅತ್ಯಗತ್ಯವಾಗಿ ಬೇಕಾದ ರೆಮ್‌ಡಿಸಿವಿರ್ ಔಷಧ ಈಗ ರಾಜ್ಯದಲ್ಲಿ ಮತ್ತೆ ಸಿಗಲು ಆರಂಭವಾಗಿದೆ. ಕೇಂದ್ರ ಸರ್ಕಾರದ ಬಳಿ ಆಕ್ಸಿಜನ್‌ಗೆ ಮನವಿ ಮಾಡಿದ್ದೇವೆ. ಇತರ ರಾಜ್ಯಗಳಿಂದಲೂ ಆಕ್ಸಿಜನ್ ತರಿಸುತ್ತಿದ್ದೇವೆ’ ಎಂದು ಉದ್ಧವ್ ನುಡಿದರು.
?Guidelines for containment & management of COVID-19 ?#BreakTheChain (13th April 2021) pic.twitter.com/p6lQ3KMlFi
— CMO Maharashtra (@CMOMaharashtra) April 13, 2021
ಒಂದೇ ದಿನ 281 ಸಾವು ಮಹಾರಾಷ್ಟ್ರದಲ್ಲಿ ಇಂದು 60,212 ಜನರಿಗೆ ಕೊರೊನಾ ದೃಢಪಟ್ಟಿದೆ. ಇದರೊಂದಿಗೆ ಒಟ್ಟು ಸೋಂಕಿತರ ಸಂಖ್ಯೆ 35,19,028ಕ್ಕೆ (35.19 ಲಕ್ಷ) ಏರಿಕೆಯಾಗಿದೆ. ಈ ಪೈಕಿ 28,66,097 ಜನರು ಗುಣಮುಖರಾಗಿದ್ದಾರೆ. ಕಳೆದ 24 ಗಂಟೆಯಲ್ಲಿ 31,624 ಸೋಂಕಿತರು ಗುಣಮುಖರಾಗಿದ್ದಾರೆ. ಮಹಾರಾಷ್ಟ್ರದಲ್ಲಿಂದು ಕೊರೊನಾ ಸೋಂಕಿಗೆ 281 ಜನರು ಸಾವನ್ನಪ್ಪಿದ್ದಾರೆ. ಇದುವರೆಗೆ ಕೊರೊನಾ ಸೋಂಕಿನಿಂದ 58,526 ಜನರು ಸತ್ತಿದ್ದಾರೆ. 5,93,042 ಸಕ್ರಿಯ ಸೋಂಕು ಕಂಡು ಬಂದಿದೆ ಎಂದು ಮಹಾರಾಷ್ಟ್ರ ರಾಜ್ಯ ಸರ್ಕಾರದ ಮಾಧ್ಯಮ ಪ್ರಕಟಣೆ ತಿಳಿಸಿದೆ.
(Coronavirus Situation Worsen in Maharashtra Uddhav Thackeray Announces New Measures to curb Covid-19 Infection)
Published On - 10:13 pm, Tue, 13 April 21