ಚಿಂತೆಯಲ್ಲಿ ಸರ್ಕಾರ: ಏರುತ್ತಲೇ ಇದೆ ಕೊರೊನಾ ಸೋಂಕಿನ 2ನೇ ಅಲೆ, ಸೋಂಕಿತರ ಸಂಖ್ಯೆಯಲ್ಲಿ ಹೊಸ ದಾಖಲೆ
‘ಕೊರೊನಾ ಸೋಂಕಿನ ಹೊಸ ಪ್ರಕರಣಗಳನ್ನು ಪರಿಶೀಲಿಸಿದರೆ, ನಾವು ಹಿಂದಿನ ಗರಿಷ್ಠ ಏರಿಕೆಯ ಮಟ್ಟವನ್ನು ಈಗಾಗಲೇ ದಾಟಿರುವುದು ಅರಿವಾಗುತ್ತದೆ. ದಿನದಿಂದ ದಿನಕ್ಕೆ ಸೋಂಕಿತರ ಸಂಖ್ಯೆ ಹೆಚ್ಚಾಗುತ್ತಲೇ ಇದೆ. ಇದು ಆತಂಕದ ವಿಚಾರ’ ಎಂದು ಕೇಂದ್ರ ಸರ್ಕಾರದ ಆರೋಗ್ಯ ಕಾರ್ಯದರ್ಶಿ ಹೇಳಿದ್ದಾರೆ.
ದೆಹಲಿ: ದೇಶದಲ್ಲಿ ಕೊರೊನಾ ವೈರಸ್ ಸೋಂಕಿನ 2ನೇ ಅಲೆ ವೇಗವಾಗಿ ಹರಡುತ್ತಿದೆ. ಈ ಹಿಂದೆ ಒಂದು ದಿನದ ಗರಿಷ್ಠ ಪ್ರಮಾಣ ದಾಖಲೆ ಎನಿಸಿದ್ದ ಸಂಖ್ಯೆಯನ್ನೂ 2ನೇ ಅಲೆ ಮೀರಿಸಿದೆ. ಸರ್ಕಾರಕ್ಕೆ ಕೊರೊನಾ 2ನೇ ಅಲೆ ನಿರ್ವಹಣೆ ದೊಡ್ಡ ಸವಾಲಾಗಿದೆ. ಕೇಂದ್ರ ಆರೋಗ್ಯ ಇಲಾಖೆ ಕಾರ್ಯದರ್ಶಿ ರಾಜೇಶ್ ಭೂಷಣ್ ಮಂಗಳವಾರ ಮಾಧ್ಯಮಗೋಷ್ಠಿಯಲ್ಲಿ ಮಾತನಾಡಿ, ಕೊರೊನಾ ಸೋಂಕಿನ 2ನೇ ಅಲೆ ದೇಶದಲ್ಲಿ ಹರಡುತ್ತಿರುವ ವೇಗ ಆತಂಕಕಾರಿ ಎಂದರು.
‘ನಮ್ಮ ದೇಶದ ಒಟ್ಟು ಸೋಂಕಿತರ ಪೈಕಿ ಶೇ 89.51ರಷ್ಟು ಜನರು ಗುಣಮುಖರಾಗಿದ್ದಾರೆ. ಶೇ 1.25ರಷ್ಟು ಮಂದಿ ಮೃತಪಟ್ಟಿದ್ದಾರೆ. ದೇಶದಲ್ಲಿ ಇಂದಿಗೂ ಶೇ 9.24ರಷ್ಟು ಸಕ್ರಿಯ ಪ್ರಕರಣಗಳಿವೆ. ಹೊಸ ಪ್ರಕರಣಗಳನ್ನು ಪರಿಶೀಲಿಸಿದರೆ, ನಾವು ಹಿಂದಿನ ಗರಿಷ್ಠ ಏರಿಕೆಯ ಮಟ್ಟವನ್ನು ಈಗಾಗಲೇ ದಾಟಿರುವುದು ಅರಿವಾಗುತ್ತದೆ. ದಿನದಿಂದ ದಿನಕ್ಕೆ ಸೋಂಕಿತರ ಸಂಖ್ಯೆ ಹೆಚ್ಚಾಗುತ್ತಲೇ ಇದೆ. ಇದು ಆತಂಕದ ವಿಚಾರ’ ಎಂದು ಹೇಳಿದರು.
ದೇಶದಲ್ಲಿ ಪ್ರತಿದಿನ ಕೋವಿಡ್-19ರಿಂದ ಸಂಭವಿಸುತ್ತಿರುವ ಸಾವುಗಳ ಸಂಖ್ಯೆಯು ಏರುಗತಿಯಲ್ಲಿವೆ. ಆದರೆ ಕಳೆದ ವರ್ಷ ದೇಶದಲ್ಲಿ ಕೋವಿಡ್-19 ಮೊದಲ ಅಲೆಯಿದ್ದಾಗ ಸಂಭವಿಸಿದ್ದ ಒಟ್ಟು ಸಾವಿನ ಸಂಖ್ಯೆಯನ್ನು ಇನ್ನೂ ಮುಟ್ಟಿಲ್ಲ ಎಂದು ರಾಜೇಶ್ ಭೂಷಣ್ ಹೇಳಿದರು. ‘ಕಳೆದ ವರ್ಷ ದಾಖಲಾಗಿದ್ದ ಕೊರೊನಾದಿಂದ ಮೃತಪಟ್ಟವರ ಒಟ್ಟು ಗರಿಷ್ಠ ಸಂಖ್ಯೆಯು 1114. ಈಗಿನ 2ನೇ ಅಲೆಯಲ್ಲಿ 879 ಗರಿಷ್ಠ ಸಾವು ಎಂದು ದಾಖಲಾಗಿದೆ’ ಎಂದು ಎಎನ್ಐ ಸುದ್ದಿಸಂಸ್ಥೆ ತಿಳಿಸಿದೆ.
ದೇಶದಲ್ಲಿ 1.61 ಲಕ್ಷ ಸಾವು ಭಾರತದಲ್ಲಿ ಕಳೆದ 24 ಗಂಟೆಗಳಲ್ಲಿ 1,61,736 (1.61ಲಕ್ಷ) ಹೊಸ ಕೊವಿಡ್ ಪ್ರಕರಣಗಳು ಪತ್ತೆಯಾಗಿದ್ದು ಒಟ್ಟು ಸೋಂಕಿತರ ಸಂಖ್ಯೆ 13,68,9453 (13.68 ಕೋಟಿ) ತಲುಪಿದೆ. ಕೇಂದ್ರ ಆರೋಗ್ಯ ಸಚಿವಾಲಯದ ಅಂಕಿ ಅಂಶಗಳ ಪ್ರಕಾರ 879 ಮಂದಿ ಕೊವಿಡ್ನಿಂದ ಮೃತಪಟ್ಟಿದ್ದು ಸಾವಿನ ಸಂಖ್ಯೆ 1,71,058ಕ್ಕೇರಿದೆ. ಮಂಗಳವಾರದ ಅಂಕಿ ಅಂಶಗಳ ಪ್ರಕಾರ 1,22,53,697 ಮಂದಿ ಚೇತರಿಸಿಕೊಂಡಿದ್ದಾರೆ. ಕೊವಿಡ್ನಿಂದ ಮೃತಪಟ್ಟವರ ಅಂಕಿ ಅಂಶಗಳ ಪಟ್ಟಿ ಗಮನಿಸಿದರೆ ಜಗತ್ತಿನಲ್ಲಿ ಭಾರತ ನಾಲ್ಕನೇ ಸ್ಥಾನದಲ್ಲಿದೆ. ಕೊವಿಡ್ನಿಂದ ಅತೀ ಹೆಚ್ಚು ಸಾವು ವರದಿಯಾಗಿರುವ ದೇಶಗಳ ಪಟ್ಟಿಯಲ್ಲಿ ಅಮೆರಿಕ ಮೊದಲ ಸ್ಥಾನದಲ್ಲಿದ್ದು, ಬ್ರೆಜಿಲ್ ಎರಡನೇ ಸ್ಥಾನ ಮತ್ತು ಮೆಕ್ಸಿಕೊ ಮೂರನೇ ಸ್ಥಾನದಲ್ಲಿದೆ.
ಮಹಾರಾಷ್ಟ್ರ, ಛತ್ತೀಸಗಡ, ಉತ್ತರ ಪ್ರದೇಶ, ಕರ್ನಾಟಕ, ದೆಹಲಿ, ತಮಿಳುನಾಡು, ಮಧ್ಯಪ್ರದೇಶ, ಗುಜರಾತ್, ಹರ್ಯಾಣ, ರಾಜಸ್ಥಾನ, ಪಂಜಾಬ್, ಕೇರಳ, ತೆಲಂಗಾಣ, ಉತ್ತರಾಖಂಡ, ಆಂಧ್ರ ಪ್ರದೇಶ ಮತ್ತು ಪಶ್ಚಿಮ ಬಂಗಾಳದಲ್ಲಿ ಹೊಸ ಕೊವಿಡ್ ಪ್ರಕರಣಗಳು ಪ್ರತಿ ದಿನ ಏರಿಕೆಯಾಗುತ್ತದೆ.
Published On - 5:48 pm, Tue, 13 April 21