AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ತೆಕ್ಕಲಕೋಟೆ ಕಾಡಸಿದ್ದೇಶ್ವರ ರಥೋತ್ಸವ ವೇಳೆ ಬ್ಯಾರಿಕೇಡ್ ಕಿತ್ತೆಸೆದು ಭಕ್ತರ ಆಕ್ರೋಶ; ಪೊಲೀಸರಿಂದ ಲಾಠಿಚಾರ್ಜ್

ವಾಡಿಕೆಯಂತೆಯೇ ತೇರು ಎಳೆಯುವುದಾಗಿ ಭಕ್ತರು ಪಟ್ಟುಹಿಡಿದಾಗ ಪೊಲೀಸರು ತಡೆಯೊಡ್ಡಿದ್ದರು. ಈ ವೇಳೆ ಮಾತಿಗೆ ಮಾತು ಬೆಳೆದು ಪೊಲೀಸರು ಇರಿಸಿದ್ದ ಬ್ಯಾರಿಕೇಡ್​ಗಳನ್ನು ಭಕ್ತರು ನೆಲಕ್ಕುರುಳಿಸಿದರು.

ತೆಕ್ಕಲಕೋಟೆ ಕಾಡಸಿದ್ದೇಶ್ವರ ರಥೋತ್ಸವ ವೇಳೆ ಬ್ಯಾರಿಕೇಡ್ ಕಿತ್ತೆಸೆದು ಭಕ್ತರ ಆಕ್ರೋಶ; ಪೊಲೀಸರಿಂದ ಲಾಠಿಚಾರ್ಜ್
ಸಿರುಗುಪ್ಪ ತಾಲ್ಲೂಕು ತೆಕ್ಕಲಕೋಟೆ ಕಾಡಸಿದ್ದೇಶ್ವರ ರಥೋತ್ಸವದಲ್ಲಿ ಲಾಠಿಚಾರ್ಜ್
Ghanashyam D M | ಡಿ.ಎಂ.ಘನಶ್ಯಾಮ
|

Updated on: Apr 13, 2021 | 11:10 PM

Share

ಬಳ್ಳಾರಿ: ಸಿರುಗುಪ್ಪ ತಾಲ್ಲೂಕಿನ ತೆಕ್ಕಲಕೋಟೆ ಪಟ್ಟಣದಲ್ಲಿ ಮಂಗಳವಾರ (ಏಪ್ರಿಲ್ 13) ಕಾಡಸಿದ್ದೇಶ್ವರ ರಥೋತ್ಸವವನ್ನು ಪೂರ್ಣಗೊಳಿಸಲು ಅವಕಾಶ ನೀಡಬೇಕೆಂದು ಆಗ್ರಹಿಸಿ ಭಕ್ತರು ಹಠಾತ್ ಪ್ರತಿಭಟನೆ ನಡೆಸಿದರು. ಬ್ಯಾರಿಕೇಡ್ ಕಿತ್ತೆಸೆದು ಆಕ್ರೋಶ ವ್ಯಕ್ತಪಡಿಸಿದ ಭಕ್ತರನ್ನು ನಿಯಂತ್ರಿಸಲು ಬೆರಳೆಣಿಕೆಯಷ್ಟಿದ್ದ ಪೊಲೀಸರು ಹರಸಾಹಸಪಟ್ಟರು. ಸಾವಿರಾರು ಸಂಖ್ಯೆಯಲ್ಲಿ ಸೇರಿದ್ದ ಭಕ್ತರು ಕೋವಿಡ್-19 ನಿಯಮಗಳನ್ನು ಸಂಪೂರ್ಣ ಮರೆತಿದ್ದರು. ಮಾಸ್ಕ್​ ಧರಿಸಿದ್ದವರು ಇಲ್ಲವೇ ಇಲ್ಲ ಎನ್ನುವಷ್ಟು ವಿರಳರಾಗಿದ್ದರು. ಪರಿಸ್ಥಿತಿ ಕೈಮೀರಿದಾಗ ಭಕ್ತರನ್ನು ಚದುರಿಸಲು ಪೊಲೀಸರು ಲಾಠಿ ಚಾರ್ಜ್​ ಮಾಡಿದರು. ತೆಕ್ಕಲಕೋಟೆ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ನಡೆದಿದೆ.

ಪ್ರತಿವರ್ಷ ಯುಗಾದಿ ಹಬ್ಬದ ದಿನ ತೆಕ್ಕಲಕೋಟೆಯಲ್ಲಿ ಕಾಡಸಿದ್ದೇಶ್ವರ ಜಾತ್ರೆ ನಡೆಯುವುದು ವಾಡಿಕೆ. ಈ ವರ್ಷ ಕೊರೊನಾ ಸೋಂಕು ಕಾರಣದಿಂದ ಜಿಲ್ಲಾಡಳಿತ ರಥೋತ್ಸವಕ್ಕೆ ಹಲವು ನಿರ್ಬಂಧಗಳನ್ನು ವಿಧಿಸಿ ಅನುಮತಿ ನೀಡಿತ್ತು. ಪ್ರತಿವರ್ಷದಂತೆ ಪೂರ್ಣ ಪ್ರಮಾಣದಲ್ಲಿ ತೇರು ಎಳೆಯದೆ, ಶಾಸ್ತ್ರಕ್ಕೆ ಒಂದಿಷ್ಟು ದೂರ ಎಳೆದು ಸುಮ್ಮನಾಗಬೇಕು ಎಂದು ಹೇಳಿದ್ದರು.

ವಾಡಿಕೆಯಂತೆಯೇ ತೇರು ಎಳೆಯುವುದಾಗಿ ಭಕ್ತರು ಪಟ್ಟುಹಿಡಿದಾಗ ಪೊಲೀಸರು ತಡೆಯೊಡ್ಡಿದ್ದರು. ಈ ವೇಳೆ ಮಾತಿಗೆ ಮಾತು ಬೆಳೆದು ಪೊಲೀಸರು ಇರಿಸಿದ್ದ ಬ್ಯಾರಿಕೇಡ್​ಗಳನ್ನು ಭಕ್ತರು ನೆಲಕ್ಕುರುಳಿಸಿದರು. ಪರಿಸ್ಥಿತಿ ನಿಯಂತ್ರಿಸಲು ಪೊಲೀಸರು ಲಾಠಿ ಚಾರ್ಜ್ ನಡೆಸಿದರು. ತಳ್ಳಾಟ-ನೂಕಾಟದ ವೇಳೆ ಓರ್ವ ಪೊಲೀಸ್ ಸಿಬ್ಬಂದಿ ಸಹ ಗಾಯಗೊಂಡರು.

Bellary-Kadasiddeshawara

ಪೊಲೀಸ್ ಬ್ಯಾರಿಕೇಡ್ ಕಿತ್ತು ಆಕ್ರೋಶ ವ್ಯಕ್ತಪಡಿಸಿದ ಭಕ್ತರು

ತೆಕ್ಕಲಕೋಟೆ ಊರಿನ ಕಾಡಸಿದ್ದೇಶ್ವರನ ಗುಡಿಗೆ ಲಕ್ಷಾಂತರ ಭಕ್ತರಿದ್ದಾರೆ. ಕಾಡುಸಿದ್ದಪ್ಪ ಪ್ರಸಿದ್ಧ ಪವಾಡ ಪುರುಷನಾಗಿದ್ದ ಎಂದು ಜನರು ನಂಬುತ್ತಾರೆ. ಮಳೆ ಬೇಕೆನಿಸಿದಾಗ ಮಳೆ ಬರಿಸುವುದು, ಗ್ರಾಮದ ಪ್ರಾಣಿಗಳನ್ನು ಕಾಡುಪ್ರಾಣಿಗಳಿಂದ ರಕ್ಷಿಸುವುದು ಮುಂತಾದ ಪವಾಡಗಳನ್ನು ಈತ ಮಾಡುತ್ತಿದ್ದ ಎಂಬ ಪ್ರತೀತಿಯಿದೆ.

ತೆಕ್ಕಲಕೋಟೆಯಲ್ಲಿ ಹರಿಮಲ್ಲಪ್ಪನ ಗುಡಿ, ವೀರಭದ್ರದೇವರ ಗುಡಿ, ಅಮರೇಶ್ವರ ದೇವಸ್ಥಾನ ಸೇರಿದಂತೆ ಹಲವು ಮಂದಿರಗಳಿವೆ. ಶಿಲಾಯುಗ ಕಾಲದಿಂದ ಇಲ್ಲಿ ಜನವಸತಿಯಿತ್ತು ಎಂಬುದಕ್ಕೆ ಆಧಾರಗಳು ಸಿಕ್ಕಿವೆ.

(Lathicharge in Tekkalakote Kadasiddeshwara cart festival)

ಇದನ್ನೂ ಓದಿ: ಮಹಾರಾಷ್ಟ್ರದಲ್ಲಿ ಕೊರೊನಾ ಸೋಂಕು ತೀವ್ರ; ಕಠಿಣ ನಿರ್ಬಂಧ ಘೋಷಿಸಿದ ಸಿಎಂ ಉದ್ಧವ್ ಠಾಕ್ರೆ

ಇದನ್ನೂ ಓದಿ: Covid-19 Karnataka Update: ಕರ್ನಾಟಕದಲ್ಲಿ 8778 ಮಂದಿಗೆ ಕೊರೊನಾ ದೃಢ, 67 ಸಾವು