ಮಸ್ಕಿ ಮತದಾರರಿಗೆ ಹಣ ಹಂಚಿದ ಅರೋಪ: ಬಿಜೆಪಿ ನಾಯಕ ನಂದೀಶ್​ ರೆಡ್ಡಿ ಬಂಧನ, ಬಿಡುಗಡೆ

Maski By-Election: ನಂದೀಶ್ ರೆಡ್ಡಿ ವಿರುದ್ಧ ಭಾರತೀಯ ದಂಡಸಂಹಿತೆಯ 171E ಕಲಂ ಅಡಿ ಪ್ರಕರಣ ದಾಖಲಾಗಿದೆ. ಸಾಮಾನ್ಯವಾಗಿ ಲಂಚ ನೀಡುವವರ ವಿರುದ್ಧ ಈ ಕಲಂ ಅಡಿ ಪ್ರಕರಣ ದಾಖಲಿಸಲಾಗುತ್ತದೆ.

ಮಸ್ಕಿ ಮತದಾರರಿಗೆ ಹಣ ಹಂಚಿದ ಅರೋಪ: ಬಿಜೆಪಿ ನಾಯಕ ನಂದೀಶ್​ ರೆಡ್ಡಿ ಬಂಧನ, ಬಿಡುಗಡೆ
ಹಣ ಹಂಚುತ್ತಿರುವ ನಂದೀಶ್ ರೆಡ್ಡಿ
Follow us
Ghanashyam D M | ಡಿ.ಎಂ.ಘನಶ್ಯಾಮ
|

Updated on:Apr 13, 2021 | 8:36 PM

ರಾಯಚೂರು: ಮಸ್ಕಿ ವಿಧಾನಸಭಾ ಕ್ಷೇತ್ರ ಉಪಚುನಾವಣೆಯಲ್ಲಿ ಬಿಜೆಪಿ ಪರ ಪ್ರಚಾರ ನಡೆಸುವ ವೇಳೆ ಮತದಾರರಿಗೆ ಹಣ ಹಂಚಿದ್ದ ಆರೋಪ ಎದುರಿಸುತ್ತಿದ್ದ ಬಿಜೆಪಿ ನಾಯಕ ಮತ್ತು ಬಿಎಂಟಿಸಿ ಅಧ್ಯಕ್ಷ ನಂದೀಶ್​ ರೆಡ್ಡಿ ಅವರನ್ನು ಮಂಗಳವಾರ (ಏಪ್ರಿಲ್ 13) ಮಸ್ಕಿ ಪೊಲೀಸರು ಬಂಧಿಸಿ, ಠಾಣಾ ಜಾಮೀನಿನ ಮೇಲೆ ಬಿಡುಗಡೆ ಮಾಡಿದರು. ನಂದೀಶ್ ರೆಡ್ಡಿ ವಿರುದ್ಧ ಭಾರತೀಯ ದಂಡಸಂಹಿತೆಯ 171E ಕಲಂ ಅಡಿ ಪ್ರಕರಣ ದಾಖಲಾಗಿದೆ. ಸಾಮಾನ್ಯವಾಗಿ ಲಂಚ ನೀಡುವವರ ವಿರುದ್ಧ ಈ ಕಲಂ ಅಡಿ ಪ್ರಕರಣ ದಾಖಲಿಸಲಾಗುತ್ತದೆ. ಪ್ರಚಾರದ ವೇಳೆ ಮತದಾರರಿಗೆ ಹಣ ಹಂಚಿಕೆ ಆರೋಪ ನಂದೀಶ್​ ರೆಡ್ಡಿ ಅವರ ವಿರುದ್ಧ ಇದೆ. ಅವರು ಹಣ ಹಂಚುತ್ತಿರುವ ವಿಡಿಯೊ ವೈರಲ್ ಸಹ ಆಗಿತ್ತು.

ಬಿಜೆಪಿ ಅಭ್ಯರ್ಥಿ ಪ್ರತಾಪಗೌಡ ಪಾಟೀಲ ಪರ ಮಸ್ಕಿ ಕ್ಷೇತ್ರದ ಕೆಲ ಗ್ರಾಮಗಳಲ್ಲಿ ಪ್ರಚಾರ ನಡೆಸಿದ ಬಿಜೆಪಿ ನಾಯಕ, ಬಿಎಂಟಿಸಿ ಅಧ್ಯಕ್ಷ ಅಧ್ಯಕ್ಷ ನಂದೀಶ್​ ರೆಡ್ಡಿ ಮತಕ್ಕಾಗಿ ಹಣ ಹಂಚಿದ್ದಾರೆ ಎಂಬ ಆರೋಪಗಳು ಕೇಳಿಬಂದಿವೆ. ‘ಎಲ್ಲರೂ ಸೇರಿ ತಗೊಬೇಕು’ ಎಂದು ಹೇಳುವ ನಂದೀಶ್ ರೆಡ್ಡಿ ಒಂದಿಷ್ಟು ಹಣವನ್ನು ಗುಂಪಿನಲ್ಲಿದ್ದವರಿಗೆ ಕೊಡುತ್ತಾರೆ.

ರಾಯಚೂರು ಜಿಲ್ಲೆಯಲ್ಲಿ ವೈರಲ್ ಆಗಿರುವ ವಿಡಿಯೊದಲ್ಲಿ ಮಹಿಳೆಯರು ಮತ್ತು ಮಕ್ಕಳಿಗೆ ನಂದೀಶ್​ ರೆಡ್ಡಿ ತಲಾ ₹ 1 ಸಾವಿರ ನೀಡುವುದು ಸೆರೆಯಾಗಿದೆ. ಮತ ನೀಡುವಂತೆ ಕೋರಿ ನಂದೀಶ್ ರೆಡ್ಡಿ ಈ ಹಣ ನೀಡಿದ್ದರು ಎಂದು ಆರೋಪಿಸಲಾಗಿದೆ. ಸ್ಥಳದಲ್ಲಿದ್ದ ಕೆಲವರು ಈ ದೃಶ್ಯವನ್ನು ಮೊಬೈಲ್ ಕ್ಯಾಮೆರಾದಲ್ಲಿ ರೆಕಾರ್ಡ್ ಮಾಡಿಕೊಂಡಿದ್ದಾರೆ. ನಂದೀಶ್ ರೆಡ್ಡಿ ಜನರಿಂದ ತುಸು ದೂರ ತೆರಳುತ್ತಿದ್ದಂತೆ ಮಾತನಾಡಿರುವ ಓರ್ವ ಕಾಂಗ್ರೆಸ್​ ಬೆಂಬಲಿಗ, ‘ಬಿಜೆಪಿ ದುಡ್ಡು ಕಾಂಗ್ರೆಸ್​ಗೆ ವೋಟು’ ಎಂದು ವ್ಯಂಗ್ಯವಾಡಿದ್ದಾನೆ. ಮಾತ್ರವಲ್ಲ, ಕೊಟ್ರೆ ಇಸ್ಕೊಳ್ರೀ ಎಂದೂ ಪ್ರಚೋದಿಸಿದ್ದಾನೆ.

ಪ್ರಚಾರ ತೀವ್ರಗೊಳಿಸಿದ ಬಿಜೆಪಿ ಈ ಬಾರಿಯ ಮಸ್ಕಿ ವಿಧಾನಸಭಾ ಕ್ಷೇತ್ರದ ಚುನಾವಣೆಯನ್ನು ಶತಾಯಗತಾಯ ಗೆಲ್ಲಲೇಬೇಕು ಎಂದು ಪಣತೊಟ್ಟಿರುವ ಬಿಜೆಪಿ ತನ್ನ ಪ್ರಯತ್ನಗಳನ್ನು ತೀವ್ರಗೊಳಿಸಿದೆ. ಮಸ್ಕಿ ಕ್ಷೇತ್ರದ ವಿವಿಧೆಡೆ ಮಂಗಳವಾರ ಜನಪ್ರಿಯ ಗಾಯಕಿ ಮಂಗ್ಲಿ ಬಿಜೆಪಿ ಅಭ್ಯರ್ಥಿ ಪ್ರತಾಪಗೌಡ ಪರ ಪ್ರಚಾರ ನಡೆಸಿದರು. ಈಗಾಗಲೇ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಸೇರಿದಂತೆ ಪಕ್ಷದ ಘಟಾನುಘಟಿ ನಾಯಕರು ಮಸ್ಕಿ ಕ್ಷೇತ್ರದ ವಿವಿಧೆಡೆ ಚುರುಕಾಗಿ ಓಡಾಡುತ್ತಾ ಜನರ ಮನವೊಲಿಸಲು ಪ್ರಯತ್ನಿಸುತ್ತಿದ್ದಾರೆ.

ಮೇ 2ಕ್ಕೆ ಫಲಿತಾಂಶ ಏ.17ರಂದು ಮಸ್ಕಿ ವಿಧಾನಸಭಾ ಕ್ಷೇತ್ರದ ಉಪಚುನಾವಣೆ ನಡೆಯಲಿದೆ. ಬಿಜೆಪಿ ಪರ ಪ್ರತಾಪಗೌಡ ಪಾಟೀಲ ಮತ್ತು ಕಾಂಗ್ರೆಸ್​ನ ಬಸನಗೌಡ ನಡುವೆ ಜಿದ್ದಾಜಿದ್ದಿ ಪೈಪೋಟಿ ನಡೆದಿದೆ. ಮೇ 2ರಂದು ಮತ ಎಣಿಕೆ ನಡೆಯಲಿದ್ದು, ಫಲಿತಾಂಶ ಪ್ರಕಟವಾಗಲಿದೆ.

(Maski By Election BJP Leader Nandish Reddy Arrested Released for Bribing Voters)

ಇದನ್ನೂ ಓದಿ: Mangli: ಮಸ್ಕಿಯಲ್ಲಿ ಮತಬೇಟೆಗಿಳಿದ ಮಂಗ್ಲಿ; ಬಿಜೆಪಿ ಅಭ್ಯರ್ಥಿ ಪರ ಅಬ್ಬರದ ಪ್ರಚಾರ

ಇದನ್ನೂ ಓದಿ: ಮಸ್ಕಿ ಉಪಚುನಾವಣೆ: ಬಿಜೆಪಿ ಪರ ಹಣ ಹಂಚಿದ ಬಿಎಂಟಿಸಿ ಅಧ್ಯಕ್ಷ ನಂದೀಶ್ ರೆಡ್ಡಿ ವಿಡಿಯೊ ವೈರಲ್

Published On - 8:24 pm, Tue, 13 April 21