ಬೆಂಗಳೂರು: ನಾಳೆ ನಡೆಯಬೇಕಿದ್ದ ಎಲ್ಲ ಚುನಾವಣೆಗಳನ್ನು ಮುಂದೂಡಲು ರಾಜ್ಯ ಸರ್ಕಾರವು ಚುನಾವಣಾ ಆಯೋಗಕ್ಕೆ ಮನವಿ ಸಲ್ಲಿಸಲಿದೆ ಎಂದು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ವಿಧಾನಸೌಧದಲ್ಲಿ ತಿಳಿಸಿದರು. ಕೊರೊನಾ ಸೋಂಕು ಹೆಚ್ಚಳದ ಬೆನ್ನಲ್ಲೇ ಕಟ್ಟುನಿಟ್ಟಿನ ಕ್ರಮಗಳನ್ನು ರಾಜ್ಯ ಸರ್ಕಾರ ಕೈಗೊಂಡಿದ್ದು ಚುನಾವಣೆಗಳನ್ನು ಮುಂದೂಡಲು ಸರ್ಕಾರ ಮನವಿ ಮಾಡಲಿದೆ ಎಂದು ಅವರು ತಿಳಿಸಿದರು.
ಈ ಕುರಿತು ವಿವರಿಸಿದ ಗೃಹ ಸಚಿವ ಬಸವರಾಜ ಬೊಮ್ಮಾಯಿ, ಈಗಾಗಲೇ ಘೋಷಣೆಯಾಗಿರುವ ಚುನಾವಣೆ ನಡೆಯಲಿದೆ. ಬಳ್ಳಾರಿ, ರಾಮನಗರ ನಗರಸಭೆಗಳ ಚುನಾವಣೆಗಳು ನಡೆಯಲಿವೆ. ನಂತರದ ಚುನಾವಣೆ ಮಾತ್ರ ಮುಂದೂಡಿಕೆಗೆ ಶಿಫಾರಸು ಮಾಡುತ್ತೇವೆ ಎಂದು ಸ್ಪಷ್ಟನೆ ನೀಡಿದರು.
ಈ ಸಂದರ್ಭದಲ್ಲಿ ಚುನಾವಣೆ ನಡೆಸಲು ಸಾಧ್ಯವಿಲ್ಲ. ಜಿಲ್ಲಾ ಪಂಚಾಯತ್ ಮತ್ತು ತಾಲೂಕಾ ಪಂಚಾಯತ್ ಚುನಾವಣೆಗಳನ್ನು ಮುಂದೂಡಲು ಚುನಾವಣಾ ಆಯೋಗಕ್ಕೆ ಮನವಿ ಸಲ್ಲಿಸುತ್ತೇವೆ. ಸರ್ಕಾರ ಹೊರಡಿಸಿದ ಎರಡನೇ ಮಾರ್ಗಸೂಚಿಯೇ ಮುಂದುವರಿಯಲಿದೆ ಎಂದು ಕಂದಾಯ ಸಚಿವ ಆರ್.ಅಶೋಕ್ ನಿನ್ನೆ ತಿಳಿಸಿದ್ದರು.
ಈಗಿನ ಕರ್ಫ್ಯೂ ಫಲಿತಾಂಶ 14 ದಿನದ ಬಳಿಕ ತಿಳಿಯಲಿದೆ. ಆನಂತರ ಮುಂದಿನ ನಿರ್ಧಾರ ಕೈಗೊಳ್ಳುತ್ತೇವೆ. ಮೇ 4ರಿಂದ8ರವರೆಗೆ ಕೊರೊನಾ ಸೋಂಕು ಹೆಚ್ಚಾಗಲಿದೆ ಎಂದು ತಜ್ಞರು ತಿಳಿಸಿದ್ದಾರೆ. ಇದರ ಅನ್ವಯ ನಾವು ಮಾನದಂಡ ರೂಪಿಸಲಿದ್ದೇವೆ. ಆದರೆ ನಾಳೆ ಬೆಂಗಳೂರಿನ ಮಾರುಕಟ್ಟೆಗಳನ್ನು ಸ್ಥಳಾಂತರ ಮಾಡಲಾಗುವುದು. ಈ ನಿರ್ಧಾರಕ್ಕೆ ಸಂಪುಟ ಸಭೆಯ ಒಪ್ಪಿಗೆ ದೊರೆತಿದೆ ಎಂದು ಅವರು ತಿಳಿಸಿದ್ದರು.
ನಾಳೆಯಿಂದಲೇ ಕಟ್ಟುನಿಟ್ಟಿನ ಕ್ರಮ
ಕರ್ನಾಟಕದಲ್ಲಿ ಕೊರೊನಾ ಸೊಂಕಿನ ಎರಡನೇ ಅಲೆ ವ್ಯಾಪಕವಾಗಿ ಹಬ್ಬುತ್ತಿರುವುದರಿಂದ ರಾಜ್ಯ ಸರ್ಕಾರ ಕಠಿಣ ಕ್ರಮ ಕೈಗೊಳ್ಳಲೇಬೇಕಾದ ಅನಿವಾರ್ಯತೆಗೆ ಸಿಲುಕಿದೆ. ಹೀಗಾಗಿ 14 ದಿನಗಳ ಕಾಲ ಕರ್ನಾಟಕವನ್ನು ಲಾಕ್ಡೌನ್ ಮಾಡಲು ನಿರ್ಧರಿಸಿದ್ದು, ನಾಳೆ ಸಂಜೆಯಿಂದ ಲಾಕ್ಡೌನ್ ಜಾರಿಯಾಗಲಿದೆ. 15 ದಿನಗಳ ಕಾಲ ಈ ಕಠಿಣ ನಿಯಮ ಮುಂದುವರೆಯಲಿದೆ ಎಂದು ಸರ್ಕಾರ ತಿಳಿಸಿದೆ.
ಬೆಳಗ್ಗೆ 6-10 ಗಂಟೆವರೆಗೆ ಅಗತ್ಯ ವಸ್ತು ಖರೀದಿಗೆ ಅವಕಾಶ ಕಲ್ಪಿಸಲಾಗಿದೆ. ಉತ್ಪಾದನಾ ವಲಯ ಎಂದಿನಂತೆ ಮುಂದುವರಿಯುತ್ತದೆ. ಕೃಷಿ ಚಟುವಟಿಕೆಗಳಿಗೂ ಯಾವುದೇ ತೊಂದರೆ ಇಲ್ಲ. ರಾಜ್ಯದಲ್ಲಿ ಎಂದಿನಂತೆ ಕರ್ಫ್ಯೂ ಮುಂದುವರಿಯುತ್ತದೆ. ರಾಜ್ಯದಲ್ಲಿ ಆಕ್ಸಿಜನ್ ಕೊರತೆಯಾಗದಂತೆ ಕ್ರಮ ಕೈಗೊಳ್ಳಲಾಗಿದೆ. ಇನ್ನುಮುಂದೆ ಆಕ್ಸಿಜನ್ ಕೊರತೆಯಾಗುವುದಿಲ್ಲ. ರಾಜ್ಯಕ್ಕೆ 800 ಮೆಟ್ರಿಕ್ ಟನ್ ಆಕ್ಸಿಜನ್ ಕೊಡಲು ಕೇಂದ್ರ ಸರ್ಕಾರ ಕೊಡಲು ಒಪ್ಪಿಕೊಂಡಿದೆ. ಎಂದು ತಿಳಿಸಿದ್ದಾರೆ. ಅಲ್ಲದೇ ರೆಮ್ಡೆಸಿವಿರ್ ಇಂಜೆಕ್ಷನ್ ಕೊರತೆಯೂ ಆಗುವುದಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.
ಎರಡು ವಾರದಲ್ಲಿ ಕೊರೊನಾ ನಿಯಂತ್ರಣಕ್ಕೆ ಬಾರದಿದ್ದರೆ ಮತ್ತೆ ಕಠಿಣ ಕ್ರಮ ಮುಂದುವರೆಸಬೇಕಾದ ಅನಿವಾರ್ಯತೆ ಬರಬಹುದು. ಹಾಗಾಗಿ ಜನರು ಸಹಕಾರ ನೀಡಿ ಕೊರೊನಾ ನಿಯಂತ್ರಿಸಬೇಕು ಎಂದಿದ್ದಾರೆ. ಜನರ ಓಡಾಟಕ್ಕೆ ಸಾರಿಗೆ ಸಂಚಾರ ಇರುವುದಿಲ್ಲ. ಆದರೆ, ಸರಕು ಸಾಗಣೆ ವಾಹನ ಸಂಚಾರಕ್ಕೆ ಯಾವುದೇ ಅಡ್ಡಿಯಾಗುವುದಿಲ್ಲ ಎಂದು ತಿಳಿಸಿದ್ದಾರೆ.
Explainer: ಕೊವಿಡ್ ನಿರ್ವಹಣೆ ಕೈಪಿಡಿ, ನಿಮ್ಮ ಮನೆಯಲ್ಲಿಯೂ ಇರಲಿ ಈ ಆಪ್ತಮಿತ್ರ
Published On - 3:11 pm, Mon, 26 April 21