ವಿಜಯಪುರ: ದೇಶದಲ್ಲಿ ಕೆಲವೆಡೆ ವರುಣನ ಆರ್ಭಟ ಶುರುವಾಗಿದೆ. ನಿನ್ನೆ ರಾತ್ರಿ ಅದೆಷ್ಟೋ ಕಡೆ ರಭಸದ ಗಾಳಿ, ಗುಡುಗಿನ ಜತೆ ಮಿಂಚು ಸಿಡಿಲಿನ ಅರ್ಭಟ ಜೋರಾಗಿಯೇ ಇತ್ತು. ರಾತ್ರಿ ಸುರಿದ ಅಕಾಲಿಕ ಮಳೆ, ಸಿಡಿಲಿನಿಂದಾಗಿ ಜಿಲ್ಲೆಯ ಅಂಜುಟಗಿ ಗ್ರಾಮದಲ್ಲಿ ಸಿಡಿಲು ಬಡಿದು ಮಹಿಳೆಯೋರ್ವರು ಸಾವಿಗೀಡಾಗಿದ್ದಾರೆ. ಇಂಡಿ ತಾಲೂಕಿನ ಅಂಜುಟಗಿ ಗ್ರಾಮದ ತೋಟದ ಮನೆಯಲ್ಲಿ ಈ ದುರ್ಘಟನೆ ನಡೆದಿದೆ. ಮಹಾದೇವಿ ನಿಂಬರಗಿ (50) ಸಿಡಿಲಿಗೆ ಬಲಿಯಾದ ನತದೃಷ್ಟೆಯಾಗಿದ್ದು, ಝಳಕಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ನಡೆದಿದೆ.
ಮುಂದಿನ ಮೂರು ದಿನಗಳ ಕಾಲ ರಾಜ್ಯದ ಬಹುತೇಕ ಜಿಲ್ಲೆಗಳಲ್ಲಿ ಮಳೆ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ಸೂಚನೆ ನೀಡಿದೆ. ಉತ್ತರ ಕನ್ನಡ, ಉಡುಪಿ, ಬೆಳಗಾವಿ, ಬೀದರ್, ಧಾರವಾಡ, ಗದಗ, ಕಲಬುರಗಿ, ಹಾವೇರಿ ಸೇರಿದಂತೆ ವಿಜಯಪುರದಲ್ಲಿ ಮಳೆಯಾಗುವ ಸಾಧ್ಯತೆಗಳು ಹೆಚ್ಚಾಗಿವೆ. ಜೊತೆಗೆ ಬೆಂಗಳೂರು ಗ್ರಾಮಾಂತರ, ಬೆಂಗಳೂರು ನಗರ, ಹಾಸನ, ಕೊಡಗು, ಶಿವಮೊಗ್ಗ ಜಿಲ್ಲೆಗಳಲ್ಲಿ ಮಳೆಯಾಗಲಿದೆ.
ಇದನ್ನೂ ಓದಿ: ಅಕಾಲಿಕ ಆಲಿಕಲ್ಲು ಮಳೆಗೆ ಬೆಳೆ ನಾಶ; ಚಿಕ್ಕಬಳ್ಳಾಪುರ ರೈತರಲ್ಲಿ ಹೆಚ್ಚಿದ ಆತಂಕ