AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಇಂದು ಅಂಗಾಂಗ ದಾನಕ್ಕೆ ಹೆಸರು ನೋಂದಣಿ ಮಾಡಲಿರುವ ಮುಖ್ಯಮಂತ್ರಿ

ಆರೋಗ್ಯ ಇಲಾಖೆಯಿಂದ ವಿಶ್ವ ಅಂಗಾಂಗ ದಾನ ದಿನಾಚರಣೆ ಪ್ರಯುಕ್ತ ವಿಶೇಷ ಜಾಗೃತಿ ಕಾರ್ಯಕ್ರಮ ಆಯೋಜಿಸಲಾಗಿದೆ. ಈ ಕಾರ್ಯಕ್ರಮದಲ್ಲಿ ಇಂದು ಸಿಎಂ ಬಸವರಾಜ ಬೊಮ್ಮಾಯಿ ಮತ್ತು ಸಚಿವ ಡಾ.ಸುಧಾಕರ್ ಅವರು ಅಂಗಾಂಗ ದಾನಕ್ಕೆ ಹೆಸರು ನೋಂದಾಯಿಸಿಕೊಳ್ಳಲಿದ್ದಾರೆ.

ಇಂದು ಅಂಗಾಂಗ ದಾನಕ್ಕೆ ಹೆಸರು ನೋಂದಣಿ ಮಾಡಲಿರುವ ಮುಖ್ಯಮಂತ್ರಿ
ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ
TV9 Web
| Updated By: Rakesh Nayak Manchi|

Updated on: Aug 13, 2022 | 10:19 AM

Share

ಬೆಂಗಳೂರು: ಆರೋಗ್ಯ ಮತ್ತು ವೈದ್ಯಕೀಯ ಶಿಕ್ಷಣ ಸಚಿವ ಡಾ.ಕೆ.ಸುಧಾಕರ್‌ ನೇತೃತ್ವದಲ್ಲಿ ಆರೋಗ್ಯ ಇಲಾಖೆಯಿಂದ ವಿಶ್ವ ಅಂಗಾಂಗ ದಾನ ದಿನಾಚರಣೆ ಪ್ರಯುಕ್ತ ವಿಶೇಷ ಜಾಗೃತಿ ಕಾರ್ಯಕ್ರಮ ಆಯೋಜಿಸಲಾಗಿದೆ. ಈ ಕಾರ್ಯಕ್ರಮದಲ್ಲಿ ಬಸವರಾಜ ಬೊಮ್ಮಾಯಿ (Basavaraj Bommai) ಅವರು ಅಂಗಾಂಗ ದಾನಕ್ಕೆ ಹೆಸರು ನೋಂದಣಿ ಮಾಡಲಿದ್ದಾರೆ. ಅಮೃತ ಮಹೋತ್ಸವ ಹಿನ್ನಲೆಯಲ್ಲೂ ಈ ಕಾರ್ಯಕ್ರಮ ಪ್ರಾಮುಖ್ಯತೆಯನ್ನು ಪಡೆದಿದ್ದು, ಬೆಂಗಳೂರು ನಗರದ ಮೇಖ್ರಿ ಸರ್ಕಲ್‌ನಿಂದ ಫ್ರೀಡಂ ಪಾರ್ಕ್‌ವರೆಗೆ ಅಂಗಾಂಗ ದಾನ ಜಾಗೃತಿ ಅಭಿಯಾನ ರ್ಯಾಲಿ ನಡೆಯಲಿದೆ. ಈ ರ್ಯಾಲಿಯಲ್ಲಿ ಸಿಎಂ ಬೊಮ್ಮಾಯಿ ಅವರು ಕೂಡ ಭಾಗಿಯಾಗಲಿದ್ದಾರೆ. ಆಶಾ ಕಾರ್ಯಕರ್ತೆಯರು ಹಾಗೂ ವಿದ್ಯಾರ್ಥಿಗಳು ಸೇರಿದಂತೆ ಸುಮಾರು 5 ಸಾವಿರಕ್ಕೂ ಹೆಚ್ಚು ಜನರು ಮಾನವ ಸರಪಳಿ ನಿರ್ಮಿಸಿ ಕಾರ್ಯಕ್ರಮಕ್ಕೆ ಕೈಜೋಡಿಸಿದ್ದಾರೆ.

ಇಂದು ರಾಜ್ಯಾಂದ್ಯ ವಿಶ್ವ ಅಂಗಾಂಗ ದಿನಾಚರಣೆಯನ್ನು ಆಚರಿಸಲಾಗುತ್ತಿದ್ದು, ಆರೋಗ್ಯ ಇಲಾಖೆಯಿಂದ ಆಯೋಜಿಸಲಾದ ವಿಶೇಷ ಜಾಗೃತಿ ಕಾರ್ಯಕ್ರಮದಲ್ಲಿ ಬಸವರಾಜ ಬೊಮ್ಮಾಯಿ ಜೊತೆ ಆರೋಗ್ಯ ಸಚಿವ ಡಾ.ಕೆ.ಸುಧಾಕರ್ ಸೇರಿದಂತೆ ಇನ್ನಿತರರು ಕೂಡ ಅಂಗಾಂಗ ದಾನಕ್ಕೆ ಹೆಸರು ನೋಂದಾಯಿಸಲಿದ್ದಾರೆ. ಇದಕ್ಕೂ ಮುನ್ನ ನಡೆಯಲಿರುವ ಜಾಗೃತಿ ಕಾರ್ಯಕ್ರಮದ ರ್ಯಾಲಿ ಮೇಖ್ರಿ ಸರ್ಕಲ್‌ನಿಂದ ಆರಂಭವಾಗಿ ಫ್ರೀಡಂಪಾರ್ಕ್ ಮೂಲಕ ಹಾದುಹೋಗಿ ವಿಧಾನಸೌಧಕ್ಕೆ ತಲುಪಲಿದೆ. ವಿಧಾನಸೌಧದಲ್ಲಿ ಅಂಗಾಂಗ ದಾನಿಗಳ ಕುಟುಂಬದವರಿಗೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಸನ್ಮಾನ ಮಾಡಲಿದ್ದು, ಬಳಿಕ ಅಂಗಾಂಗ ದಾನಕ್ಕೆ ಹೆಸರು ನೋಂದಾಯಿಸಿಕೊಳ್ಳಲಿದ್ದಾರೆ. ಅಷ್ಟೇ ಅಲ್ಲದೆ ತ್ರಿಪುರ ವಾಸಿನಿಯಲ್ಲಿ ಆರೋಗ್ಯ ಕ್ಷೇತ್ರದ ಹಲವರು ಮೂತ್ರಪಿಂಡದ ಆಕಾರದಲ್ಲಿ ನಿಂತುಕೊಂಡು ಜಾಗೃತಿ ಮೂಡಿಸಲಾಗುತ್ತದೆ. ಈಗಾಗಲೇ ಸಾವಿರ ಸಂಖ್ಯೆಯಲ್ಲಿ ವಿದ್ಯಾರ್ಥಿಗಳು ಜಮಾಯಿಸಿದ್ದಾರೆ.

ನಿವಾಸದಲ್ಲಿ ಧ್ವಜಾರೋಹಣ ಮಾಡಿದ ಸಿಎಂ

ಹರ್ ಘರ್ ತಿರಂಗಾ ಅಭಿಯಾನ ಹಿನ್ನೆಲೆ ತಮ್ಮ ಬೆಂಗಳೂರು ಆರ್​.ಟಿ.ನಗರದಲ್ಲಿರುವ ನಿವಾಸದಲ್ಲಿ ಬಸವರಾಜ ಬೊಮ್ಮಾಯಿ ಅವರು ಧ್ವಜಾರೋಹಣ ನೆರವೇರಿಸಿದರು. ಧ್ವಜರಾರೋಹಣದ ವೇಳೆ ರಾಷ್ಟ್ರಗೀತೆ ಹಾಡಲಾಗಿದ್ದು, ಸಿಎಂ ಪತ್ನಿ, ಮಗ ಮತ್ತು ಆರೋಗ್ಯ ಸಚಿವ ಸುಧಾಕರ್ ಇದ್ದರು.

ನಂತರ ಮಾತನಾಡಿದ ಮುಖ್ಯಮಂತ್ರಿ, ಇಂದಿನಿಂದ ದೇಶದೆಲ್ಲೆಡೆ ಹರ್ ಘರ್ ತಿರಂಗಾ ನಡೆಯಲಿದೆ. ರಾಜ್ಯದಲ್ಲಿ ಹರ್ ಘರ್ ತಿರಂಗ ಯಶಸ್ವಿಗೊಳಿಸಲು ಎಲ್ಲ ಕ್ರಮ ಕೈಗೊಳ್ಳಲಾಗಿದ್ದು, ಎಲ್ಲ ಗ್ರಾಮ ಪಂಚಾಯಿತಿಗಳಿಗೂ ಧ್ವಜ‌ ವಿತರಣೆ ಮಾಡಲಾಗಿದೆ. ಈಗಾಗಲೇ 1 ಕೋಟಿ 8 ಲಕ್ಷ ಧ್ವಜಗಳನ್ನು ವಿತರಿಸಿದ್ದೇವೆ. ರಾಜ್ಯದಲ್ಲಿ 1.20 ಕೋಟಿಗೂ ಹೆಚ್ಚು ಕಡೆ ತಿರಂಗಾ ಹಾರಿಸಲಾಗುತ್ತದೆ ಎಂದರು.

ಜನೋತ್ಸವಕ್ಕೆ ಜನರ ಉತ್ಸಾಹ

ರಾಜ್ಯ ಬಿಜೆಪಿ ಸರ್ಕಾರದ ಸಾಧನೆಯನ್ನು ಜನರ ಮುಂದಿಡಲು ಆಯೋಜಿಸಿದ್ದ ಜನೋತ್ಸವ ಸಮಾವೇಶ ಬಿಜೆಪಿ ಯುವ ಮುಖಂಡ ಪ್ರವೀಣ್ ನೆಟ್ಟಾರು ಹತ್ಯೆ ಹಿನ್ನೆಲೆ ರದ್ದಾಗಿತ್ತು. ಈ ಸಮಾವೇಶದ ಬಗ್ಗೆ ಪ್ರತಿಕ್ರಿಯೆ ನೀಡಿದ ಮುಖ್ಯಮಂತ್ರಿ, ಜನರು ಸಮಾವೇಶ ನಡೆಸಬೇಕು ಎಂದು ಒತ್ತಾಯ ಮಾಡಿದ್ದಾರೆ. ಜನರ ಉತ್ಸಾಹಕ್ಕೆ ಮಣಿದು ನಾವು ಕಾರ್ಯಕ್ರಮ ಮಾಡುತ್ತಿದ್ದೇವೆ ಎಂದರು.

ಅಂಗಾಂಗ ದಾನದ ಪ್ರತಿಜ್ಞೆ ಮಾಡುವಂತೆ ಆರೋಗ್ಯ ಸಚಿವರ ಮನವಿ

ಆರೋಗ್ಯ ಸಚಿವ ಕೆ ಸುಧಾಕರ್ ಅವರುವಿಶ್ವ ಅಂಗದಾನ ದಿನದ ಸಂದರ್ಭದಲ್ಲಿ ಅಂಗಾಂಗ ದಾನದ ಪ್ರತಿಜ್ಞೆಯನ್ನು ತೆಗೆದುಕೊಳ್ಳುವಂತೆ ಜನರಲ್ಲಿ ಮನವಿ ಮಾಡಿದ್ದಾರೆ. “ಈ ಆಜಾದಿ ಕಿ ಅಮೃತ್ ಮಹೋತ್ಸವದ ಸಂದರ್ಭದಲ್ಲಿ ಯಾರೊಬ್ಬರ ಜೀವನಕ್ಕಾಗಿ “ಅಮೃತ” ಆಗಿರುವ ನಿಮ್ಮ ಅಂಗಗಳನ್ನು ದಾನ ಮಾಡಲು ಪ್ರತಿಜ್ಞೆ ಮಾಡಿ. ಸಿಎಂ ಬೊಮ್ಮಾಯಿ ಅವರು ಅಂಗಾಂಗ ದಾನದ ಪ್ರತಿಜ್ಞೆಯನ್ನೂ ಮಾಡಲಿದ್ದಾರೆ. ಅವರೊಂದಿಗೆ ನಾನೂ ಇತರ ಅಧಿಕಾರಿಗಳೊಂದಿಗೆ ಪ್ರತಿಜ್ಞೆ ಮಾಡುತ್ತೇನೆ ಎಂದು ಸಚಿವರು ಹೇಳಿದರು.