ಬಿಸಿಯೂಟದಲ್ಲಿ ಹುಳುಗಳು ಪತ್ತೆ: ಟಿವಿ9 ವರದಿ ಇಂಪ್ಯಾಕ್ಟ್; ಶಾಲೆಗಳಿಗೆ ಬಂತು ಗುಣಮಟ್ಟದ ಬೇಳೆ

ಸರ್ಕಾರಿ ಶಾಲೆಗಳಲ್ಲಿ ಮಕ್ಕಳ ನೀಡುವ ಬಿಸಿಯೂಟದಲ್ಲಿ ಹುಳುಗಳು ಪತ್ತೆಯಾಗಿದ್ದವು. ಇದು ಪೋಷಕರ ಆಕ್ರೋಶಕ್ಕೆ ಕಾರಣವಾಗಿತ್ತು. ಟಿವಿ9 ವರದಿ ಬೆನ್ನಲ್ಲೇ ಎಚ್ಚೆತ್ತ ರಾಜ್ಯ ಮಕ್ಕಳ ಹಕ್ಕುಗಳ ಆಯೋಗ ಸ್ವಯಂಪ್ರೇರಿತ ದೂರು ದಾಖಲಿಸಿ ಕ್ರಮ ಕೈಗೊಂಡಿದೆ. ಪರಿಣಾಮವಾಗಿ, ಶಾಲೆಗಳಿಗೆ ಗುಣಮಟ್ಟದ ಆಹಾರ ಧಾನ್ಯಗಳು ಪೂರೈಕೆಯಾಗಿದೆ.

ಬಿಸಿಯೂಟದಲ್ಲಿ ಹುಳುಗಳು ಪತ್ತೆ: ಟಿವಿ9 ವರದಿ ಇಂಪ್ಯಾಕ್ಟ್; ಶಾಲೆಗಳಿಗೆ ಬಂತು ಗುಣಮಟ್ಟದ ಬೇಳೆ
ಗುಣಮಟ್ಟದ ಬೇಳೆ

Updated on: Dec 20, 2025 | 9:05 PM

ಬೆಂಗಳೂರು, ಡಿಸೆಂಬರ್​ 20: ಅನ್ನದಲ್ಲೂ ಹುಳು (maggots), ಸಾಂಬರ್​​ನಲ್ಲೂ ಹುಳು, ಅಕ್ಕಿ, ಬೇಳೆಗಳಲ್ಲೂ ಹುಳುವೋ ಹುಳು. ಸರ್ಕಾರಿ ಶಾಲೆಗಳಲ್ಲಿ ಮಕ್ಕಳಿಗೆ ನೀಡುತ್ತಿರುವ ಬಿಸಿಯೂಟ ಅಧ್ವಾನ ಎದ್ದಿದೆ. ವಿದ್ಯಾರ್ಥಿಗಳಿಗೆ ನೀಡುತ್ತಿರುವ ಕಳಪೆ ಆಹಾರದ ವಿರುದ್ಧ ಟಿವಿ9 ಸಮರ ಸಾರಿದ್ದು, ಶಾಲೆಗಳಲ್ಲಿನ ಕರ್ಮಕಾಂಡವನ್ನೂ ತೆರೆದಿಟ್ಟಿದೆ. ವರದಿ ಇಂಪ್ಯಾಕ್ಟ್ ಬೆನ್ನಲ್ಲೇ ಶಾಲೆಗಳಿಗೆ ಗುಣಮಟ್ಟದ ಬೇಳೆ ಬಂದಿದೆ. ಮತ್ತೊಂದೆಡೆ ರಾಜ್ಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗ ಸ್ವಯಂಪ್ರೇರಿತ ದೂರು ದಾಖಲಿಸಿಕೊಂಡಿದೆ.

ಚಿಕ್ಕಮಗಳೂರಲ್ಲೂ ‘ಹುಳು ಊಟದ’ ಕರ್ಮಕಾಂಡ!

ಇಂದು ಚಿಕ್ಕಮಗಳೂರು ಜಿಲ್ಲೆಯ ಕಡೂರಿನ ಬಿಟ್ಟೇನಹಳ್ಳಿ ಸರ್ಕಾರಿ ಶಾಲೆಯಲ್ಲಿ ಮಕ್ಕಳಿಗೆ ಪೂರೈಸ್ತಿದ್ದ ಊಟದಲ್ಲಿ ಕೂಡ ಹುಳು ಪತ್ತೆ ಆಗಿದೆ. ಇವತ್ತು ಅಡುಗೆ ಮನೆಗೆ ತೆರೆಳಿದ್ದ ಪೋಷಕರು, ಅನ್ನ, ಸಾಂಬರ್​​​ನಲ್ಲಿ ಹುಳು ಕಂಡು ಕೆರಳಿದ್ದಾರೆ. ಆದರೆ ಸರ್ಕಾರದಿಂದ ಬರೋದೆ ಹೀಗೆ ನಾವೇನ್ ಮಾಡೋಣ ಅಂತ ಶಿಕ್ಷಕರು ಅಳಲು ತೋಡಿಕೊಂಡಿದ್ದಾರೆ.

ಶಾಲೆಗೆ ರಾಜ್ಯ ಮಕ್ಕಳ ಆಯೋಗದ ಅಧ್ಯಕ್ಷರ ಭೇಟಿ

ಯಾದಗಿರಿಯ ರಾಮಸಮುದ್ರ ಗ್ರಾಮದ ಸರ್ಕಾರಿ ಪ್ರೌಢ ಶಾಲೆಯಲ್ಲಿ, ಬಿಸಿಯೂಟಕ್ಕೆ ಬಳಸ್ತಿದ್ದ ಅಕ್ಕಿ, ತೊಗರಿ ಬೇಳೆಯಲ್ಲಿ ಹುಳು ತುಂಬಿ ತುಳುಕುತ್ತಿದ್ದವು. ಕೊಯಿಲೂರಿನ ಶಾಲೆಯಲ್ಲೂ ನುಶಿ ಹಾಗೂ ಬಾಲದುಳು ಇರುವ ಗೋಧಿಯನ್ನೇ ಮಕ್ಕಳ ಊಟಕ್ಕೆ ಬಳಕೆ ಮಾಡ್ತಿದ್ದರು. ಈ ಬಗ್ಗೆ ಟಿವಿ9 ವರದಿ ಪ್ರಸಾರ ಮಾಡಿತ್ತು. ಇದೀಗ ರಾಜ್ಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗದ ಅಧ್ಯಕ್ಷರು, ರಾಮಸಮುದ್ರದ ಶಾಲೆಗೆ ದಿಢೀರ್​ ಭೇಟಿ ಕೊಟ್ಟು, ಪರಿಶೀಲಿಸಿದರು. ಕಳಪೆ ಗುಣಮಟ್ಟದ ಬೇಳೆ ಪೂರೈಕೆಗೆ ಕಿಡಿಕಾರಿದ್ದು, ವರದಿ ಸಲ್ಲಿಕೆಗೆ ಸೂಚಿಸಿದ್ದಾರೆ.

ಇದನ್ನೂ ಓದಿ: ಮಧ್ಯಾಹ್ನದ ಬಿಸಿಯೂಟದ ತುಂಬ ಹುಳಗಳ ರಾಶಿ! ಪೋಷಕರು ಕೆಂಡಾಮಂಡಲ

ಇನ್ನು ಟಿವಿ9 ವರದಿ ಆಧರಿಸಿ ರಾಜ್ಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗ ಸ್ವಯಂಪ್ರೇರಿತ ದೂರು ದಾಖಲಿಸಿಕೊಂಡಿದೆ. ಈ ಬಗ್ಗೆ ಕಲಬುರಗಿಯಲ್ಲಿ ಅಧ್ಯಕ್ಷ ಶಶೀಧರ್ ಕೋಸುಂಬೆ ಪ್ರತಿಕ್ರಿಯಿಸಿದ್ದು, ಟಿವಿ9 ವರದಿ ನೋಡಿ ಎಲ್ಲಾ ಡಿಡಿಪಿಐಗಳಿಗೆ ಸೂಚಿಸಿದ್ದೇನೆ. 3 ದಿನದೊಳಗೆ ಸಮಗ್ರ ವರದಿ ನೀಡಲು ರಾಜ್ಯ ಬಿಸಿಯೂಟ ಯೋಜನೆ ಉಪಕಾರ್ಯರ್ಶಿಗೆ ಪತ್ರ ಬರೆದಿದ್ದೇನೆ ಎಂದು ಹೇಳಿದ್ದಾರೆ.

ಟಿವಿ9 ಇಂಪ್ಯಾಕ್ಟ್​: ಶಾಲೆಗೆ ಬಂತು ಗುಣಮಟ್ಟದ ಬೇಳೆ

ತುಮಕೂರಿನ ವಡ್ಡರಹಳ್ಳಿ ಸರ್ಕಾರಿ ಶಾಲೆಯಲ್ಲಿ ಹಾಳಾದ ತೊಗರಿ ಬೇಳೆ ಬಗ್ಗೆ ಟಿವಿ9 ನಿನ್ನೆ ವರದಿ ಪ್ರಸಾರ ಮಾಡಿತ್ತು. ಗುಡಿಪಾಳ್ಯದ ಶಾಲೆಯಲ್ಲಿನ ಬೇಳೆಗೆ ಬಂದ ದುಸ್ಥಿತಿಯನ್ನ ತೆರೆದಿಟ್ಟಿತ್ತು. ಇದೀಗ ಅಕ್ಷರ ದಾಸೋಹ ಅಧಿಕಾರಿಗಳು ಎಚ್ಚೆತ್ತಿದ್ದು, ಶಾಲೆಗಳಿಗೆ ಗುಣಮಟ್ಟದ ತೊಗರಿ ಬೇಳೆ ಪೂರೈಸಿದ್ದಾರೆ.

ಇದನ್ನೂ ಓದಿ: ಯಾದಗಿರಿ: ಶಾಲಾ ಮಕ್ಕಳ ಬಿಸಿಯೂಟಕ್ಕೆ ಹುಳ ಬಿದ್ದಿರೋ ಅಕ್ಕಿ ಬೇಳೆ; TV9 ರಿಯಾಲಿಟಿ ಚೆಕ್​ನಲ್ಲಿ ಬಯಲಾಯ್ತು ಅಸಲಿಯತ್ತು

ಹುಳು ಬಿದ್ದ ತೊಗರಿ ಬೇಳೆಗಳನ್ನು ಅಧಿಕಾರಿಗಳು ಗುತ್ತಿಗೆದಾರರಿಗೆ ವಾಪಾಸ್ ಕಳುಹಿಸಿದ್ದಾರೆ. ಈಗಾಗಲೇ ತುಮಕೂರಿನ ಗುಬ್ಬಿ ಗೇಟ್​​ ಬಳಿಯ ಗೋಡೌನ್​​​ಗೆ 179 ಕ್ವಿಂಟಾಲ್​ ಬೇಳೆ ಬಂದಿದೆ. ಎಲ್ಲಾ ಶಾಲೆಗಳಿಗೆ ಗುಣಮಟ್ಟದ ಬೇಳೆ ವಿತರಣೆಗೆ ಅಧಿಕಾರಿಗಳು ಮುಂದಾಗಿದ್ದಾರೆ. ಆ ಮೂಲಕ ಮಕ್ಕಳು ಹಾಗೂ ಪೋಷಕರು ನಿಟ್ಟುಸಿರು ಬಿಟ್ಟಿದ್ದಾರೆ.

ಬ್ಯುರೋ ರಿಪೋರ್ಟ್, ಟಿವಿ9

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.