AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಮಧ್ಯಾಹ್ನದ ಬಿಸಿಯೂಟದ ತುಂಬ ಹುಳಗಳ ರಾಶಿ! ಪೋಷಕರು ಕೆಂಡಾಮಂಡಲ

ಸರ್ಕಾರಿ ಶಾಲೆ ಮಕ್ಕಳಿಗಾಗಿ ಸರ್ಕಾರ ಬಿಸಿಯೂಟ ಯೋಜನೆ ಜಾರಿಗೊಳಿಸಿದೆ. ಇದಕ್ಕಾಗಿ ಕೋಟಿ ಕೋಟಿ ರೂಪಾಯಿ ಹಣವನ್ನೂ ನೀಡುತ್ತಿದೆ. ಆದರೆ, ಇದೊಂದು ಜಿಲ್ಲೆಯಲ್ಲಿ ಈ ಯೋಜನೆ ಅಧ್ವಾನ ಹಿಡಿದಿದೆ. ವಿದ್ಯಾರ್ಥಿಗಳಿಗೆ ನೀಡಿದ ಮಧ್ಯಾಹ್ನದ ಬಿಸಿಯೂಟ‌ದಲ್ಲಿ ಹುಳುಗಳ ರಾಶಿಯೇ ಕಾಣಿಸಿದೆ! ಪೋಷಕರು ಶಾಲೆ ವಿರುದ್ಧ ಸಿಟ್ಟಾಗಿದ್ದಾರೆ.

ಮಧ್ಯಾಹ್ನದ ಬಿಸಿಯೂಟದ ತುಂಬ ಹುಳಗಳ ರಾಶಿ! ಪೋಷಕರು ಕೆಂಡಾಮಂಡಲ
ಊಟದಲ್ಲಿ ಹುಳ ಮತ್ತು ಹಾಳಾಗಿರುವ ಬೇಳೆ
ಶಿವಕುಮಾರ್ ಪತ್ತಾರ್
| Updated By: Ganapathi Sharma|

Updated on: Dec 16, 2025 | 6:33 AM

Share

ಕೊಪ್ಪಳ, ಡಿಸೆಂಬರ್ 16: ಕೊಪ್ಪಳ (Koppal) ತಾಲೂಕಿನ ಎರಡು ಶಾಲೆಗಳಲ್ಲಿ ಮಧ್ಯಾಹ್ನದ ಬಿಸಿಯೂಟ ಯೋಜನೆ ಸಂಪೂರ್ಣ ಹಳ್ಳ ಹಿಡದಿದೆ. ಮದ್ಯಾಹ್ನದ ಬಿಸಿಯೂಟದಲ್ಲಿ (Mid Day Meal) ಹುಳುಗಳು ಪತ್ತೆಯಾಗಿವೆ. ಕೊಪ್ಪಳ ತಾಲೂಕಿನ ಬಿಸರಳ್ಳಿಯ ನೃಪತುಂಗ ಶಾಲೆಯಲ್ಲಿ ಮಕ್ಕಳಿಗೆ ನೀಡಿದ ಬಿಸಿಯೂಟದಲ್ಲಿ ಹುಳುಗಳು ಪತ್ತೆಯಾಗಿವೆ. ಯಾವಾಗ ಮಕ್ಕಳ ಊಟದಲ್ಲಿ ಹುಳುಗಳು ಪತ್ತೆಯಾಗಿರುವ ವಿಷಯ ಪೋಷಕರ ಗಮನಕ್ಕೆ ಬಂತೋ, ಅವರು ಶಾಲಾ ಸಿಬ್ಬಂದಿಯನ್ನು ತರಾಟೆಗೆ ತಗೆದುಕೊಂಡಿದ್ದಾರೆ. ಮುಖ್ಯವಾಗಿ ಸಾಂಬಾರ್​​ಗೆ ಬಳಸುವ ಬೇಳೆಗಳು ನುಶಿ ಹಿಡಿದಿವೆ. ಬಹುತೇಕ ಮಕ್ಕಳು ಶಾಲೆಯಲ್ಲಿ ಸಾಂಬಾರ್ ಊಟ ಮಾಡೋದನ್ನೇ ಬಿಟ್ಟಿದ್ದಾರೆ ಎನ್ನಲಾಗಿದೆ.

ನೃಪತುಂಗ ಶಾಲೆಯ ಜೊತೆಗೆ ಕೊಪ್ಪಳ ತಾಲೂಕಿನ ಹೊಸ ನಿಂಗಾಪೂರ ಸರ್ಕಾರಿ ಶಾಲೆಯಲ್ಲಿ ಅನ್ನದಲ್ಲಿ ಹುಳು ಪತ್ತೆಯಾಗಿದೆ. ಊಟದಲ್ಲಿ ಹುಳ ಪತ್ತೆಯಾದ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ಸಾರ್ವಜನಿಕರ ಗಮನಕ್ಕೆ ಬಂದಿದೆ. ಪೋಷಕರು ಬಿಸಿಯೂಟದ ಕುರಿತು ಆಕ್ರೋಶ ಹೊರಹಾಕಿದ್ದಾರೆ.

ಕೊಪ್ಪಳದ ಹೆಚ್ಚಿನ ಶಾಲೆಗಳಲ್ಲಿ ಇದೇ ಸಮಸ್ಯೆ

ಕೊಪ್ಪಳ ಜಿಲ್ಲೆಯ ಬಹುತೇಕ ಶಾಲೆಗಳಲ್ಲಿ ಈ ಸಮಸ್ಯೆ ಎದುರಾಗಿದೆ. ಮುಖ್ಯವಾಗಿ ಬೇಳೆಗಳಲ್ಲಿ ಹುಳುಗಳು ಪತ್ತೆಯಾಗುತ್ತಿವೆ ಎನ್ನಲಾಗಿದೆ. ಕೆಲ ಶಾಲೆಗಳಲ್ಲಿ ಶಿಕ್ಷಕರು ಬೇಳೆಗಳನ್ನ ಬಿಸಲಿಗೆ ಒಣಗಿಸಿ ಸಾಂಬಾರ್​​ಗೆ ಬಳಸುತ್ತಾರೆ ಎನ್ನಲಾಗಿದೆ. ಕೆಲವರು ಹಾಗೇ ಬಳಸುತ್ತಿರುವುರಿಂದ ಹುಳುಗಳು ಪತ್ತೆಯಾಗಿವೆ. ಇನ್ನು ಹೊಸ ನಿಂಗಾಪೂರ ಶಾಲೆಯ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಸಾಕಷ್ಟು ವೈರಲ್ ಆಗಿದ್ದು, ಆ ವಿಡಿಯೋದಲ್ಲಿ ಪುಟ್ಟ ವಿದ್ಯಾರ್ಥಿಕ ಕೈ ತುಂಬಾ ನುಶಿಗಳು ಕಂಡು ಬಂದಿತ್ತು.

ಅಧಿಕಾರಿಗಳು ಹೇಳುವುದೇನು?

ಮೂರು ತಿಂಗಳಿಂದ ರೇಷನ್ ಸರಬಾರಾಜು ಆಗಿಲ್ಲ, ಹೀಗಾಗಿ ಸ್ಟಾಕ್ ಇದೆ. ಇದರಿಂದ ಕೆಲವು ಕಡೆ ಹುಳುಗಳು ಪತ್ತೆಯಾಗಿವೆ ಎಂಬುದು ಅಕ್ಷರ ದಾಸೋಹ ಅಧಿಕಾರಿಗಳ ಮಾತು. ಇನ್ನು ನೃಪತುಂಗ ಶಾಲೆಯ ವಿಡಿಯೋಗಳು ಈಗಾಗಲೇ ಜಿಲ್ಲಾಡಳಿತದ ಗಮನಕ್ಕೆ ಬಂದಿದ್ದು, ಶಾಲೆಗೆ ಮುಖ್ಯ ಶಿಕ್ಷಕರಿಗೆ ನೋಟಿಸ್ ಜಾರಿ ಮಾಡಲಾಗಿದೆ ಎಂದಿದ್ದಾರೆ.

ಬಿಸಿಯೂಟದಲ್ಲಿ ಹುಳಗಳು ಪತ್ತೆಯಾದ ಬಗ್ಗೆ ‘ಟಿವಿ9’ ನಿರಂತರ ವರದಿ ಮಾಡಿದೆ. ಆ ಬಳಿಕ ಎಚ್ಚೆತ್ತ ಇಲಾಖೆ ಅಧಿಕಾರಿಗಳು‌ ಇಂದು ಕೊಪ್ಪಳ ವಲಯ ವ್ಯಾಪ್ತಿಯ ಶಾಲಾ ಮುಖ್ಯ ಶಿಕ್ಷಕರ ಸಭೆ ಕರೆದಿದ್ದಾರೆ. ವಲಯವಾರು ಮುಖ್ಯ ಶಿಕ್ಷಕರ ಸಭೆ ಕರೆದಿದ್ದು, ಅಕ್ಷರ ದಾಸೋಹ ಅಧಿಕಾರಿಗಳ ನೇತೃತ್ವದಲ್ಲಿ ಶಾಲಾ ಮುಖ್ಯ ಶಿಕ್ಷಕರ ಜೊತೆ ಸಭೆ ನಡೆಯಲಿದೆ.

ಇದನ್ನೂ ಓದಿ: ವಾರದ ಹಿಂದಷ್ಟೇ ಮದ್ವೆಯಾಗಿದ್ದ ಜೋಡಿಯನ್ನು ಅಗಲಿಸಿದ ಜಾತಿ: ಹೆಂಡ್ತಿಬೇಕೆಂದು ಎಸ್ಪಿ ಮೊರೆ ಹೋದ ಯುವಕ

ಒಟ್ಟಾರೆ, ಕೊಪ್ಪಳ ಜಿಲ್ಲೆಯಲ್ಲಿ ಬಿಸಿಯೂಟ ಸಂಪೂರ್ಣ ಹಾಳಾಗಿ ಹೋಗಿದೆ. ಸರ್ಕಾರ ಕೋಟ್ಯಂತರ ರೂಪಾಯಿ ಖರ್ಚು ಮಾಡಿದರೂ, ಗುತ್ತಿಗೆದಾರರು ಕಳಪೆ ಮಟ್ಟದ ಆಹಾರ ಪೂರೈಕೆ ಮಾಡುತ್ತಿರುವುದೇ ಇದಕ್ಕೆಲ್ಲ ಕಾರಣ ಎನ್ನಲಾಗಿದೆ.

ಕರ್ನಾಟಕದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ