ಯಾದಗಿರಿ: ಇಮ್ಲಾಪುರದಲ್ಲಿ ಕಲುಷಿತ ನೀರು ಸೇವನೆಯಿಂದ ವಾಂತಿ ಭೇದಿ, 54 ಮಂದಿ ಆಸ್ಪತ್ರೆಗೆ ದಾಖಲು
ಕಲುಷಿತ ನೀರು ಸೇವನೆಯಿಂದಾಗಿ 54 ಜನರಿಗೆ ವಾಂತಿ ಭೇದಿಯಾಗಿ ಆಸ್ಪತ್ರೆಗೆ ದಾಖಲಾದ ಘಟನೆ ಯಾದಗಿರಿ ಜಿಲ್ಲೆಯ ಗುರುಮಠಕಲ್ ತಾಲೂಕಿನ ಇಮ್ಲಾಪುರ ಗ್ರಾಮದಲ್ಲಿ ನಡೆದಿದೆ.
ಯಾದಗಿರಿ: ಜಿಲ್ಲೆಯ ಗುರುಮಠಕಲ್ ತಾಲೂಕಿನ ಇಮ್ಲಾಪುರ ಗ್ರಾಮದಲ್ಲಿ ಕಲುಷಿತ ನೀರು (Contaminated water) ಸೇವನೆಯಿಂದ ಉಂಟಾದ ವಾಂತಿ (Vomiting) ಭೇದಿ ಪ್ರಕರಣ ಉಲ್ಬಣಗೊಂಡಿದೆ. ನಿನ್ನೆಯಿಂದ ಈವರೆಗೆ 54 ಮಂದಿಗೆ ವಾಂತಿ ಮತ್ತು ಭೇದಿಯಾಗಿದ್ದು (Dysentery), ಈ ಪೈಕಿ 22 ಮಂದಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ. ಉಳಿದವರಿಗೆ ಮನೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.
ವಾಂತಿ ಭೇದಿ ಪ್ರಕರಣಗಳು ಉಲ್ಬಣಗೊಂಡ ಹಿನ್ನೆಲೆ ಗುರುಮಠಕಲ್ ಸರ್ಕಾರಿ ಆಸ್ಪತ್ರೆ ಸೇರಿದಂತೆ ವಿವಿಧ ಕಡೆಗಳಲ್ಲಿ ರೋಗಿಗಳಿಗೆ ಚಿಕಿತ್ಸೆ ನೀಡಲಾಗುತ್ತಿದ್ದು, ಇಮ್ಲಾಪುರ ಗ್ರಾಮದ ಸರ್ಕಾರಿ ಶಾಲೆಯಲ್ಲಿ ತಾತ್ಕಾಲಿಕ ಕೇಂದ್ರ ತೆರೆದು 8 ಮಂದಿಗೆ ಚಿಕಿತ್ಸೆ ನೀಡಲಾಗುತ್ತಿದೆ.
ಇಮ್ಲಾಪುರ ಗ್ರಾಮಕ್ಕೆ ಓವರ್ ಹೆಡ್ ಟ್ಯಾಂಕ್ ಮೂಲಕ ನೀರು ಪೂರೈಕೆ ಮಾಡಲಾಗುತ್ತಿದೆ. ಆದರೆ, ನೀರು ಪೂರೈಕೆ ವೇಳೆ ಎರಡು ಲಿಕೇಜ್ ಪತ್ತೆಯಾಗಿವೆ. ಲಿಕೇಜ್ನಿಂದ ಕುಡಿಯುವ ನೀರಿಗೆ ಕಲುಷಿತ ನೀರು ಸೇರ್ಪಡೆಯಾಗಿರುವ ಸಾಧ್ಯತೆ ಇದ್ದು. ವಾಂತಿ ಭೇದಿ ಪ್ರಕರಣಗಳು ಆರಂಭಗೊಂಡ ನಂತರ ಗ್ರಾಮಕ್ಕೆ ಪೂರೈಕೆಯಾಗುವ ನೀರು ಸ್ಥಗಿತಗೊಳಿಸಲಾಗಿದೆ.
ಸದ್ಯ ಗ್ರಾಮದ ಜನರಿಗೆ ಟ್ಯಾಂಕರ್ ಮೂಲಕ ನೀರು ಪೂರೈಕೆ ಮಾಡಲಾಗುತ್ತಿದೆ. ಗ್ರಾಮಕ್ಕೆ ಆರೋಗ್ಯ ಇಲಾಖೆ, ಜಿಲ್ಲಾ ಪಂಚಾಯತ್ ಉಪ ಕಾರ್ಯದರ್ಶಿ ಅಮರೇಶ ನಾಯಕ ಮತ್ತು ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಈ ವೇಳೆ ಮಾತನಾಡಿದ ಅಮರೇಶ ನಾಯಕ, ಗ್ರಾಮಕ್ಕೆ ಟ್ಯಾಂಕರ್ ಮೂಲಕ ನೀರು ಪೂರೈಕೆ ಮಾಡಲಾಗುತ್ತಿದೆ. ಕಲುಷಿತಗೊಂಡ ನೀರಿನ ಮಾದರಿ ಸಂಗ್ರಹ ಮಾಡಲಾಗಿದೆ. ಇದರ ವರದಿ ಬಂದ ನಂತರ ಗೊತ್ತಾಗಲಿದೆ. ಲಿಕೇಜ್ ಇದ್ದಲ್ಲಿ ದುರಸ್ತಿ ಮಾಡಲಾಗುತ್ತದೆ ಎಂದರು.
ಕೊಪ್ಪಳ ಜಿಲ್ಲೆ ಕನಕಗಿರಿ ತಾಲೂಕಿನ ಬಸರಿಹಾಳ ಗ್ರಾಮದಲ್ಲಿ 30ಕ್ಕೂ ಹೆಚ್ಚು ಜನರು ವಾಂತಿ ಬೇಧಿಯಾಗಿ ಅಸ್ವಸ್ಥಗೊಂಡಿದ್ದರು. ಈ ಪೈಕಿ ಒಂದೂವರೆ ವರ್ಷದ ಮಗು ತಾವರಗೇರೆ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದಿತ್ತು. ನಂತರ ಹೊನ್ನಮ್ಮ ಎಂಬ ವೃದ್ದೆ ಸಾವನ್ನಪ್ಪಿದ್ದರು. ಆದರೆ ವೃದ್ಧೆಗೆ ಬೇರೆ ಬೇರೆ ಕಾಯಿಲೆಗಳಿದ್ದವು ಎಂದು ಕೊಪ್ಪಳ ಡಿಹೆಚ್ಓ ತಿಳಿಸಿದ್ದರು. ಇದಾದ ನಂತರ ಬಿಜಕಲ್ ಗ್ರಾಮದಲ್ಲಿ ಕಲುಷಿತ ನೀರು ಸೇವೆನೆಯಿಂದ 15 ಕ್ಕೂ ಹೆಚ್ಚು ಜನ ಆಸ್ಪತ್ರೆಗೆ ದಾಖಲಾಗಿದ್ದರು. ಈ ಪೈಕಿ ಬಾಲಕಿ ಸಾವನ್ನಪ್ಪಿದ್ದಳು.
Published On - 5:27 pm, Tue, 27 June 23