ಅಗತ್ಯಕ್ಕಿಂತ ಕಡಿಮೆ ಪ್ರಮಾಣದಲ್ಲಿ ರಸಗೊಬ್ಬರ ಪೂರೈಕೆ; ಬೆಳೆ ಕಳೆದುಕೊಳ್ಳುವ ಆತಂಕದಲ್ಲಿ ಅನ್ನದಾತರು

| Updated By: preethi shettigar

Updated on: Aug 28, 2021 | 12:20 PM

ಸರ್ಕಾರದಿಂದ ಪೂರೈಕೆ ಆಗಬೇಕಾಗಿದ್ದ ರಸಗೊಬ್ಬರ ಇಲ್ಲಿಯವರೆಗೆ ಪೂರೈಕೆ ಆಗಿಲ್ಲ. ಇನ್ನು ಜಿಲ್ಲೆಗೆ ಒಟ್ಟು ಇಲ್ಲಿವರೆಗೆ 30 ಸಾವಿರ ಮೇಟ್ರಿಕ್ ಟನ್ ನಷ್ಟು ರಸಗೊಬ್ಬರ ಡಿಎಪಿ ಪೂರೈಕೆ ಆಗಬೇಕಿತ್ತು. ಆದರೆ ಇಲ್ಲಿವರೆಗೆ ಆಗಿದ್ದು ಅರ್ಧದಷ್ಟು ಮಾತ್ರ.

ಅಗತ್ಯಕ್ಕಿಂತ ಕಡಿಮೆ ಪ್ರಮಾಣದಲ್ಲಿ ರಸಗೊಬ್ಬರ ಪೂರೈಕೆ; ಬೆಳೆ ಕಳೆದುಕೊಳ್ಳುವ ಆತಂಕದಲ್ಲಿ ಅನ್ನದಾತರು
ರೈತ ಸಂಪರ್ಕ ಕೇಂದ್ರ
Follow us on

ಯಾದಗಿರಿ: ಜಿಲ್ಲೆಯ ರೈತರು ಕಳೆದ ಮೂರು ವರ್ಷಗಳಿಂದ ಭೀಮಾ ಮತ್ತು ಕೃಷ್ಣ ನದಿ ಪ್ರವಾಹಕ್ಕೆ ತುತ್ತಾಗಿ ಕಂಗಲಾಗಿದ್ದಾರೆ. ಈ ವರ್ಷವು ಕೂಡ ಕೃಷ್ಣ ನದಿ ಪ್ರವಾಹದಿಂದ ಅಪಾರ ಪ್ರಮಾಣದ ಬೆಳೆಯನ್ನು ಕಳೆದುಕೊಂಡಿದ್ದಾರೆ. ಆದರೆ ಪ್ರವಾಹ ತಗ್ಗಿದ ಮೇಲೆ ಹೇಗೋ ಚೇರಿಸಿಕೊಂಡು ರೈತರು ಜಿಲ್ಲೆಯಲ್ಲಿ ಭತ್ತವನ್ನು ನಾಟಿ ಮಾಡಿದ್ದರು. ಆದರೆ ಭತ್ತ ನಾಟಿ ಮಾಡಿದ ರೈತರಿಗೆ ಈಗ ತೀವ್ರವಾಗಿ ರಸಗೊಬ್ಬರ ಕೊರತೆ ಉಂಟಾಗಿದ್ದು, ಇದ್ದ ಬೆಳೆಯನ್ನೂ ಕಳೆದುಕೊಳ್ಳುವ ಆತಂಕ ಎದುರಾಗಿದೆ.

ಯಾದಗಿರಿ ಜಿಲ್ಲೆಯ ರೈತರು ಕಳೆದ ಮೂರು ವರ್ಷದಿಂದ ಪ್ರಕೃತಿ ವಿಕೋಪಕ್ಕೆ ಒಳಗಾಗಿ ನಲುಗುತ್ತಿದ್ದಾರೆ. ಬೆಳೆಯನ್ನು ಕಳೆದುಕೊಂಡ ರೈತರು ಈ ಬಾರಿ ಮುಂಗಾರು ಬೆಳೆಯಾಗಿ ಸಾಲ ಸೂಲ ಮಾಡಿ ಮತ್ತೆ ಭತ್ತ ನಾಟಿ ಮಾಡಿದ್ದಾರೆ. ಪ್ರತಿ ಎಕರೆಗೆ 25 ರಿಂದ 30 ಸಾವಿರ ರೂ. ಖರ್ಚು ಮಾಡಿ ಭತ್ತವನ್ನು ನಾಟಿ ಮಾಡಿದ್ದಾರೆ. ಆದರೆ ಈಗ ಜಿಲ್ಲೆಯ ರೈತರಿಗೆ ಮತ್ತೊಂದು ಆತಂಕ ಎದುರಾಗಿದೆ.

ಭತ್ತ ಸೇರಿದಂತೆ ಹತ್ತಿ ಬೆಳೆದ ರೈತರಿಗೆ ಈಗ ಜಿಲ್ಲೆಯಲ್ಲಿ ತೀವ್ರವಾಗಿ ಡಿಎಪಿ ರಸಗೊಬ್ಬರ ಕೊರತೆ ಎದುರಾಗಿದೆ. ಕಳೆದ ಒಂದು ತಿಂಗಳ ಹಿಂದೆ ನಾಟಿ ಮಾಡಿರುವ ಭತ್ತದ ಬೆಳೆಗೆ ಮೊದಲನೇ ಹಂತದಲ್ಲಿ ನೀಡಬೇಕಾಗಿದ್ದ ಡಿಎಪಿ ಈಗ ತಕ್ಷಣವೇ ನೀಡಬೇಕಾಗಿದೆ. ಆದರೆ ಜಿಲ್ಲೆಯಲ್ಲಿ ಎಲ್ಲಿ ಹುಡುಕಿದರೂ ಡಿಎಪಿ ರಸಗೊಬ್ಬರ ಸಿಗುತ್ತಿಲ್ಲ. ರೈತರು ಜಿಲ್ಲೆಯ ಎಲ್ಲಾ ರಸಗೊಬ್ಬರ ಅಂಗಡಿಗಳಿಗೆ ಹಾಗೂ ಕೃಷಿ ಇಲಾಖೆ ಅಧಿಕಾರಿಗಳ ಕಚೇರಿಗೆ ಸುತ್ತಿ ಸುಸ್ತಾಗಿ ಹೋಗಿದ್ದಾರೆ. ಆದರೆ ಜಿಲ್ಲೆಯಲ್ಲಿ ಮಾತ್ರ ರಸಗೊಬ್ಬರ ಸಿಗುತ್ತಿಲ್ಲ ಎಂದು ರೈತ ಮುಖಂಡರಾದ ಲಕ್ಮೀಕಾಂತ ತಿಳಿಸಿದ್ದಾರೆ.

ಜಿಲ್ಲೆಯಲ್ಲಿ 3.2 ಲಕ್ಷ ಹೆಕ್ಟರ್ ಪ್ರದೇಶದಲ್ಲಿ ಮುಂಗಾರು ಬಿತ್ತನೆ ಮಾಡಲಾಗಿದೆ. ಅದರಲ್ಲಿ ಹೆಚ್ಚಿನ ಪ್ರಮಾಣದಲ್ಲಿ ರೈತರು ಹತ್ತಿ ಬಿತ್ತನೆ ಮಾಡಿದರೆ, 94 ಸಾವಿರ ಹೆಕ್ಟರ್ ಪ್ರದೇಶದಲ್ಲಿ ಭತ್ತ ನಾಟಿ ಮಾಡಿದ್ದಾರೆ. ಆದರೆ ಭತ್ತದ ಬೆಳೆಗೆ ಕಾಲ ಕಾಲಕ್ಕೆ ಡಿಎಪಿ ರಸಗೊಬ್ಬರ ಹಾಕಲೇ ಬೇಕಾಗಿದೆ. ಆದರೆ ಜಿಲ್ಲೆಯಲ್ಲಿ ರಸಗೊಬ್ಬರ ಅಭಾವ ಎದ್ದು ಕಾಣುತ್ತಿದೆ.

ಸರ್ಕಾರದಿಂದ ಪೂರೈಕೆ ಆಗಬೇಕಾಗಿದ್ದ ರಸಗೊಬ್ಬರ ಇಲ್ಲಿಯವರೆಗೆ ಪೂರೈಕೆ ಆಗಿಲ್ಲ. ಇನ್ನು ಜಿಲ್ಲೆಗೆ ಒಟ್ಟು ಇಲ್ಲಿವರೆಗೆ 30 ಸಾವಿರ ಮೇಟ್ರಿಕ್ ಟನ್ ನಷ್ಟು ರಸಗೊಬ್ಬರ ಡಿಎಪಿ ಪೂರೈಕೆ ಆಗಬೇಕಿತ್ತು. ಆದರೆ ಇಲ್ಲಿವರೆಗೆ ಆಗಿದ್ದು ಅರ್ಧದಷ್ಟು ಮಾತ್ರ. ಆದರೆ ಕಳೆದ ಒಂದು ತಿಂಗಳ ಹಿಂದೆ ಭತ್ತ ನಾಟಿ ಮಾಡಿದ್ದ ರೈತರಿಗೆ ಬೆಳೆ ಉಳಿಸಿಕೊಳ್ಳಬೇಕು ಜೊತೆಗೆ ಹೆಚ್ಚು ಇಳುವರಿ ಬರಬೇಕು ಅಂದರೆ ಈ ಕೂಡಲೆ ಡಿಎಪಿ ರಸಗೊಬ್ಬರ ಪೂರೈಕೆ ಮಾಡಬೇಕಾಗಿದೆ.

ಜಿಲ್ಲೆಯ ಕೃಷಿ ಅಧಿಕಾರಿಗಳು ಸಹ ಸರ್ಕಾರಕ್ಕೆ ಡಿಎಪಿ ಪೂರೈಕೆ ಬಗ್ಗೆ ಪ್ರಸ್ತಾವನೆ ಸಲ್ಲಿಸಿದ್ದಾರೆ ಎಂದು ಹೇಳುತ್ತಿದ್ದಾರೆ. ಆದರೆ ಲಾಕ್​ಡೌನ್​ ಸೇರಿದಂತೆ ನಾನಾ ಕಾರಣಗಳಿಂದ ಉತ್ಪಾದನೆ ಕಡಿಮೆ ಪ್ರಮಾಣದಲ್ಲಿ ಆಗಿದೆ. ಇದೆ ಕಾರಣದಿಂದ ಜಿಲ್ಲೆಗೆ ರಸಗೊಬ್ಬರ ಪೂರೈಕೆ ಆಗುತ್ತಿಲ್ಲ ಎನ್ನುವ ಮಾತುಗಳು ಕೇಳಿ ಬರುತ್ತಿದೆ. ಈ ಬಗ್ಗೆ ಜಂಟಿ ಕೃಷಿ ನಿರ್ದೇಶಕರಿಗೆ ಕೇಳಿದರೆ ಆದಷ್ಟು ಬೇಗ ಅಂದರೆ ನಾಳೆ ನಾಡಿದ್ದರಲ್ಲಿ ಜಿಲ್ಲೆಗೆ ಡಿಎಪಿ ರಸಗೊಬ್ಬರ ಪೂರೈಕೆ ಆಗಲಿದೆ ಎಂದು ಹೇಳಿದ್ದಾರೆ.

ಒಟ್ಟಿನಲ್ಲಿ ಪ್ರವಾಹಕ್ಕೆ ಸಿಲುಕಿ ನಲುಗಿದ್ದ ಅನ್ನದಾತರು ಹೇಗೋ ಚೇರಿಸಿಕೊಂಡು ಮುಂಗಾರು ಬೆಳೆಯನ್ನು ಬೆಳೆದಿದ್ದಾರೆ. ಆದರೆ ಜಿಲ್ಲೆಯಲ್ಲಿ ರಸಗೊಬ್ಬರ ಕೊರತೆ ಎದ್ದು ಕಾಣುತ್ತಿದ್ದು, ಇದ್ದ ಬೆಳೆಯನ್ನು ಕಳೆದುಕೊಳ್ಳುವ ಆತಂಕ ಸದ್ಯ ಎದುರಾಗಿದೆ.

ವರದಿ: ಅಮೀನ್ ಹೊಸುರ್

ಇದನ್ನೂ ಓದಿ:
ರಾಜ್ಯದಲ್ಲಿ ಹೆಸರು ಕಾಳು ಖರೀದಿ ಕೇಂದ್ರ ಆರಂಭಕ್ಕೆ ಸೂಚನೆ; ಧಾರವಾಡ ರೈತರ ಮೊಗದಲ್ಲಿ ಮಂದಹಾಸ

ಡಿಎಪಿ ರಸಗೊಬ್ಬರ ಮೇಲಿನ ಸಬ್ಸಿಡಿಯನ್ನು 140% ಹೆಚ್ಚಿಸಿ ರೈತರಿಗೆ ದೊಡ್ಡ ಕೊಡುಗೆ ನೀಡಿದ ಕೇಂದ್ರ ಸರ್ಕಾರ