ಒಬ್ಬ ಅತಿಥಿ ಶಿಕ್ಷಕ, ಎರಡು ಕಡೆ ಸಂಬಳ!: ತನಿಖೆಗೆ ಆದೇಶಿಸಿದ ಯಾದಗಿರಿಯ ಅಧಿಕಾರಿಗಳು

ಯಾದಗಿರಿ ಜಿಲ್ಲೆಯಲ್ಲಿ ಅತಿಥಿ ಶಿಕ್ಷಕರೊಬ್ಬರು ಒಂದೇ ಬಾರಿಗೆ ಎರಡು ಸರ್ಕಾರಿ ಶಾಲೆಗಳಲ್ಲಿ ಕಾರ್ಯನಿರ್ವಹಿಸಿ ಎರಡೂ ಕಡೆಯಿಂದ ವೇತನ ಪಡೆದ ಆರೋಪ ಕೇಳಿಬಂದಿದ್ದು, ಶಿಕ್ಷಣ ಇಲಾಖೆ ಅಧಿಕಾರಿಗಳು ತನಿಖೆಗೆ ಆದೇಶಿಸಿದ್ದಾರೆ. ಜಿಲ್ಲೆಯ ಹುಣಸಗಿ ತಾಲೂಕಿನ ಬಚಿಮಟ್ಟಿ ಮತ್ತು ವಜ್ಜಲ್ ಸರ್ಕಾರಿ ಪ್ರೌಢಶಾಲೆಗಳಲ್ಲಿ ಏಕಕಾಲಕ್ಕೆ ಅವರು ಕಾರ್ಯನಿರ್ವಹಿಸುತ್ತಿದ್ದರು ಎನ್ನಲಾಗಿದೆ.

ಒಬ್ಬ ಅತಿಥಿ ಶಿಕ್ಷಕ, ಎರಡು ಕಡೆ ಸಂಬಳ!: ತನಿಖೆಗೆ ಆದೇಶಿಸಿದ ಯಾದಗಿರಿಯ ಅಧಿಕಾರಿಗಳು
ಸಾಂದರ್ಭಿಕ ಚಿತ್ರ
Image Credit source: Getty Images

Updated on: Oct 05, 2026 | 7:02 AM

ಯಾದಗಿರಿ, ಅಕ್ಟೋಬರ್​​ 05: 2025-26ನೇ ಶೈಕ್ಷಣಿಕ ಸಾಲಿನಲ್ಲಿ ಏಕಕಾಲದಲ್ಲಿ ಎರಡು ಸರ್ಕಾರಿ ಪ್ರೌಢಶಾಲೆಗಳಲ್ಲಿ ಕೆಲಸ ಮಾಡಿ, ಎರಡೂ ಶಾಲೆಗಳಿಂದ ವೇತನ ಪಡೆದಿದ್ದಾರೆ ಎಂಬ ಆರೋಪದ ಹಿನ್ನೆಲೆಯಲ್ಲಿ ಅತಿಥಿ ಶಿಕ್ಷಕರೋರ್ವರ ವಿರುದ್ಧ ತನಿಖೆ ಆರಂಭವಾಗಿರುವ ಘಟನೆ ಯಾದಗಿರಿಯಲ್ಲಿ ನಡೆದಿದೆ. ಜಿಲ್ಲೆಯ ಹುಣಸಗಿ ತಾಲ್ಲೂಕಿನ ಬಚಿಮಟ್ಟಿ ಮತ್ತು ವಜ್ಜಲ್ ಸರ್ಕಾರಿ ಪ್ರೌಢಶಾಲೆಗಳಲ್ಲಿ ರಮೇಶ್ ರಾಥೋಡ್ ಏಕಕಾಲದಲ್ಲಿ ಕಾರ್ಯನಿರ್ವಹಿಸುತ್ತಿದ್ದರು ಎನ್ನಲಾಗಿದೆ.

ಒಂದೇ ಬ್ಯಾಂಕ್​​ ಖಾತೆಯ ಮೂಲಕ ವೇತನ

ಈ ಸಂಬಂಧ ಸುರಪುರ ಬ್ಲಾಕ್ ಶಿಕ್ಷಣಾಧಿಕಾರಿ ಹಾಗೂ ಯಾದಗಿರಿ ಸಾರ್ವಜನಿಕ ಶಿಕ್ಷಣ ಇಲಾಖೆಯ ಉಪನಿರ್ದೇಶಕರು ತನಿಖಾ ತಂಡ ರಚಿಸಿದ್ದು, ರಾಥೋಡ್ ಹಾಗೂ ಅವರಿಗೆ ಸಹಕರಿಸಿದ ಆರೋಪಿಗಳ ವಿರುದ್ಧ ಕಾನೂನು ಕ್ರಮಕ್ಕೆ ಮುಂದಾಗಿದ್ದಾರೆ. ದಾಖಲೆಗಳ ಪ್ರಕಾರ, ಪರಸ್ಪರ 12 ಕಿ.ಮೀ. ಅಂತರದಲ್ಲಿರುವ ಬಚಿಮಟ್ಟಿ ಮತ್ತು ವಜ್ಜಲ್ ಸರ್ಕಾರಿ ಪ್ರೌಢಶಾಲೆಗಳಿಂದ ರಾಥೋಡ್ ಅವರು ಕಕ್ಕೇರಾದ ಒಂದೇ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಖಾತೆಯ ಮೂಲಕ ವೇತನ ಪಡೆದಿದ್ದಾರೆ. 2025ರ ಜುಲೈ ತಿಂಗಳ ಎರಡೂ ಶಾಲೆಗಳ ಹಾಜರಾತಿ ಪುಸ್ತಕಗಳಲ್ಲೂ ಅವರ ಹೆಸರು ದಾಖಲಾಗಿದೆ.

ಇದನ್ನೂ ಓದಿ: ಭೀಮಾ ನದಿ ಸೇರುತ್ತಿದೆ ವಿಷಕಾರಿ ನೀರು, ತ್ಯಾಜ್ಯ: ಜನ-ಜಾನುವಾರುಗಳ ಜೀವಕ್ಕೇ ಕುತ್ತು

DDO ಕೋಡ್ 303460 ಹೊಂದಿರುವ ರಾಥೋಡ್ ಅವರು ಬಚಿಮಟ್ಟಿ ಶಾಲೆಯಲ್ಲಿ ಮೂರು ವರ್ಷಗಳ ಕಾಲ ಅತಿಥಿ ಶಿಕ್ಷಕರಾಗಿ ಕಾರ್ಯನಿರ್ವಹಿಸಿದ್ದರು. ಅಗತ್ಯ ದಾಖಲೆಗಳನ್ನು ಸಲ್ಲಿಸಿದ ಬಳಿಕ 2025-26ನೇ ಶೈಕ್ಷಣಿಕ ಸಾಲಿಗೆ DDO ಕೋಡ್ 303820 ಹೊಂದಿರುವ ವಜ್ಜಲ್ ಶಾಲೆಯಲ್ಲೂ ಅವರನ್ನು ನೇಮಕ ಮಾಡಲಾಗಿತ್ತು. ವಜ್ಜಲ್ ಶಾಲೆಯಿಂದ ಅವರ ವೇತನವನ್ನು K-2 ಬಿಲ್ ಟೋಕನ್ ಸಂಖ್ಯೆ 2515442080 ಮೂಲಕ ಪಾವತಿಸಲಾಗಿದ್ದರೆ, ಬಚಿಮಟ್ಟಿ ಶಾಲೆಯಿಂದ ಟೋಕನ್ ಸಂಖ್ಯೆ 2516812864 ಮೂಲಕ ಹಣ ಜಮೆಯಾಗಿತ್ತು.

ಅತಿಥಿ ಶಿಕ್ಷಕರು ಒಂದು ಶಾಲೆಯಲ್ಲಿ ಪೂರ್ಣಾವಧಿ ಕಾರ್ಯನಿರ್ವಹಿಸಬೇಕಿರುವುದರಿಂದ, ಈ ವ್ಯವಸ್ಥೆ ಹೇಗೆ ಮುಂದುವರಿಯಿತು ಹಾಗೂ ಈ ಬಗ್ಗೆ ಶಾಲೆಗಳ ಮುಖ್ಯ ಶಿಕ್ಷಕರಿಗೆ ಮಾಹಿತಿ ಇತ್ತೇ ಎಂಬ ಪ್ರಶ್ನೆಗಳು ಎದ್ದಿವೆ. ಬಚಿಮಟ್ಟಿ ಪ್ರೌಢಶಾಲೆಯ ಮುಖ್ಯ ಶಿಕ್ಷಕ ನಾನಗೌಡ ಬಿರಾದಾರ್ ಅವರು ಈ ಬಗ್ಗೆ ಪ್ರತಿಕ್ರಿಯಿಸಿದ್ದು, ರಾಥೋಡ್ ಮೂರು ವರ್ಷಗಳ ಕಾಲ ಶಾಲೆಯಲ್ಲಿ ಕೆಲಸ ಮಾಡಿದ್ದರು ಮತ್ತು ಅನಾರೋಗ್ಯದ ಕಾರಣ ಆಗಾಗ್ಗೆ ಗೈರುಹಾಜರಾಗುತ್ತಿದ್ದರು ಎಂದು ತಿಳಿಸಿದ್ದಾರೆ. ಹಿಂದಿ ಶಿಕ್ಷಕರ ಕೊರತೆಯಿದ್ದ ಕಾರಣ ರಾಥೋಡ್ ಅವರನ್ನು ನೇಮಕ ಮಾಡಲಾಗಿತ್ತು ಹಾಗೂ ಅವರಿಗೆ ಎಂಟು ತಿಂಗಳ ವೇತನ ಪಾವತಿಸಲಾಗಿತ್ತು ಎಂದು ವಜ್ಜಲ್ ಸರ್ಕಾರಿ ಪ್ರೌಢಶಾಲೆಯ ಮುಖ್ಯ ಶಿಕ್ಷಕ ಗುರುಬಸಪ್ಪ ಅಪ್ಪಗೋಳ ತಿಳಿಸಿದ್ದಾರೆ. ಅವರು ಮತ್ತೊಂದು ಶಾಲೆಯಲ್ಲೂ ಕೆಲಸ ಮಾಡುತ್ತಿರುವುದು ಅಧಿಕಾರಿಗಳ ಗಮನಕ್ಕೆ ಬಂದ ಬಳಿಕ ರಾಥೋಡ್ ಅವರನ್ನು ಕರ್ತವ್ಯದಿಂದ ಬಿಡುಗಡೆ ಮಾಡಲಾಗಿತ್ತು. ಆದರೆ, ಬಳಿಕ ರಾಥೋಡ್ ಅವರು ಲಿಖಿತ ಮುಚ್ಚಳಿಕೆ ಸಲ್ಲಿಸಿದ ನಂತರ ಮತ್ತೆ ವಜ್ಜಲ್ ಶಾಲೆಗೆ ಕರ್ತವ್ಯಕ್ಕೆ ಹಾಜರಾಗಿದ್ದರು ಎಂದು ತಿಳಿಸಿದ್ದಾರೆ ಎಂದು ದಿ ಟೈಮ್ಸ್​​ ಆಫ್​​ ಇಂಡಿಯಾ ವರದಿ ಮಾಡಿದೆ.

ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್​​ ಮಾಡಿ.

ಪ್ರಸನ್ನ ಹೆಗಡೆ

ಪ್ರಸನ್ನ ಹೆಗಡೆ ಹುಟ್ಟಿದ್ದು ಉತ್ತರ ಕನ್ನಡ ಜಿಲ್ಲೆಯ ಕುಮಟಾ ತಾಲೂಕು. 9 ವರ್ಷಗಳಿಂದ ಪತ್ರಕರ್ತನಾಗಿ ಕೆಲಸ ಮಾಡಿರುವ ಅನುಭವವಿದೆ. ಮುದ್ರಣ, ಟಿವಿ ಮತ್ತು ಡಿಜಿಟಲ್​ ಮಾಧ್ಯಮಗಳಲ್ಲಿ ವಿವಿಧ ಜವಾಬ್ದಾರಿ ನಿಭಾಯಿಸಿದ್ದೇನೆ. ರಾಜಕೀಯ, ಸಿನಿಮಾ ವಿಷಯಗಳಲ್ಲಿ ಹೆಚ್ಚಿನ ಆಸಕ್ತಿ ಇದೆ. ಕವನಗಳ ರಚನೆ, ಪುಸ್ತಕಗಳನ್ನ ಓದುವುದು ನೆಚ್ಚಿನ ಹವ್ಯಾಸಗಳು.

Read More
Loading...
Unable to load recommendations.
Follow Us