ಯಾದಗಿರಿ, ಮೇ 15: ರಾಜ್ಯದಲ್ಲಿ ಭೀಕರ ಬರಗಾಲವಿದ್ದ ಸಂದರ್ಭದಲ್ಲಿಯೂ ನೆರೆಯ ತಮಿಳುನಾಡಿಗೆ ಕಾವೇರಿ ನೀರು ಬಿಟ್ಟು ಜನತೆಯ ಹಾಗೂ ಪ್ರತಿಪಕ್ಷಗಳ ಕೆಂಗಣ್ಣಿಗೆ ಗುರಿಯಾಗಿದ್ದ ಕಾಂಗ್ರೆಸ್ ಸರ್ಕಾರ (Congress Government) ಇದೀಗ ಮತ್ತೆ ಅಂಥದ್ದೇ ಯಡವಟ್ಟು ಮಾಡಿಕೊಂಡಿದೆ. ಯಾದಗಿರಿ (Yadgir) ಜಿಲ್ಲೆಯ ಹುಣಸಗಿ ತಾಲೂಕಿನ ನಾರಾಯಣಪುರದ ಬಸವಸಾಗರ ಡ್ಯಾಂನಿಂದ (Basava Sagar Reservoir) ಕೃಷ್ಣಾ ನದಿಯ (Krishna River) ಮೂಲಕ ತೆಲಂಗಾಣಕ್ಕೆ ನೀರು ಹರಿಸಲಾಗುತ್ತಿದೆ ಎಂಬ ಆರೋಪ ಕೇಳಿಬಂದಿದೆ.
ಆರ್ಟಿಪಿಎಸ್ಗೆ ನೀರು ಹರಿಸುವ ನೆಪದಲ್ಲಿ ತೆಲಂಗಾಣಕ್ಕೆ ನೀರು ಹರಿಸಲಾಗುತ್ತಿದೆ ಎಂಬ ಆರೋಪಗಳು ಕೇಳಿಬಂದಿವೆ. ಬೇಸಿಗೆಯಲ್ಲಿ ಕುಡಿಯುವ ನೀರಿನ ಸಮಸ್ಯೆ ಇದ್ದರೂ ತೆಲಂಗಾಣಕ್ಕೆ ನೀರು ಬಿಡಲಾಗುತ್ತಿದೆ. ಡ್ಯಾಂನಲ್ಲಿ ನೀರು ಇಲ್ಲವೆಂದು ರೈತರ ಬೆಳೆಗೆ ನೀರು ಹರಿಸದ ಸರ್ಕಾರ ಈಗ ತೆಲಂಗಾಣಕ್ಕೆ ನೀರು ಬಿಡುತ್ತಿದೆ ಎಂದು ಸ್ಥಳೀಯರು ಆರೋಪಿಸಿದ್ದಾರೆ.
ಡ್ಯಾಂ ನೀರು ಬಿಡುಗಡೆ ಮಾಡುವಂತೆ ರೈತರು ಸಾಕಷ್ಟು ಪ್ರತಿಭಟನೆಯನ್ನೂ ನಡೆಸಿದ್ದರು. ಆದರೆ, ನೀರಿನ ಕೊರತೆ ಇದೆ ಎಂಬ ನೆಪ ಹೇಳಿದ್ದ ಸರ್ಕಾರ ರೈತರಿಗೆ ನೀರು ಬಿಟ್ಟಿರಲಿಲ್ಲ. ಇದೀಗ ಕೊರತೆ ಇದ್ದರೂ ತೆಲಂಗಾಣಕ್ಕೆ ನೀರು ಹರಿಸುತ್ತಿದೆ ಎಂದು ಹೇಳಲಾಗಿದೆ.
ಶಕ್ತಿ ನಗರದಲ್ಲಿರುವ ಆರ್ಟಿಪಿಎಸ್ ವಿದ್ಯುತ್ ಸ್ಥಾವರಕ್ಕೆ ಎಂಬ ನೆಪದಲ್ಲಿ ಮೇ 12 ರ ರಾತ್ರಿಯಿಂದ ಇಲ್ಲಿವರಗೆ 1.25 ಟಿಎಂಸಿ ನೀರು ಬಿಡುಗಡೆ ಮಾಡಲಾಗಿದೆ. 33.33 ಟಿಎಂಸಿ ಸಂಗ್ರಹ ಸಾಮರ್ಥ್ಯದ ಜಲಾಶಯದಲ್ಲಿ ಸದ್ಯ 14 ಟಿಎಂಸಿ ನೀರು ಮಾತ್ರ ಸಂಗ್ರಹವಿದೆ.
ಯಾದಗಿರಿ ಹಾಗೂ ರಾಯಚೂರು ಗಡಿಭಾಗದ ಗುರ್ಜಾಪುರನಲ್ಲಿ ಆರ್ಟಿಪಿಎಸ್ಗೆ ನೀರು ಒದಗಿಸಲು ಬ್ಯಾರೇಜ್ ನಿರ್ಮಾಣ ಮಾಡಲಾಗಿದೆ. ಈ ಬ್ಯಾರೇಜ್ನಿಂದ ಹೇರಳವಾಗಿ ನೀರು ತೆಲಂಗಾಣ ಪಾಲಾಗುತ್ತಿದೆ.
ಇದನ್ನೂ ಓದಿ: ಮೇ 15ರ ರಾಜ್ಯದ ಪ್ರಮುಖ ಡ್ಯಾಂಗಳ ನೀರಿನ ಮಟ್ಟದ ವಿವರ ಇಲ್ಲಿದೆ
ತೆಲಂಗಾಣದಲ್ಲಿ ಕುಡಿಯುವ ನೀರಿನ ಸಮಸ್ಯೆ ಸೃಷ್ಟಿಯಾಗಿರುವ ಕಾರಣ ಜುರಾಲಾ ಜಲಾಶಯಕ್ಕೆ ನೀರು ಹರಿಸಿತಾ ರಾಜ್ಯ ಸರ್ಕಾರ ಎಂಬ ಅನುಮಾನ ಈಗ ಬಲವಾಗಿದೆ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ