ಒಳ ಮೀಸಲಾತಿ ಜಾರಿ ವಿರೋಧಿಸಿ ಬೃಹತ್ ಪ್ರತಿಭಟನೆ; ಶಹಾಪುರದಲ್ಲಿ 144 ಸೆಕ್ಷನ್ ಜಾರಿ
ಒಳ ಮೀಸಲಾತಿ ಜಾರಿ ವಿರೋಧಿಸಿ ಶಹಾಪುರ ನಗರದಲ್ಲಿ ಇಂದು(ಏ.6) ಮೀಸಲಾತಿ ಸಂರಕ್ಷಣಾ ಒಕ್ಕೂಟ ನೇತೃತ್ವದಲ್ಲಿ ಬಂಜಾರ ಸಮುದಾಯದ ಜನರಿಂದ ಬೃಹತ್ ಪ್ರತಿಭಟನೆ ಕೈಗೊಳ್ಳಲಾಗಿದೆ. ಈ ಹಿನ್ನಲೆ ಚುನಾವಣೆ ಶಾಂತಿ ಸುವ್ಯವಸ್ಥೆ ಕಾಪಾಡುವ ದೃಷ್ಟಿಯಿಂದ ಶಹಾಪುರ ನಗರ ಹಾಗೂ ಶಹಾಪುರ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ಯಾದಗಿರಿ ಜಿಲ್ಲಾಧಿಕಾರಿ ಸ್ನೇಹಲ್.ಆರ್ ನಿಷೇಧಾಜ್ಙೆ ಜಾರಿಗೆ ಆದೇಶಿಸಿದ್ದಾರೆ.
ಯಾದಗಿರಿ: ಒಳ ಮೀಸಲಾತಿ ಜಾರಿ ವಿರೋಧಿಸಿ ಶಹಾಪುರ ನಗರದಲ್ಲಿ ಇಂದು(ಏ.6) ಮೀಸಲಾತಿ ಸಂರಕ್ಷಣಾ ಒಕ್ಕೂಟ ನೇತೃತ್ವದಲ್ಲಿ ಬಂಜಾರ ಸಮುದಾಯದ ಜನರಿಂದ ಬೃಹತ್ ಪ್ರತಿಭಟನೆ ಕೈಗೊಳ್ಳಲಾಗಿದೆ. ಈ ಹಿನ್ನಲೆ ಚುನಾವಣೆ ಶಾಂತಿ ಸುವ್ಯವಸ್ಥೆ ಕಾಪಾಡುವ ದೃಷ್ಟಿಯಿಂದ ಶಹಾಪುರ ನಗರ ಹಾಗೂ ಶಹಾಪುರ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ಯಾದಗಿರಿ ಜಿಲ್ಲಾಧಿಕಾರಿ ಸ್ನೇಹಲ್.ಆರ್ ನಿಷೇಧಾಜ್ಙೆ ಜಾರಿಗೆ ಆದೇಶಿಸಿದ್ದು, ಇವತ್ತು ಬೆಳಗ್ಗೆ 6 ಗಂಟೆಯಿಂದ ರಾತ್ರಿ 10 ಗಂಟೆಯವರೆಗೆ ನಿಷೇದಾಜ್ಞೆ ಜಾರಿಯಾಗಿದೆ. ಇನ್ನು ಶಹಾಪುರ ನಗರದ ಬಸವೇಶ್ವರ ಸರ್ಕಲ್ನಿಂದ ತಹಶೀಲ್ದಾರ್ ಕಚೇರಿಯವರೆಗೆ ಪ್ರತಿಭಟನಾ ಮೆರವಣಿಗೆಗೆ ಮುಂದಾಗಿದ್ದು, ಇವತ್ತು ಬೆಳಗ್ಗೆ 10 ಗಂಟೆಗೆ ಸಾವಿರಾರು ಜನ ಸೇರಿ ಪ್ರತಿಭಟನೆ ನಡೆಸಲಿದ್ದಾರೆ.
ಇತ್ತೀಚೆಗೆ ಬಿಜೆಪಿ ಸರ್ಕಾರ ರಾಜ್ಯದಲ್ಲಿ ವಿವಿಧ ಸಮುದಾಯಗಳಿಗೆ ಮೀಸಲಾತಿ ಘೋಷಣೆ ಮಾಡಿದೆ. ಒಕ್ಕಲಿಗರಿಗೆ 2 ಸಿ ಲಿಂಗಾಯತರಿಗೆ 2 ಡಿ, ಎಸ್ಸಿ ಎಸ್ಟಿ ಮೀಸಲಾತಿ ಹೆಚ್ಚಳ. ಛಲವಾದಿ ಹಾಗೂ ಇತರೆ ಸಮಯದಾಯಗಳಿಗೆ ಶೇಕಡಾ 5.5 ಹಾಗೂ ಬಂಜಾರ, ಕೊರಚ, ಕೊರಮ ಹಾಗೂ ಭೋವಿ ಸಮಾಜಕ್ಕೆ ಶೇಕಡಾ 4.5 ಮೀಸಲಾತಿ ನೀಡಿದ್ದು ಎಲ್ಲರಿಗೂ ಗೊತ್ತಿರುವ ವಿಚಾರ. ಆದರೆ ಬಂಜಾರ, ಕೊರಚ, ಕೊರಮ ಹಾಗೂ ಭೋವಿ ಸಮಾಜಕ್ಕೆ ಒಳ ಮೀಸಲಾತಿ ನೀಡಿದ್ದಕ್ಕೆ ರಾಜ್ಯದ ಕೆಲವು ಜಿಲ್ಲೆಗಳ ಬಂಜಾರ ಹಾಗೂ ಇತರೆ ಸಮಾಜದ ಜನರು ತೀವ್ರ ವಿರೋಧ ವ್ಯಕ್ತಪಡಿಸಿದ್ದಾರೆ. ಜೊತೆಗೆ ಸುಪ್ರೀಂ ಕೋರ್ಟ್ ಆದೇಶದ ಪ್ರಕಾರ ಒಳ ಮೀಸಲಾತಿ ಬದಲಾವಣೆಗೆ ಅವಕಾಶವಿಲ್ಲ. ಸುಪ್ರೀಂ ಕೋರ್ಟ್ ಆದೇಶ ಉಲ್ಲಂಘನೆ ಮಾಡಲಾಗಿದೆ ಎಂದು ಗಂಭೀರ ಆರೋಪ ಮಾಡುತ್ತಿದ್ದಾರೆ.
ಇದನ್ನೂ ಓದಿ:ಒಳಮೀಸಲಾತಿ ವಿರೋಧಿಸಿ ಬಂಜಾರ ಸಮುದಾಯದ ಸ್ವಾಮೀಜಿ ಆತ್ಮಹತ್ಯೆಗೆ ಯತ್ನ
ರಾಜ್ಯದಿಂದ ಕೇಂದ್ರಕ್ಕೆ ಶಿಫಾರಸ್ಸು
ರಾಜ್ಯದಲ್ಲಿ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದವರಿಗೆ ಶಿಕ್ಷಣ ಮತ್ತು ಉದ್ಯೋಗದಲ್ಲಿ ಮೀಸಲಾತಿ ಹೆಚ್ಚಳ ಮಾಡಲು ಜಾರಿಗೆ ತಂದಿರುವ ಕರ್ನಾಟಕ ಅನುಸೂಚಿತ ಜಾತಿ ಮತ್ತು ಅನುಸೂಚಿತ ಪಂಗಡಗಳ ಕಾಯ್ದೆ 2022 ನ್ನು ಸಂವಿಧಾನದ 9 ನೇ ಶೆಡ್ಯೂಲ್ನಲ್ಲಿ ಸೇರ್ಪಡೆಗೆ ಕೇಂದ್ರಕ್ಕೆ ರಾಜ್ಯ ಸರ್ಕಾರವು ಪ್ರಸ್ತಾವನೆ ಸಲ್ಲಿಸಿತ್ತು. ಈ ಕುರಿತು ರಾಜ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿ ವಂದಿತಾ ಶರ್ಮಾ ಅವರು ಕೇಂದ್ರ ಗೃಹ ಇಲಾಖೆ ಕಾರ್ಯದರ್ಶಿಯವರಿಗೆ ಪತ್ರ ಬರೆದಿದ್ದರು. ಈ ಕಾಯ್ದೆಯನ್ವಯ ರಾಜ್ಯದಲ್ಲಿ ಪರಿಶಿಷ್ಟ ಜಾತಿಯವರಿಗೆ ಮೀಸಲಾತಿ ಪ್ರಮಾಣ ಶೇ. 15 ರಿಂದ ಶೇ. 17 ಕ್ಕೆ ಹಾಗೂ ಪರಿಶಿಷ್ಟ ಪಂಗಡದವರಿಗೆ ಶೇ. 3 ರಿಂದ ಶೇ. 7 ಕ್ಕೆ ಹೆಚ್ಚಿಸಲಾಗಿದೆ. ಹೌದು ಇದೇ ಕಾರಣಕ್ಕೆ ಇದೀಗ ಬಂಜಾರ ಸಮುದಾಯದವರು ಇದಕ್ಕೆ ವಿರೋಧಿಸಿ ಹೋರಾಟ ಮಾಡುತ್ತಿದ್ದಾರೆ.
ಇನ್ನಷ್ಟು ರಾಜ್ಯಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 8:49 am, Thu, 6 April 23