ಯಾದಗಿರಿ: ಸತ್ತವರ ಹೆಸರಿನಲ್ಲಿ ಕೋಟ್ಯಂತರ ರೂಪಾಯಿ ಪಿಂಚಣಿ ಹಣವನ್ನು ಲೂಟಿ ಮಾಡಿರುವ ಪ್ರಕರಣ ಬೆಳಕಿಗೆ ಬಂದಿದೆ. ಅಂಚೆ ಸಿಬ್ಬಂದಿಯಿಂದಲೇ ಇಂತಹ ಮಹಾ ಮೋಸ ನಡೆದಿದೆ. ಅಂಚೆ ಇಲಾಖೆಯ ಖದೀಮರ ಗ್ಯಾಂಗ್ ಕೆಲ ಸತ್ತವರು ಹಾಗೂ ಬದುಕಿದವರ ಹೆಸರಿನಲ್ಲಿ ಪಿಂಚಣಿ ಹಣ ದೋಚಿದೆ. ಯಾದಗಿರಿ ಜಿಲ್ಲೆಯ ಶಹಾಪುರ ತಾಲೂಕಿನ ಗೋಗಿ ಗ್ರಾಮದ ಫಲಾನುಭವಿಗಳಿಗೆ ಹೀಗೆ ಪಂಗನಾಮ ಹಾಕಲಾಗಿದೆ. ವಿಧವೆಯರು, ವೃದ್ಯಾಪ್ಯ ವೇತನ ಬಾಬತ್ತಿನಲ್ಲಿ ಒಟ್ಟು 293 ಪಿಂಚಣಿ ಫಲಾನುಭವಿಗಳಿಗೆ ಮಹಾ ಮೋಸವೆಸಗಲಾಗಿದೆ. ಅಂಚೆ ಇಲಾಖೆ ಕೆಲ ನೌಕರರು ಬಡವರ ಹೆಸರಿನಲ್ಲಿ ಹಣ ವಿತ್ ಡ್ರಾ ಮಾಡಿರುವುದು ಬೆಳಕಿಗೆ ಬಂದಿದೆ. ಶಾಖಾ ಅಂಚೆ ಪಾಲಕ ಸರದಾರ ನಾಯಕ ಹಾಗೂ ಸಹಾಯಕ ಶಾಖಾ ಅಂಚೆ ಪಾಲಕ ತ್ರಿಶೂಲ್ ಅವರುಗಳು ಈ ಮೋಸದ ಕೃತ್ಯ ನಡೆಸಿರುವುದು ಪತ್ತೆಯಾಗಿದೆ. ಈ ಅಂಚೆ ನೌಕರರು ಕಲಬುರ್ಗಿ ಜಿಲ್ಲೆಯ ಜೇವರ್ಗಿ ತಾಲೂಕಿನ ಬಳಬಟ್ಟಿಯಲ್ಲಿ ಕಾರ್ಯನಿರ್ವಹಣೆ ಮಾಡುತ್ತಿದ್ದಾರೆ.
ಸರಕಾರದಿಂದ ಕಳೆದ ವರ್ಷ ಸೆಪ್ಟೆಂಬರ್ 14 ರಿಂದ ಕಳೆದ ತಿಂಗಳ ಮೇ ತಿಂಗಳವರಗೆ ಪಾವತಿಯಾದ ಪಿಂಚಣಿ ಹಣ ಇವರಿಬ್ಬರಿಂದ ಲೂಟಿಯಾಗಿದೆ. 1 ಕೋಟಿ 27 ಲಕ್ಷ ರೂಪಾಯಿ ಪಿಂಚಣಿ ಹಣವನ್ನು ಈ ಖದೀಮರು ವಿತ್ ಡ್ರಾ ಮಾಡಿಕೊಂಡಿದ್ದಾರೆ. ಗೋಗಿ ಪೊಲೀಸ್ ಠಾಣೆಯಲ್ಲಿ ಒಟ್ಟು ನಾಲ್ವರ ವಿರುದ್ಧ ಪ್ರಕರಣ ದಾಖಲಾಗಿದೆ.
ಬಂಧನದ ಭೀತಿ, ಓರ್ವ ಆರೋಪಿ ಆತ್ಮಹತ್ಯೆ: ಪ್ರಕರಣ ದಾಖಲಾಗುವ ಮುನ್ನವೇ ಓರ್ವ ಆರೋಪಿ ತ್ರಿಶೂಲ್ ಎಂಬುವವನು ಜೂನ್ 10 ರಂದು ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಪ್ರಕರಣ ಬೆಳಕಿಗೆ ಬಂದ ಹಿನ್ನೆಲೆ ಜೈಲು ಸೇರುವ ಆತಂಕದಿಂದ ಆತ ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಆತ್ಮಹತ್ಯೆ ಮಾಡಿಕೊಂಡ ನೌಕರ ತ್ರಿಶೂಲ್ ವಿರುದ್ಧವೂ ಪ್ರಕರಣ ದಾಖಲಾಗಿದೆ. ಸುರಪುರ ಉಪ ವಿಭಾಗದ ಅಂಚೆ ನಿರೀಕ್ಷಕ ಸಹನ್ ಕುಮಾರ ಅವರಿಂದ ನಾಲ್ವರ ವಿರುದ್ಧ ಪ್ರಕರಣ ದಾಖಲಾಗಿದೆ.
ಕೇಂದ್ರ ಸರ್ಕಾರದ ಟೆಂಡರ್ ಕೊಡಿಸುವ ನೆಪ: ಕೇಂದ್ರ ಕೃಷಿ ಸಚಿವೆ ಶೋಭಾ ಕರಂದ್ಲಾಜೆ ಆಪ್ತ ಊಟಿ ಪ್ರಕಾಶ ಎಂಬಾತನದಿಂದ ವಂಚನೆ
ಬೆಂಗಳೂರು: ಕೇಂದ್ರ ಕೃಷಿ ಸಚಿವೆ ಶೋಭಾ ಕರಂದ್ಲಾಜೆ ಆಪ್ತ ಎಂದು ಪರಿಚಯಿಸಿಕೊಂಡು ಊಟಿ ಮೂಲದ ಪ್ರಕಾಶ್ ಎಂಬಾತ ವಂಚನೆ ಎಸಗಿದ್ದಾನೆ. ಈ ಸಂಬಂಧ ಬೆಂಗಳೂರಿನ ಸಂಜಯ್ ನಗರ ಠಾಣೆಯಲ್ಲಿಪ್ರಕರಣ ದಾಖಲಾಗಿದೆ. ಊಟಿ ಪ್ರಕಾಶ ಊಟಿಯಲ್ಲಿ ವಂಚನೆ ಎಸಗಿದ್ದಾನೆ ಎಂದು ದೂರಲಾಗಿದೆ. ಸಚಿವೆ ಶೋಭಾ ಕರಂದ್ಲಾಜೆ ಆಪ್ತ ಎಂದು ಹೇಳಿಕೊಂಡು ಕೃಷಿಕರು, ಜಮೀನುದಾರರು, ಉದ್ಯಮಿಗಳಿಗೆ ಊಟಿ ಪ್ರಕಾಶ ವಂಚಿಸಿದ್ದಾನೆ.
ಕೇಂದ್ರ ಸರ್ಕಾರದ ಟೆಂಡರ್ ಗಳನ್ನ ಕೊಡಿಸುವುದಾಗಿ ಊಟಿ ಪ್ರಕಾಶ ವಂಚಿಸಿದ್ದಾನೆ. ವಂಚನೆಗೊಳಗಾದ ವ್ಯಕ್ತಿಯೊಬ್ಬ ಸಚಿವೆಗೆ ಕರೆ ಮಾಡಿದಾಗ ಪ್ರಕರಣ ಬಯಲಾಗಿದೆ. ಶೋಭಾ ಕರಂದ್ಲಾಜೆ ಆಪ್ತ ಸಹಾಯಕ ವರುಣ್ ಆದಿತ್ಯಾ ಎಂಬುವವರು ಈ ಸಂಬಂಧ ಸಂಜಯನಗರ ಠಾಣೆಗೆ ದೂರು ನೀಡಿದ್ದಾರೆ.