ಯಾದಗಿರಿ ಜಿಲ್ಲೆಯಾದ್ಯಂತ ನಿರಂತರ ಮಳೆ: ಇಂದು ಹುಣಸಗಿ, ಸುರಪುರ ತಾಲೂಕಿನ ಶಾಲೆಗಳಿಗೆ ರಜೆ
ಯಾದಗಿರಿ ಜಿಲ್ಲೆಯಾದ್ಯಂತ ಕಳೆದ ಮೂರ್ನಾಲ್ಕು ದಿನಗಳಿಂದ ನಿರಂತರವಾಗಿ ಮಳೆಯಾಗುತ್ತಿದೆ. ಜಿಟಿ ಜಿಟಿ ಮಳೆ, ಮೋಡ ಕವಿದ ವಾತಾವರಣವಿದ್ದು, ಸೂರ್ಯನ ದರ್ಶನವಾಗಿಲ್ಲ. ಇನ್ನು ನಿರಂತರ ಮಳೆಯಿಂದ ಇವತ್ತು ಕೂಡ ಶಾಲೆಗಳಿಗೆ ರಜೆ ಘೋಷಣೆ ಮಾಡಲಾಗಿದೆ.
ಯಾದಗಿರಿ: ಜಿಲ್ಲೆಯಾದ್ಯಂತ ಕಳೆದ ಮೂರ್ನಾಲ್ಕು ದಿನಗಳಿಂದ ನಿರಂತರವಾಗಿ ಮಳೆಯಾಗುತ್ತಿದೆ. ಜಿಟಿ ಜಿಟಿ ಮಳೆ, ಮೋಡ ಕವಿದ ವಾತಾವರಣವಿದ್ದು, ಸೂರ್ಯನ ದರ್ಶನವಾಗಿಲ್ಲ. ಇನ್ನು ನಿರಂತರ ಮಳೆಯಿಂದ ಇವತ್ತು ಕೂಡ ಶಾಲೆಗಳಿಗೆ (School) ರಜೆ ಘೋಷಣೆ ಮಾಡಲಾಗಿದೆ. ಜಿಲ್ಲೆಯ ಹುಣಸಗಿ ಹಾಗೂ ಸುರಪುರ ತಾಲೂಕಿನ ಎಲ್ಲ ಶಾಲೆಗಳಿಗೆ ಹಾಗೂ ಯಾದಗಿರಿ (Yadgiri) ತಾಲೂಕಿನ ಎರಡು ಶಾಲೆಗಳಿಗೆ ಮಾತ್ರ ರಜೆ ನೀಡಲಾಗಿದೆ. ನಗರದ ಲಕ್ಷ್ಮೀ ನಗರ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆ ಮತ್ತು ಯಾದಗಿರಿ ತಾಲೂಕಿನ ಬಾಚವಾರ ಗ್ರಾಮದ ಶಾಲೆಗೆ ಡಿಡಿಪಿಐ ಮಂಜುನಾಥ ರಜೆ ಘೋಷಿಸಿದ್ದಾರೆ.
26 ಮನೆಗಳಿಗೆ ಹಾನಿಯಾಗಿದೆ. ಅಲ್ಲದೇ ನಗರದ ಲಕ್ಷ್ಮೀ ನಗರ ಸರ್ಕಾರಿ ಪ್ರಾಥಮಿಕ ಶಾಲೆಗೆ ಮಳೆ ನೀರು ನುಗ್ಗಿತ್ತು. ಯಾದಗಿರಿ ತಾಲೂಕಿನಲ್ಲಿ 15 ಮನೆಗಳು, ಶಹಪುರ ತಾಲೂಕಿನಲ್ಲಿ 1, ಸುರಪುರ ತಾಲೂಕಿನಲ್ಲಿ 5, ಗುರುಮಠಕಲ್ ತಾಲೂಕಿನಲ್ಲಿ 2, ವಡಗೇರಾ ತಾಲೂಕಿನಲ್ಲಿ 3 ಸೇರಿದಂತೆ 26 ಮನೆಗಳಿಗೆ ಹಾನಿಯಾಗಿತ್ತು.
ಇದನ್ನೂ ಓದಿ: ಬೆಳಗಾವಿ, ಕಲಬುರಗಿ ಜಿಲ್ಲೆಗಳಲ್ಲಿ ಇಂದು ಭಾರಿ ಮಳೆ; ಹವಾಮಾನ ಇಲಾಖೆ ಮುನ್ಸೂಚನೆ
ಇನ್ನು ನಗರ ಹೊರವಲಯದ ಭೀಮಾ ನದಿಗೆ ಅಡ್ಡಲಾಗಿ ನಿರ್ಮಿಸಿರುವ ಗುರಸಣಗಿ ಬ್ಯಾರೇಜ್ ಕಂ ಬ್ರಿಡ್ಜ್ ಭರ್ತಿಯಾಗಿದೆ. ನದಿಗೆ 45 ಸಾವಿರ ಕ್ಯುಸೆಕ್ ನೀರು ಬಿಡುಗಡೆ ಮಾಡಲಾಗಿದೆ. ಸನ್ನತಿ ಬ್ಯಾರೇಜ್ ನಿಂದ ಭೀಮಾನದಿಗೆ ಭಾರಿ ಪ್ರಮಾಣದ ನೀರು ಒಳಹರಿವು ಇದೆ. ಭೀಮಾನದಿಗೆ ಭಾರಿ ಪ್ರಮಾಣದ ನೀರು ಬಿಡುಗಡೆ ಹಿನ್ನೆಲೆ ನದಿ ತೀರಕ್ಕೆ ತೆರಳದಂತೆ ನದಿ ಪಾತ್ರದ ಗ್ರಾಮಗಳಿಗೆ ಎಚ್ಚರಿಕೆ ನೀಡಲಾಗಿದೆ.
ಕಳೆದ 24 ಗಂಟೆಯಲ್ಲಿ ಜಿಲ್ಲೆಯಲ್ಲಿ 44 ಎಂಎಂ ಮಳೆಯಾಗಿದೆ. ಶಹಾಪುರ ತಾಲೂಕಿನಲ್ಲಿ 36.2 ಮಿಮೀ, ಸುರಪುರ ತಾಲೂಕಿನಲ್ಲಿ 29.7 ಮಿಮೀ, ಯಾದಗಿರಿ ತಾಲೂಕಿನಲ್ಲಿ 63.09ಮಿಮೀ, ಗುರುಮಠಕಲ್ ತಾಲೂಕಿನಲ್ಲಿ 63.8 ಮಿಮೀ, ಹುಣಸಗಿ ತಾಲೂಕಿನಲ್ಲಿ 26.6 ಮಿಮೀ ಮಳೆಯಾಗಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ