ಪ್ರಧಾನಿ ಮೋದಿ, ಸಿಎಂ ಸಿದ್ದರಾಮಯ್ಯ ಕುರ್ಚಿಗೆ ಕಂಟಕ: ಯಾದಗಿರಿಯ ಮಹಾದೇವಪ್ಪ ಪೂಜಾರಿ ಭವಿಷ್ಯ

| Updated By: ಗಣಪತಿ ಶರ್ಮ

Updated on: Aug 23, 2024 | 8:23 AM

ಕರ್ನಾಟಕದ ಸಿದ್ದರಾಮಯ್ಯ ನೇತೃತ್ವದ ಸರ್ಕಾರ ಮತ್ತು ಕೇಂದ್ರದ ನರೇಂದ್ರ ಮೋದಿ ನೇತೃತ್ವದ ಎನ್​ಡಿಎ ಸರ್ಕಾರದ ಬಗ್ಗೆ ಯಾದಗಿರಿ ಜಿಲ್ಲೆಯ ವಡಗೇರ ತಾಲೂಕಿನ ಗೋನಾಲ ಗ್ರಾಮದ ಗಡೇ ದುರ್ಗಾದೇವಿ ದೇವಸ್ಥಾನದ ಅರ್ಚಕ ಮಹಾದೇವಪ್ಪ ಪೂಜಾರಿ ಆಘಾತಕಾರಿ ಭವಿಷ್ಯ ನುಡಿದಿದ್ದಾರೆ. ಅವರೇನಂದರು ಎಂಬುದನ್ನು ಇಲ್ಲಿ ನೋಡಿ ಹಾಗೂ ಓದಿ.

ಬೆಂಗಳೂರು, ಆಗಸ್ಟ್​ 23: ಕೇಂದ್ರದ ಎನ್​ಡಿಎ ಸರ್ಕಾರವೂ ಪತನವಾಗಲಿದೆ. ರಾಜ್ಯದಲ್ಲಿ ಸಿಎಂ ಸಿದ್ದರಾಮಯ್ಯ ಕೂಡ ಮುಖ್ಯಮಂತ್ರಿ ಸ್ಥಾನ ಕಳೆದುಕೊಳ್ಳಲಿದ್ದಾರೆ ಎಂದು ಯಾದಗಿರಿ ಜಿಲ್ಲೆಯ ವಡಗೇರ ತಾಲೂಕಿನ ಗೋನಾಲ ಗ್ರಾಮದ ಗಡೇ ದುರ್ಗಾದೇವಿ ದೇವಸ್ಥಾನದ ಅರ್ಚಕ ಮಹಾದೇವಪ್ಪ ಪೂಜಾರಿ ಭವಿಷ್ಯ ನುಡಿದಿದ್ದಾರೆ. ಇದು ಮುಡಾ ಹಗರಣದಿಂದ ಸಿಎಂ ಸಿದ್ದರಾಮಯ್ಯಗೆ ಕುರ್ಚಿ ಕಂಟಕ ಎದುರಾಗಲಿದೆಯೇ ಎಂಬ ಅನುಮಾನ ಹುಟ್ಟುಹಾಕಿದೆ.

ಕೆಪಿಸಿಸಿ ಅಧ್ಯಕ್ಷ, ಡಿಸಿಎಂ ಹಾಗೂ ಕಾಂಗ್ರೆಸ್​ನ ಟ್ರಬಲ್ ಶೂಟರ್ ಎಂದೇ ಖ್ಯಾತರಾದ ಡಿಕೆ ಶಿವಕುಮಾರ್ ಮುಂದಿನ ಮುಖ್ಯಮಂತ್ರಿಯಾಗಲಿದ್ದಾರೆ ಎಂದು ಪೂಜಾರಿ ಭವಿಷ್ಯವಾಣಿ ನುಡಿದಿದ್ದಾರೆ.

ಈ ಹಿಂದೆ, ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬರಲಿದೆ ಎಂದು ಮಹಾದೇವಪ್ಪ ಪೂಜಾರಿ ಭವಿಷ್ಯ ನುಡಿದಿದ್ದರು. ಅದು ನಿಜವಾಗಿತ್ತು.

ಅಮ್ಮ (ದೇವಿ) ಕನಸಿನಲ್ಲಿ ಬಂದು 9 ಜನ ಸಿಎಂ ಸ್ಥಾನದ ಆಕಾಂಕ್ಷಿ ಎಂದು ಹೇಳಿದ್ದಳು. ಕೊನೆಗೆ ಇಬ್ಬರಿಗೆ ಸಿಎಂ ಸ್ಥಾನ ನೀಡಲು ಪ್ರೇರಣೆ ನೀಡಿದಳು. ಆಗ ನಾನು ಡಿಕೆ ಶಿವಕುಮಾರ್​ಗೆ ಹೂವಿನ ಹಾರ ಹಾಕು ಅಂದೆ. ಆದರೆ ಸಿದ್ದರಾಮಯ್ಯಗೆ ಹೂವಿನ ಹಾರ ಹಾಕಿದ್ದಳು. ಮೊದಲನೇ ಅವಧಿಗೆ ಸಿದ್ದರಾಮಯ್ಯ ಸಿಎಂ ಆಗಿದ್ದಾರೆ. ಎರಡನೇ ಅವಧಿಗೆ ಡಿ‌ಕೆ ಶಿವಕುಮಾರ್ ಸಿಎಂ ಆಗುವ ಕಾಲ ಬಂದಿದೆ ಎಂದು ಪೂಜಾರಿ ಹೇಳಿದ್ದಾರೆ.

ಅರ್ಚಕ ಮಹಾದೇವಪ್ಪ ಪೂಜಾರಿ

ನನ್ನ ಕನಸಿನಲ್ಲಿ ಸಚಿವ ಎಂಬಿ ಪಾಟೀಲ್ ಬಂದಿದ್ದರು. ಕಾಂಗ್ರೆಸ್​​​ನಲ್ಲಿ ನಮ್ಮ ಲಿಂಗಾಯತರನ್ನು ಕಡೆಗಣಿಸುತ್ತಿದ್ದಾರೆ, ಈ ಸರ್ಕಾರ ಬೀಳಿಸುತ್ತೀರಾ ಎಂದು ಕೇಳಿದರು, ಬೀಳುತ್ತೆ ಅಂದೆ ಎಂದರು.

‘ಜಾರಕಿಹೊಳಿ ಸಹೋದರರಿಂದ ಸರ್ಕಾರ ಪತನ!’

ಜಾರಕಿಹೊಳಿ ಸಹೋದರರಿಂದ ಸರ್ಕಾರ ಬೀಳುತ್ತದೆ. ಸತೀಶ ಜಾರಕಿಹೊಳಿ ಹಾಗೂ ಡಿಕೆ ಶಿವಕುಮಾರ ನಡುವೆ ಸಿಎಂ ಸ್ಥಾನಕ್ಕೆ ಪೈಪೋಟಿ ಇದೆ ಎಂದು ಪೂಜಾರಿ ಹೇಳಿದರು. ಜತೆಗೆ, ಕೇಂದ್ರದಲ್ಲಿ ಮೋದಿ ಸರ್ಕಾರವು ಐದು ವರ್ಷದೊಳಗೆ ಬೀಳುತ್ತದೆ ಎಂದರು.

ಇದನ್ನೂ ಓದಿ: ಸಿಎಂ ಬೆನ್ನಿಗೆ ನಿಂತ ಶಾಸಕರು: ಶಾಸಕಾಂಗ ಸಭೆಯಲ್ಲಿ ಸರ್ವಾನುಮತದಿಂದ ಸಿದ್ದರಾಮಯ್ಯಗೆ ಬೆಂಬಲ

ಗಡೇ ದುರ್ಗಾದೇವಿ ಪರಮಭಕ್ತ ಡಿಕೆ ಶಿವಕುಮಾರ್

ಡಿಕೆ ಶಿವಕುಮಾರ್​ಗೆ ಆಶೀರ್ವಾದ ಮಾಡುತ್ತಿರುವ ಪೂಜಾರಿ (ಸಂಗ್ರಹ ಚಿತ್ರ)

ಡಿಕೆ ಶಿವಕುಮಾರ್ ಗಡೇ ದುರ್ಗಾದೇವಿ ಪರಮಭಕ್ತನಾಗಿದ್ದಾರೆ. ವಿವಿಧ ಪ್ರಕರಣಗಳಲ್ಲಿ ಐಟಿ, ಇಡಿಯಿಂದ ಸಂಕಷ್ಟಕ್ಕೆ ಸಿಲುಕಿದ್ದ ಡಿಕೆ ಶಿವಕುಮಾರ್ 2020 ಜನವರಿ 29 ರಂದು ಗಡೇ ದುರ್ಗಾದೇವಿ ಜಾತ್ರೆಗೆ ಆಗಮಿಸಿದ್ದರು. ಆಗ ದೇವಿಯ ಮೂರ್ತಿಗೆ ಪತ್ರ ಬರೆದು ಸಂಕಷ್ಟದಿಂದ ಪಾರಾಗಲು ಪ್ರಾರ್ಥಿಸಿದ್ದರು. ಜೊತೆಗೆ ರಾಜಕೀಯದಲ್ಲಿ ಉನ್ನತ ಸ್ಥಾನ ಅಲಂಕರಿಸಲು ಅವಕಾಶ ಕರುಣಿಸುವಂತೆ ಪತ್ರ ಬರೆದಿದ್ದರು. ಆಗ ದೇವಿಯ ಕೃಪೆಯಿಂದ ಕೆಪಿಸಿಸಿ ಅಧ್ಯಕ್ಷ ಹಾಗೂ ಡಿಸಿಎಂ ಸ್ಥಾನ ಒಲಿದಿತ್ತು ಎಂದು ಅವರ ಅಭಿಮಾನಿಗಳು ಹೇಳುತ್ತಾರೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ