ಯಾದಗಿರಿ: ವಿನಾಶದ ಅಂಚಿನಲ್ಲಿರುವ ಅಪರೂಪದ ಔಷಧೀಯ ಗುಣವುಳ್ಳ ಕೆಲವು ಗಿಡಗಳು ಬೇಕು ಎಂದಾಗ ಎಷ್ಟು ಹುಡುಕಿದ್ರೂ ಸಿಗಲಾರದು. 105 ಪ್ರಭೇದದ ಸಸಿಗಳು ಇಲ್ಲಿವೆ. ಕಲ್ಯಾಣ ಕರ್ನಾಟಕ ಭಾಗದಲ್ಲಂತೂ ಅಂತಹ ಗಿಡಗಳು ಸಿಗಲಿಕ್ಕಿಲ್ಲ. ಜೊತೆಗೆ ಅಂತಹ ಗಿಡಗಳ ಬಗ್ಗೆ ಜನರು ಕೇಳಿಯು ಇಲ್ಲ. ಅಂತಹ ವಿನಾಶದ ಅಂಚಿನಲ್ಲಿ ಇರುವ ಗಿಡಗಳನ್ನ ಬೆಳಸಲು ಕೃಷಿ ಮಹಾವಿದ್ಯಾಲಯದ ವಿದ್ಯಾರ್ಥಿಗಳು ಮುಂದಾಗಿದ್ದಾರೆ. ವಿದ್ಯಾರ್ಥಿಗಳು ತಾವೇ ಗಿಡಗಳನ್ನು ನೆಟ್ಟು ಪೋಷಣೆ ಕೂಡ ಮಾಡುತ್ತಿದ್ದಾರೆ.
ಯಾದಗಿರಿ ಜಿಲ್ಲೆಯ ಶಹಾಪೂರ ತಾಲೂಕಿನ ಭೀಮರಾಯನಗುಡಿ ಬಳಿಯ ಕೃಷಿ ಮಹಾವಿದ್ಯಾಲಯದ ಆವರಣದಲ್ಲಿ ಅಪರೂಪದ ಪ್ರಭೇದವುಳ್ಳ ಗಿಡಗಳನ್ನ ಉಳಿಸಲು ಮುಂದಾಗಿದ್ದಾರೆ. ವಿದ್ಯಾರ್ಥಿಗಳು ಈ ಮಹತ್ಕಾರ್ಯಕ್ಕೆ ಜೊತೆಯಾಗಿದ್ದಾರೆ. ಹೌದು ಭೀಮರಾಯನಗುಡಿ ಕೃಷಿ ಮಹಾವಿದ್ಯಾಲಯ ವಿನೂತನ ಪ್ರಯತ್ನಕ್ಕೆ ಮುಂದಾಗಿದೆ.
ಕಲ್ಯಾಣ-ಕರ್ನಾಟಕ ಭಾಗದಲ್ಲಿ ಕಂಡು ಕೇಳರಿಯದ ಹಾಗೂ ವಿನಾಶದ ಹಂಚನಲ್ಲಿರುವ ಗಿಡಗಳನ್ನ ಕೃಷಿ ಮಹಾವಿದ್ಯಾಲಯದ ಆವರಣದಲ್ಲಿ ಹಚ್ಚಿ ಅದಕ್ಕೆ ಹಸಿರು ಪದವಿಧಾರಣೆ ಅಂತಾ ಹೆಸರಿಸಲಾಗಿದೆ. ವಿಶೇಷವೆಂದ್ರೆ ಕೃಷಿ ಮಹಾವಿದ್ಯಾಲಯದ ಆರವಣದಲ್ಲಿ ವಿನಾಶದ ಅಂಚಿನಲ್ಲಿರುವ ಅತೀ ಅಪರೂಪದ 105 ಪ್ರಭೇದಗಳುಳ್ಳ ಸಸಿಗಳನ್ನ ವಿದ್ಯಾರ್ಥಿಗಳ ಕೈಯಿಂದಾನೆ ಹಚ್ಚಿಸಲಾಗಿದೆ.
ಕಳೆದ ಎರಡು ವರ್ಷಗಳ ಹಿಂದೆ ಪದವಿ ವಿದ್ಯಾರ್ಥಿಗಳಿಂದ ಈ ಗಿಡಗಳನ್ನ ಹಚ್ಚಿಸಲಾಗಿತ್ತು. ಸದ್ಯ ಗಿಡಗಳನ್ನ ಹಚ್ಚಿರುವ ವಿದ್ಯಾರ್ಥಿಗಳು ಈಗ ನಾಲ್ಕನೇ ವರ್ಷದ ಪದವಿಯನ್ನ ಓದುತ್ತಿದ್ದಾರೆ. ಮಹಾವಿದ್ಯಾಲಯದ ಮುಖ್ಯಸ್ಥರ ನಿರ್ದೇಶನದಂತೆ ವಿದ್ಯಾರ್ಥಿಗಳು ಗಿಡಗಳನ್ನ ತಮ್ಮ ವಿದ್ಯಾಲಯದ ಆವರಣದಲ್ಲಿ ಹಚ್ಚಿದ್ದಾರೆ.
ಪೋಷಣೆ ಕಾರ್ಯ ವಿದ್ಯಾರ್ಥಿಗಳದು
ಇನ್ನು ಕಳೆದ ಎರಡು ವರ್ಷಗಳಿಂದ ತಾವೆ ಗಿಡಗಳನ್ನ ನೋಡಿಕೊಂಡು ಬರ್ತಾಯಿದ್ದಾರೆ. 105 ಪ್ರಭೇದವುಳ್ಳ ಒಟ್ಟು 209 ಗಿಡಗಳನ್ನ ಹಚ್ಚಲಾಗಿದೆ. ವಿದ್ಯಾರ್ಥಿಗಳು ನಿತ್ಯ ಕ್ಲಾಸ್ ಗಳು ಮುಗಿದ ಕೂಡಲೆ ಗಿಡಗಳಿಗೆ ನೀರು ಹಾಕುವುದು ಪೋಷಣೆ ಮಾಡುವ ಕೆಲಸವನ್ನ ಮಾಡ್ತಾಯಿದ್ದಾರೆ. ವಿಶೇಷವೆಂದ್ರೆ ವಿದ್ಯಾರ್ಥಿಗಳು ಹಚ್ಚಿರುವ ಈ ಸಸಿಗಳು ಈ ಭಾಗದಲ್ಲಿ ಹುಡುಕಿದ್ರು ಸಿಗುವುದಿಲ್ಲ. ಹೀಗಾಗಿ ಇಂತಹ ಅಪರೂಪದ ಗಿಡಗಳನ್ನ ಪಶ್ಚಿಮ ಘಟ್ಟದಿಂದ ತಂದು ಇಲ್ಲಿ ಹಚ್ಚಿ ಬೆಳಸಲಾಗುತ್ತಿದೆ.
ಯಾವ್ಯಾವ ಸಸ್ಯಜಾತಿಗಳಿವೆ ಇಲ್ಲಿ?
ರಂಜಲು, ಹುಚ್ಚಬೇವು, ಬನಾಟೆ, ಕವಲು, ಗುರಣಿ, ಸಾಲುದೂಪ, ಮುತಗಲ್, ಅಂಟವಾಳ, ಮಹಾಗನಿ, ಸರಕ ಅಶೋಕ, ಹೋಲಿಗಾರನ್, ರಾಮಪತ್ರಿ ಸೇರಿದಂತೆ ಈ ರೀತಿಯ ಒಟ್ಟು 105 ಪ್ರಭೇದಗಳುಳ್ಳ ಸಸಿಗಳನ್ನ ಕೃಷಿ ಮದಾವಿದ್ಯಾಲಯದ ಆವರಣದಲ್ಲಿ ವಿದ್ಯಾರ್ಥಿಗಳಿಂದ ಹಚ್ಚಿಸಲಾಗಿದೆ. ವಿದ್ಯಾರ್ಥಿಗಳು ಕಳೆದ ಎರಡು ವರ್ಷಗಳ ಹಿಂದೆ ಗಿಡಗಳನ್ನ ಹಚ್ಚಿದ್ದರಿಂದ ಎರಡು ವರ್ಷಗಳಿಂದ ನೋಡಿಕೊಂಡು ಬಂದಿದ್ದಾರೆ.
ಇನ್ನು ಇದಕ್ಕೆ ಕೃಷಿ ಮಹಾವಿದ್ಯಾಲಯದ ಮುಖ್ಯಸ್ಥರು ಸಹ ಸಾಥ್ ನೀಡುತ್ತಿದ್ದಾರೆ. ವಿದ್ಯಾರ್ಥಿಗಳು ಕೃಷಿ ಪದವಿ ಓದುತ್ತಿದ್ದರಿಂದ ಅರಣ್ಯ ಪ್ರದೇಶದಲ್ಲಿರುವ ಗಿಡಗಳ ಬಗ್ಗೆ ಮಾಹಿತಿ ಇರೋದಿಲ್ಲ ಹೀಗಾಗಿ ಇಂತಹ ಗಿಡಗಳ್ನ ಹಚ್ಚಿ ಬೆಳೆಸಿದ್ರೆ ಮುಂದೆ ಬರುವ ವಿದ್ಯಾರ್ಥಿಗಳಿಗೆ ಇದರ ಬಗ್ಗೆ ಮಾಹಿತಿ ಸಿಗುತ್ತೆ ಎಂಬುದು ಆಶಯವಾಗಿದೆ. ವಿದ್ಯಾರ್ಥಿಗಳು ತಾವು ಹಚ್ಚಿರುವ ಪ್ರತಿಯೊಂದು ಗಿಡಗಳಿಗೆ ಅದರ ಹೆಸರಿಗೆ ನೇಮ್ ಪ್ಲೇಟ್ ಹಾಕಿದ್ದಾರೆ. ಹೊರಗಿನಿಂದ ಬಂದವರಿಗೂ ಈ ಗಿಡಗಳ ಬಗ್ಗೆ ಮಾಹಿತಿ ಸಿಗುತ್ತೆ. ವಿದ್ಯಾರ್ಥಿಗಳು ಗಿಡಗಳನ್ನ ಹಚ್ಚಿ ಬೆಳೆಸಿದ್ದರಿಂದ ಇದಕ್ಕೆ ಗ್ರೀನ್ ಗ್ರ್ಯಾಜುವೆಷನ್ ಅಂತ ಹೆಸರಿಡಲಾಗಿದೆ.
ಒಟ್ಟಿನಲ್ಲಿ ಕೃಷಿ ಪದವಿ ಓದುತ್ತಿರುವ ವಿದ್ಯಾರ್ಥಿಗಳು ಓದಿನ ಜೊತೆಗೆ ಅಪರೂಪದ ಹಾಗೂ ವಿನಾಶದತ್ತ ಸಾಗುತ್ತಿರುವ ಗಿಡಗಳನ್ನ ಬೆಳೆಸುತ್ತಿರುವುದು ನೀಜಕ್ಕೂ ವಿಶೇಷವಾಗಿದೆ. ಮಹಾವಿದ್ಯಾಲಯದ ವಿದ್ಯಾರ್ಥಿಗಳ ಈ ಕಾರ್ಯಕ್ಕೆ ಎಲ್ಲರಿಂದ ಪ್ರಸಂಶೆ ವ್ಯಕ್ತವಾಗುತ್ತಿದೆ.
ವಿಶೇಷ ವರದಿ: ಅಮೀನ್ ಆರ್. ಹೊಸೂರ್
ಇದನ್ನೂ ಓದಿ: ಯಾದಗಿರಿ ಮತ್ತು ರಾಯಚೂರು ಜಿಲ್ಲಾಡಳಿತಗಳಿಗೆ ಪ್ರಧಾನಿ ನರೇಂದ್ರ ಮೋದಿ ಶ್ಲಾಘನೆ; ಒಳ್ಳೆಯ ಕೆಲಸಗಳನ್ನು ಮಾಡುವಂತೆ ಕರೆ
ಇದನ್ನೂ ಓದಿ: ಯಾದಗಿರಿ: ಮಂಜೂರಾದ ಮನೆಯ ಬಾಕಿ ಬಿಲ್ ಕೇಳಲು ಬಂದಿದ್ದ ವ್ಯಕ್ತಿಯ ಮೇಲೆ ಗ್ರಾಮ ಪಂಚಾಯಿತಿ ಸದಸ್ಯನಿಂದ ಹಲ್ಲೆ