ಯಾದಗಿರಿ: ಒಂದೆ ಸರ್ಕಾರಿ ಹುದ್ದೆಗಾಗಿ ಇಬ್ಬರು ಸರ್ಕಾರಿ ಅಧಿಕಾರಿಗಳು ಗುದ್ದಾಟ ನಡೆಸಿ, ಅಧಿಕಾರ ಚಲಾಯಿಸುತ್ತಿದ್ದಾರೆ. ನಾನೇ ಇಲ್ಲಿಯ ಅಧಿಕಾರಿ ಎಂದು ಇಬ್ಬರೂ ಅಧಿಕಾರಿಗಳು ಪ್ರತ್ಯೇಕ ಕುರ್ಚಿಗಳನ್ನು ಹಾಕಿಕೊಂಡು ಕುಳಿತುಬಿಟ್ಟಿದ್ದಾರೆ! ಯಾದಗಿರಿ ತಾಲೂಕು ಸಮಾಜ ಕಲ್ಯಾಣ ಇಲಾಖೆ ಸಹಾಯಕ ನಿರ್ದೇಶಕ ಹುದ್ದೆಗೆ (social welfare department in yadgir) ಈ ಫೈಟ್ ನಡೆದಿದೆ. ಯಾದಗಿರಿ ನಗರ ಹೊಸಹಳ್ಳಿ ಕ್ರಾಸ್ ಬಳಿಯಿರುವ ಸಮಾಜ ಕಲ್ಯಾಣ ಸಹಾಯಕ ನಿರ್ದೇಶಕರ ಕಚೇರಿ ಇದೆ. ಇಲ್ಲಿ ಸಂಗಪ್ಪ ಪೂಜಾರಿ ಹಾಗೂ ಡಿ. ರಾಜಕುಮಾರ ಎಂಬಿಬ್ಬರ ಮಧ್ಯೆ ಕುರ್ಚಿಗಾಗಿ ಕಿತ್ತಾಟ ನಡೆದಿದೆ.
ಇನ್ನು ಇಲಾಖೆಯಲ್ಲಿನ ಕೆಲಸ ಕಾರ್ಯಗಳಿಗೆ ಕಚೇರಿಗೆ ಬಂದಿರುವ ಸಾರ್ವಜನಿಕರು ಒಂದೇ ಹುದ್ದೆಯಲ್ಲಿ ಇಬ್ಬರು ಅಧಿಕಾರಿಗಳನ್ನ ಕಂಡು ಗೊಂದಲದಲ್ಲಿ ಸಿಲುಕಿದ್ದಾರೆ. ಇವರ ರಗಳೆ ನೋಡಲಾರದೆ, ಪರಿಸ್ಥಿತಿ ತಿಳಿಯಾದ ಮೇಲೆ ಬರೋಣ ಎಂದು ಕಚೇರಿಗೆ ಬಂದೂ, ವಾಪಸ್ ಹೋಗುತ್ತಿದ್ದಾರೆ.
ಸಂಗಪ್ಪ ಅವರು ಫೆಬ್ರವರಿ 01 2023 ರಿಂದ ಅಕ್ಟೋಬರ್ 16 ರ ವರೆಗೆ ಸಹಾಯಕ ನಿರ್ದೇಶಕನ ಹುದ್ದೆಯಲ್ಲಿ ಕೆಲಸ ಮಾಡಿದ್ದಾರೆ. ಇನ್ನು ರಾಜಕುಮಾರ ಅವರು ಇದೇ ಹುದ್ದೆಗೆ ಸರ್ಕಾರದಿಂದ ಆದೇಶ ತಂದು ಅಕ್ಟೋಬರ್ 16 ರಿಂದ ಕಾರ್ಯನಿರ್ವಹಿಸುತ್ತಿದ್ದಾರೆ.
Also Read: ಚಳಿಗಾಲದ ಅಧಿವೇಶನ ಇಲ್ಲಿಯೇ ಯಾಕಾದರೂ ನಡೆಯುತ್ತದೋ ಎಂದು ಇಲ್ಲಿನ ರೈತರಿಗೆ ಧುತ್ತನೆ ಎದುರಾಗಿದೆ ಟೆನ್ಷನ್! ಏನದು ವಿಷಯ?
ರಾಜಕುಮಾರಗೆ ಆಗಿರುವ ಆದೇಶವನ್ನು ಪ್ರಶ್ನಿಸಿ ಸಂಗಪ್ಪ ಪೂಜಾರಿ ಅವರು ಕಲಬುರ್ಗಿ ಹೈಕೋರ್ಟ್ ವಿಭಾಗೀಯ ಪೀಠದ ಮೊರ ಹೋಗಿದ್ದಾರೆ. ಅವಧಿಗೂ ಮುನ್ನವೆ ನನ್ನ ಜಾಗಕ್ಕೆ ಮತ್ತೊಬ್ಬರಿಗೆ ಆದೇಶ ಆಗಿದೆ ಎಂದು ಪ್ರಶ್ನಿಸಿ ಕೋರ್ಟ್ ಮೊರೆ ಹೋಗಿದ್ದಾರೆ.
ಕೊನೆಗೂ ಕೋರ್ಟ್ ಸಂಗಪ್ಪ ಪರ ತೀರ್ಪು ನೀಡಿ, ಹುದ್ದೆಯಲ್ಲಿ ಮುಂದೆವರೆಯುವಂತೆ ಆದೇಶ ಹೊರಡಿಸಿದೆ. ಇದೇ ವೇಳೆ, ರಾಜಕುಮಾರಗೆ ಆಗಿರುವ ಆದೇಶವನ್ನ ಕೋರ್ಟ್ ರದ್ದು ಮಾಡಿದೆ ಎಂದು ಸಂಗಪ್ಪ ಅವರು ತಮ್ಮ ವಾದ ಮಂಡಿಸಿದ್ದಾರೆ. ಆದ್ರೆ ನನಗೆ ಸರ್ಕಾರದಿಂದ ಆದೇಶ ಇದೆಯಲ್ಲವಾ ಎಂದು ರಾಜಕುಮಾರ ಹುದ್ದೆ ಹಿಡಿದು ಕೂತಿದ್ದಾರೆ. ಇತ್ತ ನ್ಯಾಯಾಲಯ ನನ್ನ ಪರ ತೀರ್ಪು ನೀಡಿದೆ ಎಂದು ಕುರ್ಚಿಯಲ್ಲಿ ಕುಳಿತಿದ್ದಾರೆ ಸಂಗಪ್ಪ. ಮುಂದೇನೋ!?
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 1:14 pm, Thu, 23 November 23