ಯಾದಗಿರಿ: ಬರದ ನಾಡಲ್ಲಿ ಕಲ್ಲಂಗಂಡಿ ಬೆಳೆದು ಸೈ ಎನಿಸಿಕೊಂಡ ರೈತ; ಹೇಗೆ ಅಂತೀರಾ ಈ ಸ್ಟೋರಿ ನೋಡಿ

|

Updated on: Mar 20, 2023 | 2:05 PM

ಆ ರೈತ ಪ್ರತಿ ವರ್ಷ ಸಾಂಪ್ರದಾಯಿಕ ಬೆಳೆಗಳನ್ನ ಬೆಳೆದು ಸಾಕಷ್ಟು ನಷ್ಟ ಅನುಭವಿಸುತ್ತಿದ್ದ. ಆದರೆ ಈ ಬಾರಿ ಸಾಂಪ್ರದಾಯಿಕ ಬೆಳೆಗೆ ಗುಡ್ ಬೈ ಹೇಳಿ ತೋಟಗಾರಿಕೆ ಬೆಳೆಗೆ ಮುಂದಾಗಿದ್ದನು. ಇದೀಗ ಐದು ಎಕರೆ ಜಮೀನಿನಲ್ಲಿ ಕಲ್ಲಂಗಡಿ ಬೆಳೆದು ಭರ್ಜರಿಯಾಗಿ ಲಾಭ ಪಡೆಯುತ್ತಿದ್ದಾನೆ. ಕಲ್ಲಂಗಡಿ ಕಾಯಿಗಳನ್ನ ನೋಡಿ ವ್ಯಾಪಾರಸ್ಥರೆ ಜಮೀನಿಗೆ ಬಂದು ಖರೀದಿಗೆ ಮುಂದಾಗಿದ್ದಾರೆ.

ಯಾದಗಿರಿ: ಜಿಲ್ಲೆಯ ಆರು ತಾಲೂಕುಗಳ ಪೈಕಿ ಯಾದಗಿರಿ ತಾಲೂಕನ್ನ ಬರದನಾಡು ಎಂದು ಕರೆಯಲಾಗುತ್ತೆ. ಈ ಭಾಗದ ರೈತರಿಗೆ ಮಳೆ ಬಂದರೆ ಬೆಳೆ, ಇಲ್ಲವೆಂದರೆ ಬರ ಎನ್ನುವ ಸ್ಥಿತಿಯಿದೆ. ಇಂತಹ ನೀರಾವರಿ ವಂಚಿತ ಪ್ರದೇಶದಲ್ಲಿ ಸಾಂಪ್ರದಾಯಿಕ ಬೆಳೆಗಳಾದ ತೊಗರಿ, ಹತ್ತಿ, ಜೋಳ, ಹೆಸರು ಬೆಳೆಗಳನ್ನ ಬೆಳೆಯುತ್ತಿದ್ದಾರೆ. ಆದರೆ ಈ ಅರಕೇರ ಗ್ರಾಮದ ರೈತ ಶಂಕರ್ ಕೂಡ ಸಾಂಪ್ರದಾಯಿಕ ಬೆಳೆಗಳನ್ನ ಬೆಳೆದು ಸಾಕಷ್ಟು ನಷ್ಟ ಅನುಭವಿಸಿದ್ದ. ಆದರೀಗ ರೈತ ಸಾಂಪ್ರದಾಯಿಕ ಬೆಳೆಗಳಿಗೆ ಗುಡ್ ಬೈ ಹೇಳಿ ತೋಟಗಾರಿಕೆ ಬೆಳೆಗಳನ್ನ ಬೆಳೆಯೋಕೆ ಮುಂದಾಗಿದ್ದಾನೆ. ಹೌದು ಐದು ಎಕರೆ ಜಮೀನು ಲೀಸ್ ಪಡೆದಿರುವ ರೈತ ಶಂಕರ್ ಕಳೆದ ಮೂರು ಎರಡು ತಿಂಗಳ ಹಿಂದೆ ಜಮೀನಿನಲ್ಲಿರುವ ಬೋರವೆಲ್ ನೀರು ಬಳಸಿಕೊಂಡು ಕಲ್ಲಂಗಡಿ ಬೆಳೆಯನ್ನ ಬೆಳೆದು ಉತ್ತಮ ಆದಾಯ ಗಳಿಸುತ್ತಿದ್ದಾನೆ.

ಸುಲ್ತಾನ್ ಹೆಸರಿನ ಬೀಜವನ್ನ ತಂದು ನಾಟಿ ಮಾಡಿರುವ ರೈತನ ಜಮೀನಿನಲ್ಲಿ ಇದೀಗ ಭರ್ಜರಿಯಾಗಿ ಬೆಳೆ ಬಂದಿದೆ. ಕೇವಲ ಎರಡುವರೆ ತಿಂಗಳಲ್ಲಿ ಕೈಗೆ ಬರುವ ಈ ಕಲ್ಲಂಗಡಿ ಬೆಳೆಯನ್ನ ಬೆಳೆಯೋದು ಸ್ವಲ್ಪ ಕಷ್ಟ. ಆದರೆ ಭರ್ಜರಿಯಾಗಿ ಫಸಲು ಬಂದರೆ ಮಾತ್ರ ಕೈ ತುಂಬಾ ಲಾಭ ಸಿಗುತ್ತದೆ. ಶಂಕರ್ ಎಂಬ ರೈತನ ಜಮೀನಿನಲ್ಲಿ ಬೆಳೆದ ಕಲ್ಲಂಗಡಿ ರೈತನ ಬದುಕು ಸಿಹಿಯಾಗಿಸಿದೆ. ಯಾಕೆಂದರೆ ಸುಮಾರು 3 ಲಕ್ಷ ಖರ್ಚು ಮಾಡಿ ಕಲ್ಲಂಗಡಿ ಬೆಳೆದ ರೈತನಿಗೆ ಸುಮಾರು 20 ಲಕ್ಷಕ್ಕೂ ಅಧಿಕ ಲಾಭ ಬರುವ ನಿರೀಕ್ಷೆಯಿದೆ. ಇದೀಗ ರೈತ ಶಂಕರ್ ಜಮೀನಿನಲ್ಲಿ ಕಲ್ಲಂಗಡಿ ಕಾಯಿ ನೋಡುವುದಕ್ಕೆ ಜನ ಬಂದು ಬಂದು ಹೋಗುತ್ತಿದ್ದಾರೆ.

ಇದನ್ನೂ ಓದಿ:ಧಾರವಾಡದ ಐಐಟಿಯಲ್ಲಿ ರೈತ ಮಕ್ಕಳಿಗೆ ನೌಕರಿ ಮತ್ತು ಶಿಕ್ಷಣ ಮೀಸಲಾತಿ ಇರಬೇಕಾ, ಬೇಡವಾ? ಕೇಂದ್ರ ಸಚಿವ ಪ್ರಲ್ಹಾದ ಜೋಶಿ ಹೇಳಿದ್ದೇನು?

ನಿರೀಕ್ಷೆಗೂ ಮೀರಿ ಲಾಭ ಪಡೆದ ರೈತ

ಸುತ್ತಮುತ್ತಲು ಸಾಕಷ್ಟು ಮಂದಿ ರೈತರು ಕಲ್ಲಂಗಡಿ ಬೆಳೆಯನ್ನ ಬೆಳೆದಿದ್ದಾರೆ ಆದರೆ ರೈತ ಶಂಕರ್ ಜಮೀನಿನಲ್ಲಿ ಮಾತ್ರ ನಿರೀಕ್ಷೆಗೂ ಮೀರಿ ಫಸಲು ಬಂದಿದೆ. ಸಾಮಾನ್ಯವಾಗಿ ಒಂದು ಕಾಯಿ 3 ರಿಂದ ನಾಲ್ಕು ಕೆಜಿ ತೂಕ ಇರುತ್ತೆ. ಆದರೆ ಈ ರೈತನ ಜಮೀನಿನಲ್ಲಿ ಕನಿಷ್ಠ 4 ಕೆಜಿ ಕಾಯಿ ಇದ್ರೆ ಗರಿಷ್ಠ 14 ಕೆಜಿಯವರೆಗೆ ಕಾಯಿ ಬಂದಿದೆ. ಇನ್ನು ಈ ರೈತ ತೋಟಗಾರಿಕೆ ಇಲಾಖೆಯಿಂದ ಸೌಲಭ್ಯಗಳನ್ನ ಪಡೆದು ಜಮೀನಿನಲ್ಲಿ ಹನಿ ನೀರಾವರಿ ಮಾಡಿಕೊಂಡಿದ್ದಾರೆ. ಜಮೀನಿನಲ್ಲಿ ಕಲ್ಲಂಗಡಿ ಬೆಳೆಗೆ ಬೇಕಾದ ಬೋರವೆಲ್ ಆನ್ ಮಾಡಿ ನೀರು ಕೊಡುವ ಕೆಲಸ ಮಾಡಿದ್ದಾರೆ.

ಇನ್ನು ಮನೆಯ ಮಂದಿಯಲ್ಲ ಹಗಲು ರಾತ್ರಿಯನ್ನದೆ ಎರಡು ತಿಂಗಳು ಕಣ್ಣಲ್ಲಿ ಕಣ್ಣಿಟ್ಟು ಬೆಳೆಯನ್ನ ನೋಡಿಕೊಂಡಿದ್ದರಿಂದ ಭರ್ಜರಿಯಾಗಿ ಬೆಳೆ ಬಂದಿದೆ. ಸುಮಾರು 50 ಟನ್​ಗೂ ಅಧಿಕ ಇಳುವರಿ ಬರುವ ಸಾಧ್ಯಯಿದೆ. ಸದ್ಯ ಮಾರುಕಟ್ಟೆಯಲ್ಲಿ ಕೆಜಿಗೆ 9 ರೂ. ನಂತೆ ಕಲ್ಲಂಗಡಿ ಖರೀದಿ ಮಾಡಲಾಗುತ್ತಿದೆ. ಅದರಲ್ಲೂ ಸದ್ಯ ಬೇಸಿಗೆ ಆರಂಭವಾಗಿದ್ದರಿಂದ ಕಲ್ಲಂಗಡಿ ಬೆಳೆಗೆ ಸಾಕಷ್ಟು ಡಿಮ್ಯಾಂಡ್ ಬಂದಿದೆ. ಇನ್ನು ಇದೆ ತಿಂಗಳಲ್ಲಿ ರಂಜಾನ್ ಕೂಡ ಆರಂಭವಾಗಿದ್ದರಿಂದ ಇನ್ನು ಹೆಚ್ಚಿನ ಬೆಲೆ ಮಾರಾಟವಾಗುವ ಸಾಧ್ಯತೆಯಿದೆ. ಹೀಗಾಗಿ ಸುಮಾರು 5 ಎಕರೆ ಕಲ್ಲಂಗಡಿ ಬೆಳೆಯಿಂದ ಸುಮಾರು 20 ಲಕ್ಷಕ್ಕೂ ಅಧಿಕ ಲಾಭ ಸಿಗುವ ನಿರೀಕ್ಷೆಯಲ್ಲಿದ್ದಾನೆ ರೈತ ಶಂಕರ್.

ಇದನ್ನೂ ಓದಿ:ಚಿಕ್ಕಬಳ್ಳಾಪುರ: ಅಕಾಲಿಕ ಮಳೆ ಗಾಳಿಯಿಂದ ನೆಲಕಚ್ಚಿದ ಅಪಾರ ಪ್ರಮಾಣದ ತರಕಾರಿ ಬೆಳೆ, ಕಂಗಾಲಾದ ರೈತರು

ಇನ್ನು ರೈತ ಶಂಕರ್ ಅವರು ಬೆಳೆದ ಕಲ್ಲಂಗಡಿ ಕಾಯಿ ನೋಡಿ ವ್ಯಾಪಾರಸ್ಥರು ಖುದ್ದು ಜಮೀನಿಗೆ ವಾಹನ ಸಮೇತ ಬಂದು ಖರೀದಿ ಮಾಡುತ್ತಿದ್ದಾರೆ. ಯಾವುದೇ ವಾಹನ ವೆಚ್ಚವಿಲ್ಲ ಮಾರುಕಟ್ಟೆ ಸಮಸ್ಯೆಯನ್ನ ಎದುರಿಸದೆ ನೇರವಾಗಿ ಜಮೀನಿನಲ್ಲೇ ವ್ಯಾಪಾರಸ್ಥರಿಗೆ ಮಾರಾಟ ಮಾಡುತ್ತಿದ್ದಾರೆ. ಇನ್ನು ರೈತ ಶಂಕರ್ ನಂತಹ ಪ್ರತಿಯೊಬ್ಬ ರೈತರು ಬೋರವೆಲ್ ನೀರು ಬಳಸಿಕೊಂಡು ತೋಟಗಾರಿಕೆ ಇಲಾಖೆಯಿಂದ ಸೌಲಭ್ಯ ಪಡೆದು ತೋಟಗಾರಿಕೆ ಬೆಳೆಯನ್ನ ಬೆಳೆದು ಬದುಕು ಹಸನಾಗಿಸಿಕೊಳ್ಳಬೇಕು ಎನ್ನುತ್ತಾರೆ ತೋಟಗಾರಿಕೆ ಇಲಾಖೆ ಅಧಿಕಾರಿಗಳು.

ಒಟ್ಟಿನಲ್ಲಿ ಪ್ರತಿ ವರ್ಷ ಅದೇ ಸಾಂಪ್ರದಾಯಿಕ ಬೆಳೆಗಳನ್ನ ಬೆಳೆದು ಕೈ ಸುಟ್ಟುಕೊಳ್ಳುತ್ತಿದ್ದ ರೈತ ಈಗ ಕಲ್ಲಂಗಡಿ ಬೆಳೆದು ಭರ್ಜರಿಯಾಗಿ ಲಾಭ ಪಡೆದಿದ್ದಾನೆ. ಕೇವಲ ಎರಡು ತಿಂಗಳಲ್ಲಿ ಬೆಳೆ ಕೈಗೆ ಬಂದಿದ್ದು, ನಿರೀಕ್ಷೆಗೂ ಮೀರಿ ಲಾಭ ಸಿಕ್ಕಿದೆ. ಹೀಗಾಗಿ ರೈತರು ಕೃಷಿ ಆಧುನಿಕತೆ ಬಳಸಿಕೊಂಡು ನಾನಾ ರೀತಿಯ ಬೆಳೆಗಳನ್ನ ಬೆಳೆದು ಬದುಕು ಕಟ್ಟಿಕೊಳ್ಳಬೇಕಾಗಿದೆ.

ವರದಿ: ಅಮೀನ್ ಹೊಸುರ್ ಟಿವಿ9 ಯಾದಗಿರಿ

ಇನ್ನಷ್ಟು ರಾಜ್ಯಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ