ಬೆಂಗಳೂರು, ಆ.03: ಯಾದಗಿರಿ (Yadgiri) ಸೈಬರ್ ಕ್ರೈಮ್ ಠಾಣೆಯ ಪಿಎಸ್ಐ(PSI)ಪರಶುರಾಮ (34) ಇಂದು(ಶನಿವಾರ) ಅನುಮಾನಾಸ್ಪದವಾಗಿ ಮೃತಪಟ್ಟಿದ್ದಾರೆ. ಈ ಘಟನೆಗೆ ಸಂಬಂಧಿಸಿ ಬೆಂಗಳೂರಿನಲ್ಲಿ ಮಾತನಾಡಿದ ಬಿಜೆಪಿ ಮಾಜಿ ಶಾಸಕ ರಾಜುಗೌಡ, ‘ಇದು ಆತ್ಮಹತ್ಯೆ ಅಲ್ಲ, ಹತ್ಯೆ ಎಂದು ಆರೋಪಿಸಿದ್ದಾರೆ. ಪಿಎಸ್ಐ ಆತ್ಮಹತ್ಯೆ ಹಿಂದೆ ಸ್ಥಳೀಯ ಶಾಸಕರು ಮತ್ತು ಅವರ ಪುತ್ರ ಇದ್ದಾರೆ. ಮೃತ ಪರಶುರಾಮ್ರಿಂದ 30 ಲಕ್ಷ ಪಡೆದಿದ್ದಾರೆ ಎನ್ನುತ್ತಿದ್ದಾರೆ. ಕೂಡಲೇ ಯಾದಗಿರಿ ಶಾಸಕ, ಅವರ ಪುತ್ರನನ್ನು ಬಂಧಿಸಬೇಕು. ಅವರನ್ನು ಬಂಧಿಸದಿದ್ರೆ ಯಾದಗಿರಿಯಲ್ಲಿ ಹೋರಾಟ ಮಾಡುತ್ತೇವೆ ಎಂದು ಎಚ್ಚರಿಕೆ ಕೊಟ್ಟಿದ್ದಾರೆ.
ಇನ್ನು ಈ ಕುರಿತು ಯಾದಗಿರಿಯಲ್ಲಿ ಗುರುಮಠಕಲ್ ಜೆಡಿಎಸ್ ಶಾಸಕ ಶರಣಗೌಡ ಕಂದಕೂರು ಮಾತನಾಡಿ, ‘ಮೂರು ದಿನಗಳ ಹಿಂದೆಯಷ್ಟೇ ವರ್ಗಾವಣೆ ಬಗ್ಗೆ ನನ್ನ ಜತೆ ಮಾತಾಡಿದ್ದ. 1 ವರ್ಷ ಕೂಡ ಆಗಿಲ್ಲ, ಮತ್ತೆ ವರ್ಗಾವಣೆ ಮಾಡಿದ್ದಾರೆ ಎಂದು ಹೇಳಿದ್ದ. ಮೃತ ಪಿಎಸ್ಐ ಪರಶುರಾಮ್ ಪತ್ನಿ ಈಗ ತುಂಬು ಗರ್ಭಿಣಿ ಇದ್ದಾರೆ. ಈ ರೀತಿ ಆದರೆ ಪ್ರಾಮಾಣಿಕ ಅಧಿಕಾರಿಗಳು ಏನು ಮಾಡಬೇಕು?. ಸದನದೊಳಗೆ ಮತ್ತು ಹೊರಗೂ ಯಾದಗಿರಿ ಜಿಲ್ಲೆಯಲ್ಲಿ ಅಧಿಕಾರಿಗಳ ವರ್ಗಾವಣೆ ಬಗ್ಗೆ ಪ್ರಸ್ತಾಪಿಸಿದ್ದೆ. ಸರ್ಕಾರ ಸೂಕ್ತ ಕ್ರಮ ಕೈಗೊಳ್ಳಬೇಕಿತ್ತು, ಆದರೂ ಕ್ರಮ ಕೈಗೊಂಡಿಲ್ಲ.
ಇದನ್ನೂ ಓದಿ:ಯಾದಗಿರಿ ಪಿಎಸ್ಐ ಪರಶುರಾಮ ಸಹಜ ಸಾವು ಎಂದ ಪರಮೇಶ್ವರ್: ಎ1 ಕಾಂಗ್ರೆಸ್ ಶಾಸಕ ಚೆನ್ನಾರೆಡ್ಡಿ
ಪರಶುರಾಮ್ ಪ್ರಕರಣವನ್ನು ಸರ್ಕಾರ ಗಂಭೀರವಾಗಿ ಪರಿಗಣಿಸಬೇಕು. PSI ಸಾವಿಗೆ ಅಧಿಕಾರಿಗಳು ಹೊಣೆನಾ, ಮೇಲಾಧಿಕಾರಿಗಳು ಹೊಣೆನಾ?. ನಾನು ಈಗಾಗಲೇ ಗೃಹ ಸಚಿವ ಡಾ.ಜಿ.ಪರಮೇಶ್ವರ್ಗೆ ಪತ್ರ ಬರೆದಿದ್ದೇನೆ. ಉನ್ನತಮಟ್ಟದ ತನಿಖೆಗೆ ಆಗ್ರಹಿಸಿದ್ದೇನೆ. ಮೃತ ಪರಶುರಾಮ್ ಕುಟುಂಬಕ್ಕೆ ಸರ್ಕಾರ ಪರಿಹಾರ ಕೊಡಬೇಕು. ನನ್ನ 2 ತಿಂಗಳ ಸಂಬಳ ಮೃತ ಪರಶುರಾಮ ಕುಟುಂಬಕ್ಕೆ ನೀಡುತ್ತೇನೆ ಎಂದರು.
ಈ ಘಟನೆ ಖಂಡಿಸಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಟ್ವೀಟ್ ಮಾಡಿದ್ದು, ‘ಒಬ್ಬ ದಲಿತ ಅಧಿಕಾರಿಯ ವರ್ಗಾವಣೆಗೆ ಪ್ರಭಾವ ಬೀರಿದ ಚನ್ನಾ ರೆಡ್ಡಿ, ಅವರ ಮೇಲೆ ದಲಿತ ದೌರ್ಜನ್ಯ ಕಾಯ್ದೆಯಡಿ ಪೊಲೀಸರು ಕೇಸ್ ದಾಖಲಿಸಿದ್ದಾರೆ. ಜನಪ್ರತಿನಿಧಿಯಾಗಿ ಮಾದರಿಯಾಗಿರಬೇಕಾಗಿದ್ದ ಶಾಸಕರು, ಒಬ್ಬ ಅಧಿಕಾರಿಯ ಸಾವಿಗೆ ಪರೋಕ್ಷವಾಗಿ ಕಾರಣರಾಗಿದ್ದಾರೆ.
ಚನ್ನಾ ರೆಡ್ಡಿ ಅವರು ಕೂಡಲೇ ಈ ಸಾವಿಗೆ ನೈತಿಕ ಹೊಣೆ ಹೊತ್ತು ತಮ್ಮ ಶಾಸಕ ಸ್ಥಾನಕ್ಕೆ ರಾಜೀನಾಮೆಯನ್ನು ಸಲ್ಲಿಸಬೇಕು
ಎಂದು ಟ್ವೀಟ್ ಮೂಲಕ ಕಿಡಿಕಾರಿದ್ದಾರೆ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ