ಯಾದಗಿರಿ ಪಿಎಸ್​ಐ ಪರಶುರಾಮ ಸಹಜ ಸಾವು ಎಂದ ಪರಮೇಶ್ವರ್​: ಎ1 ಕಾಂಗ್ರೆಸ್​ ಶಾಸಕ ಚೆನ್ನಾರೆಡ್ಡಿ

ಯಾದಗಿರಿ ಸೈಬರ್ ಕ್ರೈಮ್ ಠಾಣೆಯ ಪಿಎಸ್ಐ ಪರಶುರಾಮ ಅನುಮಾನಸ್ಪದವಾಗಿ ಮೃತಪಟ್ಟಿದ್ದಾರೆ. ಪಿಎಸ್​ಐ ಪರಶುರಾಮ ಪತ್ನಿ ಶ್ವೇತಾ ದೂರು ಆಧರಿಸಿ ಕಾಂಗ್ರೆಸ್​ ಶಾಸಕ ಚೆನ್ನಾರೆಡ್ಡಿ ಮತ್ತು ಪುತ್ರ ಪಂಪನಗೌಡ ವಿರುದ್ಧ ಜಾತಿ ನಿಂದನೆ ಆರೋಪದಡಿ ಪ್ರಕರಣ ದಾಖಲಾಗಿದೆ.

ಯಾದಗಿರಿ ಪಿಎಸ್​ಐ ಪರಶುರಾಮ ಸಹಜ ಸಾವು ಎಂದ ಪರಮೇಶ್ವರ್​: ಎ1 ಕಾಂಗ್ರೆಸ್​ ಶಾಸಕ ಚೆನ್ನಾರೆಡ್ಡಿ
ಪಿಎಸ್​ಐ ಪರಶುರಾಮ, ಚೆನ್ನಾರೆಡ್ಡಿ, ಪಂಪನಗೌಡ
Follow us
ಅಮೀನ್​ ಸಾಬ್​
| Updated By: ವಿವೇಕ ಬಿರಾದಾರ

Updated on:Aug 03, 2024 | 1:47 PM

ಯಾದಗಿರಿ, ಆಗಸ್ಟ್​ 03: ಸೈಬರ್​ ಠಾಣೆ ಪಿಎಸ್​ಐ ಪರಶುರಾಮ (PSI Parashuram) ಅನುಮಾನಾಸ್ಪದ ಸಾವು ಪ್ರಕರಣಕ್ಕೆ ಸಂಬಂಧಿಸಿದಂತೆ ಘಟನೆ ನಡೆದ 17 ಗಂಟೆ ಬಳಿಕ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ. ಪಿಎಸ್​​ಐ ಪರಶುರಾಮ ಪತ್ನಿ ಶ್ವೇತಾ ದೂರು ಆಧರಿಸಿ ಕಾಂಗ್ರೆಸ್​ ಶಾಸಕ ಚೆನ್ನಾರೆಡ್ಡಿ ಪಾಟೀಲ್, ಪುತ್ರ ಪಂಪನಗೌಡ ವಿರುದ್ಧ ​​ಜಾತಿ ನಿಂದನೆ ಆರೋಪದಡಿ ಯಾದಗಿರಿ ನಗರ ಪೊಲೀಸ್​ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಪ್ರಕರಣದಲ್ಲಿ ಎ1 ಯಾದಗಿರಿ ಶಾಸಕ ಚೆನ್ನಾರೆಡ್ಡಿ ಪಾಟೀಲ್ ತುನ್ನೂರ್, ಎ2 ಶಾಸಕ ಚೆನ್ನಾರೆಡ್ಡಿ ಪಾಟೀಲ್ ತುನ್ನೂರ್ ಪುತ್ರ ಪಂಪನಗೌಡ ಆಗಿದ್ದಾರೆ.

ಸಹಜ ಸಾವು ಅಂತ ಸುದ್ದಿ ಬರುತ್ತಿದೆ: ಪರಮೇಶ್ವರ್​

ಪಿಎಸ್​ಐ ಪರಶುರಾಮ ಅವರದ್ದು ಸಹಜ ಸಾವು ಅಂತ ಸುದ್ದಿ ಬರುತ್ತಿದೆ. ಅವರು ಆತ್ಮಹತ್ಯೆ ಮಾಡಿಕೊಂಡಿಲ್ಲ. ಡೆತ್ ನೋಟ್ ಬರೆದಿಟ್ಟಿಲ್ಲ. ಅವರನ್ನು ವರ್ಗಾವಣೆ ಮಾಡಿದ್ದಾರೆ ಅನ್ನೋ ಕಾರಣ ಕೊಟ್ಟಿದ್ದಾರೆ. ಇದನ್ನೆಲ್ಲ ತನಿಖೆ ಮಾಡಿ ಅಂತ ನಾನು ಸೂಚನೆ ಕೊಟ್ಟಿದ್ದೇನೆ. ತನಿಖಾ ವರದಿ ಬಂದ ಮೇಲೆ ನೋಡೋಣ ಎಂದು ಗೃಹ ಸಚಿವ ಜಿ ಪರಮೇಶ್ವರ್​ ಹೇಳಿದರು.

ಪಿಎಸ್​ಐ ಪರಶುರಾಮ ಪತ್ನಿ ಆರೋಪವನ್ನು ಪರಿಗಣಿಸುತ್ತೇನೆ. ಪ್ರಾಥಮಿಕವಾಗಿ ಕೆಲವೊಂದಿಷ್ಟು ಮಾಹಿತಿ ಕಲೆ ಹಾಕಬೇಕು. ಪರಿಶೀಲನೆ ಮಾಡಿ ಶೀಘ್ರದಲ್ಲೇ ಎಫ್​​ಐಆರ್​ ದಾಖಲಿಸುತ್ತಾರೆ. ಯಾರೇ ಇದ್ದರು ಅವರ ವಿರುದ್ಧ ಎಫ್​ಐಆರ್​ ಹಾಕುತ್ತಾರೆ ಎಂದರು.

ಇದನ್ನೂ ಓದಿ: ಯಾದಗಿರಿ ಪಿಎಸ್​ಐ ಅನುಮಾನಸ್ಪದವಾಗಿ ಸಾವು

ಸರ್ಕಾರ ಉನ್ನತಮಟ್ಟದ ತನಿಖೆ ನಡೆಸಬೇಕು: ಶರಣಗೌಡ

ಮೂರು ದಿನಗಳ ಹಿಂದೆಯಷ್ಟೇ ವರ್ಗಾವಣೆ ಬಗ್ಗೆ ನನ್ನ ಜೊತೆ ಮಾತಾಡಿದ್ದರು. ಒಂದು ವರ್ಷ ಕೂಡ ಆಗಿಲ್ಲ ಮತ್ತೆ ವರ್ಗಾವಣೆ ಮಾಡಿದ್ದಾರೆ ಎಂದಿದ್ದರು. ಮೃತ ಪಿಎಸ್​ಐ ಪರಶುರಾಮ್ ಪತ್ನಿ ತುಂಬು ಗರ್ಭಿಣಿ, ಈ ರೀತಿಯಾದರೆ ಪ್ರಾಮಾಣಿಕ ಅಧಿಕಾರಿಗಳು ಏನು ಮಾಡಬೇಕು ಎಂದು ಗುರುಮಠಕಲ್ ಶಾಸಕ ಶರಣಗೌಡ ಕಂದಕೂರ ಹೇಳಿದರು.

ಸದನದೊಳಗೆ ಮತ್ತು ಹೊರಗೂ ಯಾದಗಿರಿ ಜಿಲ್ಲೆಯಲ್ಲಿ ಅಧಿಕಾರಿಗಳ ವರ್ಗಾವಣೆ ಬಗ್ಗೆ ಪ್ರಸ್ತಾಪಿಸಿದ್ದೆ. ಸರ್ಕಾರ ಸೂಕ್ತ ಕ್ರಮ ಕೈಗೊಳ್ಳಬೇಕಿತ್ತು, ಆದರೂ ಕ್ರಮ ಕೈಗೊಂಡಿಲ್ಲ. ಪಿಎಸ್​ಐ ಸಾವಿಗೆ ಅಧಿಕಾರಿಗಳು ಹೊಣೆನಾ? ಮೇಲಧಿಕಾರಿಗಳು ಹೊಣೆನಾ? ಪರಶುರಾಮ್ ಸಾವು ಕೇಸ್ ಸರ್ಕಾರ ಗಂಭೀರವಾಗಿ ಪರಿಗಣಿಸಬೇಕು. ಉನ್ನತಮಟ್ಟದ ತನಿಖೆಗೆ ಆಗ್ರಹಿಸಿ ಈಗಾಗಲೇ ಗೃಹ ಸಚಿವರಿಗೆ ಪತ್ರ ಬರೆದಿದ್ದೇನೆ. ಮೃತ ಪರಶುರಾಮ್ ಕುಟುಂಬಕ್ಕೆ ಸರ್ಕಾರ ಪರಿಹಾರ ಕೊಡಬೇಕು. ನನ್ನ ಎರಡು ತಿಂಗಳ ಸಂಬಳ ಮೃತ ಪರಶುರಾಮ ಕುಟುಂಬಕ್ಕೆ ನೀಡುತ್ತೇನೆ ಎಂದು ಹೇಳಿದರು.  ​

ಚೆನ್ನಾರೆಡ್ಡಿ ರಾಜಿನಾಮೆ ನೀಡಲಿ: ಯತ್ನಾಳ್​

ಒಬ್ಬ ದಲಿತ ಅಧಿಕಾರಿಯ ವರ್ಗಾವಣೆಗೆ ಪ್ರಭಾವ ಬೀರಿದ ಚನ್ನಾರೆಡ್ಡಿ ಅವರ ಮೇಲೆ ದಲಿತ ದೌರ್ಜನ್ಯ ಕಾಯ್ದೆಯಡಿ ಪೊಲೀಸರು ಕೇಸ್ ದಾಖಲಿಸಿದ್ದಾರೆ. ಜನಪ್ರತಿನಿಧಿಯಾಗಿ ಮಾದರಿಯಾಗಿರಬೇಕಾಗಿದ್ದ ಶಾಸಕರು ಒಬ್ಬ ಅಧಿಕಾರಿಯ ಸಾವಿಗೆ ಪರೋಕ್ಷವಾಗಿ ಕಾರಣರಾಗಿದ್ದಾರೆ. ಚನ್ನಾರೆಡ್ಡಿ ಅವರು ಕೂಡಲೇ ಈ ಸಾವಿಗೆ ನೈತಿಕ ಹೊಣೆ ಹೊತ್ತು ತಮ್ಮ ಶಾಸಕ ಸ್ಥಾನಕ್ಕೆ ರಾಜೀನಾಮೆಯನ್ನು ಸಲ್ಲಿಸಬೇಕು ಎಂದು ಬಿಜೆಪಿ ಶಾಸಕ ಬಸನಗೌಡ ಪಾಟೀಲ್​ ಯತ್ನಾಳ್​ ಆಗ್ರಹಿಸಿದ್ದಾರೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ

Published On - 1:32 pm, Sat, 3 August 24