ಯಾದಗಿರಿ: ಜಿಲ್ಲೆಯಲ್ಲಿ ರಾಜ್ಯದ ಅತಿ ದೊಡ್ಡ ಪಕ್ಷಿಧಾಮವಿದೆ. ಕಳೆದ ಕೆಲ ವರ್ಷಗಳ ಹಿಂದೆ ರಾಜ್ಯದಲ್ಲೇ ಅತ್ಯಂತ ದೊಡ್ಡ ಪಾಕ್ಷಿಧಾಮ ಎಂಬ ಹೆಗ್ಗಳಿಕೆಯನ್ನು ಜಿಲ್ಲೆಯ ಸುರಪುರ ತಾಲೂಕಿನ ಪೇಠಅಮ್ಮಾಪುರ ಬಳಿ ಇರುವ ಪಕ್ಷಿಧಾಮ ಪಡೆದುಕೊಂಡಿದೆ. ಆದರೆ ಪಕ್ಷಿಧಾಮ ಈಗ ಸಂಪೂರ್ಣ ನಿರ್ಲಕ್ಷ್ಯಕ್ಕೆ ಒಳಗಾಗಿದೆ. ಸುಂದರವಾದ ಜಾಗದಲ್ಲಿ ಗಲಿಜು ತುಂಬಿಕೊಂಡಿದ್ದು, ಪ್ರವಾಸಿಗರು ಈ ಪಕ್ಷಿಧಾಮಕ್ಕೆ ಭೇಟಿ ಕೊಡಲು ಹಿಂದೇಟು ಹಾಕುವಂತಾಗಿದೆ. ಇದು ಸಹಜವಾಗಿಯೇ ಕೆಲವು ಪ್ರಾಣಿಪ್ರಿಯರ ಆಕ್ರೋಶಕ್ಕೆ ಕಾರಣವಾಗಿದೆ.
ಬೋನಾಳ ಬಳಿ ಪಕ್ಷಿಧಾಮವನ್ನು ಗೂಗಲ್ನಲ್ಲಿ ಹುಡಿಕಿದರೆ ಸಾಕು ರಾಜ್ಯದ ಅತಿ ದೊಡ್ಡ ಪಕ್ಷಿಧಾಮ ಎಂದು ಸಿಗುತ್ತದೆ. ಆದರೆ ಇಲ್ಲಿ ಹೇಳಿಕೊಳ್ಳುವಂತ ಅಭಿವೃದ್ಧಿ ಕೆಲಸಗಳು ಆಗಿಲ್ಲ. ಪಕ್ಷಿಧಾಮದ ಬಳಿ ಪ್ರವಾಸಿಗರಿಗೆ ಮೂಲಭೂತ ಸೌಕರ್ಯಗಳು ಇಲ್ಲ. ಇನ್ನು ಇಲ್ಲಿ ಕುಡಿಯುವ ನೀರಿನ ವ್ಯವಸ್ಥೆ ಅಂತು ಇಲ್ಲವೇ ಇಲ್ಲ. ಪಕ್ಷಿಧಾಮ ನೋಡಲು ಬಂದ ಪ್ರವಾಸಿಗರಿಗೆ ಕುಳಿತುಕೊಳ್ಳಲು ಆಸನ ವ್ಯವಸ್ಥೆ ಇದ್ದು, ಹಾಳಾಗಿ ಹೋಗಿವೆ. ಎಲ್ಲಂದರಲ್ಲಿ ಮದ್ಯ ಸೇವನೆ ಮಾಡಿ ಗಾಜಿನ ಬಾಟಲ್ಗಳನ್ನು ಬಿಸಾಕಿದ್ದಾರೆ. ಲಕ್ಷಾಂತರ ರೂ. ಖರ್ಚ ಮಾಡಿ ಕಟ್ಟಿರುವ ಪ್ರವಾಸಿ ಮಂದಿರ ನಿರ್ವಹಣೆ ಇಲ್ಲದೆ ಪಾಳು ಬಿದ್ದಿದೆ. ಇದರಿಂದ ಇಲ್ಲಿಗೆ ಬರುವ ಪ್ರವಾಸಿಗರಿಗೆ ಮುಜುಗರ ಉಂಟಾಗುತ್ತಿದೆ.
ಬೋನಾಳ ಪಕ್ಷಿಧಾಮವು ರಾಜ್ಯದ ಅತಿ ದೊಡ್ಡ ಪಕ್ಷಿಧಾಮ ಎಂಬ ಗಿರಿಮೆ ತನ್ನಾಗಿಸಿಕೊಂಡಿದೆ. ಇತ್ತೀಚಿಗಷ್ಟೇ ರಾಜ್ಯ ಸರ್ಕಾರ ಬೋನಾಳ ಪಕ್ಷಿಧಾಮವೇ ರಾಜ್ಯ ದೊಡ್ಡ ಪಕ್ಷಿಧಾಮ ಎಂದು ಘೋಷಿಸಿದೆ. ಸುಮಾರು 650 ಎಕರೆ ಪ್ರದೇಶದಲ್ಲಿ ವ್ಯಾಪಿಸಿಕೊಂಡಿರುವ ಈ ಕೆರೆಯಲ್ಲಿ ಸಾವಿರಾರು ವಿವಿಧ ರೀತಿ ಹಕ್ಕಿಗಳ ಕಲರವ ನೋಡಲು ಸಿಗುತ್ತವೆ. ಇನ್ನು ನವೆಂಬರ್ ಬಂದರೆ ಸಾಕು ಸಂತತಿ ಬೆಳೆಸಿಕೊಳ್ಳಲು ವಿದೇಶಿ ಪಕ್ಷಿಗಳು ಇಲ್ಲಿಗೆ ಆಗಮಿಸುತ್ತವೆ.
ಹಣ ಬಿಡುಗಡೆಯಾದರೂ ಆಗದ ಅಭಿವೃದ್ಧಿ
ಬೋನಾಳ ಪಕ್ಷಿಧಾಮ ಅಭಿವೃದ್ದಿಗಾಗಿ ಕಳೆದ ನಾಲ್ಕು ವರ್ಷಗಳ ಹಿಂದೆ ಅನುದಾನ ಬಿಡುಗಡೆಯಾಗಿದೆ. ಪ್ರಿಯಾಂಕ ಖರ್ಗೆ ಪ್ರವಾಸೋದ್ಯಮ ಸಚಿವರಾಗಿದ್ದಾಗ ಪಕ್ಷಿಧಾಮ ಅಭಿವೃದ್ಧಿಗಾಗಿ ಕೋಟ್ಯಾಂತರ ರೂ. ಮಂಜೂರು ಮಾಡಿದ್ದಾರೆ. ಆದರೆ ಇಲ್ಲಿ ವರೆಗೆ ಬಿಡುಗಡೆಯಾದ ಹಣವನ್ನು ಬಳಕೆ ಮಾಡಿಕೊಂಡು ಪಕ್ಷಿಧಾಮವನ್ನು ಅಭಿವೃದ್ಧಿ ಪಡಿಸುವ ಕೆಲಸ ಮಾಡಿಲ್ಲ ಎಂದು ಸ್ಥಳೀಯರು ಆರೋಪಿಸಿದ್ದಾರೆ.
ಹಾಳಾಗಿರುವ ಪಕ್ಷಿಧಾಮಕ್ಕೆ ಸಂಪರ್ಕ ಕಲ್ಪಿಸುವ ರಸ್ತೆ
ಸುರಪುರ ನಗರದಿಂದ ಬೋನಾಳ ಪಕ್ಷಿಧಾಮಕ್ಕೆ ಹೋಗುವಾಗ ಸುರಪುರ ನಗರದಲ್ಲೇ ಬೋನಾಳ ಪಕ್ಷಿಧಾಮಕ್ಕೆ ಸ್ವಾಗತ ಎಂದು ದೊಡ್ಡದಾದ ಕಮಾನ್ ಮಾಡಲಾಗಿದೆ. ಅದನ್ನು ನೋಡಿ ಪ್ರವಾಸಿಗರು ಹೋದರೆ ಮುಂದೆ ರಸ್ತೆಯೇ ಸರಿಯಿಲ್ಲ. ಏಕೆಂದರೆ ಬೋನಾಳ ಹೋಗುವ ರಸ್ತೆ ಸಣ್ಣದಾಗಿದ್ದು ಸಂಪೂರ್ಣ ಹಾಳಾಗಿ ಹೋಗಿದೆ. ಇನ್ನು ಒಂದು ವಾಹನ ಹೋಗುತ್ತಿದ್ದರೆ, ಇನ್ನೊಂದು ವಾಹನ ಎದುರಾದರೆ ಸೈಡ್ ಕೊಡಲು ಸಹ ಆಗುವುದಿಲ್ಲ. ಅಷ್ಟೋಂದು ಸಣ್ಣದಾದ ರಸ್ತೆಯಿದೆ. ರಸ್ತೆಯ ಎರಡು ಇಕ್ಕಲುಗಳ ಮಧ್ಯ ಮುಳ್ಳುಗಂಟಿಗಳು ಸ್ವಾಗತಕ್ಕೆ ಕಾದಿರುವುದು ವಿಪರ್ಯಾಸದ ಸಂಗತಿ. ಇನ್ನು ಈ ಬಗ್ಗೆ ಪ್ರವಾಸೋದ್ಯಮ ಇಲಾಖೆ ಅಧಿಕಾರಿಗಳಿಗೆ ಸಂಪರ್ಕಸಿದರೆ ಯಾವುದೇ ಕರೆಯನ್ನು ಸ್ವೀಕರಿಸದೆ ನಿರ್ಲಕ್ಷ್ಯವಹಿಸುತ್ತಿದ್ದಾರೆ.
ಬೋನಾಳ ಪಕ್ಷಿಧಾಮವು ರಾಜ್ಯದಲ್ಲೇ ಅತಿ ದೊಡ್ಡ ಪಕ್ಷಿಧಾಮವಾಗಿರುವುದು ನಮ್ಮ ಜಿಲ್ಲೆಯ ಜನ ಹೆಮ್ಮೆ ಪಡುವಂತ ವಿಷಯ. ಆದರೆ ಇಲ್ಲಿ ಯಾವುದೇ ಅಭಿವೃದ್ಧಿ ಕೆಲಸಗಳು ಆಗದೆ ಇರುವುದು ಸಾಕಷ್ಟು ಬೇಸರಕ್ಕೆ ಕಾರಣವಾಗಿದೆ. ಇನ್ನು ಸಾಕಷ್ಟು ಬಾರಿ ನಾವು ಪ್ರವಾಸೋದ್ಯಮ ಇಲಾಖೆ ಅಧಿಕಾರಿಗಳ ಗಮನಕ್ಕೆ ತಂದಿದ್ದೇವೆ. ಆದರೆ ಯಾರು ಸ್ಪಂದಿಸಿಲ್ಲ. ಇನ್ನು ಇಷ್ಟೇಲ್ಲ ಅವ್ಯವಸ್ಥೆ ಇರುವ ಕಾರಣಕ್ಕೆ ಪ್ರವಾಸಿಗರು ಬರುವುದು ಕಡಿಮೆಯಾಗಿದೆ ಎಂದು ಪೇಠಅಮ್ಮಪುರ ಗ್ರಾಮದ ಬಸಯ್ಯ ಸ್ವಾಮಿ ಹೇಳಿದ್ದಾರೆ.
ವರದಿ: ಅಮೀನ್ ಹೊಸುರ್
ಇದನ್ನೂ ಓದಿ:
ಕೃಷ್ಣಾ, ಘಟಪ್ರಭಾ ಹಿನ್ನೀರಿನಲ್ಲಿ ತಲೆ ಎತ್ತಲಿದೆ ಸುಂದರ ಪಕ್ಷಿಧಾಮ; ಹಲವು ವರ್ಷಗಳ ಬೇಡಿಕೆಗೆ ಸರ್ಕಾರದಿಂದ ಅನುಮೋದನೆ
Published On - 1:34 pm, Wed, 27 October 21