ಆ ಶಾಲೆಯ ಮಕ್ಕಳು ಆ ಕಡೆ ಅಂಗೈಯಲ್ಲಿ ಜೀವ ಹಿಡಿದುಕೊಂಡು ಈ ಕಡೆ ವಿದ್ಯೆ ಕಲಿಯುವ ಹರಸಾಹಸ ಮಾಡುತ್ತಿದ್ದಾರೆ. ಶಾಲೆಯ ಕಟ್ಟಡ ಶಿಥಿಲಾವಸ್ಥೆ ತಲುಪಿದ್ದು ಇವತ್ತೋ ನಾಳೆಯೋ ಬೀಳುವ ಹಂತದಲ್ಲಿದೆ. ಮೇಲ್ಛಾವಣಿ ಕುಸಿದು ಬೀಳ್ತಾಯಿದ್ದು ಮಕ್ಕಳನ್ನ ಶಾಲೆಗೆ ಕಳುಹಿಸಲು ಪೋಷಕರು ಹಿಂದೇಟು ಹಾಕುತ್ತಿದ್ದಾರೆ. ಅಷ್ಟಕ್ಕೂ ಆ ಡೆಂಜರ್ ಶಾಲೆಯಾದರೂ ಯಾವುದು ಅಂತೀರಾ ಈ ಸ್ಟೋರಿ ನೋಡಿ. ಯಾದಗಿರಿ ಜಿಲ್ಲೆಯ ಶಹಾಪುರ ತಾಲೂಕಿನ ಚಟ್ನಳ್ಳಿ ಗ್ರಾಮದಲ್ಲಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಈಗ ಅವಘಡಕ್ಕೆ ಆಹ್ವಾನ ನೀಡುತ್ತಿದೆ. ಯಾಕೆಂದ್ರೆ ಶಾಲೆಯ ಕಟ್ಟಡ ಶಿಥಿಲಾವಸ್ಥೆಗೆ ಬಂದಿದ್ದು, ಮಕ್ಕಳ ಬಲಿಗಾಗಿ ಕಾಯುತ್ತಿದೆಯಾ ಎಂಬ ಅನುಮಾನ ಕಾಡ್ತಾಯಿದೆ. ಒಂದರಿಂದ ಎಂಟನೇ ತರಗತಿ ವರೆಗೆ ಇರುವ ಈ ಶಾಲೆಯಲ್ಲಿ ಸುಮಾರು 433 ಜನ ಮಕ್ಕಳು ದಾಖಲಾತಿ ಪಡೆದಿದ್ದಾರೆ.
ಇಷ್ಟು ಮಕ್ಕಳಿರುವ ಶಾಲೆಗೆ ನಾಲ್ಕು ಜನ ಮಾತ್ರ ಖಾಯಂ ಶಿಕ್ಷಕರಿದ್ದಾರೆ. ಉಳಿದರೆಲ್ಲರೂ ಅತಿಥಿ ಶಿಕ್ಷಕರಾಗಿದ್ದಾರೆ. ಇದು ಹೇಗೋ ನಡೆದು ಹೋಗುತ್ತೆ. ಆದ್ರೆ ಶಾಲೆಯ ಕೋಣೆಗಳು ಸ್ಥಿತಿ ನೋಡಿದರೆ ಹೆದರುವಂತಾಗಿದೆ. ಸುಮಾರು ಎಂಟು ಕೋಣೆಗಳ ಐದು ಕೋಣೆಗಳು ಶಿಥಿಲಾವಸ್ಥೆಗೆ ಬಂದಿವೆ. ಎರಡು ಕೋಣೆಗಳಂತೂ ಬಹಳ ಹಳೆದಾಗಿದ್ದು ಮಳೆ ಬಂದ್ರೆ ಸಾಕು ಬಳಕೆಗೆ ಯೋಗ್ಯವಾಗುವುದಿಲ್ಲ ಎಂಬಂತಾಗಿದೆ.
ಇಡೀ ಕ್ಲಾಸ್ ರೂಮ್ ಎಲ್ಲಾ ಮಳೆ ನೀರಿನಿಂದ ಆವರಿಸಿಕೊಳ್ಳುತ್ತೆ.. ಹಳೆ ಕಾಲದಲ್ಲಿ ಕಟ್ಟಿರುವ ಕೋಣೆಗಳಿಗೆ ಕಲ್ಲು ಮತ್ತು ಕಟ್ಟಿಗೆಗಳನ್ನ ಬಳಕೆ ಮಾಡಲಾಗಿದೆ. ಕಟ್ಟಿಗೆಗಳು ಕೊಳೆತು ಹೋಗಿದ್ದು ಕಲ್ಲುಗಳು ಒಡೆದು ಹೋಗಿವೆ. ಹೀಗಾಗಿ ಕೋಣೆಗಳು ಒಂದು ರೀತಿ ದನದ ಕೊಟ್ಟಿಗೆಗಳಂತಾಗಿವೆ. ಇದೇ ಕಾರಣಕ್ಕೆ ಶಾಲೆಯಲ್ಲಿ ಪಾಠ ಕೇಳಬೇಕು ಅಂದ್ರೆ ಜೀವ ಅಂಗೈಯಲ್ಲಿ ಹಿಡಿದುಕೊಂಡು ಕುಳಿತುಕೊಳ್ಳಬೇಕಾಗಿದೆ ಅಂತಾರೆ ಶಾಲೆಯ ಮಕ್ಕಳು.
ಇನ್ನು ಉಳಿದ ಮೂರು ಕೋಣೆಗಳು ಕೆಲ ವರ್ಷಗಳ ಹಿಂದೆಯೇ ನಿರ್ಮಾಣ ಮಾಡಿದ್ದಾರೆ. ಆದ್ರೆ ಈ ಕೋಣೆಗಳು ಸಹ ಶಿಥಿಲಾವಸ್ಥೆಗೆ ಬಂದಿವೆ. ಒಂದು ಕೋಣೆಯಂತೂ ಸಂಪೂರ್ಣ ಬೀಳುವ ಹಂತಕ್ಕೆ ಬಂದಿದೆ. ನಿತ್ಯ ಮೇಲ್ಛಾವಣಿ ಕುಸಿದು ಬಿಳ್ತಾಯಿದ್ದು ಸಿಮೆಂಟ್ ಉದುರಿ ಬಿದ್ದು ಕಬ್ಬಿಣದ ರಾಡ್ ಗಳು ತೇಲಿ ಬಂದಿವೆ.
ಅಪ್ಪಿತಪ್ಪಿ ಮಕ್ಕಳ ತಲೆ ಮೇಲೆ ಕುಸಿದು ಬಿದ್ರೆ ಪ್ರಾಣ ಹೋಗೋದು ಗ್ಯಾರಂಟಿ ಎನ್ನುವಂತಾಗಿದೆ. ಇದೆ ಕಾರಣಕ್ಕೆ ಶಿಕ್ಷಕರು ಈ ಒಂದು ಡೇಂಜರ್ ಕೋಣೆಯಲ್ಲಿ ಮಕ್ಕಳನ್ನ ಕೂರಿಸುತ್ತಿಲ್ಲ. ಇನ್ನುಳಿದ ಕೋಣೆಗಳಲ್ಲಿ ಮಕ್ಕಳಿಗೆ ಕೂರಿಸಿದರೂ ಮೇಲ್ಚಾವಣಿ ಕುಸಿದು ಬೀಳ್ತಾಯಿದೆ. ಆದ್ರೆ ಅನಿವಾರ್ಯವಾಗಿ ಮಕ್ಕಳನ್ನ ಕೂರಿಸಿ ಪಾಠ ಮಾಡುವಂತಹ ಪರಿಸ್ಥಿತಿ ಶಿಕ್ಷಕರದ್ದಾಗಿದೆ.
ಇನ್ನು ಎರಡು ಕೋಣೆಗಳ ಬಾಗಿಲು ಹಾಗೂ ಕಿಟಕಿಗಳನ್ನ ಕಿಡಿಗೇಡಿಗಳು ಮುರಿದು ಹಾಕಿದ್ದಾರೆ. ಹೀಗಾಗಿ ಶಾಲೆಯ ಅವಧಿ ಮುಗಿದ ಮೇಲೂ ಸಹ ಕೋಣೆಗಳು ಓಪನ್ ಇರುತ್ತವೆ. ಹೀಗಾಗಿ ರಾತ್ರಿ ವೇಳೆ ಗ್ರಾಮದ ಕುಡುಕರು ಕೈಯಲ್ಲಿ ಎಣ್ಣೆ ಬಾಟಲ್ ಹಿಡಿದುಕೊಂಡು ಎಂಟ್ರಿ ಕೊಡ್ತಾರಂತೆ.
ರಾತ್ರಿ ವೇಳೆ ಶಾಲೆಯ ಕೋಣೆಗಳು ಓಪನ್ ಇರುವ ಕಾರಣಕ್ಕೆ ಕೋಣೆಗಳಲ್ಲಿ ಕುಳಿತು ಎಣ್ಣೆ ಪಾರ್ಟಿ ಮಾಡಿ ಹೋಗುತ್ತಾರಂತೆ. ಕೆಲವೊಂದು ಬಾರಿ ಕುಡಿದ ನಶೆಯಲ್ಲಿ ಮಲ ಮೂತ್ರ ವಿಸರ್ಜನೆ ಮಾಡಿ ಹೋಗ್ತಾರಂತೆ. ಇನ್ನು ಶಾಲೆಯಲ್ಲಿ ಮಕ್ಕಳು ಬಿಸಿಯೂಟ ಸೇವನೆ ಮಾಡುವಾಗ ಹಂದಿಗಳು ಶಾಲೆಯ ಒಳಗಡೆಗೆ ನೇರ ಪ್ರವೇಶ ಮಾಡುತ್ತವೆ.
Also Read: ದೇವನಹಳ್ಳಿ ಏರ್ಪೋರ್ಟ್ ಮಂಡಳಿಯಿಂದ ದತ್ತು: ಮುಗಿಲೆತ್ತರಕ್ಕೆ ಚಿಮ್ಮಿದ ಸರ್ಕಾರಿ ಶಾಲೆಯ ಸವಲತ್ತು
ಊಟ ಮಾಡುವಾಗ ವಿದ್ಯಾರ್ಥಿಗಳ ಅಕ್ಕಪಕ್ಕದಲ್ಲೇ ಓಡಾಡುತ್ತವೆ. ಅಷ್ಟೇ ಅಲ್ದೆ ಮಕ್ಕಳಿಗಾಗಲಿ ಶಿಕ್ಷಕರಿಗಾಗಲಿ ಈ ಶಾಲೆಯಲ್ಲಿ ಶೌಚಾಲಯ ಕೂಡ ಇಲ್ಲ. ಹೀಗಾಗಿ ಮಕ್ಕಳು ಬಹಿರ್ದೆಸೆಗೆ ಹೋಗುವಂತಹ ಪರಿಸ್ಥಿತಿ ನಿರ್ಮಾಣವಾಗಿದೆ. ಇನ್ನು ಶಿಕ್ಷಕಿಯರ ಪಾಡಂತೂ ಯಾರು ಕೇಳದಂತಾಗಿದೆ. ನಮ್ಮ ಶಾಲೆ ಇಂತಹ ದುಃಸ್ಥಿತಿಯಲ್ಲಿದೆ ಎಂದು ಗ್ರಾಮಸ್ಥರು ಖೇದ ವ್ಯಕ್ತಪಡಿಸಿದ್ದಾರೆ. ಅಟ್ಲೀಸ್ಟ್ ಮಕ್ಕಳ ಹಿತದೃಷ್ಟಿಯಿಂದಾದರೂ ಶಾಲಾ ಕೋಣೆಗಳ ದುರಸ್ತಿ ಆಗಬೇಕಾಗಿದೆ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ